ಭಗತ್ ಸಿಂಗ್ ಕಡಸಾರಿ ಪಲಿಕಿನ ಇನ್ಕ್ವಿಲಾಬ್ ಶಬ್ದನಿವಾ

bhagat singh

1988 ರಲ್ಲಿ ಬಿಡುಗಡೆಯಾದ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ ತೆಲುಗಿನ ಜನಪ್ರಿಯ ಸಿನಿಮಾ – ರುದ್ರವೀಣ. ಮೆಗಾಸ್ಟಾರ್ ಚಿರಂಜೀವಿಯ ಸಿನಿಮಾ ಜೀವನದಲ್ಲಿ ಒಂದು ಹೊಸ ತಿರುವನ್ನು ಕೊಟ್ಟ ಸಿನಿಮಾ. ನಾಯಕ ಜಾತಿ ಪದ್ದತಿಯನ್ನು ಮೆಟ್ಟಿ ಮನೆಯಿಂದ ಹೊರಬಂದು ತನ್ನ ಊರನ್ನು ಆದರ್ಶ ಊರನ್ನಾಗಿ ಮಾಡುವ ಕತೆ ಈ ಸಿನಿಮಾದ ಕಥಾವಸ್ತು. ಇದು ಕನ್ನಡದ ಖ್ಯಾತ ನಟ ರಮೇಶ್ ಅರವಿಂದರ ಮೊದಲ ತೆಲುಗು ಸಿನಿಮಾ ಕೂಡ ಹೌದು.ಇದರ ಇನ್ನೊಂದು ವಿಶೇಷವೇನೆಂದರೆ ಇದರ ಅದ್ಭುತ ಸಾಹಿತ್ಯ ಮತ್ತು ಅದಕ್ಕೊಪ್ಪುವ ಸಂಗೀತ. ಇಳಯರಾಜರ ಅದ್ಭುತ ಸಂಗೀತಕ್ಕೆ ಮುತ್ತು ಪೋಣಿಸಿದಂತೆ ಪದಗಳನ್ನು ಜೋಡಿಸಿದ್ದು ತೆಲುಗಿನ ಅದ್ಭುತ ಸಾಹಿತ್ಯಕಾರ – “ಸಿರಿವೆನ್ನೆಲ ಸೀತಾರಾಮಶಾಸ್ತ್ರಿ”. ಜಾತಿ ಪದ್ದತಿಯನ್ನು ಮೆಟ್ಟಿ ಹೊರಬಂದ ಆಂಗ್ರಿ ಮ್ಯಾನ್ ಹೇಳುವ ಹಾಡು – “ನೇನು ಸೈತಮ್”. ಹೌದು. ಈಗ ನಾನು ಹೇಳಹೊರಟಿರುವುದು ಈ ಹಾಡಿನ ಹಿಂದಿನ ಕತೆ.

ತೆಲುಗು ಸಾಹಿತ್ಯದ ಅನುಭವವಿರುವ ಕೆಲವರಿಗೆ ಶ್ರೀ ಶ್ರೀ ಬಗ್ಗೆ ತಿಳಿದಿರಬಹುದು. ಶ್ರೀ ಶ್ರೀ ತೆಲುಗು ಸಾಹಿತ್ಯದ ಅನರ್ಘ್ಯ ರತ್ನ. ಅವರ ಪದಗಳಂತೂ ಯಾರೂ ಊಹೆಯೂ ಮಾಡಲಾರದಷ್ಟು ಸೊಗಸು. ಭಾಷೆಯ ಮೇಲೆ ಅವರಿಗಿರುವ ಹಿಡಿತಕ್ಕೆ ಮರುಮಾತಿಲ್ಲ. ಇವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಆಂಧ್ರ ಪ್ರದೇಶದ ಪ್ರತಿಷ್ಠಿತ ನಂದಿ ಪ್ರಶಸ್ತಿ ಹಾಗು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ ಹೌದು. ಇಂತಿಪ್ಪ ಶ್ರೀ ಶ್ರೀ ಯವರ ಒಂದು ಪ್ರಸಿದ್ಧ ಕವನ ಸಂಕಲನದ ಒಂದು ಕವಿತೆ ನೇನು ಸೈತಮ್. ಇದರ ಕನ್ನಡ ಅರ್ಥ – ನಾನು ಮನಸು ಪಟ್ಟರೆ ಏನಾದರೂ ಮಾಡಬಲ್ಲೆ ಎಂಬಂತಹ ಮೋಟಿವೇಷನ್ ತುಂಬಿರುವ ಹಾಡು. ಶ್ರೀ ಶ್ರೀ ಯವರ ಈ ರಚನೆಯ ಒಂದಷ್ಟು ಸಾಲುಗಳನ್ನು ತೆಗೆದುಕೊಂಡು ಅದಕ್ಕೆ ಅದ್ಭುತ ಸಂಗೀತ ಸಂಯೋಜನೆ ಮಾಡಿದ್ದರು ಇಳೆಯರಾಜ. ಒಂದು ಅರ್ಥದಲ್ಲಿ ಹೇಳಬೇಕೆಂದರೆ ಇದು ಬೆಂಕಿಯ ಉಂಡೆ ಉಗುಳುತ್ತಾ ನಾಯಕ ಹೇಳುವ ಹಾಡು.

ಸುಲಭವಾಗಿ ಅರ್ಥವಾಗುವುದಕ್ಕೆ ನಾಗರಹಾವು ಚಿತ್ರದ “ಹಾವಿನ ದ್ವೇಷ ಹನ್ನೆರಡು ವರ್ಷ” ಶೈಲಿಯ ಹಾಡು ಅಂದ್ಕೊಳಿ. ಎಸ್ಪಿಬಿಯವರ ಬಾಯಲ್ಲಿ ಆ ಹಾಡು ಕೇಳಿದ್ದೆ ತಡ, ಇಡೀ ಆಂಧ್ರಪ್ರದೇಶವೇ ಒಂಥರಾ ಸಂಚಲನೆಗೆ ಒಳಗಾಗಿತ್ತು. ಎಂತಹವರನ್ನೂ ಬಡಿದೆಬ್ಬಿಸಿ, ಅವರನ್ನು ಮೋಟಿವೇಷನ್ ಮಾಡುವಂತಹ ಹಾಡು. ಶ್ರೀ ಶ್ರೀ ಯವರ ಈ ಹಾಡಿನಲ್ಲಿ ಇನ್ನೂ ಒಂದು ವಿಶೇಷ ಏನಂದರೆ ಇಡೀ ಹಾಡು ವಿಶೇಷವಾದ ಒತ್ತಕ್ಷರಗಳಿಂದ ಕೂಡಿದೆ. ಕೆಳಗಿನ ಸಾಲುಗಳನ್ನು ಒಮ್ಮೆ ಓದಿ.

“ನೇನು ಸೈತಮ್ ಪ್ರಪಂಚಾನಿಕಿ ಸಮೀಧಿನೊಕ್ಕಟಿ ಆಹುತಿಚ್ಚಾನು.

ನೇನು ಸೈತಮ್ ವಿಶ್ವವೃಷ್ಠಿಕೀ ಅಶ್ರುವೊಕ್ಕಟಿ ಧಾರ ಪೋಶಾನು

ನೇನು ಸೈತಮ್ ಭುವನ ಘೋಷಕು ವೇರ್ರಿಗೊಂತೂಕವಿಚ್ಚಿ ಮ್ರೋಶಾನು “

ಈ ರೀತಿ ಬರೀ ಒತ್ತಕ್ಷರದಿಂದಲೇ ಕೂಡಿರುವ ಪದಗಳು. ಇನ್ನೂ ವಿಶೇಷವೇನೆಂದರೆ ಎಸ್ಪಿಬಿಯವರಿಗೆ ಉತ್ತಮ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಹಾಡಿದು.

ಸರಿ ಈಗ ವಿಷಯಕ್ಕೆ ಬರೋಣ. 2003 ರಲ್ಲಿ ವಿನಾಯಕ್ ನಿರ್ದೇಶನದಲ್ಲಿ ಬಿಡುಗಡೆಯಾದ ಚಿರಂಜೀವಿಗೆ ಯಶಸ್ಸು ತಂದುಕೊಟ್ಟ ಇನ್ನೊಂದು ಸಿನಿಮಾ – ಠಾಗೋರ್. ವಿಷ್ಣುವರ್ಧನ್ ಅಭಿನಯದ ವಿಷ್ಣುಸೇನ ಸಿನಿಮಾ ಗೊತ್ತಲ್ವಾ? ಅದು ಈ ಠಾಗೋರ್ ಸಿನಿಮಾದ ರೀಮೇಕ್. ಇದರ ಕ್ಲೈಮಾಕ್ಸ್ ನಲ್ಲಿ ಒಂದು ಹಾಡು ಬರೆಯಬೇಕಲ್ವಾ? ಆಗ ಚಿರಂಜೀವಿಗೆ ಒಂದು ಆಲೋಚನೆ ಬಂತಂತೆ. ಅದೇನಂದರೆ – ರುದ್ರವೀಣದಲ್ಲಿ ಬಳಸಿದ್ದ ಶ್ರೀ ಶ್ರೀಯವರ ನೇನು ಸೈತಮ್ ಹಾಡನ್ನೇ ತೆಗೆದುಕೊಂಡು ಅದೇ ಧಾಟಿಯಲ್ಲಿ ಹೊಸ ಹಾಡನ್ನು ಬರೆಯುವ ಕೆಲಸ. ಈ ಕೆಲಸಕ್ಕೆ ಕೊಂಚ ಅಳುಕಿನಿಂದಲೇ ಕೈ ಹಾಕಿದರು – ಠಾಗೋರ್ ಗೀತ ರಚನೆಕಾರ – “ಸುದ್ದಾಲ ಅಶೋಕ್ ತೇಜ”. ಸುದ್ದಾಲ ಕೂಡ ಅದ್ಭುತ ತೆಲುಗು ಕವಿ. ಆದರೂ ಶ್ರೀ ಶ್ರೀಯವರ ಧಾಟಿಯಲ್ಲಿ ಅದೂ ಅವರ ಸಾಲನ್ನೇ ತೆಗೆದುಕೊಂಡು ಅದರ ಮುಂದಕ್ಕೆ ಆ ಹಾಡನ್ನು ಇವರು ಬರೆಯುವುದೆಂದರೆ ಸುಲಭದ ಮಾತಲ್ಲ. ಸರಿ ಒಮ್ಮೆ ಪ್ರಯತ್ನಿಸಬಾರದೇಕೆ ಎಂದು ಸುದ್ದಾಲ ರವರು ಬರೆಯಲು ಶುರು ಮಾಡಿದರಂತೆ. ಶ್ರೀ ಶ್ರೀ ಅವರ ಕವಿತೆ ಬರೆಯುತ್ತಿರುವುದರಿಂದ ಅವರೇ ಬರೆದ ಹಾಗಿರಬೇಕು. ಹಾಗಾಗಿ ಶ್ರೀ ಶ್ರೀ ಶೈಲಿಯಲ್ಲೇ ಶುರು ಮಾಡಿ ಸುದ್ದಾಲ ರವರ ಶೈಲಿಯಲ್ಲಿ ಹಾಡನ್ನು ಬರೆದು ಮುಗಿಸಿದರಂತೆ. ಇದನ್ನು ಅವರೇ ಖುದ್ದಾಗಿ ಸಂದರ್ಶನಗಳಲ್ಲಿ ತುಂಬಾ ಸಲ ಹೇಳಿದ್ದಾರೆ. ಹಾಡಿನ ಮೊದಲ ಮೂರು ಸಾಲುಗಳನ್ನು ನೇರವಾಗಿ ಶ್ರೀ ಶ್ರೀ ಯವರ ಸಾಲುಗಳನ್ನೇ ಎತ್ತಿಕೊಂಡು ಆ ಮುಂದಿನ ಸಾಲುಗಳನ್ನು ಇವರು ಬರೆದದ್ದು, ಅದೇ ರೀತಿಯ ಒತ್ತಕ್ಷರಗಳಿಂದಲೇ ಕೂಡಿದೆ. ಇದನ್ನು ನೋಡಿದವರು ಯಾರಿಗೆ ಆಗಲಿ ಇದು ಶ್ರೀ ಶ್ರೀಯವರೇ ಬರೆದದ್ದೇನೋ ಎಂಬಂತೆ ಬರೆದಿದ್ದಾರೆ.

“ಅಗ್ನಿ ನೇತ್ರ ಮಹೋಗ್ರಜ್ವಾಲ ದಾಚಿನಾ ಓ ರುದ್ರುಡಾ

ಅಗ್ನಿ ಶಿಖರಮು ಗುಂಡೇಲೋನ ಅಣಚಿನಾ ಓ ಸೂರ್ಯುಡಾ

ಪರಶ್ವಧಮುನು ಚೇತ ಬೂನಿನ ಪರಶುರಾಮುನಿ ಅಂಶವಾ “

ಈ ರೀತಿ ಬರುವ ಹಾಡಿನ ಚರಣದಲ್ಲಿ ಒಂದು ಸಾಲಿದೆ – “ಭಗತ್ ಸಿಂಗ್ ಕಡಸಾರಿ ಪಲಿಕಿನ ಇನ್ಕ್ವಿಲಾಬ್ ಶಬ್ದನಿವಾ” ಅಂತ. ಇದರ ಕನ್ನಡ ಅರ್ಥ – ” ಭಗತ್ ಸಿಂಗ್ ಕಡೆಯ ಬಾರಿ ಕೂಗಿ ಹೇಳಿದ ಇನ್ಕ್ವಿಲಾಬ್ ಶಬ್ದದಂತೆ” ಅಂತಾಗುತ್ತದೆ. ಈಗ ನಾನು ಹೇಳಹೊರಟಿರುವುದು ಅದರ ಬಗ್ಗೆಯೇ. ಈ ಸಾಲನ್ನು ಬರೆಯಲು ನನಗೆ ಯೋಚನೆ ಬಂದದ್ದು ಹೇಗೆ ಅಂತ ಖುದ್ದು ಸುದ್ದಾಲ ಅವರೇ ಹೇಳಿದ್ದಾರೆ.

ಭಗತ್ ಸಿಂಗರನ್ನು ಇನ್ನೇನು ನೇಣಿಗೇರಿಸುವ ದಿನಗಳು ಹತ್ತಿರ ಬರುತ್ತಿವೆ. ಭಗತ್ ಸಿಂಗರ ತಾಯಿ ಜೈಲಿನ ಬಳಿ ಬಂದು  – “ನಿನ್ನನ್ನು ನೇಣಿಗೇರಿಸುವ ದಿನ/ಸಮಯ ಯಾವಾಗ ಅಂತ ಗೊತ್ತಿಲ್ಲ. ನನಗೆ ಆ ವಿಷಯವನ್ನು ಯಾರಾದ್ರೂ ಹೇಳ್ತಾರೆ ತಾನೇ?” ಅಂತ ಕಣ್ಣೀರಾಕುತ್ತಾ ತನ್ನ ಮಗನೊಡನೆ ಕೇಳುತ್ತಾಳಂತೆ. ಆಗ ಭಗತ್ ಸಿಂಗ್ ತನ್ನ ತಾಯಿಗೆ ಹೇಳ್ತಾರಂತೆ – “ಯೋಚನೆ ಮಾಡಬೇಡಮ್ಮ. ನೇಣಿಗೆ ತಲೆಯೊಡ್ಡುವಾಗ ಕಡೆಯ ಬಾರಿಗೆ ನಾನು ಇನ್ಕ್ವಿಲಾಬ್ ಜಿಂದಾಬಾದ್ ಅಂತ ಜೋರಾಗಿ ಕೂಗ್ತೇನೆ. ಆ ಕೂಗಿನ ಶಕ್ತಿ ಎಷ್ಟಿರುತ್ತೆ ಅಂದರೆ ನಿನಗಷ್ಟೇ ಅಲ್ಲ. ಇಡೀ ಭಾರತಕ್ಕೇ ಕೇಳಿಸುತ್ತದೆ. ಆ ಕೂಗಿನ ಸದ್ದಿಗೆ ಒಂದಷ್ಟು ಜನ ಬ್ರಿಟಿಷ್ ಅಧಿಕಾರಿಗಳು ಎದೆ ಒಡೆದು ಸತ್ತರೂ ಆಶ್ಚರ್ಯವಿಲ್ಲ. ಅಷ್ಟು ಗಟ್ಟಿ ಧ್ವನಿಯಲ್ಲಿ ಕೂಗಿ ಹೇಳ್ತಾ ನೇಣಿಗೆ ತಲೆಯೊಡ್ಡುತ್ತೇನೆ ವಿನಃ ಅಳುತ್ತಾ ಅಲ್ಲ.” ಅಂತ ದಿಟ್ಟತನದಿಂದ ನುಡಿದಿದ್ದರಂತೆ.

ಭಗತ್ ಸಿಂಗರ ಬಗ್ಗೆ ಪುಸ್ತಕವೊಂದರಲ್ಲಿ ಓದಿದ್ದ ಆ ಸಾಲನ್ನೇ ನೆನಪಿಟ್ಟುಕೊಂಡು ತಮ್ಮ ಶೈಲಿಯಲ್ಲಿ ತೆಲುಗು ಸಾಹಿತ್ಯಪ್ರಿಯರಿಗೆ ಉಣಬಡಿಸಿದ್ದಾರೆ – ಸುದ್ದಾಲ ಅಶೋಕ್ ತೇಜ. ಇನ್ನೂ ವಿಶೇಷವೇನೆಂದರೆ ಈ ಹಾಡು ಬರೆದದ್ದೇನೋ ಆಯಿತು. ಯಾರ ಕೈಲಿ ಹಾಡಿಸುವುದು ಅಂತ ಎಲ್ಲಾ ಯೋಚನೆ ಮಾಡಿ ಗಾಯಕನ ಹೆಸರು ಹೇಳುವಂತೆ ಅಲ್ಲಿದ್ದವರನ್ನೆಲ್ಲಾ ಕೇಳಿದರಂತೆ. ಆಶ್ಚರ್ಯವೆಂದರೆ ನಿರ್ದೇಶಕ, ಚಿರಂಜೀವಿ, ನಿರ್ಮಾಪಕ, ಗೀತರಚನೆಕಾರ ಎಲ್ಲರ ಬಾಯಲ್ಲೂ ಬಂದಿದ್ದ ಹೆಸರು ಒಂದೇ ಆಗಿತ್ತು – “ಎಸ್ಪಿಬಿ”.

ಹೌದು. ರುದ್ರವೀಣದ ಹಾಡಿಗೆ ಹಾಡಿದ್ದ ಎಸ್ಪಿಬಿಯೇ ಇದೇ ಹಾಡನ್ನೂ ಹಾಡಿದ್ದಾರೆ. ರುದ್ರವೀಣ ಸಿನಿಮಾ ಬಂದಾಗ ಎಸ್ಪಿಬಿ ವಯಸ್ಸು ನಲವತ್ತೆರಡು. ಠಾಗೋರ್ ಸಿನಿಮಾ ಬಂದಾಗ ಎಸ್ಪಿಬಿ ವಯಸ್ಸು ಐವತ್ತೇಳು. ಆದರೂ ಅದೇ ಕಂಠ. ಅದೇ ಗತ್ತು. ಇಂದಿಗೂ ಚಿರಂಜೀವಿಯ ಮನಸ್ಸಿಗೆ ಹತ್ತಿರವಿರುವ ಹಾಡುಗಳಲ್ಲಿ ಈ ರುದ್ರವೀಣ ಹಾಡಿಗೆ ಅಗ್ರಸ್ಥಾನವಂತೆ.

ಠಾಗೋರ್ ಹಾಡಿನ ಲಿಂಕ್ ಇಲ್ಲಿದೆ ನೋಡಿ

ಮೂಲ (ರುದ್ರವೀಣ) ಹಾಡಿನ ಲಿಂಕ್ ಇಲ್ಲಿದೆ :

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply