ಅಶ್ವತ್ಥ್ ಬಹಳ ಸಾಹುಕಾರ. ಅವನ ತಂಗಿ ಪಾಪಮ್ಮ ಮತ್ತು ಅವಳ ಗಂಡ ಬಾಲಕೃಷ್ಣ ಅಶ್ವತ್ಥ್ ಆಸ್ತಿಯನ್ನು ಸ್ವಲ್ಪ ಸ್ವಲ್ಪವೇ ನುಂಗುತ್ತಿರುತ್ತಾರೆ. ಇವರ ಮಗಳು ಕೋಕಿಲ (ಬಿ.ವಿ.ರಾಧ) ಒಳ್ಳೆಯ ಹುಡುಗಿ. ಇವಳ ಸಹಪಾಠಿ ರಾಜು(ರಾಜ್‍ಕುಮಾರ್) ಬೆಳಗ್ಗೆ ಕಾಲೇಜಿಗೆ ಹೋಗುತ್ತಾ ರಾತ್ರಿ ಹೊತ್ತು ಹನುಮನ (ದ್ವಾರಕೀಶ್) ಜೊತೆ ‘ರಾಜ್‍ಕುಮಾರ್’ ಸಿನಿಮಾಗಳ ಪೋಸ್ಟರುಗಳನ್ನು ಗೋಡೆಗೆ ಅಂಟಿಸುತ್ತಿರುತ್ತಾನೆ. ಹನುಮನಿಗೆ ಬಟ್ಟೆ ಒಗೆಯುವ ಬಸವಿ (ಬಿ.ಜಯಾ) ಮೇಲೆ ಲವ್ವು.
ಬಾಲಕೃಷ್ಣ ಅವರ ಅಭಿನಯ… ಅಬ್ಬಾ… ನಯವಂಚನೆ, ವಂಚನೆ, ದ್ವೇಷ ಎಲ್ಲವೂ ಚಂದ ನೋಡಲು.
ಬಿ.ವಿ.ರಾಧಾಗೆ ರಾಜು ಮೇಲೆ ಲವ್ವು. ಆದರೆ ರಾಜುಗೆ ತಾನು ಕಾಪಾಡಿದ ಲಕ್ಷ್ಮಿ (ವಂದನಾ ಉರ್ಫ್ ಬಿ.ವಿಜಯಲಕ್ಷ್ಮಿ) ಮೇಲೆ ಲವ್. ಈ ಲವ್‍ಗೆ ರಾಜುವಿನ ತಾಯಿ ಬಿ.ಜಯಶ್ರೀಯ ಅನುಮೋದನೆ ಇರುತ್ತದೆ. ಈಕೆ ಪ್ರತಿ ಮಾತಿನ ಕೊನೆಯಲ್ಲಿ ‘ಏನೋ ಎಂತೋ’ ಎನ್ನುತ್ತಾ ಇರುತ್ತಾಳೆ.
ಇಂತಿರ್ಪ ಸೆಟಪ್‍ನಲ್ಲಿ ಒಮ್ಮೆ ರಾಜು ಒಂದು ಮಗುವನ್ನು ಅಶ್ವತ್ಥ್ ಕಾರಿಗೆ ಸಿಕ್ಕುವುದನ್ನು ತಪ್ಪಿಸಿದ್ದೇ ಅಲ್ಲದೇ ತನ್ನ ಗತಿಸಿದ ಪತ್ನಿಯ ಪಟವಿದ್ದ ಅಶ್ವತ್ಥ್ ಪರ್ಸನ್ನು ಆತನಿಗೆ ತಲುಪಿಸುತ್ತಾನೆ. ರಾಜುವನ್ನು ತನ್ನ ಸೆಕ್ರೆಟರಿ ಮಾಡಿಕೊಳ್ಳುವ ಅಶ್ವತ್ಥ್ ಮೇಲೆ ಬಾಲಕೃಷ್ಣನಿಗೆ ಸಿಟ್ಟು.
ರಾಜುವಿಗೆ ಹುಚ್ಚು ಹಿಡಿಯುವ ಮದ್ದು ಹಾಕುತ್ತಾನೆ. ರಾಜು ಹುಚ್ಚನಾಗಿ ‘ನಾನೇ ರಾಜಕುಮಾರ ಕನ್ನಡ ತಾಯಿಯ ಪ್ರೇಮದ ಕುವರ’ ಎಂದು ಹಾಡಿ ಕುಣಿದು ಕುಪ್ಪಳಿಸುತ್ತಾನೆ.
ತೂಗುದೀಪ ಶ್ರೀನಿವಾಸ್ ಒಂದು ಚಿಕ್ಕ ‘ಒಳ್ಳೆಯವನ’ ಪಾತ್ರ ವಹಿಸಿದ್ದಾರೆ.
‘ಹಗಲೇನು ಇರುಳೇನು ದುಡಿಯುವ ಜೀವಕೆ ಹೊತ್ತೇನು?’ ರಾಜ್, ದ್ವಾರಕೀಶ್‍ಗೆ, ‘ನೀ ನನ್ನ ಜೊತೆಯಿರಲು ಜೀವನವು ಸೊಗಸು’ ರಾಜ್, ವಂದನಾಗೆ. ವಂದನಾಗೆ ಮತ್ತೊಂದು ಹಾಡಿದೆ. ಬಿ.ವಿ.ರಾಧಾ ಸಿತಾರ್ ನುಡಿಸುತ್ತಾ ಕನಸು ಕಾಣುವ ಹಾಡೊಂದಿದೆ. ‘ರಾಮಶಾಸ್ತ್ರವ ಹೇಳುವೆ ಕೇಳು’ ಎಸ್‍ಪಿಬಿ ಹಾಡು ದ್ವಾರಕೀಶ್, ಬಿ.ಜಯಾಗೆ. ಈ ಹಾಡಿನ ಚಿತ್ರೀಕರಣವನ್ನು ನಾನು ನನ್ನ ಐದನೇ ಕ್ಲಾಸ್ ಓದುವಾಗ ನೋಡಿದ ನೆನಪು. ಅದು ನಡೆದದ್ದು ನಮ್ಮ ಶಾಲೆಯ ಎದುರಿಗಿನ ವೆಂಕಟರಮಣ ದೇವಾಲಯದ ಮುಂದೆ ಮಲಗಿಸಿಡಲ್ಪಟ್ಟಿದ್ದ ಗರುಡಗಂಬದ ಮೇಲೆ. ಅದರ ನೆನಪು ನುಗ್ಗಿ ಬಂದಿತು.
ಒಂಟಿಕೊಪ್ಪಲ್ ಐದನೇ ಮೆಯಿನ್ ಕನ್ಸರ್ವೆನ್ಸಿ ರಸ್ತೆಯಲ್ಲಿ ರಾಜ್, ನಂತರ ಜಯಶ್ರೀ ವಂದನಾ ಓಡಿದ್ದ ದೃಶ್ಯದ ಚಿತ್ರೀಕರಣವನ್ನೂ ಕಂಡಿದ್ದೆ.
ಇದು ರಾಜ್ ಅವರ ನೂರನೇ ಚಿತ್ರ.