ಅರ್ಜುನ್ ಸರ್ಜಾ ಭಾರತ ಚಿತ್ರರಂಗ ಕಂಡ ಪಂಚ ಭಾಷೆಯ ಪ್ರಸಿದ್ಧ ನಟ. ಕೇವಲ ನಟ ಮಾತ್ರವಲ್ಲದೆ ಕಥೆಗಾರ, ನಿರ್ಮಾಪಕ ಮತ್ತು ನಿರ್ದೇಶಕರಾಗಿಯು ಗುರ್ತಿಸಿಕೊಂಡಿದ್ದು ಸಾಹಸ ಪ್ರಧಾನ ಚಿತ್ರಗಳಲ್ಲಿಯೇ ಹೆಚ್ಚು ನಟಿಸಿರುವ ಇವರಿಗೆ ಅಭಿಮಾನಿಗಳು ಆಕ್ಷನ್ ಕಿಂಗ್ ಎಂಬ ಬಿರುದು ನೀಡಿದ್ದಾರೆ.
ಅಗಸ್ಟ್ ೧೫, ೧೯೬೨ ರಂದು ಮೈಸೂರು ಜಿಲ್ಲೆಯ ಮಧುಗಿರಿಯಲ್ಲಿ ಶಕ್ತಿ ಪ್ರಸಾದ್ ಮತ್ತು ಲಕ್ಷ್ಮಿದೇವಿ ದಂಪತಿಯ ಮಗನಾಗಿ ಜನಿಸಿದರು. ಇವರ ಪೂರ್ಣ ಹೆಸರು ಶ್ರೀನಿವಾಸ ಸರ್ಜಾ ಅಶೋಕ ಬಾಬು ಶಕ್ತಿ ಪ್ರಸಾದ್. ಇವರ ತಂದೆ ಹೆಸರು ಶಕ್ತಿ ಪ್ರಸಾದ್, ಇವರ ಬಗ್ಗೆ ತಿಳಿಯದವರು ಯಾರಾದರು ಇದ್ದಾರೆಯೇ?
೧೯೬೦ ರ ದಶಕದಲ್ಲಿ ಕನ್ನಡ ಚಿತ್ರರಂಗದ ಶ್ರೇಷ್ಠ ನಟರಾಗಿ ಹಲವಾರು ಪಾತ್ರಗಳಲ್ಲಿ ನಟಿಸಿದ್ದರು. ಮತ್ತು ತಾಯಿ ಲಕ್ಷ್ಮೀ ದೇವಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ೧೯೮೧ ರಲ್ಲಿ ತೆರೆ ಕಂಡ ಸಿಂಹದ ಮರಿ ಸೈನ್ಯ ಎಂಬ ಕನ್ನಡ ಚಿತ್ರದಲ್ಲಿ ಬಾಲ ಕಲಾವಿದನಾಗಿ ನಟಿಸುವ ತಮ್ಮ ಚಿತ್ರ ರಂಗದ ಜೀವನವನ್ನು ಆರಂಭಿಸಿದರು. ಅನಂತರ ಸೀಮಿತ ಚಿತ್ರಗಳಲ್ಲಿ ಪಾತ್ರವನ್ನು ನಿರ್ವಹಿಸಿದ ಇವರು ೧೯೮೪ ರಲ್ಲಿ ತೆರೆ ಕಂಡ ಮಳೆ ಬಂತು ಮಳೆ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿದರು. ಇದೇ ಸಂದರ್ಭದಲ್ಲಿ ರಾಮಾ ನಾರಾಯಣ್ ನಿರ್ಮಾಣದ ನಂದ್ರಿ ಎಂಬ ತಮಿಳು ಚಿತ್ರದಲ್ಲಿ ನಟಿಸುವ ಮೂಲಕ ತಮಿಳು ಚಿತ್ರರಂಗವನ್ನು ಪ್ರವೇಶಿಸಿದರು.
ಮೂರು ವರ್ಷಗಳ ನಂತರ ೧೯೯೨ ರಲ್ಲಿ ತೆರೆ ಕಂಡ ಸೇವಗನ್ ಎಂಬ ತಮಿಳು ಚಿತ್ರವನ್ನು ನಿರ್ದೇಶಿಸುವುದರ ಮೂಲಕ ನಿರ್ದೇಶಕರಾಗಿಯೂ ಬಡ್ತಿ ಪಡೆದರು. ಶಿವನಾಗ, ಪ್ರತಾಪ್,ಪ್ರೇಮಾಗ್ನಿ ಮತ್ತು ಅಳೀಮಯ್ಯ ಅಂತಹ ಯಶಸ್ವಿ ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿದರೂ ಕನ್ನಡ ಚಿತ್ರರಂಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅವಕಾಶಗಳು ಸಿಗಲಿಲ್ಲ. ಆದರೆ ಅದೃಷ್ಟವೆಂಬಂತೆ ತಮಿಳು ಚಿತ್ರರಂಗದಲ್ಲಿ ಅವಕಾಶಗಳು ದೊರೆತು ಜೈಹಿಂದ್,ಕರ್ಣ, ಕುರುದಿಪನಲ್ ಸೇರಿ ಅನೇಕ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದರು. ೧೯೯೯ ರಲ್ಲಿ ತೆರೆ ಕಂಡ ಪಾಲಿಟಿಕಲ್ ಥ್ರಿಲ್ಲರ್ ಮುಧಾಲವನ್ ತಮಿಳು ಚಿತ್ರದಿಂದ ಇವರ ಜನಪ್ರಿಯತೆ ಇನ್ನೂ ಬೆಳೆಯಿತು.
ಇವರು ನಿರ್ವಹಿಸಿದ ಒನ್ ಡೇ ಸಿ.ಎಂ.ಆಫ್ ತಮಿಳು ನಾಡು ಪಾತ್ರದಿಂದ ಯಶಸ್ಸು ಪಡೆದ ಈ ಚಿತ್ರ ತೆರೆ ಕಂಡ ಚಿತ್ರ ಮಂದಿರಗಳಲ್ಲಿ ನೂರು ದಿನಗಳ ಪ್ರದರ್ಶನವನ್ನು ಕಂಡಿತು. ತೆಲುಗಿನಲ್ಲಿ ಒಕೇ ಒಕ್ಕಡು ಹೆಸರಿನಲ್ಲಿ ತೆರೆ ಕಂಡ ಈ ಚಿತ್ರವನ್ನು ಹಿಂದಿಯಲ್ಲಿ ನಾಯಕ್ ಹೆಸರಿನಲ್ಲಿ ರಿಮೇಕ್ ಮಾಡಲಾಗಿದ್ದ ಈ ಚಿತ್ರದಲ್ಲಿ ಅನಿಲ್ ಕಪೂರ್ ನಾಯಕ್ ನಟನಾಗಿ ನಟಿಸಿದ್ದರು. ನಂತರ ಜಂಟಲ್ ಮೆನ್,ರಾಮಾ ರಾಮಾ ಕೃಷ್ಣ ಕೃಷ್ಣ, ವಂದೇಮಾತರಂ,ಮಾಸಿ,ಗಿರಿ,ಅಯ್ಯ, ಕಬ್ಬು ಪುಲಿ, ಅಭಿಮನ್ಯು, ಕಿಲ್ಲರ್,ಹೀರೋ, ವಿಸ್ಮಯ, ಜ್ಯಾಕ್ ಆಂಡ್ ಡೇನಿಯಲ್, ನೋಟಕು ನೋಟು, ಗೇಮ್, ಅಟ್ಟಹಾಸ, ಲೈ, ದಿ.ಫಾರೆಸ್ಟ್, ಶ್ರೀ ಮಂಜುನಾಥ, ಪ್ರತಾಪ್, ಪ್ರೇಮಾಗ್ನಿ, ಶಿವನಾಗ, ಗೂಢಾಚಾರಿ ನಂ.೧, ನಾ ಪೇರು ಸೂರ್ಯ,ದಿ ಫಾರೆಸ್ಟ್, ಫೈನಲ್ ಕಟ್ ಆಫ್ ಡೈರೆಕ್ಟರ್, ರಾಣಾ, ರಾಣಿ ರಾಣಮ್ಮ, ಪ್ರೇಮ ಬರಹ ಮತ್ತು ಕುರುಕ್ಷೇತ್ರ ಸೇರಿ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಯ ೧೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟ, ನಾಯಕ ನಟ, ಪೋಷಕ ನಟ ಮತ್ತು ಖಳ ನಾಯಕನ ಪಾತ್ರವನ್ನು ನಿರ್ವಹಿಸಿರುವ ಇವರು ಹಲವಾರು ಚಿತ್ರಗಳನ್ನು ನಿರ್ಮಿಸಿದ್ದಲ್ಲದೆ ಹನ್ನೊಂದು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಇವರು ನಟಿಸಿದ ನೂರಕ್ಕೂ ಹೆಚ್ಚು ಚಿತ್ರಗಳು ಸಾಹಸ ಪ್ರಧಾನ ಚಿತ್ರಗಳೇ ಆಗಿವೆ.ತಮ್ಮ ಖಾಸಗಿ ಜೀವನದಲ್ಲಿ ಹಲವಾರು ಸಮಾಜ ಮುಖಿ ಕೆಲಸಗಳನ್ನು ಮಾಡಿರುವ ಇವರು ಚೆನೈ ನಲ್ಲಿ ಒಂದು ಆಂಜನೇಯನ ದೇವಸ್ಥಾನವನ್ನು ಕಟ್ಟಿಸಿದ್ದಾರೆ.
ನಿವೇದಿತ ಅರ್ಜುನ್ ಎಂಬುವವರನ್ನು ವಿವಾಹವಾಗಿರುವ ಇವರಿಗೆ ಐಶ್ವರ್ಯ ಮತ್ತು ಅಂಜನಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಥೆ, ಚಿತ್ರ ಕಥೆ ಬರೆದು ನಿರ್ಮಿಸಿ ನಿರ್ದೇಶಿಸಿದ ಪ್ರೇಮ ಬರಹ ಎಂಬ ಕನ್ನಡ ಚಿತ್ರದ ಮೂಲಕ ಮಗಳು ಐಶ್ವರ್ಯಾ ರನ್ನು ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.