“”ಫ್ರೆಂಚ್ ಬಿರಿಯಾನಿ” ಕನ್ನಡ

ಇದು ಭಾರತ ❤ ಸರ್ವ ಜನಾಂಗದ ಶಾಂತಿಯ ತೋಟ… ಸರ್ವ ಸಹಿಷ್ಣು ದೇಶ ನಮ್ಮದು… “ಅತಿಥಿ ದೇವೋಭವ” ಇಲ್ಲಿನ ಘೋಷ ವಾಕ್ಯ. ನಾವೂ ಮನಸ್ಸಲ್ಲಿ ಹಾಗೇ ಅಂದ್ಕೊಂಡಿರ್ತೀವಿ. ಇಲ್ಲಿಗೆ ಬರೋ ಫಾರಿನ್ನರುಗಳೆಲ್ಲ ಚಂದದ ಆತಿಥ್ಯ ಪಡೆದು, ಕೇವಲ ಸಿಹಿ ನೆನಪುಗಳನ್ನು ಮಾತ್ರ ಹೊತ್ತು ತಮ್ಮ ದೇಶಕ್ಕೆ ಹೋಗಿರ್ತಾರೆ ಅಂತ. ಆದರೆ ಕೆಲವು ಫಾರಿನ್ನರುಗಳ ತಿಥಿಯೂ ಆಗುತ್ತದೆ ಅಂತ ನಮಗೆ ಗೊತ್ತಿತ್ತಾ? ಗೊತ್ತಿರಲಿಲ್ಲ ಅಲ್ವಾ? ಅದೂ ಭಾಷೆ ಬರದ ನಾಡಲ್ಲಿ ಮೊದಲ ಬಾರಿ ಲ್ಯಾಂಡ್ ಆದ ಫಾರಿನಪ್ಪನ ಕಥೆ ಬೇಡ.


ಡಾನ್ ಉವಾಚ: “ಸೋಲೋಮನ್ ಸಾಮಾನ್ ಕೊಡ್ತಾನೆ, ಸುಲೇಮಾನ್ ಕೈಲಿ ತರಿಸು”

ಈ ಹೆಸರುಗಳನ್ನು ಹೇಗೆ ನೆನಪಿಟ್ಕೊಳ್ಳೋದು? ಇದೊಂಥರಾ ಗುಂಡ “ಕಡುಬು ಕಡುಬು” ಅಂದ್ಕೊಂಡ ಹಾಗೆ. ಡಾನ್ ಮಗ ಮಣಿಗೆ ಹೆಸರುಗಳು ಕನ್ಫ್ಯೂಸ್ ಆಗಿ ಸುಲೇಮಾನ್, ಸೋಲೋಮನ್ ಎಲ್ಲವೂ ಮರೆತೋಗಿ ಸಾಮಾನೊಂದೇ ನೆನಪಿರುತ್ತೆ..

ಹೋಗಲಿ, ಆ “ಸಾಮಾನ್” ಆದರೂ ಏನು? ನಮಗೂ ಗೊತ್ತಿಲ್ಲ, ಪಾತ್ರಗಳಿಗೂ ಗೊತ್ತಿಲ್ಲ. ಆದರೆ ಫಾರಿನ್ನಿಂದ ಬರೋ ಮಾಲು “ಡ್ರಗ್” ಆಗಿರಲೇಬೇಕು ಅಂತಲೇ ಎಲ್ಲರ ತೀರ್ಮಾನ. ಹಾಗಾಗಿ ಆ ಡ್ರಗ್ ಬ್ಯಾಗಿಗಾಗಿ ಪೊಲೀಸು, ಡಾನ್ ಆದಿಯಾಗಿ ಎಲ್ಲರೂ ಸೈಮನ್ ಬೆನ್ನು ಬೀಳ್ತಾರೆ. ಇರಿ ಇರಿ… ಈ ಸೈಮನ್ ಯಾರು?

ಅವನೇ… ತಿಥಿಯಾಗುವ ನಮ್ಮ ದೇಶದ ಅತಿಥಿ

ಅವನು ಭಾರತಕ್ಕೆ ಕಾಲಿಟ್ಟಾಗಿಲಿಂದಲೂ ಗೊಂದಲವೋ ಗೊಂದಲ. ಮೊದಲಿಗೆ ಕ್ಯಾಬ್ ಮುಷ್ಕರ, ಸಹಾಯ ಮಾಡುವುದಾಗಿ ಹೇಳಿದ ಟಿವಿ ಆಂಕರ್ ಕೈ ಕೊಡ್ತಾಳೆ, ಆಟೋ ಡ್ರೈವರ್ ಆಟೋಗೆ ಹತ್ತಿಸಿಕೊಂಡರೂ ಅವನಿಗೆ ಸೈಮನ್ ಮಾತಿನ ಮೇಲೆ ಗಮನವಿಲ್ಲ… ಅವನ ಬ್ಯಾಗ್, ಪಾಸ್ಪೋರ್ಟ್, ಮೊಬೈಲ್ ಎಲ್ಲವೂ ಕಾಣೆಯಾಗುತ್ತೆ. ಆಗ ಪಾಪ ಸೈಮನ್ ಭಾಷೆ ಬರದೇ ಪರದಾಡೋದು ನೋಡಲಾಗೋಲ್ಲ.

ನನಗೆ ಸಿನೆಮಾ ನೋಡುತ್ತಿರುವ ಪ್ರತೀಕ್ಷಣವೂ ಇದು ಹೀಗಾಗಬಾರದಿತ್ತು ಅಂತಲೇ ಅನ್ನಿಸ್ತಾ ಇತ್ತು… ಅದಕ್ಕೆ ಕಾರಣ ನಮ್ಮ ಮನಸ್ಸು ಮತ್ತು ನಮ್ಮ ಶಾಸ್ತ್ರ-ಆಚಾರ-ವಿಚಾರ. ಒಂದು ಮದುವೆಯೋ ನಾಮಕರಣವೋ ತೆಗೆದುಕೊಳ್ಳಿ. ಮೊದಲು ಮನೆ ಸ್ವಚ್ಛ ಮಾಡ್ತೀವಿ, ಹೊರಗಿನಿಂದ ಹೂ ತಂದು ಅಲಂಕರಿಸ್ತೀವಿ, ನಾವೂ ಒಡವೆ-ವಸ್ತ್ರ ಹಾಕಿಕೊಂಡು ಅಲಂಕರಿಸಿಕೊಳ್ತೀವಿ.. ಒಟ್ಟಿನಲ್ಲಿ ನಮ್ಮನ್ನು, ನಮ್ಮ ಸುತ್ತಲಿನ ಪರಿಸರವನ್ನು ಚಂದವಾಗಿ ಪ್ರೆಸೆಂಟ್ ಮಾಡಿಕೊಳ್ತೀವಿ. ಹಾಗಾಗಿ ಸಿನೆಮಾ ಸಹ ಒಂದು ಸಿದ್ಧಸೂತ್ರದಂತೆಯೇ ಸಾಗಲಿ ಅಂತ ಬಯಸ್ತೀವಿ. ಕ್ಲೀನಾಗಿ….. ಯಾರಿಗೂ ತೊಂದರೆಯಾಗದಂತೆ. ಹಾಂ!!! ಅಷ್ಟೇ ಅಲ್ಲ… ಆ ಸೈಮನ್ ಜಾಗದಲ್ಲಿ ನಮ್ಮನ್ನು ಕಲ್ಪಿಸಿಕೊಂಡು (ಅಂದರೆ ನಾವು ಬೇರೆ ದೇಶಕ್ಕೆ ಹೋದಾಗ ಹೀಗಾದರೆ ಅಂತ) ಅವನಿಗೆ ಒಳ್ಳೇದಾಗಲಿ ದೇವರೇ ಅಂತ ಕೇಳಿಕೊಳ್ಳುತ್ತಲೇ ಇರುತ್ತೇವೆ. ಯಾವ ದೇವರನ್ನ ಅಂದ್ರಾ? ನಮ್ದೂ ಅಲ್ಲಾ ಅಸ್ಗರಪ್ಪಂದೂ ಅಲ್ಲ, ಸೈಮನ್ ದೇವರನ್ನ….ಸರಿಯಾ?

ಜಾತಿ-ಜಾತಿ ಅಂತ ನಾವು ಭಾರತೀಯರು ಮಾತ್ರ ಹೊಡೆದಾಡ್ತೀವಿ, ಅದರಿಂದಲೇ ನಮ್ ದೇಶ ಮುಂದೆ ಬಂದಿಲ್ಲ ಅನ್ನುವವರಿಗೆ ನಿರ್ದೇಶಕರು ಸಕತ್ ಪಂಚ್ ಕೊಟ್ಟಿದ್ದಾರೆ. ನಮಗೆ ಜಾತಿ ವಿವಾದಾತ್ಮಕವಾದರೆ ಬೇರೆ ದೇಶದವರಿಗೆ ಬಣ್ಣವೇ ವಿವಾದಾತ್ಮಕ. ಸೈಮನ್ “ರೇಸಿಸ್ಟ್” ಅನ್ನೋಕ್ಕೂ, ಪೋಲಿಸಪ್ಪ ಅರ್ಥ ಮಾಡಿಕೊಳ್ಳೋಕ್ಕೂ ಸರಿಯಾಗಿದೆ…

ಪೊಲೀಸರಿಗೆ ಸೈಮನ್ ಭಾಷೆ ಅರ್ಥ ಆಗೋಲ್ಲ. ಕೆಳಹಂತದ ಪೊಲೀಸರಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ? ಇದು ವಾಸ್ತವ. ಎಸ್ಸೆಲ್ಸಿ ಪಾಸಾದ್ರೆ ಕಾನಿಸ್ಟೇಬಲ್ ಆಗಬಹುದು. ಜನರ ಜೊತೆ ಮಾತನಾಡಲು ಕನ್ನಡ ಗೊತ್ತಿದ್ರೆ ಸಾಕು‌. ಅಂಥವರು ಔಷಧವನ್ನು “ಡ್ರಗ್” ಅಂತಲೂ‌ ಕರೀತಾರೆ ಅಂತ ಹೇಗೆ ತಾನೇ ತಿಳಿಯಲು ಸಾಧ್ಯ? ಆ ಸೈಮನ್ ಎಸ್ಪಿ ಅಥವಾ ಕಮೀಷನರ್ ಬಳಿ ಹೋಗಿದ್ದರೆ ಸಮಸ್ಯೆ ಪರಿಹಾರವಾಗುತ್ತಿತ್ತು‌. ಆದರೆ ಪರಿಸ್ಥಿತಿ ಅಲ್ಲಿಯವರೆಗೂ ಹೋಗಲು ಬಿಡೋಲ್ಲ. ಅಷ್ಟೇ ಅಲ್ಲ… ಅರೆ ಬೆತ್ತಲೆಯಾಗಿದ್ದ ಸೈಮನ್ ಅನ್ನು ಫ್ರೆಂಚ್ ಎಂಬೆಸ್ಸಿಗೇ ಬಿಟ್ಕೊಳ್ಳೋಲ್ಲ. ಎಲ್ಲಾ ಕಡೆಯೂ ದುಡ್ಡು ಅಥವಾ ಸ್ಟೇಟಸ್ಸಿಗೇ ಮರ್ಯಾದೆ. ನಮ್ಮ ದೇಶದವನು ಎನ್ನುವ ಅಭಿಮಾನ ಯಾರಿಗೂ ಇಲ್ಲ. ಆಗ ಫ್ರೆಂಚ್ ರಾಷ್ಟ್ರಗೀತೆ ಹಿನ್ನೆಲೆಯಲ್ಲಿ‌ ಮೂಡಿ ಬಂದಿರುವುದು ಒಂದು ವಿಡಂಬನೆ.

ಸಿನೆಮಾ‌ ಎಂದರೆ ಹಾಗೇ… ನೋಡುನೋಡುತ್ತಾ ಜ್ಞಾನೋದಯ ಮಾಡಿಸಬೇಕು.. ಆಗಾಗ ನಮ್ಮೊಳಗಿನ ಬಲ್ಬ್ ಬೆಳಗಬೇಕು.. ಅರೆ ಹೌದಲ್ವಾ ಅಂತನಿಸಿ ಅಚ್ಚರಿ ಪಡಬೇಕು.. ಡೈಲಾಗುಗಳನ್ನು ಕೇಳಿ‌ ಮಕ್ಕಳಂತೆ ನಗಬೇಕು.. ಅದನ್ನು ನೋಡಿಯೇ-ಕೇಳಿಯೇ ಅನುಭವಿಸಬೇಕು..

ಅಸ್ಗರನ ಡೈಲಾಗುಗಳು ಕೇಳಲು ಚಂದ. ಕನ್ನಡ-ಮುಸ್ಲಿಂ ಭಾಷೆ 😍😍

ಅದಕ್ಕಿಂತ ಇಷ್ಟ ಆಗೋದು ಸೈಮನ್ !!!

ಯಾಕಂತೀರಾ?

ಅವನಿಗೂ ಇಂಗ್ಲೀಷ್ ಬರಲ್ಲ.. ನಂಗೂ ಬರಲ್ಲ 😂😂 ಈ ಮಟ್ಟದಲ್ಲಿ‌ ಇಂಗ್ಲಿಷ್ ನಾನೂ ಸಹ ಮಾತಾಡ್ತೀನಿ.. “ಯೂ ಗೋ ಐ ಗೋ” ಥರಾ… ಅದ್ಕೆ ಸೈಮನ್ ಇಷ್ಟವಾಗ್ತಾನೆ..

ಉಳಿದಂತೆ ಕ್ಯಾಮೆರಾ ವರ್ಕ್ ಮಸ್ತ್.. 👌👌

ತುಂಬಾ ಇಷ್ಟವಾದ ಸೀನ್ ಎಂದರೆ ಮಣಿ ಮನೆಯಿಂದ ಎಲ್ಲರೂ ಹೊರ ಓಡಿ ಬರುವಾಗ ಅವರ ಹಿಂದೆ ಕೈ ಕಟ್ಟಿಸಿಕೊಂಡ ಸೈಮನ್ ಸಹ ಅದೇ ಅವತಾರದಲ್ಲಿ ಓಡಿ ಬರೋದು 😂 ದೃಶ್ಯಗಳ ಜೋಡಣೆ ಸೂಪರ್ ಆಗಿದೆ… ಇದೊಂಥರಾ ಗುರುಶಿಷ್ಯರು ಸಿನೆಮಾ ನೆನಪಿಸಿತು.

ಅಸ್ಗರ್, ಮಣಿ, ಸುಲೇಮಾನ್, ಸೈಮನ್, ಆ ಸರಿಗಮಪದ ಎರಡನೇ ರೌಂಡಿಗೆ ಹೋಗಿದ್ದ ಆ ಸಿಂಗರ್ ಎಲ್ಲರೂ ಇಷ್ಟವಾದರು.

ನಿರ್ದೇಶಕರು ಯಾರು ಅಂತ ಗೊತ್ತಾಗಲಿಲ್ಲ. ಹೊಸ ಹೆಸರು. ಆದರೆ ಮುಂದೆ ಅವರಿಂದ ಮತ್ತಷ್ಟು ಒಳ್ಳೆಯ ಸಿನೆಮಾ ನಿರೀಕ್ಷಿಸಬಹುದು.

*************

ಕೆ.ಎ.ಸೌಮ್ಯ
ಮೈಸೂರು

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply