ಬಂಗಾರದ ಮನುಷ್ಯ

ಈ ೧೯೭೨ರ ಸಿದ್ದಲಿಂಗಯ್ಯ ನಿರ್ದೇಶನದ ಚಿತ್ರ ೭೩೦ ದಿನಗಳ ಕಾಲ ಸ್ಟೇಟ್ಸ್‌ ಚಿತ್ರಮಂದಿರದಲ್ಲಿ ಯಾಕೆ ಓಡಿತು? ನಾನಾಗ ಬೆಂಗಳೂರಿನ ಜಯನಗರದಲ್ಲಿ ಪಿ.ಯು.ಸಿ. ಓದುತ್ತಿದ್ದೆ. ಪ್ರತಿ ಶನಿವಾರ ಮಧ್ಯಾಹ್ನ ತರಗತಿ ಮುಗಿಸಿಕೊಂಡು ಸ್ಟೇಟ್ಸ್‌ ಚಿತ್ರಮಂದಿರದ ಮುಂದಿನಿಂದಲೇ ಬಸ್ಸಿನಲ್ಲಿ ಹೋಗುತ್ತಿದ್ದೆ. ಮತ್ತೆ ಭಾನುವಾರ ಸಂಜೆ ಮಲ್ಲೇಶ್ವರದಿಂದ ಮತ್ತೆ ಸ್ಟೇಟ್ಸ್‌ ಮುಂದಿನಿಂದಲೇ ಜಯನಗರಕ್ಕೆ ಹೋಗುತ್ತಿದ್ದೆ. ಆಗ ಬಸ್ಸು ಕೆಂಪೇಗೌಡ ರಸ್ತೆಯಲ್ಲಿಯೇ ಎರಡೂ ಕಡೆ ಹೋಗುತ್ತಿತ್ತು. ಶನಿವಾರದ ಮ್ಯಾಟ್ನಿ ಮತ್ತು ಭಾನುವಾರದ ಫಸ್ಟ್ ಶೋನಲ್ಲಿ ಭಯಾನಕ ಜನಸಂದಣಿ ಈ ಚಿತ್ರಕ್ಕೆ.

ಆದರೆ ನಾನು ನೋಡಲಿಲ್ಲ. ಏಕೆಂದರೆ ನನಗೆ ಆಗೆಲ್ಲಾ ಕಾದಂಬರಿಯಂತೆ ಚಿತ್ರ ಇಲ್ಲದಿದ್ದರೆ ಕಾದಂಬರಿಗೆ ಏನೋ ಅನ್ಯಾಯ ಮಾಡಿದ್ದಾರೆ ಚಿತ್ರ ನಿರ್ಮಿಸಿದವರು ಎನ್ನಿಸುತ್ತಿತ್ತು. ಎಲ್ಲಿ ಆ ಕಥೆಯಲ್ಲಿದ್ದ ಕೇಶವ (ವಜ್ರಮುನಿ) ಮತ್ತು ಚಕ್ರಪಾಣಿ (ಶ್ರೀನಾಥ್)‌ ತಮ್ಮ ಗೋಪಾಲ? ತಂಗಿ ಸರಸ್ವತಿ(ಕಲಾ) ಅದರಲ್ಲಿ ಕಾಲಲ್ಲಿ ಬಲವಿಲ್ಲದೇ ಸೋದರಮಾವ ರಾಜೀವನ(ರಾಜ್‌ಕುಮಾರ್)‌ ಕೈಯಿಂದ ಕಾಲಿಗೆ ಎಣ್ಣೆ ನೀವಿಸಿಕೊಳ್ಳುತ್ತಿದ್ದಳು. ಇಲ್ಲಿ ಹಾಗಿರಲಿಲ್ಲವಲ್ಲಾ…

ಆದರೆ ಥ್ರಿಲ್ಲರ್‌ ಮತ್ತು ಕೊಲೆ ಕಾದಂಬರಿಗಳನ್ನು ಬರೆಯುತ್ತಿದ್ದ ಟಿ.ಕೆ. ರಾಮರಾವ್‌ ಅವರ ಬಂಗಾರದ ಮನುಷ್ಯ ಕಾದಂಬರಿ ಓದುತ್ತಿದ್ದಂತೆ ಕಣ್ಣ ಮುಂದೆ ರಾಜೀವನ ಪಾತ್ರದಲ್ಲಿ ಅಣ್ಣಾವ್ರೇ ಕಾಣಿಸಿಕೊಂಡಿದ್ದರು. ಆತನ ಅಕ್ಕ ಶಾರದಳ ಪಾತ್ರದಲ್ಲಿ ಕೂಡ ನನಗೆ ಆದಿವಾನಿ ಲಕ್ಷ್ಮೀದೇವಿಯೇ ಕಂಡಿದ್ದು.

ಲಕ್ಷ್ಮಿಯ ಪಾತ್ರಕ್ಕೆ ಭಾರತಿ ಅಂದುಕೊಂಡಿರಲಿಲ್ಲ. ಇನ್ನು ಶರಾವತಿಯ (ಆರತಿ) ಪಾತ್ರ ರಾಮರಾವ್‌ ಕಾದಂಬರಿಗಳಲ್ಲಿ ಇರಲೇಬೇಕಾದ ಒಂದು ಸಸ್ಪೆನ್ಸ್‌ ಪಾಯಿಂಟ್‌ಗಾಗಿಯೇ ಇದ್ದಂತಿದೆ. ಆದರೆ ಆಕೆಯ ಪಾತ್ರದ ಸಂಬಂಧವನ್ನು ಚಿತ್ರದಲ್ಲಿ ಬದಲಿಸಿದ್ದಾರೆ.

ರಾಚೂಟಪ್ಪ ಕೂಡ ಬಾಲಕೃಷ್ಣ ಅವರಿಗಾಗೇ ಬರೆದಂತಿದೆ. ಊರಿಗೆಲ್ಲಾ ಸಹಾಯ ಮಾಡುವ ಅದ್ಭುತ ಪಾತ್ರ. ಅವರಿಗೆ ಆ ಪಾತ್ರಕ್ಕೆ ಅತ್ಯುತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿ ಬಂದಿದ್ದರಲ್ಲಿ ಅಚ್ಚರಿಯೇನೂ ಇಲ್ಲ.

ಏನಿದೆ ಈ ಚಿತ್ರದಲ್ಲಿ? ಅಣ್ಣಾವ್ರ ಅದ್ಭುತ ನಟನೆಯೇ? ಬಂಗಾರದ ಮನುಷ್ಯ ಎಂದು ಅವರೇನೂ ಸದಾ ದೇವರಂತಿರುವುದಿಲ್ಲ. ಎಲ್ಲರಂತೆ ಮನುಷ್ಯ. ತನ್ನಣ್ಣ (ಲೋಕನಾಥ್)‌ ಬಡತನವಿದ್ದಾಗ ಸಾಥ್‌ ಕೊಡದೇ ತಮಗೆ ಶ್ರೀಮಂತಿಕೆ ಬಂದ ಮೇಲೆ ತನ್ನ ಘಟವಾಣಿ ಹೆಂಡತಿ (ಎಂ ಎನ್‌ ಲಕ್ಷ್ಮೀದೇವಿ) ಮಾತಿಗೆ ಎದುರಾಡಲಾಗದೇ ತನ್ನ ಮಗಳು ನಾಗುವನ್ನು (ಜೋರು ಬಾಯಿಯ ಬಿ. ವಿ.ರಾಧ) ವಜ್ರಮುನಿಗೆ ಕೊಡಲು ಕೇಳಿಕೊಂಡು ಬಂದಾಗ ಈ ಪ್ರೀತಿ ಎಲ್ಲಿ ಹೋಗಿತ್ತು ನಿನ್ನ ತಂಗಿಯ ಗಂಡ ಸತ್ತಾಗ ಎಂದು ಕೇಳುವ ಸಾಮಾನ್ಯ ಮನುಷ್ಯ.

ಆದರೆ ಆತ ಅಸಾಮಾನ್ಯ ಆಗೋದು ಅಕ್ಕನ ಮಕ್ಕಳನ್ನು ಉದ್ಧಾರ ಮಾಡುವಾಗ, ಜೊತೆಯಲ್ಲೊಬ್ಬ ಅನಾಥ ಹುಡುಗನನ್ನೂ ಮೇಲೆತ್ತುವಾಗ, ತನ್ನ ಜಮೀನಿನಲ್ಲಿ ಕಳ್ಳತನ ಮಾಡುವ ಹೊನ್ನ(ಎಂ ಪಿ ಶಂಕರ್)‌ ಮುಂತಾದವರಿಗೆ ಸರ್ಕಾರದಿಂದ ಜಮೀನು ಕೊಡಿಸುವಾಗ, ತನ್ನ ಅಕ್ಕನ ಮಗ ಕೇಶವ ತನ್ನನ್ನು ಈ ಮನೆಯ ಅನ್ನ ನಮ್ಮದು ಎಂದಾಗ ಊಟ ಮಾಡದೇ ಎದ್ದು ಹೊರಗೆ ಹೊರಟು, ತನ್ನ ಶಾಲುವನ್ನು ಬಡವನೊಬ್ಬನಿಗೆ ಹೊದಿಸಿ ಬರಿಗಾಲಲ್ಲಿ ಪಶ್ಚಿಮದ ಸೂರ್ಯನತ್ತ ಹೋಗುವಾಗ, ಓ… ಇನ್ನೂ ಅನೇಕ ದೃಷ್ಟಾಂತಗಳಿವೆ. ಸುಮಾರು ೧೭೫ ನಿಮಿಷಗಳ ಸಿನಿಮಾ.

ಜಿ. ಕೆ. ವೆಂಕಟೇಶ್‌ ಸಂಗೀತ ನಿರ್ದೇಶನದಲ್ಲಿ ಪಿ ಸುಶೀಲಾ – ಬಾಳ ಬಂಗಾರ ನೀನು, ಪಿ.ಬಿ.ಎಸ್.‌ – ಎವರ್‌ಗ್ರೀನ್‌ ಆಗದು ಎಂದು ಕೈ ಕಟ್ಟಿ ಕುಳಿತರೆ, ಪಿಬಿಎಸ್‌ ಪಿ ಸುಶೀಲಾ – ಆಹಾ ಮೈಸೂರು ಮಲ್ಲಿಗೆ, ಪಿಬಿಎಸ್‌, ಎಸ್ಪೀಪಿ ಇತರರ ಹನಿ ಹನಿಗೂಡಿದ್ರೆ ಹಳ್ಳ ಮತ್ತು ಇಳಯರಾಜಾ(ಆಗ ಜಿಕೆವಿ ಅಸಿಸ್ಟೆಂಟ್‌ – ಡಿ. ರಾಜ ಅಂತ ಹೆಸರಿದೆ ಟೈಟಲ್‌ ಕಾರ್ಡಿನಲ್ಲಿ) ಆರ್ಕೆಸ್ಟ್ರೈಸೇಷನ್‌ ಮಾಡಿರುವರೆನ್ನಲಾದ ಪಿಬಿಎಸ್‌ ಹಾಡು – ಇಡೀ ಬದುಕನ್ನು ಹೇಳುವ ಹಾಡು ನಗು ನಗುತಾ ನಲೀ ನಲೀ ಏನೇ ಆಗಲಿ.

ಕೆಸರಿನ ಗದ್ದೆಯಲ್ಲಿ ಎಂ ಪಿ ಶಂಕರ್‌, ರಾಜ್‌ ಫೈಟಿಂಗ್‌ ಸಖತ್.‌ ಹಾಡುಗಳು, ನಟನೆ, ಎಮೋಷನ್ಸ್‌ ಎಲ್ಲವೂ ಸರಿಯಾದ ಲೆವೆಲ್‌ನಲ್ಲಿ ಬೆರೆತಿವೆ, ಅದಕ್ಕೇ ಗೆದ್ದಿದೆ ಸಿನಿಮಾ ಅದೂ ಎರಡು ವರ್ಷ ಓಡಿದೆ ಎಂದರೆ ಅನೇಕ ಸಿನಿಮಾಗಳು ಇನ್ನೂ ಚೆನ್ನಾಗಿ ತೆಗೆಯಲ್ಪಟ್ಟಿವೆ ಆದರೆ ಓಡಿಲ್ಲ… ಯಾಕೆ? ಗೊತ್ತಿಲ್ಲ. ಪ್ರೇಕ್ಷಕರ ನಾಡಿಯನ್ನು ಹಿಡಿದಿರುವ ಚಿತ್ರ ಈ ಬಂಗಾರದ ಮನುಷ್ಯ.

ಥಿಯೇಟರಿನಲ್ಲಿ ನೋಡಿರದಿದ್ದ ಚಿತ್ರವನ್ನು ಹಿಂದೆ ಡಿ.ವಿ.ಡಿ.ಯಲ್ಲಿ ನೋಡಿದ್ದೆ. ಆದರೂ ಈ ಸಲ ಕಥೆ ಗೊತ್ತಿದ್ದರೂ, ಕೊನೆಯ ಅರಿವಿದ್ದರೂ ಗಂಟಲು ಒತ್ತಿದಂತಾಗಿತ್ತು ಚಿತ್ರ ಮುಗಿದಾಗ.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply