ನಮ್ಮ ಭಾರತ ಚಿತ್ರರಂಗದ ಇತಿಹಾಸದಲ್ಲಿ ಸುಮಾರು ೧೦೦ ವರ್ಷಗಳಿಗೂ ಅಧಿಕ ಇತಿಹಾಸವನ್ನು ಹೊಂದಿರುವ ಬಂಗಾಳಿ ಚಿತ್ರರಂಗವು ೧೮೯೦ ರ ದಶಕದ ಸಮಯದಲ್ಲಿ ಕಲ್ಕತಾದಲ್ಲಿನ ರಂಗ ಮಂದಿರಗಳಲ್ಲಿ ಬಯೋಸ್ಕೋಪ್ ಗಳನ್ನು ಪ್ರದರ್ಶಿಸಲಾಗುತ್ತಿತ್ತು. ನಂತರ ಹತ್ತು ವರ್ಷಗಳಲ್ಲಿ ಈ ಪ್ರಯೋಗದಿಂದ ಸ್ಪೂರ್ತಿ ಪಡೆದ ಹೀರಾಲಾಲ್ ಸೇನ್ ಎಂಬುವರು ರಾಯಲ್ ಬಯೋಸ್ಕೋಪ್ ಎಂಬ ಕಂಪನಿಯನ್ನು ಸ್ಥಾಪಿಸುವ ಮೂಲಕ ಈ ಉದ್ಯಮದಲ್ಲಿ ಪ್ರಥಮ ಬಾರಿಗೆ ತಮ್ಮ ಕೆಲಸವನ್ನು ಆರಂಭಿಸಿ ಕಲ್ಕತ್ತಾದ ಸ್ಟಾರ್ ಥಿಯೇಟರ್,ಮಿನರ್ವ ಥಿಯೇಟರ್ ಮತ್ತು ಕ್ಲಾಸಿಕಲ್ ಥಿಯೇಟರ್ ಗಳಲ್ಲಿನ ಅನೇಕ ಜನಪ್ರಿಯ ಪ್ರದರ್ಶನಗಳ ರಂಗ ಮಂಚದ ನಿರ್ಮಾಣಗಳಿಂದ ದೃಶ್ಯಗಳನ್ನು ನಿರ್ಮಿಸುವುದರೊಂದಿಗೆ ತಮ್ಮನ್ನು ಈ ವಲಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.
ಇವರ ಕೃತಿಗಳು ಬಂದ ಸುಧೀರ್ಘ ಅಂತರದ ನಂತರ ಧೀರೇಂದ್ರ ನಾಥ್ ಗಂಗೂಲಿ ( D.G. ಎಂದೇ ಪ್ರಸಿದ್ಧರಾಗಿದ್ದರು) ಎಂಬುವರು ೧೯೧೮ ರಲ್ಲಿ ಬಂಗಾಳಿ ಮಾಲಿಕತ್ವದಲ್ಲಿ ಇಂಡೋ ಬ್ರಿಟಿಷ್ ಫಿಲಂ ಕಂ. ಎಂಬ ಚಿತ್ರ ನಿರ್ಮಾಣದ ಕಂಪನಿಯನ್ನು ಸ್ಥಾಪಿಸಿದ್ದರು. ನಂತರ ೧೯೧೯ ರಲ್ಲಿ ಮದನ್ ಥಿಯೇಟರ್ ಲಾಂಛನದಲ್ಲಿ ಬಿಲ್ವ ಮಂಗಲ್ ಎಂಬ ಮೊಟ್ಟ ಮೊದಲ ಬಂಗಾಳಿ ರೂಪಕ ಚಿತ್ರವು ನಿರ್ಮಾಣಗೊಂಡಿತ್ತು. ಈ ಚಿತ್ರವು ನಿರ್ಮಾಣಗೊಂಡ ಎರಡು ವರ್ಷಗಳ ನಂತರ ೧೯೨೧ ರಲ್ಲಿ ತೆರೆ ಕಂಡ ಬಿಲಾಟ್ ಫೆರಾಟ್ ಎಂಬ ಚಿತ್ರವು ಇಂಡೋ ಬ್ರಿಟಿಷ್ ಫಿಲಂ.ಕಂ. ನಲ್ಲಿ ನಿರ್ಮಾಣಗೊಂಡ ಮೊದಲ ಚಿತ್ರ, ಮದನ್ ಥಿಯೇಟರ್ ಲಾಂಛನದಲ್ಲಿ ನಿರ್ಮಾಣಗೊಂಡ ಜಮಾಯಿ ಷಷ್ಠಿ ಚಿತ್ರವು ಬಂಗಾಳಿ ಭಾಷೆಯ ಮೊದಲ ವಾಕ್ಚಿತ್ರ ಕೂಡ ಆಗಿತ್ತು.
ಟಾಲಿಗಂಜ್ ಎಂಬ ಹೆಸರು ಹಾಲಿವುಡ್ ನೊಂದಿಗೆ ಪ್ರಾಸಬದ್ಧ ರೀತಿಯಲ್ಲಿ ಇದ್ದುದರಿಂದ ಮತ್ತು ಆ ಸಮಯದಲ್ಲಿ ಟಾಲಿಗಂಜ್ ಭಾರತೀಯ ಚಲನಚಿತ್ರೋದ್ಯಮದ ಕೇಂದ್ರ ಬಿಂದುವಾಗಿದ್ದರಿಂದ ೧೯೩೨ ರಲ್ಲಿ ಬಂಗಾಳಿ ಚಿತ್ರರಂಗಕ್ಕೆ ಟಾಲಿವುಡ್ ಎಂಬ ಹೆಸರನ್ನು ರಚಿಸಲಾಯಿತು. ಭಾರತೀಯ ಚಲನಚಿತ್ರೋದ್ಯಮದ ಕೇಂದ್ರ ಬಿಂದು ಟಾಲಿಗಂಜ್ ನ್ನು ಮುಂಬಯಿ ಮೂಲದ ಚಿತ್ರೋದ್ಯಮವು ಪೈಪೋಟಿಯಲ್ಲಿ ಹಿಂದಿಕ್ಕಿದ್ದರಿಂದ ನಂತರ ಬಾಲಿವುಡ್ ಎಂಬ ಹೆಸರಿಗೆ ಹಾಗೂ ಅನೇಕ ಹಾಲಿವುಡ್ ಪ್ರೇರಿತ ಹೆಸರುಗಳ ಪ್ರೇರಣೆಗೆ ಕಾರಣವಾಯಿತು. ೧೯೫೦ ರ ದಶಕದಲ್ಲಿ ಬಂಗಾಳಿ ಚಿತ್ರರಂಗದಲ್ಲಿ ಸಮಾನಾಂತರ ಚಲನಚಿತ್ರಗಳ ಚಳುವಳಿ ಪ್ರಾರಂಭವಾಯಿತು.
ಈ ಸಮಯದಲ್ಲಿ ಸತ್ಯಜಿತ್ ರೇ, ಮೃಣಾಲ್ ಸೇನ್ ಮತ್ತು ಋತ್ವಿಕ್ ಘಾಟಕ್ ಸೇರಿ ಅನೇಕ ಕಲಾವಿದರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆಯನ್ನು ಗಳಿಸಿದ್ದರು. ಮತ್ತು ಇವರ ಹೆಸರುಗಳು ಚಲನಚಿತ್ರ ಇತಿಹಾಸದಲ್ಲಿ ಕೂಡ ದಾಖಲಾಗಿವೆ. ಮುಖ್ಯವಾಗಿ ಬಂಗಾಳಿ ಚಿತ್ರರಂಗದಲ್ಲಿ ಬಾಂಗ್ಲಾದ ವೈಜ್ಞಾನಿಕ ಕಾದಂಬರಿಯ ಮತ್ತು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಚಲನಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತದೆ. ರಿತುಪರ್ಣೋ ಘೋಷ್ ನಿರ್ಮಾಣದ ಮಾಜಿ ವಿಶ್ವ ಸುಂದರಿ ನಟಿ ಐಶ್ವರ್ಯ ರೈ ನಟಿಸಿದ್ದ ಚೋಕರ್ ಬಾಲಿ ಚಿತ್ರವು ರಾಷ್ಟ್ರ ಮಟ್ಟದಲ್ಲಿ ಗಮನವನ್ನು ಸೆಳೆದಿತ್ತು. ೧೯೩೩ ರಲ್ಲಿ ಬಂಗಾಳಿ ಚಿತ್ರರಂಗದಲ್ಲಿ ೫೭ ಚಲನಚಿತ್ರಗಳನ್ನು ನಿರ್ಮಾಣ ಮಾಡಲಾಗಿತ್ತು.
ವಿಶೇಷ ಸೂಚನೆ: ದೊರೆತ ಮಾಹಿತಿಯ ಆಧಾರದ ಮೇಲೆ ಈ ಲೇಖನವನ್ನು ರಚಿಸಲಾಗಿದೆ.