ಭಾರತ ಚಿತ್ರರಂಗದ ಸಪ್ತ ಭಾಷಾ ನಟ ಅನಂತನಾಗ್

ಅನಂತನಾಗ್ ಭಾರತ ಚಿತ್ರರಂಗ ಕಂಡ ಸುಪ್ತ ಭಾಷಾ ನಟ, ಅಲ್ಲದೇ ಕನ್ನಡ ಚಿತ್ರರಂಗದ ಪ್ರಸಿದ್ಧ ಹಿರಿಯ ನಟರಲ್ಲಿ ಒಬ್ಬರಾಗಿದ್ದಾರೆ.

ತಮ್ಮ ಸಹಜ ನಟನೆಯಿಂದಲೇ ಭಾರತ ಚಿತ್ರರಂಗದಲ್ಲಿ ಅಪರೂಪದ ಅದ್ಭುತ ನಟ ಎಂಬ ಹೆಸರನ್ನು  ಪಡೆದಿರುವ ಇವರು ದೇಶಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ಜೆ.ಎಚ್. ಪಟೇಲ್ ರ ಸರ್ಕಾರದಲ್ಲಿ ಮಂತ್ರಿಯಾಗಿಯು ಕೂಡ ಕಾರ್ಯನಿರ್ವಹಿಸಿದ್ದಾರೆ.  

ಸೆಪ್ಟೆಂಬರ್ ೪, ೧೯೪೮ ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಶಿರಾಲಿಯಲ್ಲಿ  ಸದಾನಂದ ನಾಗರಕಟ್ಟೆ ಮತ್ತು ಆನಂದಿ ದಂಪತಿಯ ಮಗನಾಗಿ ಜನಿಸಿದರು. ಇವರ ಪೂರ್ಣ ಹೆಸರು ಅನಂತ ನಾಗರಕಟ್ಟೆ. ತಮ್ಮ ಆರಂಭಿಕ ಶಿಕ್ಷಣವನ್ನು ದಕ್ಷಿಣ ಕನ್ನಡ ಜಿಲ್ಲೆಯ ಆನಂದ ಆಶ್ರಮದಲ್ಲಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಚಿತ್ತಾಪುರ ಮಠದಲ್ಲಿ ಪಡೆದ ಇವರು ಉನ್ನತ ಶಿಕ್ಷಣವನ್ನು ಪಡೆಯಲು ಮುಂಬೈಗೆ ತೆರಳಿದರು.

ಆದರೆ ವಿಧಿಯ ಆಟ ಬಲ್ಲವರಾರು ಅಲ್ಲವೇ?

ಅದೃಷ್ಟ ಯಾರಿಗೆ ಯಾವ ಸಮಯದಲ್ಲಿ ಬರುತ್ತದೆಯೋ ಖಚಿತವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಅನಿರೀಕ್ಷಿತವಾಗಿ ದೊರೆತ ರಂಗಭೂಮಿ ಪ್ರವೇಶದಿಂದ ಕನ್ನಡ, ಕೊಂಕಣಿ ಮತ್ತು ಮರಾಠಿ ಭಾಷೆಯ ನಾಟಕಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿ  ಎಂಟು ವರ್ಷಗಳ ಕಾಲ ರಂಗಭೂಮಿಯನ್ನು ಆಳಿದರು. ಇವರು ಶ್ಯಾಂ ಬೆನಗಲ್ ನಿರ್ದೇಶನದ  ಅಂಕೂರ್ ಚಿತ್ರದಲ್ಲಿ ನಟಿಸುವುದರ ಮೂಲಕ ಚಿತ್ರ ಬಾಲಿವುಡ್  ರಂಗವನ್ನು ಪ್ರವೇಶಿಸಿದರು.

ಅನಂತರ  ನಿಶಾಂತ್, ಕಲಿಯುಗ್, ಗೆಹ್ರಾಯಿ, ಭೂಮಿಕಾ, ಮಂಗಳಸೂತ್ರ್, ಕೊಂಡೋರಾ ಮತ್ತು  ರಾತ್ ಸೇರಿ ಅನೇಕ ಹಿಂದಿ ಚಿತ್ರಗಳಲ್ಲಿ  ನಟಿಸಿದ್ದಾರೆ. ಚಿತ್ರ ರಂಗದಲ್ಲಿ ಕೆಲವು ನಟ, ನಟಿಯರನ್ನು  ಪಂಚ ಭಾಷಾ ತಾರೆ ಎಂದು ಕರೆಯುವ ಪದ್ಧತಿ ಇದೆ. ಆದರೆ ಇದುವರೆಗೂ ಏಳು ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಇವರನ್ನು ಸಪ್ತ ಭಾಷಾ ನಟ ಎಂದು ಕರೆಯುತ್ತಾರೆ. ಅಮೋಲ್ ಪಾಲೇಕರ್ ನಿರ್ದೇಶನದ ಮರಾಠಿ ಚಿತ್ರ ಅನಾಹತ್, ಮಲೆಯಾಳಂ ಚಿತ್ರ ಸ್ವಾತಿ ತಿರುನಾಳ್, ತೆಲುಗಿನ ಅನುಗ್ರಹಂ, ಇಂಗ್ಲೀಷ್ ಭಾಷೆಯ ಸ್ಟಂಬಲ್ ಚಿತ್ರ ಈ ರೀತಿ ಎಷ್ಟೋ ಅವಿಸ್ಮರಣೀಯ  ಚಿತ್ರಗಳಲ್ಲಿ ನಟಿಸಿದ್ದಾರೆ.

೧೯೭೩ ರಲ್ಲಿ ತೆರೆ ಕಂಡ ಸಂಕಲ್ಪ ಎಂಬ ಚಿತ್ರದಲ್ಲಿ ನಟಿಸುವುದರ ಮೂಲಕ ಕನ್ನಡ ಚಿತ್ರರಂಗವನ್ನು ನಿಚ್ಚಳವಾಗಿ ಪ್ರವೇಶಿಸಿದರು. ಈ ಚಿತ್ರವು ಇದುವರೆಗೂ ಕನ್ನಡ ಚಿತ್ರರಂಗದಲ್ಲಿ  ಅನುಸರಿಸಿಕೊಂಡು ಬರುತ್ತಿದ್ದ ಸಿದ್ಧಸೂತ್ರಗಳಿಗೆ ತಡೆಯೊಡ್ಡಿ ಹೊಸ ಅಲೆಯನ್ನು  ಸೃಷ್ಟಿಸಿತ್ತು.

( ಮುಂದುವರೆಯುವುದು )

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply