ಬಂಗಾರದ ಮನುಷ್ಯ

ರಾಜ್ಕುಮಾರ್

ನಾನು ಅಣ್ಣಾವ್ರನ್ನ ಮೊದಲು ಕಂಡಾಗ (ತೆರೆಯಮೇಲಷ್ಟೆ) ಅವ್ರಿನ್ನೂ ‘ಅಣ್ಣಾವ್ರು’ ಆಗಿರಲಿಲ್ಲ! ಎಲ್ಲರ ಪ್ರೀತಿಯ ರಾಜಕುಮಾರ್ ಆಗಿದ್ರು. ಕನ್ನಡದ ಕುಮಾರತ್ರಯರಲ್ಲಿ ಮುಕುಟವಾಗುವ ಹಾದಿಯಲ್ಲಿದ್ದಾಗಿಂದ ಅವರ ಹಲಕೆಲವು ಚಿತ್ರಗಳನ್ನ ನೋಡಿದ್ದೇನೆ. ನಾನು ಕನ್ನಡವಲ್ಲದೆ ಹಿಂದಿˌ ಇಂಗ್ಲೀಷ್ ಮತ್ತು ಬೆರಳೆಣಿಕೆಯಷ್ಟು ಬೇರೆ ಭಾಷೆಯ ಚಿತ್ರಗಳನ್ನು ನೋಡಿದ್ದೇನೆ. ಆದರೆ ಚಲನಚಿತ್ರ ಮಾಧ್ಯಮವನ್ನ ಒಂದು ಸಂದೇಶ ನೀಡಬಹುದಾದ ಮಾಧ್ಯಮವನ್ನಾಗಿ ಡಾ|ರಾಜಕುಮಾರರಿಗಿಂತ ಎಫೆಕ್ಟೀವಾಗಿ ಯಾರೂ ಬಳಸಲಿಲ್ಲ ಅಂತ ಧೈರ್ಯವಾಗಿ ಹೇಳಬಲ್ಲೆ. ಪಾತ್ರಗಳನ್ನ ಕೇವಲ ಉದರಪೋಷಣೆಯ ದೃಷ್ಟಿಯಿಂದ ಅಥವಾ ವ್ಯವಹಾರದ ದೃಷ್ಟಿಯಿಂದ ನೋಡದೆˌಯಾವಾಗಲೂ ತಮ್ಮ ಪಾತ್ರಗಳ ಮೂಲಕ ಒಂದು ಸಂದೇಶವನ್ನ ನೀಡಿಯೇ ಇದ್ದಾರೆಂದು ನನ್ನ ಭಾವನೆ. ದುರಭ್ಯಾಸಗಳನ್ನ ಯಾವತ್ತೂ ವೈಭವೀಕರಿಸದ ಮುತ್ತುರಾಜ. ತಮ್ಮ ಜೇಮ್ಸ್ ಬಾಂಡ್ ಶೈಲಿಯ ಚಿತ್ರಗಳಲ್ಲೂ ಕೂಡ ಹೆಂಡವನ್ನಾಗಲೀ ಸಿಗರೇಟನ್ನಾಗಲೀ ಹಿಡಿಯದೇ ಪಾತ್ರಪೋಷಣೆ ಮಾಡಿ ತೋರಿಸಿದರು. ಆಲ್ಮೋಸ್ಟ್ ಎಲ್ಲ ರೀತಿಯ ಪಾತ್ರಗಳನ್ನೂ ನಿರ್ವಹಿಸಿದ ಕೆಲವೇ ಕೆಲವು ಅಥವಾ ಕೇವಲ ಒಬ್ಬನೇ ಒಬ್ಬ ನಟ ಎನ್ನಬಹುದೇನೋ. ಎಲ್ಲರಸಗಳನ್ನೂ ತಮ್ಮ ಪಾತ್ರಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಔತಣನೀಡಿದರೆಂದೇ ಹೇಳಬೇಕು. ಕನ್ನಡದ ಮಟ್ಟಿಗೆ ಅಭಿಮಾನಿ ಬಂಗಾರದ ಮನುಷ್ಯಘಗಳನ್ನು ಹೊಂದಿದ ಮೊದಲ ನಟ. ಅವರ ಬಂಗಾರದ ಮನುಷ್ಯದಲ್ಲಿನ ಪಾತ್ರವನ್ನ ನೊಡಿ ನಿಜಜೀವನದಲ್ಲೂ ರಾಜೀವನಾದವರೆಷ್ಟೋ!

ಮಯೂರನಾಗಿ ಅವರು ಅಭಿನಯಿಸಿ ಕನ್ನಡಿಗರಲ್ಲಿ ಆತ್ಮಾಭಿಮಾನವನ್ನ ತಂದರು ಅಂತ ಹೇಳಬಹುದು ಅಂತ ನನ್ನಭಿಪ್ರಾಯ. ಇದಲ್ಲದೆ ನಿಜಜೀವನದಲ್ಲಿಯೂ ಗೋಕಾಕ್ ವರದಿ ಜಾರಿಗಾಗಿ ಬೀದಿಗಿಳಿದು ತಮ್ಮ ಬಧ್ಧತೆಯನ್ನ ಪ್ರದರ್ಶಿಸಿದರು. ಆ ಕಾಲದಲ್ಲಿ ರಾಜಣ್ಣನ ಒಂದು ಕೂಗಿಗೆ ಇಡೀ ರಾಜ್ಯವೇ ಓಗೊಡುತ್ತಿತ್ತು. ಇಂಥ ಮಾಣಿಕ್ಯವನ್ನ ಅಪಹರಿಸಿ ಕರ್ನಾಟಕಕ್ಕೇ ಒಂದು ದೊಡ್ಡ ಶಾಕ್ ಕೊಟ್ಟು ರಾಜಣ್ಣನವರ ಜೀವನದಲ್ಲಿ ಒಂದು ಕಪ್ಪುಚುಕ್ಕೆಯಾಗಿಬಿಟ್ಟ ವೀರಪ್ಪನ್. ರಾಜಣ್ಣನವರನ್ನ ಅಪಹರಿಸಿ ಆ ಮೂಲಕ ತನ್ನ ಕೊನೆಯನ್ನ ಹತ್ತಿರಮಾಡಿಕೊಂಡ ಅನ್ನಿಸುತ್ತೆ! ಅಭಿಮಾನಿಗಳನ್ನು ದೇವರು ಎಂದು ಬರೀಬಾಯಿ ಮಾತಿಗೆ ಕರೆಯುತ್ತಿರಲಿಲ್ಲ ಅವರು. ಅವರ ಅಂತಃಕರಣ ಜನತೆಗೆ ತಿಳಿದಿತ್ತು. ಸರಳ ವ್ಯಕ್ತಿಯಾಗಿದ್ದ ರಾಜಣ್ಣ ಒಂದು ಬಾರಿ ದಾರಿಯಲ್ಲಿ ಬಿಸಿಲಲ್ಲಿ ಎಳನೀರು ಮಾರುವವನ ಪಾಡು ನೊಡಲಾಗದೆ ಅವನಿಗೆ ಅಂಗಡಿ ಕಟ್ಟಿಕೊಳ್ಳಲು ಹಣವನ್ನು ನೀಡಿದ್ದಲ್ಲದೆ ತಾನು ಹಣವನ್ನ ಕೊಟ್ಟಿದ್ದು ಯಾರಿಗೂ ಹೇಳಬಾರದು ಅಂತ ತಾಕೀತು ಬೇರೆ ಮಾಡಿದ್ದರಂತೆ! ತೆರೆಯ ಮೇಲೆ ಮಾತ್ರ ಅಪರಂಜಿಯಂತಹ ಪಾತ್ರಗಳನ್ನ ಮಾಡದೇˌ ನಿಜಜೀವನದಲ್ಲಿಯೂ ತನ್ನ ಪಾತ್ರಗಳಂತೆಯೇ ಬದುಕಿದ ಮುತ್ತುರಾಜ ನಮ್ಮ ಅಣ್ಣಾವ್ರು.

ಎಂ.ರಾಘವೇಂದ್ರ

ಎಂ.ರಾಘವೇಂದ್ರ

Leave a Reply