ಬಂಗಾರದ ನೆನಪು

ರಾಜ್ಕುಮಾರ್

ಡಾ. ರಾಜ್’ಕುಮಾರ್! ಆ ಹೆಸರೊಂದೇ ಸಾಕು. ಹೆಚ್ಚಿನ ವಿವರಣೆಯ‌ ಅಗತ್ಯವಿಲ್ಲ. ಒಬ್ಬ ಸಾಮಾನ್ಯ ನಾಟಕ ಕಂಪನಿಯ ಪಾತ್ರಧಾರಿ ಕನ್ನಡ ಸಿನಿರಂಗದ ನಟಸಾರ್ವಭೌಮನಾಗಿ ಬೆಳೆದ ಅಸಾಮಾನ್ಯ ಕಥೆ ಕನ್ನಡಿಗರೆಲ್ಲರಿಗೂ ತಿಳಿದಿರುವಂತದ್ದೇ. 24 April 1929 ರಂದು ಹುಟ್ಟಿದ “ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ” 8 ನೇ ತರಗತಿಗೆ ಶಾಲೆಯನ್ನು ಬಿಟ್ಟು ಗುಬ್ಬಿ ನಾಟಕ ಕಂಪನಿಯಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ಮಾಡಿ ನಟನೆಯ ಹಾಗೂ ಗಾಯನದ ಓಂಕಾರವನ್ನು ಕಲಿಯುತ್ತಾನೆ. 25 ನೇ ವಯಸ್ಸಿಗೆ ಪೂರ್ಣಪ್ರಮಾಣದ ನಟನಾಗಿ ತನ್ನ ಚೊಚ್ಚಲ ಚಿತ್ರ “ಬೇಡರ ಕಣ್ಣಪ್ಪ”ದಲ್ಲಿ ಅಭಿನಯಿಸುತ್ತಾನೆ. ನಂತರ ಮತ್ತೆಂದೂ ಹಿಂತಿರುಗಿ ನೋಡಲೇ ಇಲ್ಲ. ಸುಮಾರು 50 ದಶಕಗಳ ಕಾಲ ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಿಗರ ಮನದಲ್ಲಿ ಸ್ಥಿರಸ್ಥಾಯಿಯಾಗಿದ್ದಾರೆ.

ಡಾ. ರಾಜ್'ಕುಮಾರ್!
ಡಾ. ರಾಜ್’ಕುಮಾರ್!

ಅಭಿನಯದಲ್ಲಿ ನಟಸಾರ್ವಭೌಮ, ಗಾಯನದಲ್ಲಿ ಗಾನಗಂಧರ್ವ. ತಾನು ಹೋದಲ್ಲೆಲ್ಲ ಕನ್ನಡದ ಕಂಪನ್ನು ಪಸರಿಸಿ ಬರುವ ಬಂಗಾರದ ಹೂವು. ಜನರು ತಮ್ಮ ನೆಚ್ಚಿನ ನಟರನ್ನು ದೇವರನ್ನಾಗಿಸಿ ಮಂದಿರಗಳನ್ನು ಕಟ್ಟಿ ನಿತ್ಯವೂ ಪೂಜೆ-ಪುನಸ್ಕಾರಗಳನ್ನು ಮಾಡುತ್ತಿದ್ದ ಕಾಲದಲ್ಲಿ ಅಭಿಮಾನಿಗಳನ್ನು ‘ಅಭಿಮಾನಿ ದೇವರು’ಗಳು ಎಂದು ಕರೆದು ಅಭಿಮಾನಿಗಳನ್ನೇ ದೇವರನ್ನಾಗಿಸಿದ ದೇವತಾ ಮನುಷ್ಯ ಅವರು. ಆಡುಮುಟ್ಟದ ಸೊಪ್ಪಿಲ್ಲ ಅನ್ನುವಂತೆ ಅವರು ಮಾಡದ ಪಾತ್ರವಿಲ್ಲ. ಪೌರಾಣಿಕ ಪಾತ್ರಗಳಿಂದ ಹಿಡಿದು ಜೇಮ್ಸ್ ಬಾಂಡ್ ಶೈಲಿಯ ಪಾತ್ರಗಳನ್ನೂ ಮಾಡಿದ್ದಾರೆ‌. ಜೇಮ್ಸ್ ಬಾಂಡ್’ನ ಸಿನೆಮಾಗಳನ್ನು ಭಾರತೀಯರೆಲ್ಲರೂ ಕಣ್ಣು-ಬಾಯಿ ಬಿಟ್ಟುಕೊಂಡು ನೋಡುತ್ತಿದ್ದ ಕಾಲದಲ್ಲಿ ಭಾರತದಲ್ಲಿ ಮೊದಲಬಾರಿಗೆ “ಜೇಡರ ಬಲೆ” ಎಂಬ ಬಾಂಡ್ ಶೈಲಿಯ ಸಿನೆಮಾದಲ್ಲಿ CID 999 ಆಗಿ ಅಭಿನಯಿಸಿದರು. ಈ ಪಾತ್ರ ಜನರಿಗೆ ಎಷ್ಟು ಇಷ್ಟವಾಯಿತೆಂದರೆ ಈ ಸಿನೆಮಾದ 3 ಸೀಕ್ವೆಲ್’ಗಳಲ್ಲಿ ರಾಜಕುಮಾರ್ ಅವರು CID 999 ಆಗಿ ಅಭಿನಯಿಸಿದರು. “ಜೇಡರ ಬಲೆ”, “ಗೋವಾದಲ್ಲಿ CID 999”, “ಆಫರೇಷನ್ ಜಾಕ್’ಪಾಟ್’ನಲ್ಲಿ CID 999” ಮತ್ತು “ಆಫರೇಷನ್ ಡೈಮಂಡ್ ರಾಕೆಟ್” ಈ ನಾಲ್ಕು ಬಾಂಡ್ ಸರಣಿಯಲ್ಲಿನ ಅಭಿನಯ ನೋಡಿ ಇವರಿಗೆ ‘ಇಂಡಿಯನ್ ಜೇಮ್ಸ್ ಬಾಂಡ್’ ಎಂದು ಕರೆಯಲಾಯಿತು.

ಕೃಷ್ಣದೇವರಾಯ, ಪುಲಿಕೇಶಿ, ಮಯೂರವರ್ಮ ಮೊದಲಾದ ರಾಜರುಗಳ ಹೆಸರನ್ನು ಕೇಳಿದಾಗ ಡಾ. ರಾಜಕುಮಾರ್’ರವರ ಚಿತ್ರವೇ ಕನ್ನಡಿಗರ ಕಣ್ಣಮುಂದೆ ಬರುತ್ತದೆ. ಅಷ್ಟೇ ಅಲ್ಲ ಹಲವು ಕನ್ನಡಿಗರ ಮನೆಯಲ್ಲಿನ ಶಿವ,‌ವಿಷ್ಣು, ಕೃಷ್ಣ ಮುಂತಾದ ರಾಜ್’ರವರು ಅಭಿನಯಿಸಿರುವ ಸಿನೆಮಾದ ಪೋಸ್ಟರ್’ಗಳನ್ನೇ ದೇವರ ಫೋಟೋವನ್ನಾಗಿಸಿ ಪೂಜಿಸುತ್ತಾರೆ.

ಡಾ. ರಾಜ್'ಕುಮಾರ್!
ಡಾ. ರಾಜ್’ಕುಮಾರ್!

ರಾಜ್’ರವರ ಸಿನೆಮಾದಲ್ಲಿ ಖಾಯಂ ಗಾಯಕರಾಗಿದ್ದ ಪಿ. ಬಿ. ಶ್ರೀನಿವಾಸ್’ರವರ ಅನಾರೋಗ್ಯದ ಕಾರಣ ಅವರು ಹಾಡಬೇಕಾಗಿದ್ದ ‘ಯಾರೇ ಕೂಗಾಡಲೀ, ಊರೇ ಹೋರಾಡಲಿ’ ಹಾಡನ್ನು ರಾಜ್’ರವರು ಹಾಡುತ್ತಾರೆ. ಮುಂದಿನದೆಲ್ಲ ಹಿಸ್ಟರಿ.‌ ಕನ್ನಡ ಚಿತ್ರರಂಗಕ್ಕೆ ವರನಟನ ಜೊತೆ ಗಾನಗಂಧರ್ವನೂ ದೊರಕಿದನು. ಕನ್ನಡ ಚಿತ್ರರಂಗದಲ್ಲಿ ರೀಮೇಕ್ ಹಾವಳಿ ಹೆಚ್ಚಾಗಿದೆಯೆಂದು ಮೂಗುಮುರಿಯುತ್ತಿರುವವರು ತಿಳಿದುಕೊಳ್ಳಲೇಬೇಕಿರುವ ವಿಷಯವೆಂದರೆ, ರಾಜಕುಮಾರ್’ರವರ ಮೂವತ್ತಕ್ಕೂ ಹೆಚ್ಚು ಸಿನೆಮಾಗಳು ಐವತ್ತಕ್ಕೂ ಹೆಚ್ಚು ಬಾರಿ ಏಳು ವಿವಿಧ ಭಾಷೆಗಳಿಗೆ ರೀಮೇಕ್ ಆಗಿ ಎಲ್ಲ ಚಿತ್ರರಂಗದ ದಿಗ್ಗಜರು ಆ ರೀಮೇಕ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಇದು ವರನಟ ಡಾ. ರಾಜ್’ರವರ ಸ್ಟಾರ್’ಡಂ ಅಷ್ಟೇ ಅಲ್ಲ ಅವರು ನಟಿಸಿದ್ದ ಸಿನೆಮಾಗಳ ವಿಷಯದ‌ ಮಹತ್ವವನ್ನೂ ಸಾರುತ್ತದೆ. ರಾಜ್’ರವರು ಸಾಮಾಜಿಕ ಸಂದೇಶವಿರುವ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ತಮ್ಮ ಸಿನೆಮಾಗಳು ವೀಕ್ಷಕರಿಗೆ‌ ಒಳ್ಳೆಯ‌ ಸಂದೇಶಗಳನ್ನು ಸಾರಬೇಕೆನ್ನುವುದೇ ಅವರ ಅಭಿಲಾಷೆಯಾಗಿತ್ತು. ಅವರ “ಬಂಗಾರದ ಮನುಷ್ಯ” ಸಿನೆಮಾ‌ ನೋಡಿ ಹಲವಾರು ಜನ ನಗರದಲ್ಲಿನ ಕೆಲಸಗಳನ್ನು ಬಿಟ್ಟು ತಮ್ಮ ಹಳ್ಳಿಗೆ ಹೋಗಿ ವ್ಯವಸಾಯವನ್ನು ಕೈಗೊಂಡಿದ್ದರು.

ಅವರ ಚಿತ್ರಗಳಲ್ಲಿ ನಾಡು-ನುಡಿಯ ಬಗೆಗಿನ ಹಾಡುಗಳಿಗೆ ವಿಶೇಷ ಸ್ಥಾನವಿರುತ್ತಿತ್ತು.
ಕನ್ನಡ ಚಿತ್ರರಂಗ ಕಂಡ ಅತ್ಯಂತ ಫಿಟ್ ನಟ‌ ಡಾ.‌ ರಾಜ್. ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಎದ್ದು ಅವರು ಮಾಡುತ್ತಿದ್ದ ಯೋಗ ಅವರ ಫಿಟ್’ನೆಸ್’ನ ಸೀಕ್ರೇಟ್. ಅವರ “ಕಾಮನಬಿಲ್ಲು” ಸಿನೆಮಾದಲ್ಲಿ ಅವರ ಯೋಗದ ಝಲಕ್ ಅನ್ನು ನೋಡಬಹುದು. ಹೆಚ್ಚಿನ ನಟರ ರಿಯಲ್ ಮತ್ತು ರೀಲ್ ಲೈಫ್’ಗಳು ಬೇರೆ-ಬೇರೆಯಾಗಿರುತ್ತದೆ.‌ ಆದರೆ ರಾಜ್’ರವರು ತೆರೆಯ ಮೇಲೂ ತೆರೆಯ ಹಿಂದೆಯೂ ಒಂದೇ ತರದ ಜೀವನವನ್ನು ನಡೆಸುತ್ತಿದ್ದರು. ಅವರು ಸಿನೆಮಾಗಳಲ್ಲಿ ಮಧ್ಯಪಾನ, ಧೂಮಪಾನ ಅಥವಾ ಯಾವುದೇ ದುಶ್ಚಟಗಳನ್ನು ಮಾಡುವ ಪಾತ್ರಗಳಲ್ಲಿ ಅಭಿನಯಿಸುತ್ತಿರಲಿಲ್ಲ. ತಮ್ಮ ಚಿತ್ರಗಳನ್ನು ನೋಡುವ ಜನರಿಗೆ ತಪ್ಪು ಸಂದೇಶ ನೀಡುವುದನ್ನು ಅವರು ಕಟುವಾಗಿ ವಿರೋಧಿಸುತ್ತಿದ್ದರು. ತಮ್ಮ ಸಾವಿನ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡಿ ಜನರಿಗೆ ಮಾದರಿಯಾದರು.‌ ಅವರು ನೇತ್ರದಾನ ಮಾಡಿದ ನಂತರ ನೇತ್ರದಾನ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದನ್ನು ಕಾಣಬಹುದು.

ಡಾ. ರಾಜ್'ಕುಮಾರ್!
ಡಾ. ರಾಜ್’ಕುಮಾರ್!

ಇತರ ಭಾಷೆಗಳಿಂದ ಎಷ್ಟೇ ಆಫರ್’ಗಳೂ ಬಂದರೂ ಕನ್ನಡ ಸಿನೆಮಾಗಳನ್ನು ಬಿಟ್ಟು ಇತರ ಯಾವುದೇ ಭಾಷೆಗಳ‌ಲ್ಲಿ ರಾಜ್’ರವರು ಅಭಿನಯಿಸಲಿಲ್ಲ. ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಅಭಿನಯಿಸಿರುವ ‘ಕೂಲಿ’ ಸಿನೆಮಾದಲ್ಲಿ ಡಾ‌‌. ರಾಜ್’ರವರಿಗೆ ಅತಿಥಿ ಪಾತ್ರದಲ್ಲಿ ಅಭಿನಯಿಸುವ ಅವಕಾಶ ದೊರೆತಿದ್ದರೂ ಅದನ್ನು ನಯವಾಗಿ ತಿರಸ್ಕರಿಸಿದ ಕನ್ನಡ ರತ್ನ ಇವರು. ಕೊನೆಯ ಉಸಿರಿರೋವರೆಗೂ ಕನ್ನಡ ನಾಡು-ನುಡಿಗಾಗಿಯೇ ಜೀವಿಸಿದರು.

ಕರ್ನಾಟಕದ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಪ್ರಥಮ ಭಾಷೆಯ ಸ್ಥಾನ ನೀಡುವುದಕ್ಕಾಗಿ ಗೋಕಾಕ್ ಚಳುವಳಿಯನ್ನು ನಡೆಸಿ ಅದರಲ್ಲಿ ಜಯಶಾಲಿಗಳಾದರು. ಪಕ್ಕದ ರಾಜ್ಯದಲ್ಲಿ ಸ್ಟಾರ್ ನಟರು ರಾಜಕೀಯದಲ್ಲಿ ಧುಮುಕಿ ಮುಖ್ಯ ಮಂತ್ರಿಗಳಾಗಿ ಮೆರೆಯುತ್ತಿದ್ದರೂ ತಾವು ಮಾತ್ರ ಕೊನೆಯವರೆಗೂ ರಾಜಕೀಯದ ಕೆಸರಿನಲ್ಲಿ ಇಳಿಯದೇ ತಾವು ಧರಿಸಿದ ಬಿಳಿ ಶರಟು ಮತ್ತು ಪಂಚೆ ಕೊಳೆಯಾಗದಂತೆ ದೂರವೇ ನಿಂತು ಕನ್ನಡಿಗರ ಜನಮಾನಸದಲ್ಲಿ ರಾಜ್ಯಭಾರ ನಡೆಸಿದರು.

ರಾಜ್’ಕುಮಾರ್’ರವರ ಸ್ಪುಟವಾದ ಕನ್ನಡ, ಆ ಡೈಲಾಗ್ ಡೆಲಿವರಿ, ಸ್ಪುರದ್ರೂಪ ಮೈಕಟ್ಟು, ಆ ಮುಖಭಾವ ಇನ್ಯಾವ ನಟರಲ್ಲಿಯೂ ಕಾಣಲು ಸಾಧ್ಯವಿಲ್ಲ. ರಜನೀಕಾಂತ್’ರವರು ಒಮ್ಮೆ ಹೇಳಿದ್ದರು, 10 MGR ಗಳು 1 ರಾಜಕುಮಾರ್’ಗೆ ಸಮ ಎಂದು. ಇನ್ನೂ ಇನ್ನೂರು ವರ್ಷಗಳು ಕಳೆದರೂ ಡಾ. ರಾಜ್’ಕುಮಾರ್’ರವರು ಕನ್ನಡ ಚಿತ್ರರಂಗದ ಧೃವತಾರೆಯಾಗಿಯೇ ಮಿನುಗುತ್ತಿರುತ್ತಾರೆ.

Author: Santosh

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply