ಪಂಜಾಬಿ ಚಿತ್ರ ರಂಗ

ನಮ್ಮ ಕನ್ನಡ ಚಿತ್ರರಂಗವನ್ನು ಸ್ಯಾಂಡಲ್ ವುಡ್ ಎಂದು ಹೇಗೆ  ಕರೆಯುತ್ತಾರೆಯೋ ಅದೇ ರೀತಿ ಪಂಜಾಬಿ ಚಿತ್ರರಂಗವನ್ನು ಪಾಲಿವುಡ್ ಎಂದು ಕರೆಯಲಾಗುತ್ತದೆ. ಆದರೆ ಈ ಚಿತ್ರರಂಗ ಎಂದು ಆರಂಭಗೊಂಡಿತು ಎನ್ನುವ ನಿಖರ ಮಾಹಿತಿ ಲಭ್ಯವಾಗದ ಕಾರಣ ಇಲ್ಲಿ ಬರೆಯಲು ಸಾಧ್ಯವಾಗಿಲ್ಲ.

       ೧೯೩೫ ರಲ್ಲಿ ತೆರೆ ಕಂಡ ಕೆ.ಡಿ.ಮೆಹ್ತಾ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ ಪಿಂಡ್ ದೇ ಕುಡಿ ಈ ಚಿತ್ರವು ಪಂಜಾಬಿ ಭಾಷೆಯಲ್ಲಿ ತಯಾರಾದ ಮೊಟ್ಟ ಮೊದಲ ವಾಕ್ಚಿತ್ರ ಕೂಡ ಆಗಿದೆ. ಈ ಚಿತ್ರದ ಮೂಲಕ ನೂರ್ ಜಹಾನ್ ಎಂಬ ನಟಿ ಪಂಜಾಬಿ ಚಿತ್ರರಂಗವನ್ನು ಪ್ರವೇಶಿಸಿದ್ದರು. ಮುಂದೆ ಭವಿಷ್ಯದಲ್ಲಿ ಇದೇ ನಟಿ ಜನಪ್ರಿಯ ಗಾಯಕಿಯಾಗಿ ಕೂಡ ಪ್ರಸಿದ್ಧಿಯನ್ನು ಪಡೆದಿದ್ದರು. ಕೋಲ್ಕತ್ತಾದಲ್ಲಿ ನಿರ್ಮಿಸಲ್ಪಟ್ಟ ಈ ಚಿತ್ರವು ಲಾಹೋರ್ ನಲ್ಲಿ ತೆರೆ ಕಂಡು ಅಪಾರ ಯಶಸ್ಸನ್ನು ಕಂಡಿತ್ತು.

ಸ್ವಾತಂತ್ರ್ಯ ಪೂರ್ವದಲ್ಲಿ ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರಿನ ಸುತ್ತ ಮುತ್ತಲಿನ ಕಡೆ ಪಂಜಾಬಿ ಭಾಷಿಕರು ಹೆಚ್ಚು ಇದ್ದುದರಿಂದ ಪಂಜಾಬಿ ಭಾಷೆಯ ಚಿತ್ರಗಳಿಗೆ ಲಾಹೋರ್ ಪ್ರಮುಖ ಮಾರುಕಟ್ಟೆಯಾಗಿತ್ತು. ಇದೇ ಸಂದರ್ಭದಲ್ಲಿ ಲಾಹೋರ್ ನ್ನು ಕೇಂದ್ರವಾಗಿಟ್ಟುಕೊಂಡು  ಪಂಜಾಬಿ ಭಾಷೆಯ ಚಿತ್ರಗಳನ್ನು  ಹೆಚ್ಚು ನಿರ್ಮಾಣ ಮಾಡಲಾರಂಭಿಸಿತಲ್ಲದೆ ಮುಂಬಯಿ ಮತ್ತು ಕೋಲ್ಕತ್ತಾದಲ್ಲಿದ್ದ ಅನೇಕ ಪಂಜಾಬಿ ಭಾಷೆಯ ನಟ, ನಟಿಯರು, ನಿರ್ಮಾಪಕರು, ನಿರ್ದೇಶಕರು ಮತ್ತು ತಂತ್ರಜ್ಞರು ಲಾಹೋರ್ ಗೆ ವಲಸೆ ಹೋದರು. ಇದರಲ್ಲಿ ಶಾಂತಾ ಅಪ್ಪೆ, ಮೋತಿಲಾಲ್,ಹೀರೇಲಾಲ್, ಮುಮ್ತಾಜ್ ಶಾಂತಿಯಂತಹ ಪ್ರಮುಖ ನಟರು ಮತ್ತು ಜನಪ್ರಿಯ ನಿರ್ದೇಶಕರಾಗಿದ್ದ ಬಿ.ಆರ್.ಚೋಪ್ರಾ, ರಮಾನಂದ ಸಾಗರ್ ಕೂಡ ತಮ್ಮ ವೃತ್ತಿ ಜೀವನವನ್ನು ಲಾಹೋರ್ ನಲ್ಲಿ ಪ್ರಾರಂಭಿಸಿದ್ದರು.    

೧೯೪೭ ರಲ್ಲಿ ಸ್ವಾತಂತ್ರ್ಯ ಪಡೆದ ನಮ್ಮ ಅವಿಭಜಿತ ಭಾರತ ದೇಶವು ಬ್ರಿಟಿಷರ ಕುತಂತ್ರಕ್ಕೆ ಬಲಿಯಾಗಿ ಭಾರತ ಮತ್ತು ಪಾಕಿಸ್ತಾನ ಎಂದು ಎರಡು ಭಾಗವಾದ ಪರಿಣಾಮ ಪಂಜಾಬ್ ಪ್ರಾಂತ್ಯದ ಪೂರ್ವ ಭಾಗವು ಭಾರತಕ್ಕೆ ಸೇರ್ಪಡೆಯಾದರೆ ಪಶ್ಚಿಮ ಭಾಗವು  ಪಾಕಿಸ್ತಾನಕ್ಕೆ ಸೇರ್ಪಡೆಯಾಯಿತು. ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರ್ ಪಾಕಿಸ್ತಾನಕ್ಕೆ ಸೇರ್ಪಡೆಯಾಗಿದ್ದರಿಂದ  ನೂರ್ ಜಹಾನ್ ಸೇರಿ ಅನೇಕ ಪ್ರಮುಖ ಮುಸ್ಲಿಂ ಕಲಾವಿದರು ಲಾಹೋರ್ ನಲ್ಲಿದ್ದರು ಮತ್ತು ಚಿತ್ರ ತಯಾರಿಕೆಗೆ ಬೇಕಾಗುವ ಸ್ಟುಡಿಯೋ, ಮೂಲಭೂತ ಸೌಕರ್ಯಗಳು ಕೂಡ ಲಾಹೋರ್ ನಲ್ಲಿದ್ದ ಪರಿಣಾಮ ಚಿತ್ರ ರಂಗವು ತೀವ್ರ ಹಿನ್ನಡೆ ಕಂಡಿತ್ತು.

ಚಿತ್ರ ತಯಾರಿಸಲು ಬೇಕಾಗುವ ಸ್ಟುಡಿಯೋ, ಮೂಲಭೂತ ಸೌಕರ್ಯಗಳನ್ನು ಹೊಂದಿದ್ದ ನಗರಗಳು ಹತ್ತಿರದಲ್ಲಿ ಎಲ್ಲಿಯು ಇರದ ಕಾರಣ ತನ್ನ ಚಿತ್ರ ರಂಗದ ಚಟುವಟಿಕೆಗಳಿಗೆ ಅನಿವಾರ್ಯವಾಗಿ ದೂರದ ಬಾಂಬೆ ನಗರವನ್ನು ಅವಲಂಬಿಸಿತ್ತು. ಆದರೆ ಆರಂಭದಲ್ಲಿ ದುಸ್ಥಿತಿ ತಲುಪಿದ್ದ ಈ ಚಿತ್ರರಂಗವನ್ನು  ಸಹಜ ಸ್ಥಿತಿಗೆ ತರಲು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡಿದರು. ನಮ್ಮ ದೇಶಕ್ಕೆ ಸ್ವಾತಂತ್ರ ದೊರಕಿದ ನಂತರ ಇದರ ಪ್ರಯೋಗಾರ್ಥವಾಗಿ ಮೀನಾ ಶೌರಿ, ಕರಣ್ ದೀವಾನ್, ಕುಲದೀಪ್ ಕೌರ್,ಮಂಜು ಮುಂತಾದ ಕಲಾವಿದರು ನಟಿಸಿದ ಚಮನ್ ಚಿತ್ರವನ್ನು ೧೯೪೮ ರಲ್ಲಿ ಬಿಡುಗಡೆ ಮಾಡಲಾಯಿತು. ಸ್ವಾತಂತ್ರ್ಯ ದೊರಕಿದ ನಂತರ ತೆರೆ ಕಂಡ  ಮೊತ್ತ ಮೊದಲ ಪಂಜಾಬಿ ಚಿತ್ರ ಎನ್ನುವ ಖ್ಯಾತಿ ಕೂಡ ಈ ಚಿತ್ರಕ್ಕೆ ಇದೆ.

ಆದರೆ ಈ ಚಿತ್ರವು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಎರಡು ವರ್ಷಗಳ ನಂತರ ೧೯೫೦ ರಲ್ಲಿ  ತೆರೆ ಕಂಡ ಶ್ಯಾಮಾ,ಮನೋರಮಾ, ಅಮರನಾಥ್, ರಣಧೀರ್ ಮತ್ತು ಮಂಜು ನಟಿಸಿದ್ದ ಹಾಸ್ಯ ಪ್ರಧಾನ ಚಿತ್ರ ಪೋಸ್ತಿ ಯಶಸ್ಸು ಕಾಣುವುದರೊಂದಿಗೆ ಈ ಚಿತ್ರರಂಗವು ತನ್ನ ಮೊದಲ ಗೆಲುವನ್ನು ದಾಖಲಿಸಿತು. ಈ ಚಿತ್ರದ ಮೂಲಕ ನಟ ಮಂಜು ಹಾಸ್ಯ ನಟರಾಗಿ ಪ್ರಸಿದ್ಧಿ ಪಡೆದಿದ್ದರು. ಈ ಚಿತ್ರದ ಯಶಸ್ಸಿನ ಪ್ರೇರಣೆಯಿಂದ ನಿರ್ಮಾಪಕರು ಸರಣಿ ರೀತಿಯಲ್ಲಿ ಹಾಸ್ಯ ಪ್ರಧಾನ ಚಿತ್ರಗಳನ್ನು ನಿರ್ಮಿಸಲು ಪ್ರಾರಂಭಿಸಿದರು.

( ಮುಂದುವರೆಯುವುದು )

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply