“ಪಲ್ಲವಿ-1976” (ಕನ್ನಡ)

ನಾನು ಹೇಳಲು ಹೊರಟಿರುವುದು 70’s ಕನ್ನಡ ಸಿನೆಮಾದ ಬಗ್ಗೆ. ಆಗಿನ ಕಾಲದ ಲಭ್ಯ ಉಪಕರಣಗಳನ್ನು ಉಪಯೋಗಿಸಿಕೊಂಡು, ತಮಗೆ ಸಿಕ್ಕ‌ ಸೀಮಿತ ಕಾಲಾವಧಿಯಲ್ಲಿ (ಅಗಾಧವಾದ) ಕಥೆಯನ್ನು ಸಾಧ್ಯವಾದಷ್ಟೂ ಹೇಳಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಕಾದಂಬರಿಯಲ್ಲಿ ಬರೆಯುತ್ತಾ ಹೋಗಬಹುದು. ಆದರೆ ಸಿನೆಮಾದಲ್ಲಿ ಹಾಗೆ ಆಗೋಲ್ಲ. ಹೇಳಬೇಕಾದ್ದನ್ನು ಸಂಕ್ಷಿಪ್ತವಾಗಿ ಹೇಳಬೇಕಾಗುತ್ತದೆ.

ಚಿತ್ರದ ನಾಯಕಿ ಶಾಂತಾ.

ಹೌದು. ಇದು 1976ರ ಕಥೆಯೇ. ಇದರ ನಾಯಕ ಮತ್ತು ನಾಯಕಿ ಎರಡೂ ಶಾಂತಾ. ಹೀಗ್ಯಾಕೆ ಹೇಳಿದೆ ಅಂತ ಮುಂದೆ ನಿಮಗೆ ಗೊತ್ತಾಗುತ್ತದೆ.

ಶಾಂತಾಳಿಗೊಬ್ಬ ಪ್ರಿಯಕರ. ಆತನೋ… ವ್ಯವಸ್ಥೆಯ ವಿರುದ್ಧ ತಿರುಗಿ ನಿಂತಿರುವ ಒಬ್ಬ ರೆಬೆಲ್. ಸಮಾಜದ ಅವ್ಯವಸ್ಥೆ ಕಂಡರೆ ಅವನಿಗಾಗದು. ಅಲ್ಲಲ್ಲೇ ಪ್ರಶ್ನೆ ಮಾಡುತ್ತಾ ಜನರ ದೃಷ್ಟಿಯಲ್ಲಿ ಕೆಟ್ಟವನಾಗಿರುವವನು.

ಅವನಿಗೆ ಇತ್ತ ಕಡೆ ಮಾಡರ್ನ್ ಅಲ್ಲದ, ಅತ್ತ ಕಡೆ ಸಾಂಪ್ರದಾಯಿಕವೂ ಅಲ್ಲದ, ಸಮತೋಲಿತ ಮನಃಸ್ಥಿತಿ ಹೊಂದಿರುವ ಶಾಂತಾ ಇಷ್ಟವಾಗುತ್ತಾಳೆ. ಇಬ್ಬರೂ ಪ್ರೀತಿಸುತ್ತಾರೆ. ಕೈ ಕೈ ಹಿಡಿದು ನಡೆದಾಡುತ್ತಾರೆ. ಒಟ್ಟಿಗೆ ಜೀವನ ನಡೆಸುವ ಕನಸು ಕಾಣುತ್ತಿರುತ್ತಾರೆ.

ಅಷ್ಟರಲ್ಲಿ ಯೂನಿವರ್ಸಿಟಿ ಪರೀಕ್ಷೆ ಮುಗಿದು ಜೀವನದ ಪರೀಕ್ಷೆ ಶುರುವಾಗುತ್ತದೆ.‌ ಅಂದರೆ ಕೆಲಸಕ್ಕಾಗಿ ಸಂದರ್ಶನ ಎದುರಿಸುವ ಪರೀಕ್ಷೆ… ಇದರಲ್ಲಿ ಶಾಂತಾ ಸುಲಭವಾಗಿ ತೇರ್ಗಡೆಯಾಗುತ್ತಾಳೆ. ಕಾರಣ ಆಕೆಯ ಆತ್ಮವಿಶ್ವಾಸ ಮತ್ತು ಪ್ರತಿಭೆ.

ಅದೇ ಆಕೆಯ ಪ್ರಿಯಕರ ವ್ಯವಸ್ಥೆಯ ಮೇಲಿರುವ ತನ್ನ ಸಿಟ್ಟನ್ನು ಸಂದರ್ಶಕರ ಮೇಲೆ ತೋರಿಸಿ, ತಾನೇನೋ ಸಾಧನೆ ಮಾಡಿದವನ ಹಾಗೆ ಹೊರಬರುತ್ತಾನೆ. ಸಂದರ್ಶಕರು ಕೇಳುವ ಸಾಧಾರಣ ಪ್ರಶ್ನೆಗೆ ಕೆರಳಿ ಕೆಂಡವಾಗಿ ಅವರೆಲ್ಲರಿಗೂ ಉಗಿದು ಬರುತ್ತಾನೆ.

ಆದರೆ ಶಾಂತಾಳಿಗೆ ಆ ಕೆಲಸ ಸಿಕ್ಕುಬಿಡುತ್ತದೆ.

ಶಾಂತಾ ಹೆಣ್ಣಾದ ಕಾರಣ ಕೆಲಸ ಸಿಕ್ಕಿದೆ ಅಂತ ಆ ಪ್ರಿಯಕರ ಯೋಚಿಸುತ್ತಾನೆ ಹೊರತೂ, ಆಕೆಯಲ್ಲಿಯೂ ಕೆಲಸ ಪಡೆಯುವ ಅರ್ಹತೆ ಇದೆ ಅಂತ ಆತ ಯೋಚಿಸುವುದಿಲ್ಲ. ಪರಿಣಾಮ ಆತ ಶಾಂತಾಳಿಂದ ದೂರವಾಗುತ್ತಾನೆ.

ಶಾಂತಾಳಿಗೆ ಅವನನ್ನು ಬಿಟ್ಟು ಇರುವುದು ಕಷ್ಟವಾಗತೊಡಗುತ್ತದೆ. ಎಷ್ಟಾದರೂ ಆತನನ್ನು ಹಚ್ಚಿಕೊಂಡವಳಲ್ಲವೇ? ಆದರೂ ಎಷ್ಟು ದಿನ ಅಂತ ಕಾಯುತ್ತಾಳೆ ಅವಳು… ಒಂದು ದಿನ ತನ್ನನ್ನು ಇಷ್ಟಪಡುತ್ತಿದ್ದ ಬಾಸ್ ಅನ್ನು ಮದುವೆಯಾಗಿಬಿಡುತ್ತಾಳೆ.

pallavi kannada movie
pallavi kannada movie

ಈಗ ಶಾಂತಾಳಿಗೆ ಹೊಸ ಜೀವನ ಸಿಕ್ಕಿದೆ.

ತಾನು ಚಿಕ್ಕಂದಿನಿಂದ ಇಷ್ಟಪಡುತ್ತಿದ್ದ ಹಣ, ಒಡವೆ, ವಸ್ತ್ರ, ಬಂಗಲೆಯಂತಹಾ ಮನೆ, ಪ್ರೀತಿಸುವ ಗಂಡ… ಎಲ್ಲ ಇದ್ದರೂ ಏನೋ ಕೊರತೆ ಕಾಡುತ್ತಿರುತ್ತದೆ ಆಕೆಗೆ. ಆದರೂ ಈ ಜೀವನಕ್ಕೆ ಹೊಂದಿಕೊಂಡು ಇರುವ ನಿರ್ಧಾರ ಮಾಡುತ್ತಾಳೆ. ನಿಜಕ್ಕೂ ಶಾಂತಾ ನಮಗೆ ಬಹಳ‌ ಇಷ್ಟವಾಗುತ್ತಾಳೆ. ಏಕೆಂದರೆ… ಬಂದ ಪರಿಸ್ಥಿತಿಗಳನ್ನು ಹಾಗೆಯೇ ಎದುರಿಸಿ ಅದರೊಂದಿಗೆ ಸಾಗುವ ಅವಳ ಪರಿ ಅಚ್ಚರಿ ಹುಟ್ಟಿಸುತ್ತದೆ.

ಅವಳ ಪಾಡಿಗೆ ಅವಳು ತನ್ನ ಜೀವನದಲ್ಲಿ ನಿರತಳಾಗಿದ್ದಾಗ ಅವಳ ಹಳೆಯ ಪ್ರೇಮಿ ಮತ್ತೆ ಅವಳೆದುರು ಬಂದು ನಿಲ್ಲುತ್ತಾನೆ!!!!!!

ಇಷ್ಟರಲ್ಲಾಗಲೇ ಆತ ಮಾಡಬಾರದ್ದು ಮಾಡಿ, ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿರುತ್ತಾನೆ. ತಾನೇನು ಮಾಡಿದರೂ ಅದು ಸರಿ ಅಂತ ಜನ ಒಪ್ಪಬೇಕು ಎನ್ನುವ ಹಠದಲ್ಲಿ, ಎಲ್ಲರನ್ನೂ ಧಿಕ್ಕರಿಸಿ, ಯಾವ ಸಂದರ್ಶನದಲ್ಲಿಯೂ ಪಾಸ್ ಆಗದೇ, ಸರಿಯಾದ ಉದ್ಯೋಗವಿಲ್ಲದೇ, ತನ್ನ ನಿರುದ್ಯೋಗತನಕ್ಕೆ ತನ್ನದೇ ಹಠಮಾರಿ ವ್ಯಕ್ತಿತ್ವ ಕಾರಣ ಎಂಬ ಅಂಶವನ್ನು ಅರಿಯದೇ, ಅದಕ್ಕೂ ಸಮಾಜವನ್ನೇ ಹೊಣೆ ಮಾಡಿ, ತಾನೊಬ್ಬ ದುರಂತ ನಾಯಕ ಎಂಬ ಸ್ವಾನುಕಂಪದಿಂದ ಬದುಕುತ್ತಿರುತ್ತಾನೆ.

ಆತನಿ್ಗೆಗೆ ಶಾಂತಾಳ ಐಷಾರಾಮಿ ಜೀವನ ಕಣ್ಣುಕುಕ್ಕುತ್ತದೆ.

ಅದಕ್ಕೆಂದೇ ಬೇಕುಬೇಕೂಂತ ಆಕೆಗೆ ಎಲ್ಲಾ ಇದ್ದರೂ ಆಕೆ ಸುಖವಾಗಿಲ್ಲ ಎಂಬ ಸುಳ್ಳು ಭ್ರಮೆಯನ್ನು ಆಕೆಯೊಳಗೆ ಬಿತ್ತಲು ಪ್ರಯತ್ನಿಸುತ್ತಾನೆ. ತನಗಿರದ ಐಷಾರಾಮ ಆಕೆಗೂ ಇರಬಾರದು ಎನ್ನುವ ಸಿಟ್ಟಿಗೆ, ಶಾಂತಾಳನ್ನು ತನ್ನ ಜೊತೆ ಬರುವಂತೆ ಕರೆಯುತ್ತಾನೆ. ಅವನಿಗೇ ನಿಲ್ಲಲು ನೆಲೆಯಿಲ್ಲ, ಒಂದು ಹೊತ್ತಿನ ಊಟಕ್ಕೆ ಗತಿಯಿಲ್ಲ… ಆ ಹೆಣ್ಣುಮಗಳನ್ನೂ ಕಟ್ಟಿಕೊಂಡು ಏನು ಮಾಡಬೇಕೆಂದಿದ್ದನೋ? ಹಿಂದೊಮ್ಮೆ ಸಂದರ್ಶಕರು ಕೇಳಿದ ಸಾಧಾರಣ ಪ್ರಶ್ನೆಗೆ ಉತ್ತರಿಸಿದ್ದರೆ ಅವನು ಇಂದು ಇಂತಹ ಪರಿಸ್ಥಿತಿಯಲ್ಲಿ ಇರುತ್ತಿರಲಿಲ್ಲ.

ಪರಿಸ್ಥಿತಿಯನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವಲ್ಲಿ ಶಾಂತಾ ಮೊದಲಿಗಳಿದ್ದಾಳೆ. ಮೊದಲಿಗೆ ಓದುವಾಗ ಏಕತಾನತೆಯ ಬದುಕಿಗೆ ಬಣ್ಣ ತುಂಬಲು ಆಕೆಯ ಪ್ರಿಯಕರನಿದ್ದ, ನಂತರ ಬಾಸ್ ಅನ್ನೇ ಮದುವೆಯಾಗಿ ಸಮಾಜದಲ್ಲಿ ಸ್ಥಾನ-ಮಾನ ಗಳಿಸಿ ನೆಮ್ಮದಿಯಾಗಿ ಬದುಕುತ್ತಿದ್ದಾಳೆ. ಇದು ಸ್ವಾರ್ಥವೇ ಇರಬಹುದು. ಆದರೆ ಅಟ್ಲೀಸ್ಟ್ ಇಷ್ಟಾದರೂ ಸ್ವಾರ್ಥ ಇರಲೇಬೇಕಲ್ಲವೇ?

ಎಲ್ಲವನ್ನೂ ಧಿಕ್ಕರಿಸುತ್ತೇನೆ ಎಂಬ ಹುಚ್ಚು ಹಠದಲ್ಲಿ ಎಲ್ಲರನ್ನೂ, ಎಲ್ಲವನ್ನೂ ಕಳೆದುಕೊಂಡು ನಿಲ್ಲಲು ಆಸರೆಯಿಲ್ಲದೇ ಬದುಕುವುದಕ್ಕಿಂತಲೂ, ಸಿಕ್ಕ ಅವಕಾಶ ಬಳಸಿಕೊಂಡು, ಇರುವುದರಲ್ಲಿಯೇ ನೆಮ್ಮದಿಯಾಗಿ ಬದುಕುವುದು ಉತ್ತಮ ಅಲ್ಲವೇ?

ಈಗ ನಾಯಕಿಯ ಕಣ್ಮುಂದೆ ಎರಡು ಆಯ್ಕೆಗಳಿವೆ….

ಇದೇ ಐಷಾರಾಮಿ ಬದುಕಿನಲ್ಲಿ ಮುನ್ನಡೆಯುವುದು ಅಥವಾ ಹಳೆಯ ಪ್ರೇಮಿಯ ಜೊತೆ ಓಡಿ ಹೋಗುವುದು… ಅವಳು ಯಾವುದನ್ನು ಆರಿಸಿಕೊಳ್ಳುತ್ತಾಳೆ..?

ಕಡೆಯ ನಿಮಿಷದವರೆಗೂ ಯಾವ ಗುಟ್ಟೂ ಬಿಟ್ಟುಕೊಡದಂತೆ ಸಿನೆಮಾ ಮುಂದುವರೆಯುತ್ತದೆ. ನೀವೂ ಆ ಕಡೆಯ ಕ್ಷಣದವರೆಗೂ ನೋಡಿದರೆ ಮಾತ್ರವೇ ಅವಳ ನಿರ್ಧಾರ ತಿಳಿಯುತ್ತದೆ…

ಏಕಕಾಲದಲ್ಲಿ ಅನೇಕ ಗೊಂದಲಗಳನ್ನು ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿದ ಸಿನೆಮಾ ಇದು… ನೀವು ನೋಡಿದಾಗ ಮತ್ತಷ್ಟು ಪ್ರಶ್ನೆ ಹುಟ್ಟಬಹುದು.. ಸಿನೆಮಾ ‘ಯೂ ಟ್ಯೂಬಿ’ನಲ್ಲಿ ಲಭ್ಯವಿದೆ.

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

One thought on ““ಪಲ್ಲವಿ-1976” (ಕನ್ನಡ)

Leave a Reply