( ಮುಂದುವರೆದಭಾಗ )
೧೯೬೫ ರಲ್ಲಿ ಬಂದ ವಕ್ತ್ ಚಿತ್ರದಿಂದ ಆರಂಭವಾದ ಇವರ ಆಟ ಎರಡು ದಶಕಗಳಿಗೂ ಹೆಚ್ಚು ಕಾಲ ನಡೆಯಿತು.
೧೯೭೦ ರಿಂದ ೧೯೮೦ ರ ಮಧ್ಯದಲ್ಲಿ ಇವರ ಚಿತ್ರಗಳು ಬಿಡುಗಡೆಗೊಂಡು ಯಶಸ್ಸು ಕಂಡಿದ್ದಲ್ಲದೆ ಈ ಸಂದರ್ಭದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು ಇದುವರೆಗೂ ೧೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮುಖ್ಯವಾಗಿ ಈ ಸಮಯದಲ್ಲಿ ಇವರನ್ನು ಹಸನ್ಮುಖಿ ನಟ ಎಂದು ಗುರುತಿಸಿದ್ದರು. ಅಲ್ಲದೇ ೧೯೬೫ ರಲ್ಲಿ ಹಾಲಿವುಡ್ ಚಿತ್ರ ರಂಗದ ಮರ್ಚೆಂಟ್ ಐವಂ ಪ್ರೊಡಕ್ಷನ್ ನಲ್ಲಿ ಮೂಡಿ ಬಂದ ಶೇಕ್ಸ್ ಪಿಯರ್ ವಲ್ಲಾಹ್,ರೋಸಿಗೇಟ್ ಲೈಯ್ಟ ಎಂಬ ಹಲವು ಅಮೇರಿಕನ್ ಚಿತ್ರಗಳಲ್ಲಿ ನಟಿಸಿರುವ ಖ್ಯಾತಿ ಕೂಡ ಇವರದ್ದಾಗಿದೆ.
ಇವರ ಪತ್ನಿ ನಟಿ ಜೆನಿಫರ್ ಕಿಂಡಾಲ್ ಜೊತೆ ಕೂಡ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಹಿಂದಿ ಚಿತ್ರ ರಂಗವನ್ನು ಪ್ರವೇಶಿಸಿ ೨೮ ವರ್ಷಗಳ ನಂತರ ೧೯೮೦ ರಲ್ಲಿ ವಾಲಾಸ್ ಎಂಬ ಚಿತ್ರವನ್ನು ನಿರ್ಮಿಸುವುದರ ಮೂಲಕ ನಿರ್ಮಾಪಕರಾಗಿ ಬಡ್ತಿ ಪಡೆದರು. ಆದರೆ ಇವರಿಗೆ ಒಂದು ಆಘಾತಕಾರಿ ಸುದ್ದಿ ಕಾದು ಕುಳಿತಿತ್ತು.
ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರ ಪತ್ನಿ ಜೆನಿಫರ್ ಕಿಂಡಾಲ್ ೧೯೮೧ ರಲ್ಲಿ ಕ್ಯಾನ್ಸರ್ ಎಂಬ ಮಾರಣಾಂತಿಕ ಕಾಯಿಲೆಯಿಂದ ಮರಣ ಹೊಂದಿದರು. ಈ ಆಘಾತದಿಂದ ಹೊರ ಬರಲು ಚಿತ್ರರಂಗದಲ್ಲಿ ಬಿಡುವಿಲ್ಲದ ಕೆಲಸದಲ್ಲಿ ತೊಡಗಿಸಿಕೊಂಡು ಜುನೂನ್, ಕಲಿಯುಗ್,ವಿಜೇತ ಮತ್ತು ಉತ್ಸವ್ ಚಿತ್ರಗಳನ್ನು ನಿರ್ಮಿಸಿದ್ದರು. ಈ ಚಿತ್ರಗಳು ಚಿತ್ರ ವಿಮರ್ಶಕರಿಂದ ಮೆಚ್ಚುಗೆಯನ್ನು ಪಡೆದಿದ್ದವು.
೧೯೯೧ ರಲ್ಲಿ ಕಲ್ಪಿತ ಕಥಾ ಹಂದರ ಅಜೂಬಾ ಚಿತ್ರವನ್ನು ನಿರ್ಮಿಸಿದ್ದಲ್ಲದೆ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದರು. ಈ ಚಿತ್ರದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಸೋದರಳಿಯ ರಿಷಿಕಪೂರ್ ಕೂಡ ನಟಿಸಿದ್ದರು. ೧೯೯೮ ರಲ್ಲಿ ಮಹಮದ್ ಅಲಿ ಜಿನ್ನಾ ಅವರ ಜೀವನಾಧಾರಿತ ಜಿನ್ನಾ ಎಂಬ ಹಿಂದಿ ಬಯೋಪಿಕ್ ಚಿತ್ರದಲ್ಲಿ ಮಹಮದ್ ಅಲಿ ಜಿನ್ನಾ ಪಾತ್ರದಲ್ಲಿ ಕೊನೆಯ ಬಾರಿ ನಟಿಸಿ ಚಿತ್ರ ರಂಗದಿಂದ ನಿವೃತ್ತಿಯನ್ನು ಹೊಂದಿದರು. ಅನಂತರ ಯಾವುದೇ ಚಿತ್ರಗಳಲ್ಲಿ ಇವರು ನಟಿಸಲಿಲ್ಲ.
ಸೆಪ್ಟೆಂಬರ್ ೨೦೦೭ ರಲ್ಲಿ ಓಮನ್ ನಾ ಮಸ್ಕತ್ ನಲ್ಲಿ ನಡೆದ ಶಶಿ ಕಪೂರ್ ಫಿಲಂ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡು ಆರೋಗ್ಯಕರವಾಗಿ ಮತ್ತು ಆಕರ್ಷಕವಾಗಿ ಕಾಣಿಸಿಕೊಂಡಿದ್ದರು. ೫೫ ನೇ ಫಿಲಂ ಫೇರ್ ಅವಾರ್ಡ್ ವತಿಯಿಂದ ಶಶಿ ಕಪೂರ್ ಫಿಲಂ ಫೇರ್ ಲೈಫ್ ಟೈಮ್ ಅವಾರ್ಡ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆದರೆ ದೈವ ನಿರ್ಣಯದಂತೆ ಈ ಅಜಾತ ಶತ್ರು ಶಶಿ ಕಪೂರ್ ವಯೋಸಹಜ ಅನಾರೋಗ್ಯದಿಂದ ತಮ್ಮ ೭೯ ನೇ ವಯಸ್ಸಿನಲ್ಲಿ ಡಿಸೆಂಬರ್ ೪,೨೦೧೭ ರಂದು ಮುಂಬೈನಲ್ಲಿ ಸಾವಿಗೆ ಶರಣಾದರು. ಚಿತ್ರರಂಗದ ಹಿರಿಯ ಜ್ಯೋತಿಯೊಂದು ಆರಿದಾಗ ಬಾಲಿವುಡ್ ಚಿತ್ರರಂಗ ಶೋಕ ಸಾಗರದಲ್ಲಿ ಮುಳುಗಿತ್ತು.