ಬಣ್ಣ ಬದುಕಿನ ಭಾವನೆಗಳನ್ನು ಸೂಚಿಸುತ್ತದೆ, ಬಣ್ಣ ಜೀವನದ ಪ್ರತಿಬಿಂಬ. ಮನಸ್ಸಿನ ಅಂಧಕಾರವನ್ನು ನಿವಾರಿಸುವ ಬೆಳಕಿನ ಹಬ್ಬ ದೀಪಾವಳಿ ಯಾದರೆ, ಆ ಬೆಳಕಿನ ಜೊತೆಗೆ ಭಾವನೆಗಳಿಗೆ ರಂಗು ತುಂಬಿಸೋ ಹಬ್ಬ, ರಂಗಿನ ಹಬ್ಬ “ಹೋಳಿ”.
ಸಂತಸ, ಸಾಮರಸ್ಯ ಹೆಚ್ಚಿಸಿ ಕೆಟ್ಟದ್ದನ್ನು ಸುಟ್ಟು ಹಾಕುವ ಮನೋಕಾಮನೆಯನ್ನು ಪೂರ್ಣವಾಗಿಸೋ ಹಬ್ಬ.ಬಣ್ಣದ ಲೋಕವೆಂದೆ ಕರಿಯಲ್ಪಡುವ ಸಿನಿಮಾ ರಂಗಕ್ಕೂ “ಬಣ್ಣದ” ಹಾಡಿಗೂ ಒಳ್ಳೆ ನೆಂಟಿದೆ. ಹರ್ಷೋದ್ಗಾರ ಹಾಗೂ ಉಲ್ಲಾಸದ ಸಂಗತಿಗಳನ್ನು ವರ್ಣದಿಂದ ವರ್ಣಮಯವಾಗಿ ಬಿಂಬಿಸಿದ್ದಾರೆ
ದೂರದ ಬೆಟ್ಟ ಸಿನಿಮಾದಲ್ಲಿ ಕಾಮಣ್ಣನ ಹಬ್ಬದ ಹಾಡಿನಲ್ಲಿ ಡಾ||ರಾಜ್ಕುಮಾರ್ ಮತ್ತು ಅವ್ರ ಸ್ನೇಹಿತರು ಸೇರಿಕೊಂಡು “ಕಾಮಣ್ಣ ಕಟ್ಟಿಗೆ ಭೀಮಣ್ಣ ಭೇರಣಿ” ಎಂದು ಕೂಗು ಹಾಕುತ್ತಾ ಊರಿನವರೆಲ್ಲರಿಂದ ಕಟ್ಟಿಗೆ ಬೇಡುತ್ತಾ, ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ .
ಕೆಟ್ಟದ್ದನ್ನು ಸುಡು ಎಂಬ ಸಂದೇಶ ಈ ಹಾಡು ಹೇಳುತ್ತೆ.ದೂರದ ಬೆಟ್ಟ ಚಿತ್ರ ಕಪ್ಪು ಬಿಳುಪು(ಬ್ಲಾಕ್ & ವೈಟ್) ಆದರೂ ಈ ಒಂದು ಹಾಡನ್ನು ಮಾತ್ರ ವರ್ಣರಂಜಿತವಾಗಿ ಚಿತ್ರಿಸಿದ್ದಾರೆ ಎಂಬುದು ವಿಶೇಷ.
ಬಂಧನ ಸಿನಿಮಾದಲ್ಲಿ ಇರುವ “ಬಣ್ಣ ನನ್ನ ಒಲವಿನ ಬಣ್ಣ” ಇಂದಿಗೂ ಎಲ್ಲರ ಇಷ್ಟದ “ಎವರ್ ಗ್ರೀನ್ ಸಾಂಗ್”! ವಿಷ್ಣುವರ್ಧನ್ ಅವರು ಸುಹಾಸಿನಿ ಅವರಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಿಸಲು ಸಿದ್ಧವಾದಾಗ ಬರುವ ಆನಂದದ, ವರ್ಣನಾತೀತ ಹಾಡಿದು..
ಹೋಳಿ ಹಬ್ಬದಂದು ಕುಟುಂಬದವರು ಒಟ್ಟಾಗಿ ಸೇರಿ,”ಹೋಳಿ ಹೋಳಿ” ಅಂತ ಸಂಭ್ರಮಿಸುತ್ತ ಖುಷಿಯ ಕ್ಷಣಗಳಿಗೆ ರಂಗನ್ನು ಚೆಲ್ಲುವ ಹಾಡುಗಳು ಶಿವರಾಜಕುಮಾರ್ ,ಉಪೇಂದ್ರ ಅಭಿನಯದ “ಪ್ರೀತ್ಸೆ” ಸಿನಿಮಾದಲ್ಲಿ ಇದೆ
ಇನ್ನು ಕ್ರೇಜಿ ಸ್ಟಾರ್ ನಿರ್ದೇಶಿಸಿರುವ ಎಲ್ಲಾ ಹಾಡುಗಳು ಅತೀ ವರ್ಣಮಯವಾಗಿರುತ್ತೆ, ಹೂವು ಬಣ್ಣ ಇಲ್ಲದ ಹಾಡನ್ನು ಹುಡುಕಬೇಕು ಅನ್ನೋಷ್ಟರ ಮಟ್ಟಿಗೆ ಕಲರ್ಫುಲ್ ಆಗಿ ಹಾಡನ್ನು ಚಿ ತ್ರೀಕರಿಸಿರುತ್ತಾರೆ . ಕನುಸುಗಾರನಿಗೆ ದಿನವೂ ಹೊಳಿಯೆ.
ದೇವರಾಜ ಅಭಿನಯದ “ಹುಲಿಯ” ಸಿನಿಮಾದಲ್ಲಿ ಬಣ್ಣ ಬಣ್ಣದ ಅರಮನೆ ಅನ್ನೋ ಹಾಡಲ್ಲಿ ಬಹಳ ಭಾವುಕರಾಗಿ ಕಾಣಿಸಿದ್ದಾರೆ. ಕನಸಿನ ಅರಮನೆಯ ತುಂಬಾ ಹಲವು ಬಣ್ಣ ಅಂತ ಮಿಶ್ರ ಭಾವಗಳನ್ನು ವ್ಯಕ್ತಪಡಿಸುವ ಹಾಡಿದು.
ಊರಿನ ಜನರೊಡನೆ ಸೇರಿ ಬಣ್ಣಗಳಲ್ಲಿ ಮಿಂದು ಅಂಬರೀಶ್ ಮತ್ತು ದರ್ಶನ್ ಒಟ್ಟಾಗಿ “ಅಣ್ಣಾವ್ರು” ಸಿನಿಮಾದಲ್ಲಿ ಕುಣಿದು ಕುಪ್ಪಳಿಸಿದ್ದಾರೆ.