ಬಾಲಿವುಡ್ ಚಿತ್ರರಂಗದ ಹಸನ್ಮುಖಿ ನಟ ಎಂದು ಪ್ರಸಿದ್ಧಿ ಪಡೆದಿರುವ ನಟ ಶಶಿಕಪೂರ್ ಮೂರು ದಶಕಕ್ಕೂ ಹೆಚ್ಚು ಕಾಲ ಹಿಂದಿ ಚಿತ್ರ ರಂಗವನ್ನು ಆಳಿದ್ದು ಇವರ ಸಾಧನೆಯನ್ನು ತಿಳಿಸುವ ಉದ್ದೇಶದಿಂದ ಈ ಲೇಖನವನ್ನು ರಚಿಸಿದ್ದೇನೆ.
ಬಾಲಿವುಡ್ ಚಿತ್ರರಂಗದ ಹರಿಕಾರವೆಂದು ಪ್ರಸಿದ್ಧಿ ಪಡೆದಿರುವ ನಟ, ನಿರ್ಮಾಪಕ, ನಿರ್ದೇಶಕ ಪ್ರಥ್ವಿ ರಾಜ್ ಕಪೂರ್ ಮತ್ತು ರಾಮ್ಸರಣಿ ದಂಪತಿಗಳ ಕಿರಿಯ ಮಗನಾಗಿ ಮಾರ್ಚ್ ೧೮,೧೯೩೮ ರಂದು ಕಲ್ಕತ್ತಾದಲ್ಲಿ ಜನಿಸಿದರು. ಇವರ ಮೂಲ ಹೆಸರು ಬಲ್ಜೀರ್ ಪ್ರಥ್ವಿ ರಾಜ್ ಕಪೂರ್. ಬಾಂಬೆಯ ಮಾತುಂಗದಲ್ಲಿರುವ ಡಾನ್ ಬಾಸ್ಕೋ ಹೈ ಸ್ಕೂಲ್ ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿರುವ ಇವರು ೧೯೪೨ ನೇ ಇಸ್ವಿಯಲ್ಲಿ ಕೇವಲ ನಾಲ್ಕು ವರ್ಷದ ಬಾಲಕ ಪೌರಾಣಿಕ ಚಿತ್ರಗಳಲ್ಲಿ ಬಾಲ ಕಲಾವಿದನಾಗಿ ನಟಿಸುವುದರ ಮೂಲಕ ಹಿಂದಿ ಚಿತ್ರ ರಂಗವನ್ನು ಪ್ರವೇಶಿಸಿದರು.
ಇವರ ಸಹೋದರರಾದ ರಾಜ್ ಕಪೂರ್ ಮತ್ತು ಶಮ್ಮಿಕಪೂರ್ ಹಿಂದಿ ಚಿತ್ರ ರಂಗದ ಪ್ರಮುಖ ಕಲಾವಿದರಾಗಿದ್ದರು. ಆರಂಭದ ೬ ವರ್ಷಗಳಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದರೂ ಇವರ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಆದರೆ ೧೯೪೮ ರಲ್ಲಿ ಆಗ್ ಮತ್ತು ೧೯೫೧ ರಲ್ಲಿ ಬಂದ ಆವಾರಾ ಚಿತ್ರಗಳು ಇವರ ಪ್ರತಿಭೆಯನ್ನು ತೋರಿಸಿದವು. ಜುಲೈ, ೧೯೫೮ ರಲ್ಲಿ ಜೆನಿಫರ್ ಕಿಂಡಾಲ್ ಎಂಬ ಇಂಗ್ಲಿಷ್ ನಟಿಯನ್ನು ವಿವಾಹವಾದ ಇವರಿಗೆ ಕರಣ ಕಪೂರ್, ಕುನಾಲ್ ಕಪೂರ್ ಮತ್ತು ಸಂಜನಾ ಕಪೂರ್ ಎಂಬ ಮೂವರು ಮಕ್ಕಳಿದ್ದು ಇವರು ಕೂಡ ಬಾಲಿವುಡ್ ಚಿತ್ರರಂಗದಲ್ಲಿ ಇಂದಿಗೂ ಸಕ್ರೀಯವಾಗಿ ದ್ದಾರೆ.
ಇವರು ಬಾಲಿವುಡ್ ಚಿತ್ರರಂಗದ ಬಿಗ್ ಬಿ. ಎಂದು ಹೆಸರು ಗಳಿಸಿರುವ ನಟ ಅಮಿತಾಬ್ ಬಚ್ಚನ್ ಜೊತೆ ದೀವಾರ್,ದೋ ಔರ್ ದೋ ಪಾಂಚ್ ಮತ್ತು ನಮಕ್ ಹಲಾಲ್ ದಂತಹ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಇವರ ನಟನೆಯಲ್ಲಿ ಮೂಡಿ ಬಂದ ದೀವಾರ್ ಇಂದಿಗೂ ಎವರ್ ಗ್ರೀನ್ ಚಿತ್ರವಾಗಿದೆ. ಆದರೆ ೧೯೬೧ ರಲ್ಲಿ ಯಶ್ ಚೋಪ್ರಾ ನಿರ್ಮಾಣದಲ್ಲಿ ಬಂದ ಧರ್ಮಪುತ್ರ ಚಿತ್ರದಲ್ಲಿ ನಟಿಸುವುದರ ಮೂಲಕ ಹಿಂದಿ ಚಿತ್ರ ರಂಗದಲ್ಲಿ ಉನ್ನತ ಮಟ್ಟದಲ್ಲಿ ನಿರೀಕ್ಷೆಗೂ ಮೀರಿ ಜನಪ್ರಿಯತೆಯನ್ನು ಗಳಿಸಿದ್ದರು. ಅನಂತರ ಹಿಂದಿ ಚಿತ್ರ ರಂಗದಲ್ಲಿ ೧೯೬೫ ರಲ್ಲಿ ಬಂದ ವಕ್ತ್ ಚಿತ್ರದಿಂದ ಆರಂಭವಾದ ಇವರ ಆಟ ಎರಡು ದಶಕಗಳಿಗೂ ಹೆಚ್ಚು ಕಾಲ ನಡೆಯಿತು.
( ಮುಂದುವರೆಯುವುದು )