ಭರತ್ ಎಂಬ ಗಾನಕೋಗಿಲೆ:
(ಮುಂದುವರೆದ ಭಾಗ)
ಚಿತ್ರೋದ್ಯಮ: ಇಷ್ಟೊಂದು ಫೀಲ್ಡುಗಳಲ್ಲಿ ಕಾಲಿಟ್ಟು ಇಷ್ಟು ದೊಡ್ಡ ಮಟ್ಟದ ಸಕ್ಸಸ್ ಆಗುವುದು ಯಾರಿಗೆ ಆಗಲಿ ಅಷ್ಟು ಸುಲಭದ ಮಾತಲ್ಲ. ಇದೆಲ್ಲದರ ಜೊತೆಗೆ ಸಿನಿಮಾದಲ್ಲಿ ನಟನೆಯನ್ನು ಟ್ರೈ ಮಾಡುವ ಅವಕಾಶ ಬಂದರೆ ಏನಂತೀರಿ ಸಾರ್?
ಭರತ್: ಬಂದರೆ ಏನು? ಬಂದಿತ್ತು. ನನ್ನ ಅನೇಕ ಸ್ನೇಹಿತರು ಈಗಾಗಲೇ ಸಿನಿಮಾರಂಗದಲ್ಲಿದ್ದಾರೆ. ಒಂದಷ್ಟು ಪಾತ್ರಗಳಿಗೆ ಬಣ್ಣಹಚ್ಚುವ ಅವಕಾಶ ನನಗೆ ಬಂದಿತ್ತಾದರೂ, ಮೂಲತಃ ನಾನೊಬ್ಬ ನಟನಲ್ಲ. ಮೇಲಾಗಿ ನಟನೆಗಿಂತ ಗಾಯನವೇ ನನಗೆ ಅತಿ ಹೆಚ್ಚು ಪ್ರಿಯ. ಹಾಗಾಗಿ ನಟನೆಗೆ ನೋ ಎಂದುಬಿಟ್ಟೆ.
ಚಿತ್ರೋದ್ಯಮ: ಇಷ್ಟೆಲ್ಲಾ ಕೆಲಸಗಳನ್ನೂ ಏಕಕಾಲಕ್ಕೆ ನಿಭಾಯಿಸುವುದು ಒತ್ತಡ ಎಣಿಸುತ್ತಿಲ್ಲವಾ?
ಭರತ್: ಖಂಡಿತಾ ಇಲ್ಲ. ರಾಜಕೀಯ ನನ್ನ ವೃತ್ತಿಯಾದರೆ ಗಾಯನ ನನ್ನ ಪ್ರವೃತ್ತಿ. ನಾನೇ ಇಷ್ಟಪಟ್ಟು ಆಯ್ದುಕೊಂಡಿರುವ ಕ್ಷೇತ್ರಗಳಿವು. ಯಾವುದೇ ಕೆಲಸವಾಗಲೀ ನಾವು ಕಷ್ಟಪಟ್ಟು ಮಾಡಿದರೆ ಅದು ಒತ್ತಡ ಎನಿಸಿತ್ತದೆ. ಆದರೆ ನನ್ನ ವಿಷಯದಲ್ಲಿ ಹಾಗಿಲ್ಲ. ನಾನಿದನ್ನು ಇಷ್ಟಪಟ್ಟು ಮಾಡುತ್ತಿದ್ದೇನೆ. ನಂಬುತ್ತೀರೋ ಇಲ್ಲವೋ ವರ್ಷವೊಂದರಲ್ಲಿ ಎಪ್ಪತ್ತು-ಎಂಭತ್ತು ಬಾರಿ ವಿಮಾನದಲ್ಲಿ ಹಾರಾಡಿದ್ದೇನೆ. ವಿಮಾನ ಪ್ರಯಾಣವೇ ಸಾಕೆನಿಸುವಷ್ಟರಮಟ್ಟಿಗೆ ಓಡಾಡಿದ್ದು ನನ್ನ ವೃತ್ತಿ ಹಾಗು ಪ್ರವೃತ್ತಿಯ ಸಲುವಾಗಿ. ಅಷ್ಟು ಬಾರಿ ಪ್ರಯಾಣ ಮಾಡಿದರೂ ನಾನು ಇಷ್ಟಪಟ್ಟ ಕೆಲಸಕ್ಕಾಗಿ ಮಾಡಿದ್ದೆನಾದ್ದರಿಂದ ಒತ್ತಡಕ್ಕಿಂತ ಹೆಚ್ಚಾಗಿ ನಾನು ಅದರಿಂದ ಆನಂದ ಪಡೆದಿದ್ದೇನೆ. ನನ್ನ ಅಭಿಮಾನಿಗಳಿಗೂ ನಾನು ಹೇಳುವುದಿಷ್ಟೇ: ಯಾವುದೇ ಕೆಲಸವನ್ನೂ ಯಾರನ್ನೋ ಮೆಚ್ಚಿಸಲೆಂದು ಮಾಡಬೇಡಿ. ನಿಮ್ಮನ್ನು ನೀವು ಮೆಚ್ಚಿಸಲೆಂದು ಮಾಡಿ. ಆಗ ಆ ಕೆಲಸ ಕಷ್ಟವಿದ್ದರೂ ನಿಮಗೆ ಇಷ್ಟವಾಗುತ್ತದೆ. ಒಮ್ಮೆ ಆ ಕೆಲಸ ನಿಮಗೆ ಇಷ್ಟವಾಯಿತೆಂದರೆ ತನ್ನಿಂತಾನೇ ಅದು ನಿಮಗೆ ಸಂತೋಷ ನೀಡುತ್ತದೆ.
ಚಿತ್ರೋದ್ಯಮ: ನಿಮ್ಮ ಕುಟುಂಬದ ಪರಿಚಯ ಮಾಡಿಕೊಡಲು ಆಗುತ್ತಾ ಸಾರ್?
ಭರತ್: ನನ್ನ ತಂದೆ ಕೆ.ಆರ್.ವೇಣುಗೋಪಾಲ್ ಹಾಗು ತಾಯಿ ಎನ್.ಎಸ್. ಕೃಷ್ಣವೇಣಿ. ನನ್ನ ಶ್ರೀಮತಿ ಕೃಪಾ ಹಾಗು ಇಬ್ಬರು ಹೆಣ್ಣುಮಕ್ಕಳು. ನನ್ನ ಸಾಧನೆಯ ಹಿಂದಿನ ಪ್ರತಿ ಹೆಜ್ಜೆಯ ಹಿಂದೆಯೂ ನನ್ನ ಕುಟುಂಬದವರ ಸಹಕಾರವನ್ನು ನಾನು ನೆನೆಯಲೇಬೇಕು.
ಚಿತ್ರೋದ್ಯಮ: ನಿಮ್ಮ ರಾಜಕೀಯ ಜೀವನದ ಸಾಧನೆಗಳ ಬಗ್ಗೆ ಮುಂದೆ ತುಂಬಾ ಕೇಳುವುದಿದೆ. ಆದರೆ ಅದಕ್ಕೆ ಮುಂಚೆ ಒಂದು ಚಿಕ್ಕ ಪ್ರಶ್ನೆ. ಸಕ್ರಿಯ ರಾಜಕಾರಣಕ್ಕೆ ಬರುವ ಮುಂಚೆ ನೀವು ಹೋರಾಟಗಳಿಂದಲೇ ಜನರಿಗೆ ಹತ್ತಿರವಾದವರು. ನಿಮ್ಮಲ್ಲಿ ಹೋರಾಟದ ಕಿಚ್ಚು ಬಂದದ್ದು ಹೇಗೆ? ನಿಮ್ಮ ಹೋರಾಟಗಳ ಬಗ್ಗೆ ತಿಳಿಸಿ?
ಭರತ್: ತುಂಬಾ ಕಷ್ಟವಾದ ಪ್ರಶ್ನೆ. ಬಹುಶಃ ಹೋರಾಟವೆಂಬುದು ನನಗೆ ರಕ್ತಗತವಾಗಿಯೇ ಬಂದಿರಬೇಕೆಂದು ನನ್ನ ಭಾವನೆ. ಅನ್ಯಾಯದ ವಿರುದ್ಧ ಸಿಡಿದೆದ್ದು, ನೊಂದವರ ಆಸರೆಯಾಗಲೆಂದೇ ಆ ದೇವರು ನನ್ನನ್ನು ಸೃಷ್ಟಿಸಿದ್ದಾನೆಂದು ನನ್ನ ಭಾವನೆ. ಕಣ್ಣೆದುರು ಯಾವುದೇ ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆ ನಂದೆದರೂ ಚಿಕ್ಕಂದಿನಿಂದಲೇ ನನ್ನ ರಕ್ತ ಕುದಿಯುತ್ತಿತ್ತು. ನನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಹೋರಾಟ ಮಾಡಿ, ನೊಂದವರಿಗೆ ನ್ಯಾಯ ಕೊಡಿಸಬೇಕೆಂದು ನನ್ನ ಒಳಗಿನ ಮನಸ್ಸು ಹಂಬಲಿಸುತ್ತಿತ್ತು. ಹೀಗಾಗಿ ಕಣ್ಣ ಮುಂದೆ ಯಾವುದೇ ಅನ್ಯಾಯ ನಡೆದರೂ ಅದನ್ನು ನೋಡುತ್ತಾ ಮೌನವಾಗಿ ಕುಳಿತುಕೊಳ್ಳುವುದು ನನ್ನಿಂದ ಸಾಧ್ಯವಿರಲಿಲ್ಲ. ಏ.ಬಿ.ಸಿ.ಎಲ್. ವತಿಯಿಂದ ಬೆಂಗಳೂರಿನಲ್ಲಿ ಭುವನ ಸುಂದರಿ ಸ್ಪರ್ಧೆ ನಡೆದದ್ದು ಮತ್ತು ಅದಕ್ಕೆ ವ್ಯಕ್ತವಾದ ವಿರೋಧ ಬಹುಶಃ ನಿಮಗೆಲ್ಲಾ ಗೊತ್ತೇ ಇದೆ. ನಂತರ ಬೆನ್ನಿ ಹಿಂ ಎಂಬ ಕ್ರಿಶ್ಚಿಯನ್ ಪಾದ್ರಿಯೊಬ್ಬರು ಬೆಂಗಳೂರಿಗೆ ಬಂದಾಗ ಕೂಡ ಅನೇಕ ವಿರೋಧಗಳು ಎದುರಾದವು. ಮಲ್ಲೇಶ್ವರಂ ನಲ್ಲಿ ಕೆಲವು ಜನವಿರೋಧಿ ಕಾನೂನುಗಳನ್ನು ಜಾರಿಗೆ ತರಲು ಯೋಚಿಸಿದಾಗ ಕೂಡ ಆ ಜನವಿರೋಧಿ ಕಾನೂನುಗಳನ್ನು ಹಿಮ್ಮೆಟ್ಟಿಸಲು ಹೋರಾಟಗಳು ನಡೆದಿವೆ. ಇಂತಹ ಎಷ್ಟೋ ಸಂದರ್ಭಗಳಲ್ಲಿ ನನ್ನ ಕೈಲಾದಷ್ಟು ಅಳಿಲುಸೇವೆ ಸಲ್ಲಿಸಿ, ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸುವ ಪ್ರಯತ್ನ ಮಾಡಿದ್ದೇನೆ ಎಂಬ ಸಾರ್ಥಕ ಭಾವ ನನ್ನದು. ರಾಜಕೀಯವೆಂಬುದು ನನ್ನ ಮೂಲಮಂತ್ರವಾಗಿಲ್ಲದಿದ್ದರೂ, ಜನರಿಗೆ ನ್ಯಾಯ ಒದಗಿಸಲು ನಾನು ಸಮರ್ಥ ವ್ಯಕ್ತಿಯೆಂದು ಜನಗಳು ನಂಬಿ ನನ್ನ ಹಿಂದೆ ಬಂದರು. ಅವರೆಲ್ಲರ ಋಣ ತೀರಿಸುವ ಬೃಹತ್ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ಆ ನಿಟ್ಟಿನಲ್ಲಿಯೇ ದಿನ ರಾತ್ರಿ ದುಡಿಯುತ್ತಿದ್ದೇನೆ. ಅಧಿಕಾರವಿರಲಿ, ಇಲ್ಲದಿರಲಿ ನೊಂದವರ ಜೊತೆಗೆ ನಿಂತು ಅವರಿಗೆ ಶಕ್ತಿ ತುಂಬುವ ಕೆಲಸವನ್ನಂತೂ ನನ್ನ ಉಸಿರಿರುವವರೆಗೂ ನಿಲ್ಲಿಸುವುದಿಲ್ಲ.
(ಮುಂದುವರೆಯುವುದು:ನಾಳಿನ ಕೊನೆಯ ಕಂತಿನಲ್ಲಿ ಭರತ್ ಅವರ ರಾಜಕೀಯ ಜೀವನದ ಸಾಹಸಗಾಥೆಯನ್ನು ಓದಲು ಮರೆಯದಿರಿ)