ಸರ್ಕಾರಿ ಕೆಲಸ ದೇವರ ಕೆಲಸ. ಸರ್ಕಾರ ಕೊಟ್ಟಿರುವ ಕೆಲಸವನ್ನು ಶ್ರಧ್ಧಾ-ಭಕ್ತಿಯಿಂದ ಮಾಡಿದರೆ ಸಿಗುವ ಉಡುಗೊರೆ ಕತ್ತು ಮುರಿತ. ಆಶ್ಚರ್ಯವಾಯ್ತೇ? ಚುನಾವಣಾ ಕರ್ತವ್ಯವನ್ನು ಅತ್ಯಂತ ನಿಷ್ಠೆಯಿಂದ ನಿಭಾಯಿಸುವ ನಮ್ಮ ಹೀರೋ ನ್ಯೂಟನ್ನಿಗೆ ಸಿಗುವ ಉಡುಗೊರೆ ಇದೇ… !!
ನಿಜವಾದ ನ್ಯೂಟನ್ ಹೊಸ ವಿಷಯಗಳನ್ನು ಕಂಡು ಹಿಡಿಯುವ ವಿಜ್ಞಾನಿಯಾದರೆ, ನಮ್ಮ ಹೀರೋ ನ್ಯೂಟನ್ ಈಗಿರುವ ವಿಷಯವನ್ನೇ ಅರಗಿಸಿಕೊಳ್ಳಲಾಗದೇ ತೊಳಲಾಡುವವನು. ರಾತ್ರೋರಾತ್ರಿ ಕೆಟ್ಟು ಕೂತಿರುವ ವ್ಯವಸ್ಥೆ ವಿರುದ್ಧ ಹೋರಾಡಿ ಗೆಲ್ಲಬೇಕೆಂದುಕೊಂಡವನು. ಆದರೆ ಅದರಲ್ಲಿ ಯಶಸ್ಸು ಸಿಗದೇ ಇತ್ತ ಕಡೆ ಸೋಲನ್ನೂ ಒಪ್ಪಿಕೊಳ್ಳದೇ ಪರದಾಡುತ್ತಿರುವನು.
ಭಾರತೀಯರಲ್ಲಿ ಅನೇಕ ವಿಷಯಗಳು ಹಾಸುಹೊಕ್ಕಾಗಿವೆ. ಅದರಲ್ಲಿ ನಿರ್ಲಕ್ಷ್ಯತೆಯೂ ಒಂದು. ನೇರ ತನ್ನ ಬುಡಕ್ಕೆ ಬರುವವರೆಗೂ ಯಾರೂ ತುಟಿಕ್-ಪಿಟಿಕ್ ಎನ್ನಲಾರರು. ಇಂತಹಾ ಸಂದರ್ಭದಲ್ಲಿ ಯಾವುದೋ ಒಂದು ಮೂಲೆಯಲ್ಲಿರುವ, ನಕ್ಸಲರ ತಾಣ ಎಂದು ಗುರುತಿಸಿಕೊಂಡಿರುವ ಹಳ್ಳಿಯೊಂದಕ್ಕೆ ಮತದಾನದ ಕರ್ತವ್ಯ ನಿರ್ವಹಿಸಲು ಕರೆ ಬಂದರೆ ಯಾರು ತಾನೇ ಹೋಗುತ್ತಾರೆ? ಈಗಾಗಲೇ ಅಲ್ಲಿಗೆ ನಿಯೋಜನೆಗೊಂಡಿದ್ದ ಅಧಿಕಾರಿ ಹೃದ್ರೋಗದ ನೆಪ ಹೇಳಿ ತಪ್ಪಿಸಿಕೊಂಡಿರುತ್ತಾನೆ. ಆಗ ಅವನ ಜಾಗಕ್ಕೆ ನಮ್ಮ ಹೀರೋ ನ್ಯೂಟನ್ ಹೊರಡುತ್ತಾನೆ.
ಅದು ನಕ್ಸಲ್ ಪ್ರದೇಶ ಎಂದು ಹೇಳಿದಾಗ ನಮಗೆ ಇಲ್ಲಿಯೇ ನಡುಕ ಶುರುವಾಗಿರುತ್ತದೆ. ಆದರೆ ಅವನು ಧೈರ್ಯವಾಗಿ ಹೊರಡುತ್ತಾನೆ. ನಕ್ಸಲ್ ಸ್ಥಳಗಳ ಬಗ್ಗೆ ಕಿಂಚಿತ್ತೂ ಅರಿವಿರದ ನ್ಯೂಟನ್ ಹೆಲಿಕಾಪ್ಟರಿನಲ್ಲಿ ಬಂದಿಳಿಯುತ್ತಾನೆ. ಆಗೊಂದು ವ್ಯತ್ಯಾಸ ಕಾಣುತ್ತದೆ. ಎಲ್ಲಾ ಕಡೆಯೂ ಪೊಲೀಸ್ ಸೆಕ್ಯುರಿಟಿ ಇದ್ದರೆ, ಇಲ್ಲಿ ಮಿಲಿಟರಿ ಸೆಕ್ಯುರಿಟಿಯೇ ಇರುತ್ತದೆ. ಇದರಿಂದಲಾದರೂ ನ್ಯೂಟನ್ನಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗಬೇಕಿತ್ತು. ಉಹುಂ… ಅರ್ಥವಾಗೋಲ್ಲ. ಬೇರೆಲ್ಲಾ ಕಡೆಯ ಹಾಗೆಯೇ ಇದೂ ಎಂಬಂತೆ ನಿರ್ಲಿಪ್ತವಾಗಿರುತ್ತಾನೆ.
ಚುನಾವಣೆಯ ದಿನ ಎಲ್ಲಾ ತಯಾರಿ ಮಾಡಿಕೊಂಡು ಎಷ್ಟು ಕಾದರೂ ಜನ ಬರುವುದಿಲ್ಲ. ಆದರೆ ನಾಯಕ ಮಾತ್ರ ಜನ ಬಂದೇ ಬರುತ್ತಾರೆ, ಚುನಾವಣೆ ನಡೆದೇ ನಡೆಯುತ್ತದೆ ಎಂಬ ಭರವಸೆಯಿಂದಿರುತ್ತಾನೆ. ಅವನಿಗೆ ಇದು ಕರ್ತವ್ಯ. ಹಾಗಾಗಿ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದಾನೆ. ಆದರೆ ಅಲ್ಲಿನ ಜನರಿಗೆ ಚುನಾವಣೆ ಎಂಬ ಮಹತ್ವವೇ ಇಲ್ಲ.
ಏಕೆಂದರೆ ಯಾವ ಸರ್ಕಾರ ಬಂದರೂ ಅವರ ಪರಿಸ್ಥಿತಿ ಏನೂ ಸುಧಾರಿಸೋಲ್ಲ. ಯಾರೇ ಗೆದ್ದರೂ ಈ ಜನರ ಕಾಳಜಿ ವಹಿಸೋಲ್ಲ, ಅವರಿಗೆ ಯಾವ ಸೌಲಭ್ಯವನ್ನೂ ಕೊಡೋಲ್ಲ. ಹಾಗಾಗಿ ಜನರು ಚುನಾವಣೆಯ ದಿನವೂ ತಟಸ್ಥರಾಗಿ ತಮ್ಮ ಪಾಡಿಗೆ ತಾವಿರುತ್ತಾರೆ.
ಅಷ್ಟರಲ್ಲಿ ಇವರು ಕರ್ತವ್ಯ ನಿರ್ವಹಿಸುತ್ತಿರುವ ಪೋಲ್ ಬೂತಿಗೆ ಅಂತರರಾಷ್ಟ್ರೀಯ ಪತ್ರಕರ್ತರು ಬರುತ್ತಿದ್ದಾರೆಂಬ ಸುದ್ದಿ ಬರುತ್ತದೆ. ಆಗ ಎಲ್ಲರೂ ಷಾಕ್ ಹೊಡೆದಂತೆ ಎದ್ದು ನಿಲ್ಲುತ್ತಾರೆ. ಬಾರದ ಮತದಾರರನ್ನು ಒದ್ದು ಎಳೆದುಕೊಂಡು ಬರಲಾಗುತ್ತದೆ. ಜನ ಬಂದರು ಅಂತ ನ್ಯೂಟನ್ನಿಗೆ ಖುಷಿ ಆಗುತ್ತದೆ. ಆದರೆ ಅವರು ಹೇಗೆ ಬಂದರು ಅಂತ ಅವನಿಗೇನು ಗೊತ್ತು ಪಾಪ…
ಮಿಲಿಟರಿ ನಾಯಕ ಆ ಜನರ ಬಳಿ ವೋಟಿಂಗ್ ಮೆಷೀನ್ ತೋರಿಸಿ “ಇಷ್ಟು ಚಿತ್ರಗಳಿವೆ.. ಯಾವ ಚಿತ್ರ ಚೆನ್ನಾಗಿದೆ ಅನ್ಸುತ್ತೋ ಅದನ್ನು ಒತ್ತಿಬಿಡಿ” ಅಂತ ಹೇಳಿಕೊಡುತ್ತಿರುತ್ತಾನೆ. ನ್ಯೂಟನ್ ಅದನ್ನೊಪ್ಪದೇ ಆ ಜನರಿಗೆ ಪಾರ್ಟಿಗಳ ಬಗ್ಗೆ, ಚುನಾವಣೆಗೆ ನಿಂತಿರುವವರ ಬಗ್ಗೆ ತಿಳಿಸಿಕೊಡಬೇಕು ಅಂತ ರೇಗುತ್ತಾನೆ. ಈ ಮಾತಿಗೆ ಮಿಲಿಟರಿ ನಾಯಕ ನಗುತ್ತಾನೆ. ಏಕೆಂದರೆ ಆ ಮಿಲಿಟರಿಯವನು ಇಂತಹಾ ಅದೆಷ್ಟು ಮತದಾನ ಕಂಡಿರುವುದಿಲ್ಲ? ಆದರೆ ನಕ್ಕು ಸುಮ್ಮನಾಗುತ್ತಾನೆಯೇ ಹೊರತೂ ಚುನಾವಣೆ ನಡೆಸುವುದೇ ಮಹತ್ಸಾಧನೆ ಎಂಬಂತೆ ಕುಣಿದಾಡುತ್ತಿರುವ ನ್ಯೂಟನ್ನಿಗೆ ಏನೂ ಹೇಳಲು ಹೋಗುವುದಿಲ್ಲ. ಹೇಗೋ ಚುನಾವಣೆ ನಡೆಯುತ್ತದೆ. ಜನರು ಮತದಾನ ಮಾಡಿ ಹೋಗುತ್ತಾರೆ.
ಕೊನೆಗೆ ಓಟಿಂಗ್ ಇನ್ನೇನು ಮುಗಿಯುತ್ತದೆ ಎನ್ನುವಾಗ ನಕ್ಸಲ್ ದಾಳಿ ಶುರುವಾಗುತ್ತದೆ.
ಆಗ ಮಿಲಿಟರಿಯವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಚುನಾವಣೆಗೆ ಬಂದ ಸರ್ಕಾರಿ ಸಿಬ್ಬಂದಿಗಳನ್ನು ಕಾಪಾಡಿ ಕರೆದೊಯ್ಯುತ್ತಿರುತ್ತಾರೆ. ಆಗ ದಾರಿ ಮಧ್ಯದಲ್ಲಿ ಒಂದು ನಾಲ್ಕು ಜನ ಓಟ್ ಮಾಡಬೇಕು ಅಂತ ಬಂದಾಗ ಮಿಲಿಟರಿ ನಾಯಕ ಅವರನ್ನು ಓಡಿಸಲು ನೋಡುತ್ತಾನೆ. ಆದರೆ ನಮ್ಮ ಧೀಮಂತ ನಾಯಕ ನ್ಯೂಟನ್ ಮಿಲಿಟರಿಯವರ ಮಾತನ್ನು ಮೀರಿ ಆ ನಾಲ್ವರ ಓಟಿಂಗ್ ಪಡೆಯುವಲ್ಲಿ ಸಫಲನಾಗುತ್ತಾನೆ.
ಈ ನಾಲ್ಕೇ ನಾಲ್ಕು ಓಟಿಗಾಗಿ ಚುನಾವಣಾ ಸಿಬ್ಬಂದಿಯೂ ಸೇರಿದಂತೆ ಅಷ್ಟೂ ಜನರ ಪ್ರಾಣವನ್ನು ಅಪಾಯಕ್ಕೆ ದೂಡಬೇಕಿತ್ತೇ ಅಂತ ನ್ಯೂಟನ್ ಮೇಲೆ ಕೋಪ ಬರುತ್ತದೆ. ಆಗ ನಮಗೂ ಅವರೆಲ್ಲರ ಪ್ರಾಣ ಉಳಿದರೆ ಸಾಕೆಂದು ಅನ್ನಿಸುತ್ತಿರುತ್ತದೆ. ಆದರೂ ನ್ಯೂಟನ್ ಆ ನಾಲ್ವರ ಓಟ್ ಪಡೆಯುತ್ತಾನೆ. ನಂತರ ನಾಯಕನಿಗೂ, ಮಿಲಿಟರಿ ನಾಯಕನಿಗೂ ಜಟಾಪಟಿಯಾಗುತ್ತದೆ. ಈ ಜಟಾಪಟಿಯಲ್ಲಿ ನ್ಯೂಟನ್ ಕುತ್ತಿಗೆ ಮುರಿಯುತ್ತದೆ. ಒಂದು ರೀತಿ ನ್ಯೂಟನ್ ಸಹ ತನ್ನ ಪ್ರಾಣ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸಿರುತ್ತಾನಾದ್ದರಿಂದ, ಇಷ್ಟು ಜವಾಬ್ದಾರಿಯುತ ಕೆಲಸವನ್ನು ನಿರ್ವಹಿಸಿದ್ದಕ್ಕಾಗಿ ಅವನಿಗೆ ಸರ್ಕಾರದ ಕಡೆಯಿಂದ ಪ್ರಶಸ್ತಿಯೂ ಸಿಗುತ್ತದೆ.
ಈ ಸಿನೆಮಾದಲ್ಲಿ ನಮ್ಮನ್ನು ಕಾಡುವ ಅಂಶವೆಂದರೆ ಯಾರು ಮಾಡಿದ್ದು ಸರಿ, ಯಾರು ಮಾಡಿದ್ದು ತಪ್ಪು ಎನ್ನುವ ದ್ವಂದ್ವ. ಚುನಾವಣಾ ಅಧಿಕಾರಿಯಾಗಿ ನ್ಯೂಟನ್ ಮಾಡಿದ್ದೂ ಸರಿ ಅಂತ ಒಮ್ಮೆ ಅನ್ನಿಸುತ್ತದೆ. ಮತ್ತೊಮ್ಮೆ ನಕ್ಸಲ್ ಪ್ರದೇಶದ ವಿವರ ಗೊತ್ತಿರುವ ಮಿಲಿಟರಿ ಅಧಿಕಾರಿ ಮಾಡಿದ್ದೂ ಸರಿ ಅಂತನಿಸುತ್ತದೆ. ಚುನಾವಣಾ ಅಧಿಕಾರಿಗೆ ಓಟುಗಳು ಮುಖ್ಯವಾದರೆ, ಮಿಲಿಟರಿ ಅಧಿಕಾರಿಗೆ ಇವರ ಪ್ರಾಣಗಳನ್ನು ಕಾಪಾಡುವುದು ಮುಖ್ಯ. ಹಾಗಾಗಿ ತಮ್ಮ ತಮ್ಮ ದೃಷ್ಟಿಕೋನದಲ್ಲಿ ಇಬ್ಬರೂ ಸರಿ ಇದ್ದಾರೆ ಎಂಬ ತೀರ್ಮಾನಕ್ಕೆ ಬರುತ್ತೇವೆ.
(ಸಿನೆಮಾ ಪ್ರೈಮಿನಲ್ಲಿದೆ)