ವಿ. ಸೋಮಶೇಖರ್ ನಿರ್ದೇಶಿತ ಈ 1989ರ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಎನಿಸಿಕೊಂಡಿತ್ತು.
ವಾಣಿ ವಿಶ್ವನಾಥ್ ಎಂಬ ಬಹುಭಾಷಾ ತಾರೆಯ ಮೊದಲ ಚಿತ್ರ ಇದು. ಅಣ್ಣಾವ್ರು ನಟಿ ಮಹಾಲಕ್ಷ್ಮಿಯೊಂದಿಗೆ ನಟಿಸಿದ ಏಕೈಕ ಚಿತ್ರ. 14ರ ಪುನೀತ್ ರಾಜ್‌ಕುಮಾರ್ ಸ್ಲಂ ಬಾಲಕನಾಗಿ ಟಿ ಪಿ ಕೈಲಾಸಂ ಅವರ ಹಾಡು ಹೇಳಿ ನರ್ತಿಸಿದ್ದಾನೆ. (ಕದ್ರೆ ತಪ್ಪು ಕೊಂದ್ರೆ ತಪ್ಪು) ಸಂಗೀತ ನಿರ್ದೇಶಕ ಹಂಸಲೇಖ ಮಂಜುಳಾ ಗುರುರಾಜ್ ಮತ್ತು ಅಣ್ಣಾವ್ರ ‘ತಂದಾನ ತಂದಾನ’ ಹಾಡಿನಲ್ಲಿ ಕನ್ನಡ ಒಗಟುಗಳನ್ನು ಬಳಸಿದ್ದಾರೆ. ಸರದಾರಾ ಎನ್ನುವ ಹಾಡು ಅಣ್ಣಾವ್ರು ಮತ್ತು ಸ್ವರ್ಣಲತಾ ಹಾಡಿದ್ದಾರೆ. ಈಗಲೂ ಜನಪ್ರಿಯ ಬರ್ತ್ ಡೇ ಹಾಡು ‘ನಗುತಾ ನಗುತಾ ಬಾಳೂ ನೀನು’ ಅಣ್ಣಾವ್ರ ಸ್ವರದಲ್ಲಿ.
ಸುಮಾರು ಎಂಬತ್ತು ನಿಮಿಷ ರಿಟೈರ್ಡ್ ಮಿಲಿಟರಿ ಮೇಜರ್ ಪರಶುರಾಮ್ (ರಾಜ್ಕುಹಮಾರ್) ಹಾಯಾಗಿ ಸೆಕ್ಯುರಿಟಿ ಸರ್ವೀಸ್ ನಡೆಸುವ ಬಗ್ಗೆ ಇದೆ. ಡಿಂಗ್ರಿ ನಾಗರಾಜ್, ಸುಧೀರ್, ಧೀರೇಂದ್ರಗೋಪಾಲ್ ಈ ಭಾಗದಲ್ಲಿ ಇದ್ದಾರೆ. ಸದಾಶಿವ ಬ್ರಹ್ಮಾವರ, ಬ್ಯಾಂಕ್ ಜನಾರ್ದನ್, ಸುನಿಲ್ ಪುರಾಣಿಕ, ಸತೀಶ್, ಶನಿ ಮಹದೇವಪ್ಪ, ಕೆ ಎಸ್ ಶ್ರೀಶೈಲನ್ ಗುರುತು ಸಿಕ್ಕಿದರು.
ದುಷ್ಟ ಚತುಷ್ಟಯರಾಗಿ ಅಶೋಕ್ ರಾವ್, ಪೃಥ್ವಿರಾಜ್, ದೊಡ್ಡಣ್ಣ ಮತ್ತು ಸಿ ಆರ್ ಸಿಂಹ. ಸೂಟು ಬೂಟಿನ ವಿಲನ್ನುಗಳು. ಕಥೆ ಚಿತ್ರಕಥೆ ಬರೆದ ಟಿ ಎನ್ ನರಸಿಂಹನ್ ಪತ್ರಕರ್ತನ ಪಾತ್ರ ಮಾಡಿದ್ದಾರೆ.
ದೇಶರಕ್ಷಣೆ ಮಾಡಿದ ಸೈನಿಕ, ಸಮಾಜದ ಜಂತುಗಳು ಮೈ ಮೇಲೆ ಬಿದ್ದು ತೊಂದರೆ ಕೊಟ್ಟರೆ, ಅವನ ಪತ್ನಿ ಮತ್ತು ಪುತ್ರರ ಜೀವಕ್ಕೇ ಆಪತ್ತು ತಂದರೆ ಅವನು ಸೇಡು ಹೇಗೆ ತೀರಿಸಿಕೊಳ್ಳಬಹುದೇ? ಕಾನೂನನ್ನು ಕೈಗೆ ತೆಗೆದುಕೊಳ್ಳಬಹುದೇ? ಎಂಬ ಪ್ರಶ್ನೆಗಳು ಕಾಡಿದರೂ ಕೊನೆಯ ಇಪ್ಪತ್ತೈದು ನಿಮಿಷಗಳನ್ನು ದುಷ್ಟರಿಗೆ ಶಿಕ್ಷೆ ಆಗಲಿ ಎಂದು ಬಯಸುವ ಮನುಜರೆಲ್ಲರ ಮನದ ಉರಿಗೆ ಅಮೃತ ಸಿಂಚನ ಆಗುತ್ತದೆ ಎನ್ನುವುದು ಸುಳ್ಳಲ್ಲವೇನೋ…
ಅಣ್ಣಾವ್ರು ಎಲ್ಲ ತರಹದ ಎಮೋಶನ್‌ಗಳನ್ನು ನಮ್ಮ ಮುಂದೆ ಹರಡುವುದು ಪ್ರೇಕ್ಷಕರ ಫುಲ್ ಸಿಂಪತಿ ಪಡೆಯುತ್ತದೆ; ಎಂಪತಿ ಗಳಿಸುತ್ತದೆ; ಮತ್ತು ಆ್ಯಪತಿ ತುಂಬಿದ ಜನರ ನಾಶ ಸಂತಸ ತರುತ್ತದೆ.