1964ರ ಚಿತ್ರ.
ಶಂಕರ್ (ರಾಜ್‍ಕುಮಾರ್) ಹಳ್ಳಿಯಲ್ಲಿರುವ ಅಶ್ವತ್ಥ್ ಮತ್ತು ಪಂಢರೀಬಾಯಿ ಪುತ್ರ. ಅವನ ತಂಗಿ ಚಿಕ್ಕಂದಿನಲ್ಲಿ ತೀರಿಕೊಂಡಿದ್ದರಿಂದ ಅವನ ಮೇಲೆ ಅವರ ಪ್ರೀತಿಯನ್ನು ಧಾರೆಯೆರೆದಿರುತ್ತಾರೆ. ಅವನು ಹಳ್ಳಿಗೆ ಬಂದು ಡಾಕ್ಟರಾಗಿ ಜನಸೇವೆ ಮಾಡುವೆನೆಂದು ಪ್ರತಿಜ್ಞೆ ಮಾಡಿರುತ್ತಾನೆ.
ಮೈಸೂರಿಗೆ ಬಂದು ವೈದ್ಯಕೀಯ ಕೋರ್ಸ್ ಸೇರಿಕೊಳ್ಳುತ್ತಾನೆ. ಅಲ್ಲಿ ಅವನಿಗೆ ರಾಗಿಣಿ(ಜಯಂತಿ)ಯ ಪರಿಚಯವಾಗುತ್ತದೆ. ಪರಿಚಯ ಸ್ನೇಹವಾಗಿ, ಪ್ರೇಮವಾಗಿ ಪರಿಣಯದಲ್ಲಿ ಮುಗಿಯುತ್ತದೆ.
ರಾಗಿಣಿಯ ತಾಯಿ ರಮಾದೇವಿ ಈ ಚಿತ್ರದ ಖಳನಾಯಕಿ. ಬಡವರಾದ ರಾಜ್ ಅಪ್ಪ ಅಮ್ಮಂದಿರಿಗೆ ಅವನು ಬರೆದ ಪತ್ರವ್ಯಾವುದೂ ಅವರಿಗೆ ತಲುಪದಂತೆ ನೋಡಿಕೊಳ್ಳುತ್ತಾಳೆ. ಅವರು ಬರೆದ ಪತ್ರಗಳನ್ನು ಹರಿದು ಬಿಸಾಡುತ್ತಿರುತ್ತಾಳೆ. ಮದುವೆಯ ಸಮಯದಲ್ಲಿ ‘ನೀನು ಹಳ್ಳಿಗೆ ಬರಲೇಬೇಡ’ ಎಂಬ ಟೆಲಿಗ್ರಾಂ ಅನ್ನು ರಾಜ್‍ಗೆ ಕೊಡಿಸುತ್ತಾಳೆ.
ರಾಜ್‍ನ ತಾಯಿ ತಂದೆಯರು ಬಂದಾಗ ಅವರನ್ನು ಓಡಿಸಿಬಿಡುತ್ತಾಳೆ ರಮಾದೇವಿ.
ಶಂಕರ್ ರಾಗಿಣಿಯರಿಗೆ ಒಂದು ಮಗುವಾಗುತ್ತದೆ. ಅದಕ್ಕೆ ಹಾಲು ಕುಡಿಸಿದರೆ ಅವಳ ಶರೀರಾಕೃತಿ ಹಾಳಾಗುವುದೆಂದು ರಾಗಿಣಿ ಆಯಾಳಿಗಾಗಿ ಹುಡುಕುತ್ತಾಳೆ.
ಆಗ ಆ ಮನೆಗೆ ಆಯಾಳಾಗಿ ಬರುತ್ತಾಳೆ ಬರಿಯ ಹಣೆಯ ಪಂಢರೀಬಾಯಿ. ಹೇಗೆ? ಯಾಕೆ? ಸಿನಿಮಾ ನೋಡಿಯೇ ತಿಳಿಯಬೇಕು.
ಸೆಂಟಿಮೆಂಟುಗಳ ಭರಪೂರವಿದೆ. ಜಯಂತಿ ಒಳ್ಳೆಯವಳು. ಕೆಟ್ಟತನವೆಲ್ಲಾ ರಮಾದೇವಿಯ ಪಾಲು.
ನರಸಿಂಹರಾಜು, ಬಿ. ಜಯಾ ಜೋಡಿ. ರತ್ನಾಕರ್-ಆರ್ ಟಿ ರಮಾ ಜೋಡಿ.
ಭಾವತೀವ್ರತೆಗಳನ್ನು ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ ರಾಜ್.
ಹತ್ತು ಹಾಡುಗಳಿರುವ ಈ ಚಿತ್ರದಲ್ಲಿ ‘ತಂಗಾಳಿ ಅಲೆಯೂ ಕೋಗಿಲೆ ಉಲಿಯೂ’ ಎಂದು ಜಯಂತಿ ಮತ್ತು ಗೆಳತಿಯರು ಸೈಕಲ್ ಮೇಲೆ ಹೋಗುತ್ತಾ ಹಾಡುವ ಹಾಡು ಈಗಲೂ ಜನಪ್ರಿಯ. ಪಂಢರೀಬಾಯಿ ದೇವಿಯ ವಿಗ್ರಹದ ಮುಂದೆ ಹಾಡುವ ‘ಕಾಯೇ ದೀನಶರಣ್ಯೆ: ಗೊತ್ತಿರುವ ಹಾಡು.’ ‘ನಾ ನಿನ್ನ ಮೋಹಿಸೆ ಬಂದಿಹೆನು’ ಎನ್ನುವ ಹಾಡು ನರಸಿಂಹರಾಜು, ಜಯಾಗೆ ಇದೆ. ರೇಡಿಯೋದ ಆ ಕಡೆಯಿಂದ ಅವಿತು ಹಾಡುತ್ತಾರೆ ನರಸಿಂಹರಾಜು. ಆದರೆ ಇದರ ಅತ್ಯಂತ ಜನಪ್ರಿಯ ಹಾಡು ಜಯಂತಿ ಮತ್ತು ರಾಜ್‍ಗೆ. ಮನೆಯಲ್ಲಿ ಪಾರ್ಟಿಯಲ್ಲಿ ‘ಕನಸಿನಾ ದೇವಿಯಾಗಿ ಮನಸಿನಾ ನಲ್ಲೆಯಾಗಿ’ ಹಾಡು.
ಅಣ್ಣಾವ್ರು ಸಿಗರೇಟು ಸೇದುವ ದೃಶ್ಯವೊಂದಿದೆ ಎನ್ನುವುದು ವಿಶೇಷ.