ನಿಮಗೆ ‘ನಮ್ಮ ಮನೆ ನಮ್ಮ ಮನೆ ನಂದಗೋಕುಲ ನಮ್ಮ ಮನೆ’ ಅನ್ನೋ ಪಿ.ಸುಶೀಲಾ ಹಾಡು ನೆನಪಿದೆಯೆ? ಅಥವಾ ಅವರೇ ಹಾಡಿರುವ ‘ಕಲಿಕೆಯೇ ಜಾಣ ಬಲ್ಲ ಕ್ರಮ’ ಹಾಡು? ಅಥವಾ ಪಿ. ಸುಶೀಲಾ ಅವರು ಪಿಬಿಎಸ್ ಅವರೊಂದಿಗೆ ಹಾಡಿರುವ ‘ಚಿನ್ನದಂಥ ನಾಡಿಗೆ ರನ್ನದಂಥ ರಾಜ?’ ಪಿ.ಬಿ.ಎಸ್ ಅವರ ‘ನಿಜವನ್ನೇ ಹೇಳುವೆ ನಾನು ಸತ್ಯವ ನುಡಿವಾ ಕನ್ನಡದವನು?’ ಅಥವಾ ಅವರು ಹಾಡಿರುವ ‘ಬಾಚಿ ಬೈತಲೆ’? ಹೋಗಲಿ ‘ಆಪದ್ಬಾಂಧವ ರಂಗಯ್ಯಾ’ ಅನ್ನೋ ಜೇಸುದಾಸ್ ಹೇಳಿರುವ ಹಾಡು?
ಇವೆಲ್ಲವೂ ಬಾಳ ಬಂಧನ ಸಿನಿಮಾದ ಹಾಡುಗಳು. ಹೆಚ್ಚು ಕಡಿಮೆ ಎಲ್ಲವೂ ಜನಜನಿತವಾದವು.
ಸಂಪತ್, ಜಯಶ್ರೀಯದು ದೊಡ್ಡ ಸಂಸಾರ. ವಜ್ರಮುನಿ, ಆತನ ಹೆಂಡತಿ, ಇಬ್ಬರು ಮಕ್ಕಳು, ಶನಿ ಮಹಾದೇವಪ್ಪ ಮತ್ತು ಅವನ ಹೆಂಡತಿ, ಈ ಗಂಡು ಹುಡುಗರಿಬ್ಬರ ವಿಧವೆ ಅಕ್ಕ, ಆಕೆಯ ಕಳ್ಳ ಮಗ. ಕೊನೆಯ ಒಬ್ಬ ಮಗಳು. ಇನ್ನೂ ಒಬ್ಬ ಶುದ್ಧ ಶುಂಠಿ ತಮ್ಮ ದ್ವಾರಕೀಶ್. ಅವನ ಹೆಂಡತಿ ಆಗುವ ಬಿ. ಜಯಾ. ಆಕೆಯ ಅಕ್ಕ ಎಂ. ಎನ್ನ ಲಕ್ಷ್ಮೀದೇವಿ, ಲಕ್ಷ್ಮೀದೇವಿಯ ಪತಿ ಬಾಲಕೃಷ್ಣ.
ಇವರಷ್ಟೇ ಅಲ್ಲದೆ ಮನೆಯ ಎಲ್ಲಾ ವಿಷಯದಲ್ಲೂ ತಲೆ ಹಾಕುವ, ಸಂಪತ್ ಜಯಶ್ರೀಯನ್ನು ಮಾವ ಅತ್ತೆ ಎಂದು ಕರೆಯುವ ರಂಗ (ರಾಜ್‍ಕುಮಾರ್) ಇದ್ದಾನೆ. ಸಾಯುತ್ತಿದ್ದ ಗೆಳತಿಗೆ ಮಾತು ಕೊಟ್ಟಿರುವೆನೆಂದು ಜಯಶ್ರೀ ತನ್ನ ಕೊನೆಯ ಮಗ ದ್ವಾರಕೀಶನಿಗೆ ಗೆಳತಿಯ ಮಗಳನ್ನು (ಜಯಂತಿ) ಕೊಡಲು ಮನಸ್ಸು ಮಾಡಿದಾಗ, ಅವನು ಜಯಾಳನ್ನು ಪ್ರೀತಿಸಿದ್ದರಿಂದ ರಂಗ ಜಯಂತಿಯನ್ನು ಮದುವೆಯಾಗಲು ಮುಂದಾಗುತ್ತಾನೆ.
ರಂಗನ ಪಾತ್ರದಲ್ಲಿ ರಾಜ್‍ಕುಮಾರ್ ಅಭಿನಯ ಅಮೋಘ. ಕೋಪ, ದುಃಖ, ದುಡುಕು ಮಾತು, ವಿಪರೀತ ಪ್ರೀತಿ ಅಬ್ಬಾ… ಕಣ್ಣುಗಳನ್ನು ಅನೇಕ ಸಲ ಒದ್ದೆ ಮಾಡುತ್ತಾರೆ ರಾಜ್.
ಬಾಲಕೃಷ್ಣ ಒಂದು ರೀತಿಯ ದುಷ್ಟ ಪಾತ್ರದಂತೆಯೇ ಆರಂಭವಾದರೂ, ರಂಗನಿಗೆ ಪರಿಚಯವಾದಾಗ ಅಯ್ಯೋ ಈ ಮುಗ್ಧನ ಕತೆ ಮುಗಿಯಿತು ಎಂದುಕೊಂಡಾಗ ಬಾಲಕೃಷ್ಣ ಒಳ್ಳೆಯವಾಗಿರುತ್ತಾರೆ, ಆತನ ಹೆಂಡತಿ ಎಂ. ಎನ್. ಲಕ್ಷ್ಮೀದೇವಿಯೂ ಅಷ್ಟೇ.
ಮತ್ತೊಮ್ಮೆ ಶ್ರೀಕೃಷ್ಣನ ವೇಗದಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ ರಾಜ್.
ಜೀವನದ ಮೌಲ್ಯಗಳ ಬಗ್ಗೆ ಹೇಳುತ್ತಾ, ಹೆಚ್ಚು ಗೋಳಿಲ್ಲದ, ಆದರೂ ಗೋಳು ಇರುವ ಚೊಕ್ಕ ಚಿತ್ರ ಬಾಳಬಂಧನ.
ರಾಜ್ ಅಭಿನಯಕ್ಕೆ ಒಮ್ಮೆ ನೋಡಬೇಕು. ಮಾರುಹೋಗುವಂತಹ ಅಭಿನಯ ರಾಜ್ ಅವರದು. ನನಗೆ ಬಹಳ ಇಷ್ಟವಾಯಿತು ಈ ಚಿತ್ರ ಬಾಳ ಬಂಧನ.