20ಅಕ್ಟೊಬರ್ 1998, ಇಡೀ ಕನ್ನಡ ಚಿತ್ರರಂಗವೇ ನಿಬ್ಬೆರಗಾಗಿ ನೋಡುವಂತಹ “ಕೌರವ” ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ಕಡಲೂರ ಕವಿತಐಗಳ್ ಎಂಬ ತಮಿಳು ಸಿನಿಮಾದ ಕನ್ನಡ ಅವತರಣಿಕೆಯಲ್ಲಿ ಕೌರವ ನಾಗಿ ಖಡಕ್ ಪೊಲೀಸ್ ಅಧಿಕಾರಿಯಾಗಿದ್ದ ಬಿ.ಸಿ. ಪಾಟೀಲ್ ಅವರು ನಟಿಸಿದ್ದರು. ರಾಜ್ಯದ ಲಕ್ಷಾಂತರ ಸಿನಿಪ್ರಿಯರು ಅವರ ನಟನೆಗೆ ಫಿದಾ ಆಗಿದ್ದಂತೂ ನಿಜ. ಖಡಕ್ ಪೊಲೀಸ್ ಅಧಿಕಾರಿಯೊಬ್ಬರು ಕೌರವ ನೆಂಬ ಗಟ್ಟಿ ಪಾತ್ರದ ಮೂಲಕ ಗುರ್ತಿಸಿಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ಅದೇ ಮೊದಲು. ಅದಾದ 24 ವರ್ಷಗಳ ನಂತರ ಮತ್ತೊಮ್ಮೆ ಅಂತಹ ಪ್ರಯೋಗ ಗೌರೀಬಿದನೂರಿನಲ್ಲಿ ನಡೆಯಿತು. ಅದೂ ರಂಗದ ಮೇಲೆ. ಹೌದು! ಕುವೆಂಪುರವರ ಸಾರ್ವಕಾಲಿಕ ಶ್ರೇಷ್ಠ ನಾಟಕಗಳಲ್ಲೊಂದು ಶ್ಮಶಾನ ಕುರುಕ್ಷೇತ್ರಂ. ಈಗಾಗಲೇ ರಂಗದ ಮೇಲೆ ಅದೆಷ್ಟೋ ಸಾವಿರ ಪ್ರದರ್ಶನಗಳನ್ನು ಕಂಡಿದ್ದ ಈ ನಾಟಕ ನಿನ್ನೆ ಅಂದರೆ ಡಿಸೇಂಬರ್ ೨೯ ರಂದು “ಕೌರವ” ಎಂಬ ಶೀರ್ಷಿಕೆಯ ಮೂಲಕ ರಂಗದ ಮೇಲೆ ಮೂಡಿ ಬಂತು. ಇದರಲ್ಲೇನು ವಿಶೇಷ ಎಂದಿರಾ? ಈ ನಾಟಕದ ಮುಖ್ಯ ಪಾತ್ರಧಾರಿಗಳೆಲ್ಲರೂ ಖಡಕ್ ಪೊಲೀಸ್ ಅಧಿಕಾರಿಗಳೇ ಆಗಿದ್ದರು. ನೀನಾಸಂ ಭಾನುಪ್ರಕಾಶ್ ಅವರ ನಿರ್ದೇಶನದಲ್ಲಿ ಕೇವಲ ಏಳು ದಿನಗಳಲ್ಲಿ ಅಭ್ಯಾಸ ಮುಗಿಸಿ, ಯಾವುದೇ ರಿಹರ್ಸಲ್ ಇಲ್ಲದೆ ನೇರವಾಗಿ ರಂಗದ ಮೇಲೆ ಕೌರವನನ್ನು ಪ್ರದರ್ಶಿಸಿದರು. ನಾಟಕವನ್ನು ನೋಡಿದ ಯಾರಿಗಾದರೂ ಇದು ವೃತ್ತಿಪರ ಕಲಾವಿದರೇ ಅಭಿನಯಿಸಿದ್ದು ಎಂದು ನಂಬುವಷ್ಟರಮಟ್ಟಿಗೆ ಅದು ಪ್ರದರ್ಶಿತವಾಯ್ತು. ಅದರಲ್ಲೂ ಕೌರವನಾಗಿ ಅಭಿನಯಿಸಿದ್ದ ಖಡಕ್ ಪೊಲೀಸ್ ಅಧಿಕಾರಿ ಸತ್ಯನಾರಾಯಣ ಅವರಂತೂ ಪ್ರತಿಯೊಬ್ಬ ಪ್ರೇಕ್ಷಕರಲ್ಲೂ ಅಕ್ಷರಶಃ ಅವಾಹನೆಯಾಗಿಬಿಟ್ಟಿದ್ದರು. ಯಾವುದೇ ವೃತ್ತಿಪರ ಕಲಾವಿದರಿಗೂ ಕಡಿಮೆಯಿಲ್ಲದಂತೆ ಸಹಜಾಭಿನಯ, ಸಹಜ ಆಂಗಿಕ ಹಾವ-ಭಾವ, ಎಲ್ಲದಕ್ಕೂ ಮಿಗಿಲಾಗಿ ಸಂಭಾಷಣೆಯಲ್ಲಿನ ಭಾಷಾಶುದ್ಧತೆ ಗಳ ಮೂಲಕ ಪ್ರೇಕ್ಷಕರೆಲ್ಲರನ್ನೂ ನೇರ ದ್ವಾಪರ ಯುಗಕ್ಕೇ ಕರೆದುಕೊಂಡು ಹೋಗಿಬಿಟ್ಟಿದರು.
ಕಾರ್ಯಕ್ರಮ ಸೂತ್ರಧಾರಿ ನಿರೂಪಣೆಯಿಂದ ಹಿಡಿದು ಅಂತ್ಯದವರೆಗೂ ಪೊಲೀಸರು ತಮ್ಮ ಕನ್ನಡಾಭಿಮಾನವನ್ನು ಪ್ರದರ್ಶಿಸಿದರು. ಅಪರಾಧಿಗಳ ಬೆನ್ನಟ್ಟಿ ಹೋಗುವ ಪೊಲೀಸ್ ಅಧಿಕಾರಿಗಳ ಒಳಗಿನ ಕಲಾವಿದನನ್ನು ರಂಗದ ಮೇಲೆ ತೆರೆದಿಟ್ಟರು. ವಿಮರ್ಶೆ ಬರೆಯಲಿಕ್ಕೋಸ್ಕರ ಬೇಕೆಂದೇ ಹುಡುಕಿದರೂ ಒಂದೇ ಒಂದು ತಪ್ಪನ್ನೂ ರಂಗದ ಮೇಲೆ ಬರಗೊಡದೆ, ಚಿಕ್ಕದಾಗಿ, ಚೊಕ್ಕದಾಗಿ ಸುಮಾರು ಮುಕ್ಕಾಲು ಗಂಟೆಯ ಕಾಲ ಕುವೆಂಪುರವರ ಸಾಹಿತ್ಯದ ಸ್ವಾದವನ್ನು ರಂಗದ ಮೇಲೆ ಉಣಬಡಿಸಿದರು.
ಕುವೆಂಪುರವರ ಜನ್ಮದಿನದ ಅಂಗವಾಗಿ ನಡೆದ ಆ ಕಾರ್ಯಕ್ರಮದಲ್ಲಿ ಗೌರಿಬಿದನೂರಿನ ಶಾಸಕರು, ಗೌರಿಬಿದನೂರಿನ ನ್ಯಾಯಾಧೀಶರು, ಪೊಲೀಸ್ ಸುಪರಿಂಡೆಂಟ್, ನಟ ಧರ್ಮ ಸೇರಿದಂತೆ ಅನೇಕರು ಪಾಲ್ಗೊಂಡು ಈ ಪ್ರಯತ್ನಕ್ಕೆ ಶುಭ ಕೋರಿದರು. ಅದರಲ್ಲೂ ವಿಶೇಷವಾಗಿ ಪ್ರೇಕ್ಷಕರನ್ನು ನೇರ ದ್ವಾಪರಯುಗಕ್ಕೆ ಕೊಂಡೊಯ್ದ ಪೊಲೀಸ್ ಅಧಿಕಾರಿ ಸತ್ಯನಾರಾಯಣ ಅವರನ್ನು ಹಾಗು ಇಡೀ ತಂಡವನ್ನು ಸನ್ಮಾನಿಸಿ ಶುಭಕೋರಿದರು. ಇದು ನಾಂದಿಯಾಗಲಿ. ಮುಂದೆ ಮತ್ತಷ್ಟು ಇಂತಹ ಸಾಹಿತ್ಯಾತ್ಮಕ ಸೇವೆಗಳು ಈ ತಂಡದಿಂದ ನಿರಂತರವಾಗಿ ನಡೆಯಲು ಎಂಬುದು ಚಿತ್ರೋದ್ಯಮ.ಕಾಂ ಹಾಗು ಟೀಮ್ ಯೋಧ ನಮನದ ಹಾರೈಕೆ.