ನಿಮಗೆ ಜೀವನದಲ್ಲಿ ಬೇಸರವಾಗಿದೆಯೇ..? ಮಾಡುತ್ತಿರುವ ಕೆಲಸದಲ್ಲಿ ಏಕತಾನತೆ ಮೂಡಿದೆಯೇ..? ಯಾವುದರಲ್ಲಿಯೂ ಆಸಕ್ತಿ ಇಲ್ಲವಾಗಿದೆಯೇ..?
ಹಾಗಾದರೆ ಖಂಡಿತಾ ಈ ಸಿನೆಮಾ ನೋಡಿ…
ಮುದುರಿರುವ ನಮ್ಮ ಮನವನ್ನು ಉಲ್ಲಸಿತಗೊಳಿಸಿ ಹೂವಿನಂತೆ ಅರಳಿಸುತ್ತದೆ ಈ ಸಿನೆಮಾ. ಅಶ್ಲೀಲತೆಯ ಸೋಂಕೂ ಇರದ ಪರಿಶುದ್ಧ ಹಾಸ್ಯ ನಮ್ಮನ್ನು ಇಂದಿಗೂ ನಗೆಗಡಲಿನಲ್ಲಿ ತೇಲಿಸುತ್ತದೆ. ಕೆಲವು ಸಿನೆಮಾಗಳು ಎಲ್ಲಾ ಕಾಲಕ್ಕೂ ಸಲ್ಲುತ್ತವೆ. ಅದರಲ್ಲಿ “ಭಾಗ್ಯದ ಲಕ್ಷ್ಮಿ ಬಾರಮ್ಮ” ಸಹ ಒಂದು.
‘ಭಾಗ್ಯದ ಲಕ್ಷ್ಮಿ ಬಾರಮ್ಮ…..’
ಹೀಗೆ ಕರೆಯುವವರು ನಾಯಕ ಮತ್ತು ನಾಯಕಿ ಇಬ್ಬರೂ. ಇವರಿಬ್ಬರಿಗೂ ದುಡ್ಡಿನ ಅವಶ್ಯಕತೆ ಬಹಳವಾಗಿರುತ್ತದೆ. ಆದರೆ ಯಾವುದೇ ಐಷಾರಾಮಿ ಜೀವನ ನಡೆಸಲು ಅಲ್ಲ. ಬದಲಿಗೆ ತಮ್ಮ-ತಮ್ಮ ಕುಟುಂಬದ ಅವಶ್ಯಕತೆಗಳಿಗಾಗಿ… ಅದಕ್ಕಾಗಿ ಇಬ್ಬರೂ ಮೂಗರೆಂದು ಸುಳ್ಳು ಹೇಳಿ ಅಂಗವಿಕಲರಿಗಾಗಿ ಮೀಸಲಿದ್ದ ಕೆಲಸ ಪಡೆಯುತ್ತಾರೆ. ಬಹುಮಾನದ ಆಸೆಗೆ ನಾಯಿಯೊಂದನ್ನು ಕದ್ದು ಡಾಗ್ ಷೋಗೆ ಹೋಗುತ್ತಾರೆ. ಆದರೆ ಏನೇ ಮಾಡಿದರೂ ಅವರಿಗೆ ಬೇಕಾಗಿದ್ದಷ್ಟು ದುಡ್ಡು ಎಲ್ಲಿಯೂ ಸಿಗುವುದಿಲ್ಲ.
ಆಗ ಕಣ್ಣಿಗೆ ಬೀಳುವುದು ಆನಂದ ಎಂಟರ್ಪ್ರೈಸಸ್ ರವರ “ಆದರ್ಶ ದಂಪತಿ” ಕಾಂಟೆಸ್ಟ್.
ಮದುವೆಯೇ ಆಗಿರದ ಇವರು ದಂಪತಿಗಳೆಂದು ಹೇಳಿ ಈ ಕಾಂಟೆಸ್ಟಿಗೆ ಭಾಗವಹಿಸಿದಾಗಲಿಂದ ನಿಜವಾದ ಮನರಂಜನೆ ಶುರುವಾಗುತ್ತದೆ. ಅದನ್ನು ಇಲ್ಲಿ ಹೇಳಿ ಪ್ರಯೋಜನವಿಲ್ಲ. ನೋಡಿಯೇ ಸವಿಯಬೇಕು. ಅಣ್ಣಾವ್ರು ಮತ್ತು ಮಾಧವಿಯವರ ಆಕ್ಟಿಂಗ್ ಸವಿ ಸವಿದವರಿಗೇ ಗೊತ್ತು. ಜೊತೆಯಲ್ಲಿ ಅಶ್ವತ್ಥ್, ಬಾಲಕೃಷ್ಣರವರ ಪೋಷಕ ಪಾತ್ರಗಳು ನಗಿಸುವುದರಲ್ಲಿ ಹಿಂದೆ ಬೀಳುವುದಿಲ್ಲ. ಅದಕ್ಕಾಗಿ ಈ ಸಿನೆಮಾ ಇಂದಿಗೂ ಎವರ್ ಗ್ರೀನ್ ಆಗಿದೆ.
ಈ ಚಿತ್ರದ ಕ್ಲೈಮ್ಯಾಕ್ಸ್ ಅತಿ ದೊಡ್ಡ ಮನರಂಜನೆಯ ಕೇಂದ್ರವಾಗಿದೆ. ಇಷ್ಟುದ್ದದ ಕ್ಲೈಮ್ಯಾಕ್ಸ್ ಇದ್ದರೂ, ಅದರ ಉದ್ದಕ್ಕೂ ಒಂದೇ ರೀತಿ ನಗಿಸುವುದು ಅಷ್ಟು ಸುಲಭವಲ್ಲ. ಆದರೆ ಇಲ್ಲಿ ಕ್ಲೈಮ್ಯಾಕ್ಸ್ ನೋಡುವಾಗ ನಾವು ನಕ್ಕು ನಕ್ಕು ಸುಸ್ತಾಗುತ್ತೇವೆ. ಹಾಸ್ಯದಲ್ಲಿ ಜನರನ್ನು ಅಷ್ಟು ಹೊತ್ತು ನಿಲ್ಲಿಸಿಕೊಂಡಿರುವುದು ನಿರ್ದೇಶಕರ ಸಾಧನೆ ಅಂತಲೇ ಹೇಳಬಹುದು.
ಈ ಸಿನೆಮಾ ಬಂದದ್ದು 1986 ರಲ್ಲಿ.
ಆಗ ಜನರಿಗೆ ಟಿವಿಯೇ ಇನ್ನೂ ಸರಿಯಾಗಿ ಪರಿಚಿತವಾಗಿಲ್ಲದ ಕಾಲ. ಆದರೆ ಆಗಿನ ಕಾಲದಲ್ಲಿಯೇ ಜಾಹೀರಾತನ್ನು ಹೇಗೆ ಮಾಡುತ್ತಾರೆ ಅಂತ ಜನರಿಗೆ ಈ ಸಿನೆಮಾ ತೋರಿಸಿಕೊಟ್ಟಿತು.
“ಇದು ಆನಂದ ಉಪ್ಪಿನಕಾಯಿ ರುಚಿಯ ನೀಡಲು…”
“ಕೆಮ್ಮಿನಿಂದ ಬಳಲುವವರಿಗೆ ಅಮೃತ.. ಆನಂದ ಕಾಫ್ ಸಿರಪ್”
“ಮಳೆ ಬಂದರೇನು.. ಬಿಸಿಲಾದರೇನು.. ಆನಂದ ಛತ್ರಿ ನಮಗಿಲ್ಲವೇನು?”
“ಕಣ್ಣಿನಲ್ಲಿ ಆನಂದ.. ಮನಸ್ಸಿನಲ್ಲಿ ಆನಂದ.. ಕುಟುಂಬದಲ್ಲಿ ಆನಂದ ಆನಂದ ಆನಂದ”
ಈ ಸಾಲುಗಳನ್ನು ಮರೆಯಲಾಗುತ್ತದೆಯೇ?
ಅಲ್ಲದೇ ಅಣ್ಣಾವ್ರು ಈ ಸಿನೆಮಾ ಮೂಲಕ ಆಗಲೇ ಸರಳ ಮದುವೆಯನ್ನು ಪ್ರೋತ್ಸಾಹಿಸಿದ್ದರು. ಅಣ್ಣಾವ್ರು ತಮ್ಮ ತಂಗಿಯ ಮದುವೆಯ ವಿಷಯ ಬಂದಾಗ ಅಜ್ಜಿಗೆ ಹೇಳುವ ಮಾತುಗಳು ಇಂದಿಗೂ ಪ್ರಸ್ತುತ. ಅಲ್ಲದೇ ಡಿಗ್ರಿ ಓದಿರುವ ತಂಗಿ್ಗೆಗೆ ಕೆಲಸಕ್ಕೆ ಅರ್ಜಿ ಹಾಕುವಂತೆ ಹೇಳಿ ಹೆಣ್ಣನ್ನು ಸ್ವಾವಲಂಬಿಯಾಗುವಂತೆ ಸಹ ಪ್ರೋತ್ಸಾಹಿಸುತ್ತಾರೆ. ನನಗಂತೂ ಈ ಸನ್ನಿವೇಶಗಳು ವೈಯುಕ್ತಿಕವಾಗಿ ಬಹಳ ಇಷ್ಟವಾದವು. ನೀವೂ ನೋಡಿ. ನಿಮಗೂ ಇಷ್ಟವಾಗಬಹುದು. ಅಕಸ್ಮಾತ್ ಏನಾದರೂ ಕೊರತೆ ಕಂಡರೆ….
“ಇಲ್ಲ ಎಂದುಕೊಳ್ಳಬೇಡಿ.. ಇದೆ ಎಂದುಕೊಳ್ಳಿ”