ಭಾರತದ ಚಿತ್ರರಂಗಕ್ಕೆ ಬಯೋಪಿಕ್ ಚಿತ್ರಗಳ ಅನಿವಾರ್ಯತೆಯಿದೆಯೇ?
ಈ ಲೇಖನವನ್ನು ಆರಂಭಿಸುವ ಮೊದಲು ನನ್ನಲ್ಲಿ ಸೃಷ್ಟಿಯಾದ ಪ್ರಶ್ನೆ. ಆದರೆ ಈ ನನ್ನ ಈ ಪ್ರಶ್ನೆಗೆ ಉತ್ತರಿಸುವವರು ಯಾರು? ಎಷ್ಟು ಪ್ರಯತ್ನಿಸಿದರೂ ನನಗೆ ಸಮರ್ಪಕವಾದ ಉತ್ತರ ಸಿಗಲಿಲ್ಲ. ಆದರೂ ಉತ್ತರ ಕಂಡು ಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಈ ವಿಷಯದ ಕುರಿತು ತನಿಖೆ ಆರಂಭಿಸಿದಾಗ ನನ್ನ ಪಯಣದ ಆರಂಭದಲ್ಲಿ ನನಗೆ ಮೊದಲು ಎದುರಾದ ಪ್ರಶ್ನೆ ಯಾವುದು? ಗೊತ್ತಾ? ನಾನು ಯಾವುದೇ ಮಾರ್ಗದಲ್ಲಿ ಪ್ರಯಾಣಿಸಿದರೂ ನನ್ನ ಎದುರಿಗೆ ಕಾಣುತ್ತಿದ್ದು ಒಂದೇ, ಅದುವೇ ಪ್ರಶ್ನಾರ್ಥಕ ಚಿಹ್ನೆ (?). ಯಾವ ಮಾರ್ಗದಲ್ಲಿ ಪ್ರಯಾಣಿಸಬೇಕೆಂಬುದೇ ತಿಳಿಯಲಿಲ್ಲ. ತಲೆಯಲ್ಲಿ ಸಿನಿಮಾ ರೀಲಿನ ಸುತ್ತುತ್ತಿರುವ ಪ್ರಶ್ನೆಗಳು ಒಂದು ಕಡೆಯಾದರೆ ಇನ್ನೊಂದು ಕಡೆ ಎಲ್ಲಿ ಈ ಲೇಖನ ರಚನೆಯಲ್ಲಿ ಸೋಲುತ್ತೇನೋ ಎಂಬ ಆತಂಕ, ಅಲ್ಲದೆ ಜೊತೆಯಲ್ಲಿ ನನ್ನ ವೃತ್ತಿಯನ್ನು ನಿರ್ವಹಿಸಲೇಬೇಕಾದ ಒತ್ತಡ, ಅನಿರೀಕ್ಷಿತ ಸಮಯದಲ್ಲಿ ಕರೆದಾಗ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವುದು, ಹೀಗೆ ಹಲವು ಒತ್ತಡಗಳ ನಡುವೆ ಸಮಯದ ಅಭಾವದಲ್ಲಿಯೇ ಲೇಖನ ರಚಿಸುವ ಪರಿಸ್ಥಿತಿ ಎದುರಾಯಿತು. ನನ್ನ ಬರಹದ ಪಯಣದಲ್ಲಿ ಎದುರಾದ ಸವಾಲುಗಳನ್ನು ಎದುರಿಸಿ ಮಾಹಿತಿಯನ್ನು ಸಂಗ್ರಹಿಸಲು ಹಲವು ದಿನಗಳು ಬೇಕಾಯಿತು. ಆದರೂ ಒತ್ತಡದ ಪರಿಸ್ಥಿತಿಯಲ್ಲಿಯೂ ನನ್ನ ಮುಂದಿನ ಪ್ರಯಾಣಕ್ಕೆ ದಾರಿ ತೋರಿಸಿಕೊಟ್ಟ ಆ ನನ್ನ ಆರಾಧ್ಯ ದೈವ ಶ್ರೀ ಕೃಷ್ಣ ಪರಮಾತ್ಮನನ್ನು ಹೇಗೆ ಮರೆಯಲು ಸಾಧ್ಯ? ನೀವೇ ಹೇಳಿ.
ಬಯೋಪಿಕ್ ಅನಿವಾರ್ಯತೆಯಿದೆಯೋ ಇಲ್ಲವೋ ತಿಳಿದುಕೊಳ್ಳುವ ಮೊದಲು ಬಯೋಪಿಕ್ ಎಂದರೇನು? ಎಂದು ತಿಳಿದುಕೊಳ್ಳುವುದು ಅಷ್ಟೇ ಮುಖ್ಯವಾಗಿದೆ. ಆದರೆ ಈ ಪ್ರಶ್ನೆಗೆ ಇದುವರೆಗೂ ಸರಿಯಾದ ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಆದರೂ ಸತತ ಶೋಧನೆಯ ಬಳಿಕ ಒಂದು ಉತ್ತರ ದೊರಕಿತು. ಬಯೋಪಿಕ್ ಎಂದರೆ ಬಯೋಗ್ರೊಫಿಯ ಸರಳ ರೂಪವನ್ನು ಬಯೋಟಿಕ್ ಎನ್ನುವರು. ಈ ಬಯೋಪಿಕ್ ಚಿತ್ರಗಳ ಆರಂಭ ಇತ್ತೀಚಿನದಲ್ಲ. ಸುಮಾರು ನೂರು ವರ್ಷಗಳ ಹಿಂದೆಯೇ ಈ ಬಯೋಪಿಕ್ ಚಿತ್ರಗಳ ಆರಂಭಕ್ಕೆ ಚಾಲನೆ ನೀಡಲಾಯಿತು. ಭಾರತ ಚಿತ್ರರಂಗದ ಮೊದಲ ಬಯೋಪಿಕ್ ಚಿತ್ರ ಯಾವುದು? ಭಾರತ ಚಿತ್ರರಂಗದ ಪಿತಾಮಹ ಎಂದು ಗುರುತಿಸಲ್ಪಡುವ ದಾದಾಸಾಹೇಬ್ ಫಾಲ್ಕೆ ೧೯೧೩ ರಲ್ಲಿ ನಿರ್ಮಿಸಿ ನಿರ್ದೇಶಿಸಿದ ಮರಾಠಿ ಮೂಕಿ ಚಿತ್ರ ರಾಜಾ ಹರಿಶ್ಚಂದ್ರ ಭಾರತ ಚಿತ್ರರಂಗದ ಮೊದಲ ಬಯೋಪಿಕ್ ಚಿತ್ರವಾಗಿದೆ. ನನ್ನ ಆಲೋಚನೆ ಪ್ರಕಾರ ಭಾರತದ ಚಿತ್ರರಂಗಕ್ಕೆ ಬಯೋಪಿಕ್ ಚಿತ್ರಗಳ ಅನಿವಾರ್ಯತೆ ಇದೆ. ಇದಕ್ಕೆ ನನ್ನ ಬಳಿ ಉತ್ತರವಿದೆ. ಸಾಮಾಜಿಕವಾಗಿ ಬಯೋಪಿಕ್ ಗಳು ಮಾಹಿತಿ, ಮನೋರಂಜನೆ ನೀಡುವುದರ ಜೊತೆಗೆ ಇತಿಹಾಸದ ಕುರಿತು ಬೆಳಕು ಚೆಲ್ಲುತ್ತವೆ. ನಮ್ಮ ಸಮಾಜದಲ್ಲಿನ ಅಪರಿಚಿತ ವ್ಯಕ್ತಿಗಳನ್ನು ನಮ್ಮ ಅನುಭವದ ಆಚೆಗೆ ಉಳಿದ ಸಂಗತಿಗಳನ್ನು ಪರಿಚಯ ಮಾಡಿಸಿ ನಮ್ಮ ತಿಳುವಳಿಕೆಯನ್ನು ಇನ್ನೂ ಹೆಚ್ಚಿಸುತ್ತವೆ. ಇನ್ನು ಕೆಲವು ಬಯೋಪಿಕ್ ಚಿತ್ರಗಳು ಹಲವು ಕಲಾವಿದರ ಭವಿಷ್ಯವನ್ನು ಬದಲಿಸಿವೆ.
ಬಾಲಿವುಡ್ ಚಿತ್ರರಂಗದಲ್ಲಿ ಕೆಲವು ವರ್ಷಗಳಿಂದ ತನ್ನ ಚಿತ್ರಗಳ ಸತತ ಸೋಲಿನಿಂದ ಕಂಗೆಟ್ಟಿದ್ದ ನಟ ರಣಬೀರ್ ಕಪೂರ್ ಗೆ ನಟ ಸಂಜಯ್ ದತ್ ಜೀವನಾಧಾರಿತ ಬಯೋಪಿಕ್ ಚಿತ್ರ ಸಂಜು ದೊಡ್ಡ ಮಟ್ಟದ ಗೆಲುವು ಮುಂದೆ ಚಿತ್ರಗಳಲ್ಲಿ ಅವಕಾಶ ಸಿಗಲು ಕಾರಣವಾಯಿತು. ಇದಕ್ಕೂ ಮೊದಲು ೧೯೬೦ ರಲ್ಲಿ ಕನ್ನಡ ಚಿತ್ರಗಳ ಸಂಖ್ಯೆ ಕುಂಠಿತಗೊಂಡ ಸಮಯದಲ್ಲಿ ಕನ್ನಡ ಚಿತ್ರರಂಗದ ಉಳುವಿಗಾಗಿ ನಮ್ಮ ಕನ್ನಡಿಗರ ಕಣ್ಮಣಿ ಅಭಿಮಾನಿಗಳ ಆರಾಧ್ಯ ದೈವ ಡಾ.ರಾಜಕುಮಾರ ತಮ್ಮ ಸ್ನೇಹಿತರೊಂದಿಗೆ ಸೇರಿ ರಣಧೀರ ಕಂಠೀರವ ಎನ್ನುವ ಪೌರಾಣಿಕ ಬಯೋಪಿಕ್ ಚಿತ್ರವನ್ನು ನಿರ್ಮಿಸಿದರು. ತೆರೆ ಕಂಡ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನು ನಿರ್ಮಿಸಿತಲ್ಲದೆ ನಂತರ ಬಹಳಷ್ಟು ಕನ್ನಡ ಚಿತ್ರಗಳು ಬರುವುದಕ್ಕೆ ಕಾರಣವಾಯಿತು.
ಟಾಲಿವುಡ್ ನಲ್ಲಿ ಕಳೆದ ವರ್ಷ ತೆರೆ ಕಂಡ ತೆಲುಗು ಬಯೋಪಿಕ್ ಚಿತ್ರ ಸೈರಾ ನರಸಿಂಹ ರೆಡ್ಡಿ ಮೆಗಾಸ್ಟಾರ್ ಚಿರಂಜೀವಿಯ ಇಮೇಜನ್ನು ಇನ್ನೂ ಎತ್ತರಕ್ಕೆ ಬೆಳೆಸಿತು. ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾದ ನಟಿ ಸಾವಿತ್ರಿ ಜೀವನಾಧಾರಿತ ಬಯೋಪಿಕ್ ಚಿತ್ರ ಮಹಾನಟಿ ಈ ಚಿತ್ರದಲ್ಲಿ ನಟಿಸಿದ ನಟಿ ಕೀರ್ತಿ ಸುರೇಶ್ ಜನಪ್ರಿಯತೆ ನಿರೀಕ್ಷೆಗೂ ಮೀರಿ ಬೆಳೆಯಿತು. ಬಾಲಿವುಡ್ ಚಿತ್ರರಂಗದಲ್ಲಿ ಬಾಲಿವುಡ್ ಕಿಲಾಡಿ ಎಂದು ಹೆಸರು ಗಳಿಸಿರುವ ನಟ ಅಕ್ಷಯ್ ಕುಮಾರ್ ಸ್ಟಂಟ್ ಚಿತ್ರಗಳ ರಾಜನಾದರೂ ಪ್ಯಾಡ್ ಮನ್ ಎನ್ನುವ ಬಯೋಪಿಕ್ ಚಿತ್ರದಲ್ಲಿ ನಟಿಸುವ ಮೂಲಕ ತಾನೊಬ್ಬ ಉತ್ತಮ ಕಲಾವಿದ ಎಂದು ಸಾಬೀತು ಮಾಡಿದರು. ನಿರ್ಮಾಪಕರಿಗೆ ಹಣವನ್ನು, ಕಲಾವಿದರಿಗೆ ಪ್ರಶಸ್ತಿಗಳನ್ನು ತಂದು ಕೊಡುವ ಬಯೋಪಿಕ್ ಚಿತ್ರಗಳ ನಿರ್ಮಾಣ ಸುಲಭದ ಕೆಲಸವೇನಲ್ಲ.
ಈ ಬಯೋಪಿಕ್ ಚಿತ್ರಗಳು ಇಂದಿನ ಕ್ರಿಯಾಶೀಲ ನಿರ್ದೇಶಕರಿಗೆ, ಬರಹಗಾರರಿಗೆ ಸವಾಲಾಗಿ ಪರಿಣಮಿಸಿವೆ. ಒಬ್ಬ ಬದುಕಿರುವ ಅಥವಾ ಬದುಕಿದ್ದ ವ್ಯಕ್ತಿಯೊಬ್ಬನ ಚರಿತ್ರೆಯನ್ನು ಎಲ್ಲ ಕಡೆಯಿಂದಲೂ ಶೋಧಿಸಿ ಕಥೆ ರಚಿಸುವುದು ಸುಲಭದ ಕೆಲಸವಲ್ಲ. ಆದ್ದರಿಂದ ಇಂತಹ ಕಥೆಗಳ ರಚನೆಗೆ ಧೀರ್ಘವಾದ ಅಧ್ಯಯನ ಮತ್ತು ವಿಶ್ಲೇಷಣೆ ಮಾಡಬೇಕಾಗುತ್ತದೆ. ಸಮರ್ಥ ನಿರ್ದೇಶಕರು ಮಾತ್ರ ಬರುವ ಅಡ್ಡಿ ಆತಂಕಗಳನ್ನು ಎದುರಿಸಿ ಚಿತ್ರ ನಿರ್ಮಿಸಿ ಗೆದ್ದು ಚರಿತ್ರೆಯನ್ನು ನಿರ್ಮಿಸುತ್ತಾರೆ. ಹಾಗಂತ ಎಲ್ಲ ಬಯೋಪಿಕ್ ಚಿತ್ರಗಳು ಯಶಸ್ವಿಯಾಗುವುದಿಲ್ಲ.
ಕೆಲವು ವರ್ಷಗಳ ಹಿಂದೆ ನಟಿ ಕಲ್ಪನಾ ಜೀವನಾಧಾರಿತ ಬಯೋಪಿಕ್ ಚಿತ್ರ ನಟಿ ಪೂಜಾ ಗಾಂಧಿ ಅಭಿನಯದಲ್ಲಿ ಮೂಡಿ ಬಂದ ಅಭಿನೇತ್ರಿ ಚಿತ್ರ ತೆರೆಗೆ ಬಂದ ನಂತರ ಎಲ್ಲರ ನಿರೀಕ್ಷೆಯನ್ನು ಹುಸಿ ಮಾಡಿ ಹೀನಾಯ ಸೋಲು ಕಂಡಿತು. ಟಾಲಿವುಡ್ ನಲ್ಲಿ ಕಳೆದ ವರ್ಷ ತೆರೆ ಕಂಡ ನಟ ಎನ್.ಟಿ.ಆರ್ ಜೀವನಾಧಾರಿತಬಯೋಪಿಕ್ ತೆಲುಗು ಚಿತ್ರ ಎನ್.ಟಿ.ಆರ್ ಕಥಾನಾಯಕುಡು ಮತ್ತು ಎನ್.ಟಿ.ಆರ್ ಮಹಾನಾಯಕುಡು ಬಿಡುಗಡೆಗೆ ಮೊದಲು ತೀವ್ರ ನಿರೀಕ್ಷೆಯನ್ನು ಮೂಡಿಸಿದ ಚಿತ್ರಗಳು ಬಿಡುಗಡೆಯ ನಂತರ ಹೀನಾಯ ಸೋಲನ್ನು ಅನುಭವಿಸಿತು. ಅದೇ ಸಮಯದಲ್ಲಿ ತೆರೆ ಕಂಡ ರಾಮಗೋಪಾಲ್ ವರ್ಮಾ ನಿರ್ದೇಶನದಲ್ಲಿ ಮೂಡಿ ಬಂದ ಮತ್ತೊಂದು ಎನ್.ಟಿ.ಆರ್. ಬಯೋಪಿಕ್ ಚಿತ್ರ ಲಕ್ಷ್ಮೀಸ್ ಎನ್.ಟಿ.ಆರ್. ಬಿಡುಗಡೆಯಾದ ದಿನದಿಂದ ವಿವಾದ ಸೃಷ್ಟಿಸಿತೆ ವಿನಃ ಗೆಲುವು ಪಡೆಯಲಿಲ್ಲ.
ಬಾಲಿವುಡ್ ನಲ್ಲಿ ೨೦೧೮ ರ ಆರಂಭದಲ್ಲಿ ತೆರೆ ಕಂಡ ನಟ ಶಾಹಿದ್ ಕಪೂರ್ ಮತ್ತು ನಟಿ ದೀಪಿಕಾ ಪಡುಕೋಣೆ ಅಭಿನಯದಲ್ಲಿ ಮೂಡಿ ಬಂದ ಹಿಂದಿ ಬಯೋಪಿಕ್ ಚಿತ್ರ ಪದ್ಮಾವತ್ ಬಿಡುಗಡೆಯ ದಿನದಿಂದಲೇ ವಿವಾದವನ್ನು ಎಬ್ಬಿಸಿತ್ತು. ಈ ಚಿತ್ರದಲ್ಲಿ ಇತಿಹಾಸವನ್ನು ತಿರುಚಿದ್ದು ರಜಪೂತ ಸಮುದಾಯವನ್ನು ಕೀಳಾಗಿ ತೋರಿಸಿದ್ದು ಪ್ರತಿಭಟನೆಗೆ ಕೂಡ ಕಾರಣವಾಗಿತ್ತು. ಹೀಗೆ ಅನಿರೀಕ್ಷಿತವಾಗಿ ವಿವಾದಗಳು, ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿರುವುದರಿಂದ ಜೀವನಾಧಾರಿತ ಬಯೋಪಿಕ್ ಚಿತ್ರಗಳನ್ನು ನಿರ್ಮಿಸುವ ಸಮಯದಲ್ಲಿ ಎಚ್ಚರದಿಂದಿರುವುದು ಆದಷ್ಟು ಒಳ್ಳೆಯದು ಕೂಡ ಆಗಿದೆ.