( ಮುಂದುವರೆದ ಭಾಗ )
೨೦೦೦ ನೇ ಇಸ್ವಿಯಲ್ಲಿ ತೆರೆ ಕಂಡ ಉಪಾಸನಾ ಸಿಂಗ್ ನಟಿಸಿದ ದರ್ದ್ ಪರ್ದೇಸ್ ದೇ ಚಿತ್ರವು ಪಂಜಾಬಿನಲ್ಲಿ ಯಶಸ್ವಿ ಪ್ರದರ್ಶನ ಕಾಣದಿದ್ದರೂ ವಿದೇಶದಲ್ಲಿ ತೆರೆ ಕಂಡು ಭರ್ಜರಿ ಯಶಸ್ಸನ್ನು ಕಂಡಿತ್ತು. ೨೦೦೨ ನೇ ಇಸ್ವಿಯಲ್ಲಿ ತೆರೆ ಕಂಡ ಗಾಯಕ ಮತ್ತು ನಟ ಹರ್ಭಜನ್ ಮನ್ ನಟಿಸಿದ ಮನಮೋಹನ್ ಸಿಂಗ್ ನಿರ್ದೇಶನದಲ್ಲಿ ಅಧಿಕ ಬಂಡವಾಳದಲ್ಲಿ ನಿರ್ಮಾಣಗೊಂಡ ಜೀ ಆಯನ್ ಚಿತ್ರವು ಅದ್ಭುತ ಯಶಸ್ಸನ್ನು ಪಡೆಯುವುದರೊಂದಿಗೆ ಅವನತಿಯ ಕಡೆಗೆ ಸಾಗುತ್ತಿದ್ದ ಈ ಚಿತ್ರರಂಗವು ಮರುಜನ್ಮ ಪಡೆಯಿತು.
೨೦೦೦ ನೇ ದಶಕದ ಮಧ್ಯದಲ್ಲಿ ಈ ಚಿತ್ರರಂಗವು ವಿದೇಶಿ ಮಾರುಕಟ್ಟೆಯನ್ನು ಪ್ರವೇಶಿಸಿ ಅಲ್ಲಿಯೂ ತನ್ನ ನೆಲೆಯನ್ನು ಕಂಡುಕೊಳ್ಳಲು ಯಶಸ್ವಿಯಾಯಿತು. ಪಂಜಾಬಿ ಭಾಷಿಕರು ಹೆಚ್ಚು ಕೆನಡಾ ದೇಶದಲ್ಲಿದ್ದ ಕಾರಣ ಅಲ್ಲಿಯೂ ತೆರೆ ಕಂಡ ಪಂಜಾಬಿ ಚಿತ್ರಗಳು ಭಾರೀ ಯಶಸ್ಸು ಪಡೆದಿದ್ದವು. ೨೦೦೫ ರಲ್ಲಿ ತೆರೆ ಕಂಡ ದೇಶ್ ಹೋಯಾ ಪರ್ದೇಸ್, ೨೦೦೬ ರಲ್ಲಿ ತೆರೆ ಕಂಡ ಏಕ್ ಜಿಂದ್ ಏಕ್ ಜಾನ್ ಮತ್ತು ಮನ್ನತ್, ೨೦೦೭ ರಲ್ಲಿ ತೆರೆ ಕಂಡ ರುಸ್ತುಂ ಏ ಹಿಂದ್ ಮತ್ತು ಮಿಟ್ಟಿ ವಜನ್ ಮರ್ಧಿ ಈ ದಶಕದಲ್ಲಿ ತೆರೆ ಕಂಡ ಗಮನಾರ್ಹ ಯಶಸ್ವಿ ಚಿತ್ರಗಳಾಗಿದ್ದವು.
೨೦೦೯ ರಲ್ಲಿ ತೆರೆ ಕಂಡ ನಟ ಜಿಮ್ಮಿ ಶರ್ಗಿಲ್ ನಟಿಸಿದ ತೇರಾ ಮೇರಾ ಕಿ ರಿಶ್ತಾ ಮತ್ತು ಮುಂಡೆ ಯು.ಕೆ. ದೆ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಮಾಡಿದ ಸದ್ದು ಸಾಮಾನ್ಯವಾಗಿರಲಿಲ್ಲ. ಅದರಲ್ಲೂ ಮುಂಡೆ ಯು.ಕೆ.ದೆ ಚಿತ್ರವು ಹಣ ಗಳಿಕೆಯಲ್ಲಿ ಹಿಂದಿನ ದಾಖಲೆಗಳನ್ನು ಮುರಿದು ಹೊಸ ದಾಖಲೆಯನ್ನು ನಿರ್ಮಿಸಿತ್ತು. ೨೦೧೦ ರಲ್ಲಿ ತೆರೆ ಕಂಡ ನಟ ಜಿಮ್ಮಿ ಶೇರ್ಗಿಲ್ ಮತ್ತು ಗಿಪ್ಪಿ ಗ್ರೇವಾಲ್ ನಟಿಸಿದ ಮೇಲ್ ಕರಾದೆ ರಚ್ಛಾ ಚಿತ್ರವು ೧೧೫ ಮಿಲಿಯನ್ ಡಾಲರ್ ಲಾಭವನ್ನು ಗಳಿಸುವ ಮೂಲಕ ಪಂಜಾಬಿ ಚಿತ್ರದ ಇತಿಹಾಸದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿತ್ತು.
೨೦೧೧ ರಲ್ಲಿ ತೆರೆ ಕಂಡ ಗಿಪ್ಪಿ ಗ್ರೇವಾಲ್, ದಿಲ್ಜಿತ್ ದೋಸಾಂಜ್ ಮತ್ತು ನೀರೂ ಭಾಜ್ವಿ ಮುಖ್ಯ ಪಾತ್ರದಲ್ಲಿ ನಟಿಸಿದ ಜಿಸ್ನೇ ಮೇರಾ ದಿಲ್ ಲೂಟೆಯಾ ಚಿತ್ರವು ೧೨೫ ಮಿಲಿಯನ್ ಡಾಲರ್ ಗಳಿಸುವ ಮೂಲಕ ಈ ಚಿತ್ರರಂಗವನ್ನು ಹೊಸ ಹಂತಕ್ಕೆ ಕೊಂಡೊಯ್ದಿತ್ತು.
೨೦೧೨ ರಲ್ಲಿ ತೆರೆ ಕಂಡ ನಟ ದಿಲ್ಜಿತ್ ದೋಸಾಂಜ್ ಮತ್ತು ನೀರೂ ಭಾಜ್ವಾ ನಟಿಸಿದ ಜಸ್ಟ್ ಆಂಡ್ ಜ್ಯೂಲಿಯಟ್ ಚಿತ್ರವು ನಮ್ಮ ದೇಶದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಯಶಸ್ಸನ್ನು ಕಂಡಿತ್ತು. ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ ನಟರ ತಾರಾ ಮೌಲ್ಯವು ಉನ್ನತ ಮಟ್ಟವನ್ನು ತಲುಪಿತ್ತು. ನಟ ದಿಲ್ಜಿತ್ ದೋಸಾಂಜ್ ೨೦೦೦ ರ ದಶಕದ ಯಶಸ್ವಿ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರಲ್ಲದೆ ೨೦೧೨ ರಲ್ಲಿ ತೆರೆ ಕಂಡ ನಟ ಹನಿ ಸಿಂಗ್ ಮತ್ತು ಗಿಪ್ಪಿ ಗ್ರೇವಾಲ್ ನಟಿಸಿದ ದಿ ಅನ್ ಟೋಲ್ಡ್ ಸ್ಟೋರಿ ಮತ್ತು ಕ್ಯಾರಿ ಆನ್ ದ ಜಟ್ಟ್ ಚಿತ್ರಗಳು ಯಶಸ್ವಿ ವಾಣಿಜ್ಯ ಚಿತ್ರಗಳಾಗಿದ್ದವು.
ದಿಲ್ಜಿತ್ ದೋಸಾಂಜ್ ಮತ್ತು ನೀರೂ ಭಾಜ್ವಾ ಜಟ್ಟ್ ಎಂಡ್ ಜುಲಿಯಟ್ ಎರಡನೇ ಭಾಗದ ಚಿತ್ರವು ಹಣ ಗಳಿಕೆಯಲ್ಲಿ ಕೂಡ ಮೊದಲ ಭಾಗವನ್ನು ಹಿಂದಿಕ್ಕಿ ಅದ್ಭುತ ಯಶಸ್ಸನ್ನು ಕಂಡಿತ್ತು. ೨೦೧೩ ರಲ್ಲಿ ತೆರೆ ಕಂಡ ಗಿಪ್ಪಿ ಗ್ರೇವಾಲ್ ನಟಿಸಿದ ಬಾಜಿ ಇನ್ ಪ್ರಾಬ್ಲಂ, ದಿಲ್ಜಿತ್ ದೋಸಾಂಬ್ ನಟಿಸಿದ ಸಾದಿ ಲವ್ ಸ್ಟೋರಿ ಮತ್ತು ರೋಷನ್ ಪ್ರಿನ್ಸ್ ನಟಿಸಿದ ಘರ್ ಮಾಮಿಯಾ ಗಡ್ ಬಡ್, ಗಡ ಬಡ್ ಗಮನಾರ್ಹ ಚಿತ್ರಗಳಾಗಿದ್ದವು. ೨೦೧೪ ರಲ್ಲಿ ತೆರೆ ಕಂಡ ೪೨ ಚಿತ್ರಗಳ ಪೈಕಿ ಶೇಕಡಾ ಎಂಭತ್ತು ರಷ್ಟು ಚಿತ್ರಗಳು ಹಾಸ್ಯ ಪ್ರಧಾನ ಚಿತ್ರಗಳಾಗಿದ್ದವು.
ಇದೇ ವರ್ಷ ತೆರೆ ಕಂಡ ಐತಿಹಾಸಿಕ ಹಿನ್ನೆಲೆ ಹೊಂದಿದ್ದ ಚಿತ್ರ ಚಾರ್ ಸಹೀಬ್ಜಾದೇ ಪಂಜಾಬಿ ಭಾಷೆಯಲ್ಲಿ ತಯಾರಾದ ಮೊದಲ 3 D ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತಲ್ಲದೆ ಗಲ್ಲಾಪೆಟ್ಟಿಗೆಯಲ್ಲಿ ರೂ ೭೦ ಕೋಟಿ ಹಣವನ್ನು ಗಳಿಸುವ ಮೂಲಕ ಭಾರೀ ಸುದ್ದಿಯಾಗಿತ್ತು. ಅಲ್ಲದೇ ಇದೇ ವರ್ಷ ತೆರೆ ಕಂಡ ಗಿಪ್ಪಿ ಗ್ರೇವಾಲ್ ನಟಿಸಿದ ಜಟ್ಟ್ ಜೇಮ್ಸ್ ಬಾಂಡ್, ಧರ್ಮೇಂದ್ರ ಮತ್ತು ಪೂನಂ ಧಿಲ್ಲೋನ್ ನಟಿಸಿದ ಡಬಲ್ ದಿ ಟ್ರಬಲ್, ದಿಲ್ಜಿತ್ ದೋಸಾಂಬ್ ನಟಿಸಿದ ಪಂಜಾಬ್ ೧೯೮೪, ಡಿಸ್ಕೋ ಸಿಂಗ್ ಮತ್ತು ಮಿಸ್ಟರ್ & ಮಿಸ್ಟ್ರಸ್ ೪೨೦ ಇತರೇ ಯಶಸ್ವಿ ಚಿತ್ರಗಳಾಗಿದ್ದವು. ಮತ್ತು ೨೦೧೪ ರಲ್ಲಿ ತೆರೆ ಕಂಡ ಹಾಗೂ ಕೆನಡಾ ದೇಶದಲ್ಲಿ ಚಿತ್ರೀಕರಣಗೊಂಡ ಪ್ರಥಮ ಪಂಜಾಬಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವರ್ಕ್ ವೆದರ್ ವೈಫ್ ಚಿತ್ರವು ೮೭ ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಕೆನಡಾ ದೇಶವನ್ನು ಪ್ರತಿನಿಧಿಸಿತ್ತು.
೨೦೧೫ ರಲ್ಲಿ ತೆರೆ ಕಂಡ ದಿಲ್ಜಿತ್ ದೋಸಾಂಬ್ ಮತ್ತು ನೀರೂ ಭಾಜ್ವಾ ನಟಿಸಿದ ಸರ್ದಾರ್ಜಿ ಚಿತ್ರವು ಅತ್ಯಂತ ಯಶಸ್ವಿ ಚಿತ್ರವೆನಿಸಿಕೊಂಡಿತ್ತು.ಇದೇ ವರ್ಷ ತೆರೆ ಕಂಡ ಅಂಗ್ರೇಜ್, ದಿಲ್ದಾರಿಯಾ, ಹೀರೋ ನಾಯ್ ಯಾದ್ ರಭಿ ಮತ್ತು ಮುಂಡೆ ಕಮಾಲ್ ದೆ ಚಿತ್ರಗಳು ಪ್ರಮುಖ ಆಕರ್ಷಣೆಯಾಗಿದ್ದವು. ೨೦೧೬ ರಲ್ಲಿ ತೆರೆ ಕಂಡ ಅಂಬಸಾರಿಯಾ, ಲವ್ ಪಂಜಾಬ್ ಮತ್ತು ಅರ್ದಾಸ್ ಚಿತ್ರಗಳು ನಮ್ಮ ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿ ಕೂಡ ಯಶಸ್ಸನ್ನು ಕಂಡಿದ್ದವು. ೨೦೦೦ ನೇ ಇಸ್ವಿ ಮೊದಲು ತೀವ್ರ ನಷ್ಟದಲ್ಲಿದ್ದ ಈ ಚಿತ್ರ ರಂಗ ಪಂಜಾಬ್ ಸರ್ಕಾರ ಮತ್ತು ಚಿತ್ರ ರಂಗದ ಪಂಡಿತರ ಸಂಘಟಿತ ಪ್ರಯತ್ನದಿಂದ ಪುರ್ನಜನ್ಮ ಪಡೆದು ಕೊಂಡ ಈ ಚಿತ್ರರಂಗ ದೊಡ್ಡ ಬಂಡವಾಳದ ಯಶಸ್ವಿ ಚಿತ್ರಗಳನ್ನು ತಯಾರಿಸುತ್ತಿದೆ. ವರ್ಷಂ ಪ್ರತಿ ಬಿಡುಗಡೆಯಾಗುವ ಚಿತ್ರಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ೨೦೦೯ ರಂತೆ ಬಿಡುಗಡೆಯಾದ ಪಂಜಾಬಿ ಚಿತ್ರಗಳ ಸಂಖ್ಯೆ ಈಗಾಗಲೇ ೧೦೦೦ ದಾಟಿದೆ. ೨೧ ನೇ ಶತಮಾನದಲ್ಲಿ ಭಾರತೀಯ ಪಂಜಾಬಿ ಚಿತ್ರರಂಗವು ಉತ್ತಮ ಗುಣಮಟ್ಟದ ಚಿತ್ರಗಳ ತಯಾರಿಕೆಯಿಂದ ಜನಪ್ರಿಯವಾಗಿದೆ.
೨೧ ನೇ ಶತಮಾನದ ಆರಂಭದ ಪಂಜಾಬಿ ಚಿತ್ರರಂಗದ ಜನಪ್ರಿಯ ನಟ ನಟಿಯರ ಹೆಸರನ್ನು ತಿಳಿದುಕೊಳ್ಳುವ ಇಚ್ಛೆ ಇದೆಯಾ?
ಜಿಮ್ಮಿ ಶೇರ್ಗಿಲ್, ಗಿಪ್ಪಿ ಗ್ರೇವಾಲ್, ಹರ್ಭಜನ್ ಮನ್ ಮತ್ತು ದಿಲ್ಜಿತ್ ದೋಸಾಂಬ್
ನೀರೂ ಭಾಜ್ವ, ಕುಲ್ರಾಜ್ ರಾಂಧವ್ ಮತ್ತು
ಸುರ್ವಿನ್ ಚಾವ್ಲಾ ( ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ನಟಿಸಿದ ಪರಮೇಶಿ ಪಾನ್ ವಾಲಾ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು).