( ಮುಂದುವರೆದ ಭಾಗ )
ಹಲವು ಚಿತ್ರಗಳಲ್ಲಿ ಪಾತ್ರಗಳಿರದಿದ್ದರೂ ಇವರಿಗಾಗಿ ಪಾತ್ರಗಳನ್ನು ಸೃಷ್ಟಿಸುತ್ತಿದ್ದಾರೆಂದರೆ ಇವರ ಹಾಸ್ಯಕ್ಕೆ ಇರುವ ಸಾಮರ್ಥ್ಯವನ್ನು ನೀವೇ ಊಹಿಸಿ ನೋಡಿ. ಉದಾಹರಣೆಗೆ ೨೦೦೦ ನೇ ಇಸ್ವಿಯಲ್ಲಿ ತೆರೆ ಕಂಡ ನಟ ಹೃತಿಕ್ ರೋಷನ್ ನಟಿಸಿದ ಮೊದಲ ಚಿತ್ರ ಕಹೋ ನಾ ಪ್ಯಾರ್ ಹೇ, ಈ ಚಿತ್ರದ ಕಡೇ ಸಮಯದಲ್ಲಿ ಬರುವ ಕಾಮಿಡಿ ಪೋಲೀಸ್ ಪಾತ್ರ, ಕೇವಲ ಐದು ನಿಮಿಷ ಬರುವ ಈ ಪಾತ್ರದಲ್ಲಿ ನೋಡುಗರ ದೃಷ್ಟಿಯಲ್ಲಿ ಗಂಭೀರ ಪೋಲೀಸ್ ತರಹ ಕಂಡರೂ ಆ ಸಮಯದಲ್ಲಿ ತಾನು ಪಡುವ ತೊಂದರೆಯನ್ನು ಹಾಸ್ಯದ ಮೂಲಕ ತೋರಿಸಿದ್ದನ್ನು ಮರೆಯಲು ಸಾಧ್ಯವೇ?
ಅದೇ ರೀತಿ ೨೦೧೮ ರಲ್ಲಿ ತೆರೆ ಕಂಡ ಟೋಟಲ್ ಧಮಾಲ್ ಚಿತ್ರದಲ್ಲಿ ಕಡೆಗೆ ಬರುವ ಹೆಲಿಕಾಪ್ಟರ್ ಪೈಲೆಟ್ ಪಾತ್ರ, ಹೆಲಿಕಾಪ್ಟರ್ ಹಾರಾಟದ ಸಮಯದಲ್ಲಿ ನಡೆಯುವ ಹಾಸ್ಯ ಸನ್ನಿವೇಶ, ಸಂಭಾಷಣೆಯನ್ನು ಎಷ್ಟು ಸಲ ನೋಡಿದರೂ ಕಡಿಮೆಯೇ.
ಇವರ ಪ್ರತಿಭೆ ಕೇವಲ ಚಿತ್ರ ರಂಗಕ್ಕೆ ಸೀಮಿತವಾಗಿರಲಿಲ್ಲ.
೧೯೮೬ ರಲ್ಲಿ ಸಹಾಯಾರ್ಥವಾಗಿ ಶೋ ಹೋಪ್-೮೬ ಕಾರ್ಯಕ್ರಮದಲ್ಲಿ ತಮ್ಮ ಹಾಸ್ಯದ ಮೂಲಕ ಲಕ್ಷಕ್ಕೂ ಅಧಿಕ ಪ್ರೇಕ್ಷಕರನ್ನು ಹಾಸ್ಯದ ಹೊಳೆಯ ಅಲೆಯಲ್ಲಿ ತೇಲಿಸಿದ್ದರು. ಅಲ್ಲದೇ ಈ ಕಾರ್ಯಕ್ರಮಕ್ಕೆ ಬಾಲಿವುಡ್ ಚಿತ್ರರಂಗದ ಗಣ್ಯರು ಕೂಡ ಬೆಂಬಲಿಸಿದ್ದರಲ್ಲದೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದರು. ಇಷ್ಟೇ ಅಲ್ಲದೆ ತಮ್ಮದೇ ಧ್ವನಿ ಸುರುಳಿಯನ್ನು ತಯಾರಿಸಿ ವಿತರಿಸಿದರು. ಮಿಮಿಕ್ರಿ, ಕಾಮಿಡಿ, ಹಸೇ ಕೇ ಹಂಗಾಮಾ ದೇಶ ವಿದೇಶಗಳಲ್ಲಿ ಜನಪ್ರಿಯತೆಯನ್ನು ಪಡೆಯಿತಲ್ಲದೆ ಭಾರತದ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತು.
ತಮ್ಮ ಹಾಸ್ಯ ಪ್ರದರ್ಶನದ ಮೂಲಕ ದೇಣಿಗೆಯನ್ನು ಸಂಗ್ರಹಿಸಿ ಸಮಾಜ ಮುಖಿ ಕೆಲಸಗಳನ್ನು ಮಾಡಿದ್ದಾರೆ. ತಮ್ಮ ಉತ್ಕೃಷ್ಟ ಗುಣಮಟ್ಟ ಹಾಸ್ಯದ ಮೂಲಕ ಇಂದಿಗೂ ಕೂಡ ಇವರು ಒಬ್ಬ ಸಮರ್ಥ ಸ್ಟ್ಯಾಂಡ್ ಅಪ್ ನ ಕಾಮಿಡಿ ಶೋ ನ ಸರ್ದಾರರಾಗಿ ಹೊರ ಹೊಮ್ಮಿದ್ದಾರೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಬಾಲಿವುಡ್ ಚಿತ್ರರಂಗದಲ್ಲಿ ಹಾಸ್ಯಕ್ಕೆ ಜಾನಿ ಲಿವರ್ ಗೆ ಜಾನಿ ಲಿವರ್ ಮಾತ್ರ ಸಾಟಿ ಹೊರತು ಇನ್ಯಾರು ಆಗಲು ಸಾಧ್ಯವಿಲ್ಲ.