ನಿಜವಾದ ಸೂಪರ್ ಮ್ಯಾನ್ – ‘ರವೀಂದ್ರ ಆರ್ ಎನ್

ನಿಜವಾದ ಸೂಪರ್ ಮ್ಯಾನ್ – ‘ರವೀಂದ್ರ ಆರ್ ಎನ್’

ಟಿಎನ್ನೆಸ್

ಕೊಡಗಿನ ಜಲಪ್ರಳಯದಲ್ಲಿ ಸಿಕ್ಕು ಒದ್ದಾಡುತ್ತಿದ್ದ ಹತ್ತಾರು ಪ್ರಾಣಗಳನ್ನು ಉಳಿಸಿದ ಕರ್ನಾಟಕದ ಹೀರೋ – ಪ್ಲಟೂನ್ ಕಮ್ಯಾಂಡರ್ ರವೀಂದ್ರ. ಕೇವಲ ಕೊಡಗಿನ ಜಲಪ್ರಳಯವಷ್ಟೇ ಅಲ್ಲ, ಬೆಂಕಿಯಿಂದ ಧಗಧಗಿಸುತ್ತಿರುವ ಕಟ್ಟಡದಿಂದ ಜನರ ಪ್ರಾಣ ರಕ್ಷಿಸುವ ಕಾರ್ಯಾಚರಣೆಯಿರಲಿ, ಬೆಂಗಳೂರಿನ ಕೆರೆಗಳಲ್ಲಿ ಗಣೇಶ ವಿಸರ್ಜನೆ ಸಮಯದಲ್ಲಿ ನೀರಲ್ಲಿ ಮುಳುಗಿದ ಯುವಕರ ಪ್ರಾಣ ರಕ್ಷಣೆಯಿರಲಿ, ಬೆಂಗಳೂರಿನ ಹೆಚ್.ಎಸ್.ಆರ್. ಲೇಔಟ್ ನಲ್ಲಿ ಸಂಭವಿಸಿದ ಜಲಪ್ರವಾಹವಿರಲಿ, ಇಂತಹ ಹತ್ತಾರು ಅತಿಕ್ಲಿಷ್ಟ ಪರಿಸ್ಥಿತಿಗಳಲ್ಲಿ ಜನರ ಪ್ರಾಣ ಕಾಪಾಡಿರುವ ಹೀರೋ ಇವರು. ಅಂಡಮಾನ್-ನಿಕೋಬಾರ್, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣಾ ಸಮಯದಲ್ಲಿ ಕೂಡ ಸಮರ್ಥವಾಗಿ ಕಾರ್ಯ ನಿರ್ವಹಿಸಿ, ಚುನಾವಣೆಗಳನ್ನು ಸುಸೂತ್ರವಾಗಿ ನಡೆಸಿಕೊಟ್ಟಿರುವುದರಲ್ಲೂ ಇವರ ಪಾಲಿನ ಕೊಡುಗೆ ತುಂಬಾ ಇದೆ. ಇತ್ತೀಚೆಗಷ್ಟೇ ಅಂದರೆ ಮೇ 25 ರಂದು ಯಲಹಂಕದ ಕೆರೆಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯೊಬ್ಬರ ಪ್ರಾಣವನ್ನು ಉಳಿಸಿ ಸುದ್ದಿಯಾಗಿದ್ದರು.

ದಿನಾಂಕ 1-7-1978 ರಲ್ಲಿ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದು ಪುಟ್ಟ ಹಳ್ಳಿ ರೆಡ್ಡಿಹಳ್ಳಿಯಲ್ಲಿ ತಂದೆ ನಾಗರಾಜು ಆರ್ ಬಿ ತಾಯಿ ಜಯಮ್ಮ ದಂಪತಿಗಳ ಮೊದಲನೆಯ ಮಗನಾಗಿ ಜನಿಸಿದ ಇವರಿಗೆ ಬಾಲ್ಯದಿಂದಲೂ ಅಪಾರ ದೇಶಪ್ರೇಮ. ತನ್ನ ಪ್ರಾಥಮಿಕ ಶಾಲೆಯನ್ನು ತನ್ನದೇ ಗ್ರಾಮವಾದ ರೆಡ್ಡಿಹಳ್ಳಿಯಲ್ಲಿ, ಪ್ರೌಢ ವಿಧ್ಯಾಭಾಸವನ್ನು ಬೆಟ್ಟಕೋಟೆಯಲ್ಲಿ, ದೇವನಹಳ್ಳಿಯ ಸರ್ಕಾರೀ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿ, 01-08-2001ರಲ್ಲಿ ಗೃಹರಕ್ಷಕ ದಳದಲ್ಲಿ ಒಬ್ಬ ಸಾಮಾನ್ಯ ಗಾರ್ಡ್ ಆಗಿ ಸೈನ್ಯ ಸೇರಿದ ಇವರು, ವಾಮನ ಮೂರ್ತಿ ಒಂದೊಂದೇ ಹೆಜ್ಜೆಯಿಂದ ಇಡೀ ಭೂಮಿಯನ್ನು ಆಕ್ರಮಿಸಿದಂತೆ, ನಿಧಾನವಾಗಿ ಒಂದೊಂದೇ ಉನ್ನತ ಹುದ್ದೆಗೆ ಬಡ್ತಿ ಹೊಂದುತ್ತಲೇ ಹೋಗುತ್ತಾರೆ. ಅಸಿಸ್ಟೆಂಟ್ ಸೆಕ್ಷನ್ ಲೀಡರ್, ಆಮೇಲೆ ಸೆಕ್ಷನ್ ಲೀಡರ್, ಸಾರ್ಜೆಂಟ್ ಹೀಗೆ ವಿವಿಧ ಹುದ್ದೆಗಳನ್ನು ಅಲಂಕರಿಸಿ, 2011 ರಲ್ಲಿ ಪ್ಲಟೂನ್ ಕಮ್ಯಾಂಡರ್ ಆಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಒಬ್ಬ ಸಾಮಾನ್ಯ ಗಾರ್ಡ್ ಹುದ್ದೆಯಿಂದ ಇಷ್ಟು ವೇಗವಾಗಿ ಪ್ಲಟೂನ್ ಕಮ್ಯಾಂಡರ್ ಆಗಿ ಬೆಳೆದ ಬಗೆಯನ್ನು ನೆನೆಸಿದರೇನೇ ಎಂತಹವರಿಗೂ ರೋಮಾಂಚನವಾಗುತ್ತದೆ. ಗೃಹ ರಕ್ಷಕ ದಳದ ಕೇಂದ್ರ ಕಚೇರಿ ಹಲಸೂರಿನಲ್ಲಿ ಡಿಜಿಪಿ ಯಂತಹ ಉನ್ನತ ಶ್ರೇಣಿಯ ಅಧಿಕಾರಿಗಳಿಗೆ ಗಾರ್ಡ್ ಕಮಾಂಡರ್ ಆಗಿ ಕೂಡ ಇವರು ಸೇವೆ ಸಲ್ಲಿಸಿರುತ್ತಾರೆ. ಪ್ರಸ್ತುತ ಇವರು ಕರ್ನಾಟಕದ ಗೃಹ ರಕ್ಷಕ ದಳದಲ್ಲಿ ಪ್ಲಟೂನ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ತಂದೆ ತಾಯಿ,ಮಗ-ಸೊಸೆಯ ಜೊತೆ ಸುಖೀ ಸಂಸಾರ ನಡೆಸುತ್ತಿದ್ದಾರೆ

ಆಡು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ, ರವೀಂದ್ರರವರು ತಿಳಿಯದ ವಿಷಯವೇ ಇಲ್ಲ ಅನ್ನಬಹುದು. ವಿವಿಧ ರೀತಿಯ ಪರಿಸ್ಥಿತಿಗಳಲ್ಲಿ ಜನರ ಜೀವ ಕಾಪಾಡುವಂತಹ ವಿಶೇಷ ತರಬೇತಿ, ಪ್ರಥಮ ಚಿಕಿತ್ಸೆ ತರಬೇತಿ, ಸಂಚಾರ ನಿಯಂತ್ರಣ ತರಬೇತಿ, ಮುಂದಾಳತ್ವ ತರಬೇತಿ, ಅಗ್ನಿಶಾಮಕ ತರಬೇತಿ, ವಯರ್ಲೆಸ್ ತರಬೇತಿ, ಡಿಸೈನರ್ ತರಬೇತಿ,…

ಅಬ್ಬಬ್ಬಾ. ಹೇಳುತ್ತಾ ಹೋದರೆ ಮುಗಿಯದ ಲಿಸ್ಟ್ ಇದು. ಅಷ್ಟೇ ಅಲ್ಲದೆ ಹೊಸದಾಗಿ ಗೃಹರಕ್ಷಕ ದಳಕ್ಕೆ ಸೇರಿದವರಿಗೆ ಟ್ರೈನಿಂಗ್ ನೀಡುವ ಜವಾಬ್ದಾರಿ ಕೂಡ ಇವರ ಹೆಗಲ ಮೇಲಿದೆ. ಪ್ರತಿ ವರ್ಷವೂ ಸ್ವಾತಂತ್ರ್ಯ ದಿನಾಚರಣೆಯ ದಿನ ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಗ್ರೌಂಡ್ ನಲ್ಲಿ ನಡೆಯುವ ಪಥಸಂಚಲನದಲ್ಲಿ ಭಾಗವಹಿಸಿ ಸುಮಾರು ಪ್ರಶಸ್ತಿ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರಿಂದ ಸ್ಪೂರ್ತಿಗೊಂಡು ಎಷ್ಟೋ ಜನ ಯುವಕರು ಗೃಹ ರಕ್ಷಕ ದಳವನ್ನು ಸೇರಿದ್ದಾರೆ ಎಂದರೆ ನೀವು ನಂಬಲೇಬೇಕು. ಇವರ ತಮ್ಮ ಚನ್ನಕೇಶವ ಅವರು ಸಹ ಸುಮಾರು ಹದಿನೆಂಟು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗಷ್ಟೇ ನಿವೃತ್ತರಾಗಿದ್ದಾರೆ.

ಇವರ ಈ ಎಲ್ಲಾ ಸೇವೆಗಳನ್ನು ಗಮನಿಸಿದ ಕರ್ನಾಟಕ ಸರ್ಕಾರ 2012ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ನೀಡಿ ಇವರನ್ನು ಗೌರವಿಸಿದೆ. ಅಷ್ಟೇ ಅಲ್ಲದೆ 2019ರಲ್ಲಿ ಪ್ರತಿಷ್ಠಿತ ರಾಷ್ಟ್ರಪತಿಗಳ ಪದಕ ನೀಡಿ ಭಾರತ ಸರ್ಕಾರ ಇವರ ಸೇವೆಯನ್ನು ಗೌರವಿಸಿದೆ. ನೂರಾರು ಜನರ ಪ್ರಾಣ ಉಳಿಸಿರುವ ಇವರು ಇಂದಿಗೂ ಟೀಮ್ ಯೋಧ ನಮನ ಎಂಬ ತಂಡದ ಸಕ್ರಿಯ ಸದಸ್ಯರು. ಯೋಧರ ಬಗ್ಗೆ ಈಗಿನ ಜನಾಂಗಕ್ಕೆ ತಿಳಿಹೇಳುವ, ಯೋಧರನ್ನು ಗೌರವಿಸುವ, ದೂರದ ಯಾವುದೋ ಊರಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರ ಕುಟುಂಬದ ಯೋಗಕ್ಷೇಮಗಳನ್ನು ನೋಡಿಕೊಳ್ಳುವ, ಸಾಧ್ಯವಾದಷ್ಟೂ ಅವರ ಕಷ್ಟಕ್ಕೆ ನೆರವಾಗುವಂತಹ ಹತ್ತಾರು ಉತ್ತಮ ಕೆಲಸಗಳನ್ನು ಇಂದಿಗೂ ‘ಟೀಮ್ ಯೋಧ ನಮನ’ ನಡೆಸಿಕೊಂಡೇ ಬರುತ್ತಿದೆ. ತುಂಬಿದ ಕೊಡ ತುಳುಕುವುದಿಲ್ಲ ಎಂಬುದಕ್ಕೆ ಜೀವಂತ ಉದಾಹರಣೆಯನ್ನಾಗಿಯೂ ಇಂದಿನ ಯುವಕರಿಗೆ ನಾವು ರವೀಂದ್ರ ರವನ್ನು ತೋರಿಸಬಹುದು. ಇಷ್ಟು ದೊಡ್ಡ ಉನ್ನತ ಹುದ್ದೆಯಲ್ಲಿದ್ದರೂ, ಇಂದಿಗೂ ಕೂಡ ತಾನೇ ಬೆಳಿಗ್ಗೆ ಎದ್ದು, ತಮ್ಮ ಮನೆಯಲ್ಲಿನ ಹಸು, ದನ, ಕರುಗಳ ಮೈ ತೊಳೆದು, ಗೊಬ್ಬರ ಬಾಚಿ, ಹಾಲು ಕರೆದು, ಡೈರಿಗೆ ಹಾಕಿ ಬರುತ್ತಾರೆಂದರೆ ಅವರ ಉನ್ನತ ವ್ಯಕ್ತಿತ್ವವನ್ನೊಮ್ಮೆ ಊಹಿಸಿ. ಇದನ್ನೇ ಅಲ್ಲವೇ ರಾಷ್ಟ್ರಪಿತ ಗಾಂಧೀಜಿ ಕೂಡ ಹೇಳಿದ್ದು? ಅನ್ನ ಕೊಡುವ ರೈತ, ದೇಶ ಕಾಯುವ ಸೈನಿಕ – ರನ್ನು ದೇವರು ಎನ್ನುವುದಾದರೆ, ರೈತನಾಗಿಯೂ,

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply