ಈ ಕೊಲೆಯೊಂದಕ್ಕೆ ಸಂಬಂಧಿಸಿದ ಸಿನಿಮಾದಲ್ಲಿ ನಾಯಕ ರಾಜ್ಕುಮಾರ್ ಬರುವುದು ಸಿನಿಮಾ ಶುರುವಾದ ಅರ್ಧ ಗಂಟೆಯ ನಂತರ! ನಾಯಕಿ ಜಯಂತಿಯ ಆಗಮನ ಸಿನಿಮಾ ಶುರುವಾದ ಒಂದು ಗಂಟೆಯ ನಂತರ! ಇದೇ ಈ ಸಿನಿಮಾದ ಒಂದು ವಿಶೇಷ.
ಈ ಕೊಲೆಯ ಸಿನಿಮಾದಲ್ಲಿನ ಮತ್ತೊಂದು ವಿಶೇಷ ಎಂದರೆ ಒಂದು ಸುಂದರ ಮೃದುವಾದ ಹಾಡು – ಕಣ್ಣುಗಳೇ ಕಮಲಗಳು, ಮುಂಗುರುಳೇ ದುಂಬಿಗಳು…. ಕವಿನುಡಿಯಿದು ನಿಜವೈ ಕಲ್ಪನೆಯು ಅಲ್ಲವೈ.
ನರಸಿಂಹರಾಜು ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ರಾಜ್ ಅವರಿಗಿಂತ ಮುಂಚೆ ಬಂದು, ಎಲ್ಲೋ ಒಂದೆರಡು ದೃಶ್ಯ ಬಿಟ್ಟರೆ, ಅವರಿಲ್ಲದ ದೃಶ್ಯವೇ ಇಲ್ಲ ಎನ್ನಬಹುದೇನೋ…
ರಾಜ್ ಉಳಿದ ಅನೇಕ ಸಿನಿಮಾಗಳಲ್ಲಿ ಸುಂದರವಾಗಿ ಕಂಡರೆ ಈ ಬೆಂಗಳೂರು ಮೈಲ್ ಚಿತ್ರದಲ್ಲಿ ಬಲು ಸುಂದರವಾಗಿ ಕಾಣುತ್ತಾರೆ. ಬಹುಶಃ ಅವರು ಇಡೀ ಸಿನಿಮಾದಲ್ಲಿ ಧರಿಸುವ ಬಿಳಿಯ ಷರ್ಟಿನಿಂದ ಇರಬಹುದಾ?
ಜಯಂತಿ ಬಿವಿ ರಾಧಳೋ, ಬಿವಿ ರಾಧಾಳೇ ಜಯಂತಿಯೋ ಎನ್ನುವ ಒಂದು ಅನುಮಾನ ಸಿನಿಮಾ ಮುಗಿದ ನಂತರವೂ ಕಾಡದಿರದು. ಹೊಟೇಲ್ ಮ್ಯಾನೇಜರ್ ಪಾತ್ರ ವಹಿಸಿದವರು ದೊರೆ-ಭಗವಾನ್ ಜೋಡಿಯ ಭಗವಾನ್ರವರಾ? ಅವರಂತೆಯೇ ಕಂಡ ಆ ಮ್ಯಾನೇಜರ್.
ಕೊಟ್ಟಾರಕರ ಬೋಡುತಲೆಯ ವಿಲನ್ ಆಗಿದ್ದಾರೆ.
ಒಂದು ಭರತನಾಟ್ಯ, ವಿಜಯಲಲಿತ ಕುಣಿತ, ಜ್ಯೋತಿಲಕ್ಷ್ಮಿಯರ ಕ್ಲಬ್ ಡ್ಯಾನ್ಸ್ ಇದೆ. ಬಿವಿ ರಾಧ ನರಸಿಂಹರಾಜು ಮುಂದೆ ಆತನನ್ನು ಛೇಡಿಸುತ್ತಾ ಕುಣಿಯುವ ಹಾಡಿದೆ. ಹುಡುಗ ಹುಡುಗಿಯರು ರೈಲಿನಲ್ಲಿ ಕುಣಿದಾಡುವ ಹಾಡಿದೆ.
ಒಂದು ಕೊಲೆ, ಅದನ್ನು ಕಂಡುಹಿಡಿಯಲು ರಾಜ್, ಆ ಕೊಲೆಗೆ ಸಹಾಯ ಮಾಡಿದ ಹುಡುಗಿಯ ಮುಖ ನೋಡಿದ ಒಬ್ಬನೇ ವಿಟ್ನೆಸ್… ಬಾಬು (ನರಸಿಂಹರಾಜು)… ಬಹಳ ದೃಶ್ಯಗಳು ರೈಲಿನಲ್ಲಿ, ರೈಲಿನ ಸೆಟ್ನಲ್ಲಿ, ಪ್ಲಾಟ್ಫಾರಂನಲ್ಲಿ, ರೈಲುಕಂಬಿಗಳ ಮೇಲೆ ನಡೆಯುತ್ತವೆ. ಬಿಟ್ಟರೆ ಹೊಟೇಲ್ ಸೆಟ್, ಮದ್ರಾಸ್, ಕಾಟ್ಪಾಡಿ ಸ್ಟೇಷನ್.
ಮನರಂಜನೆ ಉಂಟು. ಜೊತೆಗೆ ಸಿಕ್ಕಾಪಟ್ಟೆ ಸೆಂಟಿಮೆಂಟ್ ಇಲ್ಲದ ಎಂಜಾಯ್ ಮಾಡಬಲ್ಲ ಸಿನಿಮಾ ಬೆಂಗಳೂರು ಮೈಲ್. ದಕ್ಷಿಣದ ನಾಲ್ಕೂ ಭಾಷೆಗಳಲ್ಲಿ ಬಂದ ಈ ಚಿತ್ರದ ಹಿಂದಿ ಅವತರಣಿಕೆ ‘ದಿ ಟ್ರೈನ್’ನಲ್ಲಿ ರಾಜೇಶ್ಖನ್ನ ನಟಿಸಿದ. (ಗುಲಾಬಿ ಆಂಖೇ… ರಫಿಯ ಹಾಡು)