ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್

ವಿಶ್ವ ಕಂಡ ಅಪ್ರತಿಮ ಶಹನಾಯಿ ವಾದಕ , ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರು ಬಿಹಾರದ ದುಮ್ರಾನ್ ನಲ್ಲಿ ಮಾರ್ಚ್ ೨೧, ೧೯೧೬ ರಂದು ಜನಿಸಿದರು….ಶಹನಾಯಿ ವಾದನದ ವ್ಯಾಕರಣವನ್ನು ಅವರಷ್ಟು ಆಳವಾಗಿ ಬಲ್ಲವರು ವಿರಳ ಅಂತ ಹೇಳಬಹುದು….

ಅವರ ಶಹನಾಯಿ ವಾದ್ಯದಿಂದ ಹೊರಹೊಮ್ಮಿದ ನಾದ ಚಿರಸ್ಮರಣೀಯ…. ಭಾರತದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರವೆಂದೇ ಪರಿಗಣಿಸಲಾಗುವ ವಾರಣಾಸಿಯ ರೂಪಕವೇ ಉಸ್ತಾದ್ ಬಿಸ್ಮಿಲ್ಲಾ ಖಾನ್ ಎಂದರೆ ತಪ್ಪಾಗಲಾರದು..

ಉಪಖಂಡದಲ್ಲಷ್ಟೇ ಅಲ್ಲದೇ ಪಶ್ಚಿಮ ರಾಷ್ಟ್ರಗಳಲ್ಲೂ ತಮ್ಮ ಮಂಗಳಕರ ನಾದದಿಂದ ಶಹನಾಯಿ ಕಲೆಗೆ ಹಿರಿಮೆಯನ್ನು ದೊರಕಿಸಿಕೊಟ್ಟ ಅಪರೂಪದ ಕಲಾವಿದ ನಮ್ಮ ಉಸ್ತಾದ್ ಅವರು…. ” ಮಸ್ಜಿದ್ ಮೆ ನಮಾಜ್ , ಮಂದಿರ ಮೆ ರಿಯಾಜ್ ” ಎನ್ನುವ ತತ್ವದೊಂದಿಗೆ ಭಾರತದ ಭಾತೃತ್ವವನ್ನು ಸಾರಿದ ದಿವ್ಯ ಚೇತನ….ಗಂಗೆಯ ತಟದಲ್ಲಿ ಜೀವನವನ್ನು ಕಳೆದ ಉಸ್ತಾದ್ ಶಾಂತಿ, ಸಹಬಾಳ್ವೆ, ಏಕತೆಯನ್ನು ಪಾರದರ್ಶಕವಾಗಿ ಪಾಲಿಸಿ ಸಾಂಸ್ಕೃತಿಕ ರಾಯಭಾರಿಯಾಗಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದರು..

ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಮತ್ತು ಸಂವಿಧಾನ ಜಾರಿಗೆ ಬಂದ ಶುಭ ಸಂದರ್ಭದಲ್ಲಿ ಅಂದಿನ ಪ್ರಧಾನಿ ನೆಹರು ಅವರ ಉಪಸ್ಥಿತಿಯಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಶಹನಾಯಿ ವಾದನವನ್ನು ನುಡಿಸಿದ್ದು ಅವರ ಅಪಾರ ಜನಪ್ರಿಯತೆಗೆ ಸಾಕ್ಷಿ…. ಹಿಂದಿ ಚಿತ್ರ ” ಗೂಂಜ್ ಉಠಿ ಶಹನಾಯಿ ” ಚಿತ್ರದಲ್ಲಿ ಖ್ಯಾತ ಸಿತಾರ್ ವಾದಕ ” ಅಬ್ದುಲ್ ಹಲೀಮ್ ಜಫರ್ ಖಾನ್ ” ಅವರೊಂದಿಗಿನ ಜುಗಲ್ ಬಂದಿ ಅವಿಸ್ಮರಣೀಯ….

ಅದೇ ರೀತಿ ಕನ್ನಡದ ವರನಟ ಡಾ. ರಾಜ್ ಕುಮಾರ್ ಅವರು ನಟಿಸಿರುವ ” ಸನಾದಿ ಅಪ್ಪಣ್ಣ” ಚಿತ್ರಕ್ಕೆ ಶಹನಾಯಿ ನುಡಿಸಿದ್ದು ಕನ್ನಡಿಗರ ಪುಣ್ಯವೇ ಸರಿ…‌.ಆ ಚಿತ್ರದ ಆತ್ಮ ಉಸ್ತಾದ್ ಬಿಸ್ಮಿಲ್ಲಾ ಖಾನ್…. ಸಂಗೀತ ಸಾರ್ವಭೌಮ ಜಿ.ಕೆ.ವೆಂಕಟೇಶ್ ಅವರು ರಾಗ ಸಂಯೋಜಿಸಿದ ” ಕರೆದರೂ ಕೇಳದೆ” ಹಾಡಿಗೆ ಶಹನಾಯಿ ನುಡಿಸಿ, ಅಣ್ಣಾವ್ರ ಅದ್ಭುತವಾದ ಅಭಿನಯ ಮತ್ತು ಎಸ್. ಜಾನಕಿ ಅಮ್ಮನವರ ಗಾನಸುಧೆಗೆ ಪರವಶರಾಗಿ , ಅವರನ್ನು ಮುಕ್ತಕಂಠದಿಂದ ಹೊಗಳಿ, ಆಶೀರ್ವದಿಸಿದ್ದು ಅವರ ಹೃದಯ ವೈಶಾಲ್ಯತೆಗೆ ಇನ್ನೊಂದು ನಿದರ್ಶನ….

ಅಪಾರವಾದ ಖ್ಯಾತಿ, ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರೂ ಅತ್ಯಂತ ಸರಳವಾಗಿ ಬದುಕಿದವರು….ಅವರಿಗೆ ಭಾರತ ರತ್ನ ಸಂದ ಸಂದರ್ಭದಲ್ಲಿ ಅಭಿಮಾನಿ ವೃಂದವು ಇನ್ನು ಮುಂದೆಯಾದರೂ ನಮ್ಮ ಉಸ್ತಾದ್ ಅವರು ಒಂದು ಅಚ್ಚುಕಟ್ಟಾದ , ಸುಸಜ್ಜಿತವಾದ, ಹಲವು ವರ್ಣಗಳ ಹೊಳಪಿನಿಂದ ಕಂಗೊಳಿಸುವ ಮನೆಯಲ್ಲಿ ವಾಸ್ತವ್ಯ ಹೂಡಬಹುದು ಎಂದು ಭಾವಿಸಿದ್ದಾಗ , ” ಭಾರತ ರತ್ನ ಸಿಕ್ಕ ಕ್ಷಣ ನನ್ನ ರಕ್ತ ಬದಲಾಗುವುದಿಲ್ಲ, ನನ್ನ ಮೊಗವು ಇನ್ನೂ ಕಾಂತಿಯುತವಾಗಿ ಹೊಳೆಯುವುದಿಲ್ಲ” ಎಂದು ನುಡಿದು ಎಂದಿನಂತೆ ತಮ್ಮ ಮನೆಗೆ ನಡೆದ ಸರಳತೆಯ ಸಂತ ಅವರು. ‌‌‌.

ಶಹನಾಯಿ ವಾದನದ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸಿದ ಮಹಾನ್ ಚೇತನಕ್ಕೆ ಭಾವಪೂರ್ಣ ನಮನಗಳು.

ಲೇಖಕರು: ಅರುಣ್ ಕುಮಾರ್ ಮೋಘಾ, ಕಲಬುರಗಿ ….ವೃತ್ತಿ- ಪ್ರೌಢಶಾಲಾ ಗಣಿತ ಶಿಕ್ಷಕ…. ಪ್ರವೃತ್ತಿ – ಹವ್ಯಾಸಿ ಬರಹಗಾರ ಹವ್ಯಾಸಗಳು – ಪುಸ್ತಕಗಳನ್ನು ಓದುವುದು , ಸಂಗೀತ ಆಲಿಸುವುದು, ಪ್ರಕೃತಿಯ ಆರಾಧಕ…

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply