ಬದ್ರೀನಾಥ್ ಕೀ ದುಲ್ಹನಿಯಾ

ಬಾಲಿವುಡ್ ಸಿನೆಮಾಗಳು ಎಂದರೆ ತಟ್ಟನೆ ಮನಸ್ಸಿಗೆ ಹೊಳೆಯುವುದು ಪ್ರೀತಿ-ಪ್ರೇಮ ಮಾತ್ರ. ಅಂತಹಾ ಸಿನೆಮಾಗಳು ಕೇವಲ ಸಮಯ ಕಳೆಯಲು ಮಾಡಿರುವಂಥವೇ ಹೊರತೂ ಅವುಗಳಿಂದ ಕಲಿಯುವಂಥದ್ದೇನಿಲ್ಲ. ಈ ಸಿನೆಮಾ ಕೂಡ ಅಂಥದ್ದೇ ಕ್ಯಾಟೆಗರಿ ಅಂತ ಬಹಳ ವರ್ಷಗಳ‌ ಕಾಲ ಇದನ್ನು ನೋಡಲು ಹೋಗಿರಲಿಲ್ಲ. ಆದರೆ ನೋಡಿದ ನಂತರ ನಾನೇನು ಕಳೆದುಕೊಂಡಿದ್ದೆ ಅಂತ ಅರಿವಾಯ್ತು.



ನೇರವಾಗಿ ಹೆಣ್ಣುಮಕ್ಕಳ ಮದುವೆಯ ಸಂಕಷ್ಟ ಮತ್ತು ವರದಕ್ಷಿಣೆಯ ಕುರಿತಾಗಿ ಇದರಲ್ಲಿ ಚಿತ್ರಿಸಲಾಗಿದೆ. ಒಬ್ಬ ಮಿಡಲ್ ಕ್ಲಾಸ್ ತಂದೆ, ತಾನು ಜೀವಮಾನವಿಡೀ ದುಡಿದ ದುಡ್ಡನ್ನು ತನ್ನ ಹೆಣ್ಣುಮಕ್ಕಳ ಒಂದು ದಿನದ ಮದುವೆಗೆ ಉಡಾಯಿಸಬೇಕಾಗಿರುತ್ತದೆ. ಆ ಮದುವೆಗಾಗಿ ಆತ ಪಡುವ ಪಾಡು, ಹೆಚ್ಚು ಹೆಣ್ಣುಮಕ್ಕಳು ಇದ್ದಷ್ಟೂ ಬೆಳೆಯುವ ಆತನ ಖರ್ಚು ಇವೆಲ್ಲವನ್ನೂ ಸಿನೆಮಾದಲ್ಲಿ ಮನವರಿಕೆ ಮಾಡಲಾಗಿದೆ.



ಕೇವಲ ಮಿಡಲ್ ಕ್ಲಾಸಿನವರಿಗಷ್ಟೇ ಅರ್ಥವಾಗಬಹುದಾದ ಸಂಗತಿಗಳಿವು. ಹಾಗಾಗಿ ಶ್ರೀಮಂತ ಮನೆತನದಿಂದ ಬಂದಂತಹ ನಾಯಕನಿಗೆ ಸೂಕ್ಷ್ಮತೆಯಿಲ್ಲ. ತಾನು ಮೆಚ್ಚುವ ಹುಡುಗಿ ತನ್ನನ್ನು ಮದುವೆಯಾದರೆ ಅದು “ಆಕೆಯ ಅದೃಷ್ಟ” ಅಂತ ನಂಬಿರುವವನು. ಹಾಗಾಗಿ ನಾಯಕಿ ಆತನನ್ನು ಮದುವೆಯಾಗಲು ತಿರಸ್ಕರಿಸಿದಾಗ ಅವನಿಗೆ ನಂಬಲೇ ಆಗುವುದಿಲ್ಲ.



ನಾಯಕನ ಮನೆತನ ಬಹಳ ಶಿಸ್ತಿನ ಫ್ಯಾಮಿಲಿ.

ಅದರಲ್ಲಿ ಸೇರುವ ಹೆಣ್ಣುಮಕ್ಕಳು ಆ ಮನೆತನದ ಹಿರಿಯರ ಮಾತು ಮೀರುವಂತಿಲ್ಲ. ಎಷ್ಟೇ ಓದಿದ್ದರೂ, ಟಾಪ್ ಬಂದಿದ್ದರೂ ಹೊರಗೆ ಕೆಲಸ ಮಾಡುವಂತಿಲ್ಲ. ಹಾಗಾಗಿ ನಾಯಕನ ಅತ್ತಿಗೆ ಉನ್ನತ ಶಿಕ್ಷಣ ಪಡೆದೂ ಸಹ ಮನೆಯಲ್ಲಿಯೇ ಇರುತ್ತಾಳೆ. ಇದೆಲ್ಲವನ್ನೂ ನೋಡುವ ನಾಯಕಿಗೆ ತಾನು ಈ ಮನೆಗೆ ಸೇರಿದರೆ ತಾನೂ ಸಹ ತನ್ನ ಆಸೆ-ಕನಸುಗಳನ್ನು ಮರೆತು ಬದುಕಬೇಕಾಗುತ್ತದೆ ಅಂತ ಅರಿವಾಗುತ್ತದೆ.

ನಾಯಕಿಗೆ ಇರುವ ಕನಸು ಒಂದೇ….

ತಾನು ಏರ್ ಹೋಸ್ಟೆಸ್ ಆಗಬೇಕು. ಆ ಮೂಲಕ ಸ್ವಾವಲಂಬಿಯಾಗಬೇಕು. ತಾನೂ ದುಡಿದರೆ ತನ್ನ ತಂದೆಗೆ ಸಹಾಯವಾಗುತ್ತದೆ ಅಂತ. ಆದರೆ ಅವಳ ತಂದೆ-ತಾಯಿಗೆ ಬೇರೆಯದೇ ಆಸೆ. ಅವರಿಗೆ ಒಳ್ಳೆಯ ಸಂಬಂಧ ಬಂದಿರುವಾಗ ಅವಳನ್ನು ಮದುವೆ ಮಾಡಿ ಕಳಿಸಿಬಿಡೋಣ ಎನ್ನುವ ತವಕ. ಇವಳಿಗೆ ಮದುವೆಗಿಂತಲೂ ತನ್ನ ಗುರಿ ಪೂರ್ಣವಾಗುವುದೇ ಮುಖ್ಯ. ಅಲ್ಲದೇ ತನ್ನಕ್ಕನಿಗೆ ಇನ್ನೂ ಮದುವೆಯಾಗಿಲ್ಲದೇ ಇರುವಾಗ ತಾನು‌ ಮದುವೆಯಾಗುವುದು ಸರಿ ಇರೋಲ್ಲ ಅಂತನ್ನಿಸುತ್ತದೆ.

ಆಗ ಚೆನ್ನಾಗಿ ಯೋಚಿಸಿ ಒಂದು ನಿರ್ಧಾರಕ್ಕೆ ಬರುತ್ತಾಳೆ.

ಮದುವೆಯಾಗದ ತನ್ನಕ್ಕನಿಗೆ ವರನನ್ನು ಹುಡುಕಿದರೆ ತಾನು ನಾಯಕನನ್ನು ಮದುವೆಯಾಗುತ್ತೇನೆ ಎಂದು ಹೇಳುತ್ತಾಳೆ. ನಾಯಕ ಕಷ್ಟಪಟ್ಟು ಆಕೆಯ ಅಕ್ಕನಿಗೆ ಗಂಡು ಹುಡುಕುತ್ತಾನೆ. ಜೊತೆಗೆ ಆ ಮದುವೆಗೆ ಬೇಕಾಗಿರುವ ವರದಕ್ಷಿಣೆಯ ಅರ್ಧ ಭಾಗ ತಾನೇ ಕೊಡುತ್ತಾನೆ. ಒಟ್ಟಿನಲ್ಲಿ ಅವನಿಗೆ ಅಕ್ಕನ ಮದುವೆಯಾದರೆ ಸಾಕಾಗಿರುತ್ತದೆ. ಏಕೆಂದರೆ ನಂತರ ನಾಯಕಿ ಇವನನ್ನು ಮದುವೆಯಾಗುತ್ತಾಳಲ್ಲ. ಎಲ್ಲವೂ ಕೂಡಿ ಬಂದು ಒಂದೇ ದಿನ ಅಕ್ಕ-ತಂಗಿ ಇಬ್ಬರ ಮದುವೆಯೂ ಫಿಕ್ಸ್ ಆಗಿಬಿಡುತ್ತದೆ.

ಆದರೆ ಮದುವೆಯ ದಿನವೇ ನಾಯಕಿ ನಾಪತ್ತೆಯಾಗುತ್ತಾಳೆ……‌ !!!

ಮದುವೆಯಾಗುವುದು ಆಕೆಯ ಕನಸಾಗಿರುವುದಿಲ್ಲ. ಆಕೆಗೆ ತನ್ನಕ್ಕನ ಮದುವೆಯಾಗಬೇಕಿರುತ್ತದೆ. ಹಾಗಾಗಿ ತನ್ನಕ್ಕನ ಮದುವೆಗಾಗಿ ನಾಯಕನ ಮಾತಿಗೆ ಒಪ್ಪಿದಂತೆ ಮಾಡಿರುತ್ತಾಳೆ. ಆದರೆ ಈಗ ಈ ಮದುವೆ ತನ್ನ ಕನಸಿಗೆ ಅಡ್ಡಿಯಾಗುವುದರಿಂದ, ಆ ಮದುವೆಯಿಂದ ತಪ್ಪಿಸಿಕೊಂಡು ತನ್ನ ಕನಸಾದ ಏರ್ ಹೋಸ್ಟೆಸ್ ಆಗಲು ಯಾರಿಗೂ ಹೇಳದೇ ಕೇಳದೇ ಹೊರಟು ಹೋಗಿರುತ್ತಾಳೆ.

ಮದುವೆ ಮಂಟಪದಿಂದ ವಧು ಕಾಣೆಯಾಗಿರುವುದರಿಂದ ನಾಯಕ ಮತ್ತು ಆತನ ಕುಟುಂಬ ಬಹಳ ಅವಮಾನಗಳನ್ನು ಅನುಭವಿಸಬೇಕಾಗಿ ಬರುತ್ತದೆ.‌ ನಾಯಕನಿಗಂತೂ ಆಕೆಯನ್ನು ಸಿಗಿದು ಹಾಕಿ ಬಿಡುವಷ್ಟು ಕೋಪವಿರುತ್ತದೆ!!! ಒಂದು ದಿನ ಆಕೆ ಎಲ್ಲಿದ್ದಾಳೆ ಅಂತ ನಾಯಕನಿಗೆ ಗೊತ್ತಾಗುತ್ತದೆ. ಅಲ್ಲಿ್ಗೆಗೆ ಹೊರಡುತ್ತಾನೆ. ಮುಂದೇನಾಗುತ್ತದೆ…..? ಅದಕ್ಕಾಗಿ ಸಿನೆಮಾ ನೋಡಬೇಕು.

ಕೇವಲ ಪ್ರೀತಿ-ಪ್ರೇಮಕ್ಕಾಗಿ ಓಡಿ ಹೋಗುವ ಹೆಣ್ಣುಮಕ್ಕಳು ಇದ್ದಾರೆ ಎಂದು ತಿಳಿದುಕೊಂಡಿದ್ದ ನಮಗೆ, ತಮ್ಮ ಜೀವನದ ಕನಸನ್ನು ಪೂರ್ಣಗೊಳಿಸಿಕೊಳ್ಳಲು ಸಹ ಓಡಿ ಹೋಗುವ ಹೆಣ್ಮಕ್ಕಳು ಇರುತ್ತಾರೆ ಅಂತ ತೋರಿಸಿದ್ದಾರೆ ನಿರ್ದೇಶಕರು. ಜೊತೆಗೆ ಯಾವುದೇ ರೀತಿಯ ಪ್ರತಿಭಟನೆ ಅಥವಾ ವಿರೋಧವಿಲ್ಲದೇ “ವರದಕ್ಷಿಣೆ” ಎಂಬ ಗುಮ್ಮವನ್ನು ತಣ್ಣಗೆ ವಿವರಿಸಿದ್ದಾರೆ.‌ ಬದಲಾಗುತ್ತೇವೆಯೋ ಅಥವಾ ಈ ವ್ಯವಸ್ಥೆಯನ್ನೇ ಮುಂದುವರೆಸಿಕೊಂಡು ಹೋಗುತ್ತೇವೆಯೋ ನಮಗೆ ಬಿಟ್ಟಿದ್ದು.

ಹೆಣ್ಣಿಗೆ ವೈವಾಹಿಕ ಜೀವನ ದೊಡ್ಡದೋ…. ಅಥವಾ ತನ್ನ ಸಾಧನೆ ಮುಖ್ಯವೋ….? ಇದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ….

*********
ಕೆ.ಎ.ಸೌಮ್ಯ

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply