ಭಾರತ ಚಿತ್ರರಂಗ ಕಂಡ ಮತ್ತೋರ್ವ ಹಿರಿಯ ಪ್ರತಿಭಾವಂತ ಕಲಾವಿದರಾದ ಇವರ ಬಗ್ಗೆ ತಿಳಿಯದವರು ಯಾರಾದರು ಇದ್ದಾರೆಯೇ?
ಸುಮಾರು ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲ ಚಿತ್ರ ರಂಗದಲ್ಲಿರುವ ಇವರು ಇಂದಿಗೂ ಸಕ್ರೀಯವಾಗಿದ್ದಾರೆ. ಐದು ಭಾಷೆಗಳಿಗಿಂತಲೂ ಹೆಚ್ಚು ಭಾಷೆಯ ಸುಮಾರು ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ತಮ್ಮ ಇಳಿವಯಸ್ಸಿನಲ್ಲಿ ಇಂದಿನ ಯುವಕರು ನಾಚುವಂತಹ ಮೈಕಟ್ಟನ್ನು ಹೊಂದಿದ್ದಾರೆ.
ಫೆಬ್ರುವರಿ ೧,೧೯೫೭ ರಂದು ಮಹಾರಾಷ್ಟ್ರ ರಾಜ್ಯದ ಉದ್ಗೀರ್ ಜಿಲ್ಲೆಯ ಲಾಥೋರ್ ನಲ್ಲಿ ಕಾಕುಭೈ ಹರಿಲಾಲ್ ಶ್ರಾಫ್ ಮತ್ತು ರೀನಾ ದಂಪತಿಯ ಮಗನಾಗಿ ಜನಿಸಿದ ಇವರ ಪೂರ್ಣ ಹೆಸರು ಜೈ ಕಿಶನ್ ಕಾಕುಭಾಯ್ ಜಾಕಿ ಶ್ರಾಫ್. ನನಗೆ ಇವರ ಶಿಕ್ಷಣದ ಕುರಿತಾಗಲಿ, ವೈಯಕ್ತಿಕ ಜೀವನದ ಕುರಿತಾಗಿ ಹೆಚ್ಚಿನ ಮಾಹಿತಿ ಲಭ್ಯವಾಗದ ಕಾರಣ ಇಲ್ಲಿ ಬರೆಯಲು ಸಾಧ್ಯವಾಗಿಲ್ಲ.
೧೯೮೨ ರಲ್ಲಿ ಜುವೆಲ್ ಥೀಪ್ ಖ್ಯಾತಿಯ ದೇವಾನಂದ್ ನಟನೆಯ ಸ್ವಾಮಿ ದಾದಾ ಚಿತ್ರದಲ್ಲಿ ಖಳನ ಪಾತ್ರವನ್ನು ನಿರ್ವಹಿಸುವುದರ ಮೂಲಕ ಬಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಿದರು. ಒಂದು ವರ್ಷದ ನಂತರ ೧೯೮೩ ರಲ್ಲಿ ಸುಭಾಷ್ ಘಾಯ್ ನಿರ್ದೇಶನದ ಎವರ್ ಗ್ರೀನ್ ಬ್ಲಾಕ್ ಬಸ್ಟರ್ ಹೀರೋ ಚಿತ್ರದಲ್ಲಿ ಮೊದಲಬಾರಿಗೆ ನಾಯಕನ ಪಾತ್ರವನ್ನು ನಿರ್ವಹಿಸಿದರು.
ಅದೃಷ್ಟವೆಂಬಂತೆ ಮೊದಲ ಚಿತ್ರದಲ್ಲಿಯೇ ಭರ್ಜರಿ ಗೆಲುವು ಪಡೆದ ಇವರಿಗೆ ಅದೃಷ್ಟವು ತಾನಾಗಿಯೇ ಒಲಿದು ಬಂದಿತು. ಇಲ್ಲಿಂದ ಆರಂಭವಾದ ಇವರ ಚಿತ್ರಗಳ ಆಟ ಇಂದಿಗೂ ನಿಂತಿಲ್ಲ. ನಂತರ ಬಂದ ತೇರೇ ಮೆಹರ್ ಬಾನಿಯಾ ಇದು ಶಂಕರನಾಗ್ ನಟನೆಯ ಕನ್ನಡ ಚಿತ್ರ ತಾಳಿಯ ಭಾಗ್ಯ ರಿಮೇಕ್,ತ್ರೀಮೂರ್ತಿ,ರಾಮಲಖನ್, ಬಾರ್ಡರ್, ಖಳನಾಯಕ್,ರೂಪ್ ಕಿ ರಾಣಿ ಚೋರೋಂ ಕಾ ರಾಜ್,ಅಂದರ್ ಬಾಹರ್, ರಂಗೀಲಾ,ದೂದ್ ಕಾ ಕರ್ಜ್,ಐನಾ,ಕರ್ಮಾ,ಬಂಧನ್,ತ್ರೀದೇವ್, ಒನ್ ಟು ಕಾ ಫೋರ್, ದೇವದಾಸ್, ಭಾರತ್, ಫರೀಂದಾ, ಗರ್ದಿರ , ಇಜ್ಜತ್, ಕುದ್ರತ್ ಕಾ ಕಾನೂನ್, ಶಪಥ್, ಧೂಮ್ ೩, ಅಲ್ಲಾ ರಖಾ,ಸಂಗೀತ್,ಕಿಂಗ್ ಅಂಕಲ್,ಮಿಲನ್,ವೀರ್, ಮುಂಬೈ ಸಗಾ, ಅಗ್ನಿ ಸಾಕ್ಷಿ, ಹೌಸ್ ಫುಲ್ ೩,ಜಂಗ್,ಫರ್ಜ್,ಆನ್-ಮೆನ್ ಎಟ್ ವರ್ಕ್, ಸೇರಿ ಅನೇಕ ಹಿಂದಿ ಚಿತ್ರಗಳಲ್ಲಿ ನಾಯಕನಾಗಿ, ಪೋಷಕ ನಟನಾಗಿ, ಮತ್ತು ಖಳನಾಯಕನ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ತಮಿಳಿನಲ್ಲಿ ಪಟ್ಟನ್ ವರ್ದಿ,ವಿಜಯ್ ಅಭಿನಯದ ಬಿಗಿಲ್ ಚಿತ್ರದಲ್ಲಿ ಕೂಡ ಖಳನಾಯಕನ ಪಾತ್ರದಲ್ಲಿ ಮಿಂಚಿರುವದಲ್ಲದೆ ತೆಲುಗಿನಲ್ಲಿ ಮಂಚು ವಿಷ್ಣುವರ್ಧನ್ ಅಭಿನಯದ ಅಸ್ತ್ರಂ ಚಿತ್ರ ಇದು ಬಾಲಿವುಡ್ ಚಿತ್ರರಂಗದಲ್ಲಿ ಮಿಸ್ಟರ್ ಪರ್ಫೆಕ್ಟ್ ಎಂದು ಗುರ್ತಿಸಿ ಕೊಂಡಿರುವ ನಟ ಅಮೀರ್ ಖಾನ್ ಅಭಿನಯದ ಸರ್ಪ್ ರೋಷ್ ಹಿಂದಿ ಚಿತ್ರದ ರಿಮೇಕ್ ನಲ್ಲಿ ನಟಿಸಿದ್ದಲ್ಲದೆ ಟಾಲಿವುಡ್ ನ ಯಂಗ್ ಟೈಗರ್ ನಟ ಜೂನಿಯರ್ ಎನ್.ಟಿ.ಆರ್.ಅಭಿನಯದ ಶಕ್ತಿ ಚಿತ್ರದಲ್ಲಿ ಮುಖ್ಯ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇವರು ಪ್ರಭಾಸ್ ಅಭಿನಯದ ಸಾಹೋ ಚಿತ್ರದಲ್ಲಿ ಕೂಡ ನಟಿಸಿದ್ದಾರೆ.
ನಟ ಪುನೀತ್ ರಾಜಕುಮಾರ್ ಅಭಿನಯದ ಅಣ್ಣಾಬಾಂಡ್, ಜಮಾನಾ,ಕೇರ್ ಆಫ್ ಫುಟ್ ಪಾತ್ ಸೇರಿ ಅನೇಕ ಕನ್ನಡ ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ತಮ್ಮ ೪೮ ವರ್ಷಗಳ ಚಿತ್ರ ರಂಗದ ಜೀವನದಲ್ಲಿ ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ಪ್ರಸ್ತುತ ೬೩ ವರ್ಷದವರಾಗಿದ್ದು ಇಂದಿನ ತರುಣರು, ಯುವಕರು ನಾಚುವಂತಹ ಮೈಕಟ್ಟನ್ನು ಹೊಂದಿದ್ದು ಇಂದಿಗೂ ಚಿತ್ರರಂಗದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
೧೯೮೭ ರಲ್ಲಿ ಆಯೇಷಾ ಶ್ರಾಫ್ ಎಂಬುವರನ್ನು ವಿವಾಹವಾಗಿರುವ ಇವರಿಗೆ ಇಬ್ಬರು ಮಕ್ಕಳು ಇದ್ದಾರೆ. ಮಗಳ ಹೆಸರು ಕೃಷ್ಣ ಶ್ರಾಫ್ ಮತ್ತು ಮಗನ ಹೆಸರು ಟೈಗರ್ ಶ್ರಾಫ್. ಇವರು ಕೆಲವು ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿದ್ದು ಇಂದಿಗೂ ಬಾಲಿವುಡ್ ಚಿತ್ರ ರಂಗದಲ್ಲಿ ಸಕ್ರೀಯವಾಗಿದ್ದಾರೆ.