ಭೂಕೈಲಾಸ

62 ವರ್ಷಗಳ ಹಿಂದಿನ ಸಿನಿಮಾ (1958). ಅಣ್ಣಾವ್ರ ವಯಸ್ಸು ಆಗ 29 ವರ್ಷಗಳು. ಬಲು ಮುದ್ದಾಗಿ ಕಾಣಿಸುತ್ತಾರೆ, ಜೊತೆಗೆ ಅತ್ಯಂತ ಒಳ್ಳೆಯ ನಟನೆ. ಎನ್.ಟಿ.ಆರ್. ಈ ಪಾತ್ರದಲ್ಲಿ ನಟಿಸಿದ ತೆಲುಗು ಭೂಕೈಲಾಸ್ ಕೂಡ ಇದರೊಂದಿಗೇ ಚಿತ್ರಿತವಾಯಿತಂತೆ. ರಾಮರಾಯರು ರಾಜ್ ಅವರ ಪಾತ್ರ ನಿರ್ವಹಣೆಗೆ ಮನಸೋತಿದ್ದರಂತೆ.

ತೆಲುಗಿನಲ್ಲಿ ಬೇರೆಯವರು ಪಾತ್ರ ವಹಿಸಿದ ಪಾತ್ರಗಳು ಬಹುಶಃ ರಾವಣ, ನಾರದ ಮತ್ತು ಈಶ್ವರ. ಉಳಿದವೆಲ್ಲಾ ಕಾಮನ್ ಫ್ಯಾಕ್ಟರ್ಸ್.

ಕಥೆ ಬಹಳ ಸರಳವಾದದ್ದು. ತಾಯಿ ಕೈಕಸಿಗಾಗಿ (ಇತ್ತೀಚೆಗೆ ‘ಜನಪ್ರಿಯ’ವಾದ ಪಾತ್ರ!) ಆತ್ಮಲಿಂಗ ತರಲು ತಪಸ್ಸಿಗೆ ಹೊರಡುತ್ತಾನೆ ರಾವಣ (ರಾಜ್‍ಕುಮಾರ್). 

ಈಶ್ವರನನ್ನು (ಕೆ.ಎಸ್.ಅಶ್ವತ್ಥ್) ಕುರಿತು ಘೋರ ತಪಸ್ಸು ಮಾಡುತ್ತಾನೆ ರಾವಣ. ಸಿ.ಎಸ್. ಜಯರಾಮನ್ ಸ್ವರದಲ್ಲಿ ‘ಭಕ್ತವತ್ಸಲಾ ಬಾರಾ’ ಎಂದು ಹಾಡುತ್ತಾನೆ ಕೂಡ. ತಪೋಭಂಗ ಮಾಡಲು ಇಂದ್ರ ಮಾಡಿದ ಪ್ರಯತ್ನವೆಲ್ಲಾ ವ್ಯರ್ಥವಾಗುತ್ತದೆ. ಆದರೆ ಪಾರ್ವತಿಗೆ (ಬಿ.ಸರೋಜಾದೇವಿ) ಚಿಂತೆ. ಆತ್ಮಲಿಂಗ ಲಂಕೆಗೆ ಹೋದರೆ ಗತಿಯೇನು ಎಂದು. ಅದಕ್ಕೇ ತಾನು ವರ ಕೊಡುವ ಸಮಯದಲ್ಲಿ ಬರುತ್ತಾಳೆ. ತನ್ನ ಅಣ್ಣ ಭಗವಂತ ವಿಷ್ಣುವಿನ ಮೊರೆ ಹೋದದ್ದರಿಂದ ಅವನು ರಾವಣನೊಳಗೆ ಮಾಯೆಯನ್ನು ಇಟ್ಟು, ಅವನು ಆತ್ಮಲಿಂಗವನ್ನು ಮರೆತು ಪಾರ್ವತಿಯನ್ನೇ ಬಯಸುವಂತೆ ಮಾಡುತ್ತಾನೆ! ವಿಧಿಯಿಲ್ಲದೇ ಪಾರ್ವತಿ ಅವನ ಹಿಂದೆ ನಡೆಯುತ್ತಾಳೆ.

ನಾರದ (ಕಲ್ಯಾಣ್‍ಕುಮಾರ್) ಪಾರ್ವತಿಯನ್ನು ಸಂಧಿಸಿ, ಇದು ವಿಷ್ಣುವಿನ ಮಾಯೆಯೆಂದಾಗ ಸಿಟ್ಟಿನಿಂದ ಪಾರ್ವತಿ ವಿಷ್ಣುವನ್ನು ಈ ರಾವಣನಿಂದಲೇ ವಿಷ್ಣುವಿಗೆ ಪತಿವಿಯೋಗ ಆಗಲೆಂದು ಶಪಿಸುತ್ತಾಳೆ. ಆಗ ನಾರದ ಸಂತೋಷದಿಂದ ಶೀರ್ಗಾಳಿ ಗೋವಿಂದರಾಜನ್ ಅವರ ದನಿಯಲ್ಲಿ ‘ರಾಮನ ಅವತಾರ ರಘುಕುಲ ಸೋಮನ ಅವತಾರ’ ಎಂದು ಹಾಡಿ ಇಡೀ ರಾಮಾಯಣದ ಮುಖ್ಯ ದೃಶ್ಯಗಳನ್ನು ನಾಟಕದ ರೂಪದಲ್ಲಿ ತೋರಿಸುತ್ತಾನೆ ಪಾರ್ವತಿಗೆ.

ರಾವಣನಿಗೆ ಪಾರ್ವತಿಯ ಜಾಗದಲ್ಲಿ ಕಾಳಿ ಕಂಡಾಗ ಅವಳನ್ನು ಮರಳಿ ಕೈಲಾಸದಲ್ಲಿ ಬಿಡುತ್ತಾನೆ ರಾವಣ. ಅವನನ್ನು ಅನೇಕ ಸಲ ಕಂಡು ಮೋಹಿಸುತ್ತಾಳೆ ಮಯಾಸುರನ (ತೆಲುಗು ನಟ ಎಸ್.ವಿ.ರಂಗಾರಾವ್) ಮಗಳು ಮಂಡೋದರಿ (ಜಮುನಾ). 

ಇವಳನ್ನೇ ಪಾರ್ವತಿ ಎಂದು ಭ್ರಮಿಸುವಂತೆ ಮಾಡಿ ರಾವಣ ಮಂಡೋದರಿಯರ ವಿವಾಹ ಮಾಡಿಸುತ್ತಾನೆ ನಾರದ. 

ಲಂಕೆಗೆ ಅವಳನ್ನು ಕರೆತಂದು ತಾಯಿ ಕೈಕಸಿಗೆ (ಇ.ವಿ.ಸರೋಜ) ನಿನ್ನ ಸೊಸೆ ಪಾರ್ವತಿ ಎಂದಾಗ ನಿಜ ತಿಳಿಯುತ್ತದೆ ರಾವಣನಿಗೆ. ಮತ್ತೆ ಶಿವನ ಮುಂದೆ ಹೋಗಿ ಸಿ.ಎಸ್.ಜಯರಾಮನ್ ಧ್ವನಿಯಲ್ಲಿ ‘ತರವೇ ವರದಾನ’ ಎನ್ನುತ್ತಾ ಕುತ್ತಿಗೆಯನ್ನು ಕತ್ತರಿಸಿಕೊಳ್ಳುತ್ತಾನೆ. ಆತ್ಮಲಿಂಗವನ್ನು ಕೊಡುತ್ತಾನೆ ಶಿವ. ಎಲ್ಲೂ ನೆಲದ ಮೇಲಿಡಬಾರದೆಂದು ಎಚ್ಚರಿಸುತ್ತಾನೆ.

ನಾರದ ಗಣಪತಿಯನ್ನು ರೇಗಿಸಿದಾಗ ಗಣಪತಿ ಪುಟ್ಟ  ಹುಡುಗನ ವೇಷ ಧರಿಸಿ ‘ಈ ದೇಹ ಮೂರು ದಿನ ಅಲ್ಲವೇನು?’ ಎಂಬ ಅದ್ಭುತ ತತ್ವಪದ ಹಾಡುತ್ತಾ ಹಸುಗಳನ್ನು ಅಟ್ಟುತ್ತಿರುತ್ತಾನೆ. ರಾವಣ ಅವನ ಕೈಗೆ ಲಿಂಗವನ್ನು ಕೊಟ್ಟು ಅರ್ಘ್ಯ ಕೊಡಲು ಹೋದಾಗ, ಮೂರು ಸಲ ರಾವಣಾ ಎಂದು ಕೂಗಿ ಅಲ್ಲೇ ಮರಳ ಮೇಲೆ ಇಟ್ಟುಬಿಡುತ್ತಾನೆ. ಗಣಪತಿಗೆ ಹೊಡೆಯುತ್ತಾನೆ ರಾವಣ. ಲಿಂಗವು ಇಡಲ್ಪಟ್ಟ ಆ ಸ್ಥಳ ಗೋಕರ್ಣವು ಭೂಕೈಲಾಸ ಎಂದು ಹೆಸರು ಪಡೆಯುತ್ತದೆ. ಲಿಂಗಕ್ಕೇ ತಲೆ ಚೆಚ್ಚಿಕೊಳ್ಳುತ್ತಿದ್ದ ರಾವಣನ ಬಳಿಗೆ ಅವನ ಹೆಂಡತಿ, ತಾಯಿ, ಶಿವ, ಪಾರ್ವತಿ, ಗಣೇಶ ಮತ್ತು ನಾರದ ಬರುತ್ತಾರೆ.

ಇನ್ನೂ ಅನೇಕ ಹಾಡುಗಳಿವೆ. ಮಂಡೋದರಿಯ ಏಳು ಸಖಿಯರಲ್ಲಿ ಒಬ್ಬಳು ಇಂದಿಗೂ ಜನಪ್ರಿಯ ಟಿವಿ ಮತ್ತು ಸಿನಿಮಾ ನಟಿ ಎಂ.ಎನ್.ಲಕ್ಷ್ಮೀದೇವಿಯವರು. ಸುಮಾರು ಅರವತ್ತು ವರ್ಷಗಳಿಂದ ಚಿತ್ರರಂಗದಲ್ಲಿರುವ ಪ್ರತಿಭಾವಂತ ನಟಿ. ಹಾಸ್ಯ, ಮನೆಮುರುಕಿ ಇಂತಹ ಅನೇಕ ಪಾತ್ರಗಳನ್ನು ಪ್ರಭಾವಶಾಲಿಯಾಗಿ ನಿರ್ವಹಿಸಿರುವ ನಟಿ.

ಜನಪ್ರಿಯ ನೃತ್ಯ ಪಟು ಗೋಪಿಕೃಷ್ಣ ಅವರ ಲಾಲಿತ್ಯ ಹಾಗೂ ರೌದ್ರ ನರ್ತನವಿದೆ.

ನಾರದನ ಪಾತ್ರ ಬಂದಾಗ ಪ್ರತಿಯೊಬ್ಬರೂ ಅದನ್ನು ಬಹಳ ಖುಷಿಯಾಗಿ ನಿರ್ವಹಿಸಿದ್ದನ್ನು ನಾನು ನೋಡಿದ್ದೇನೆ. ಈ ಚಿತ್ರದ ಕಲ್ಯಾಣ್ ಕುಮಾರ್ ಅವರಂತೆಯೇ ಖುಷಿಯಿಂದ ನಟಿಸಿರುವ ಮಹಾಸತಿ ಅನಸೂಯ ಮತ್ತು ಮೂರೂವರೆ ವಜ್ರಗಳು ಚಿತ್ರಗಳಲ್ಲಿನ ರಾಜ್‍ಕುಮಾರ್, ಪಾರ್ವತಿ ಕಲ್ಯಾಣದ ಉದಯಕುಮಾರ್, ಶ್ರೀನಿವಾಸ ಕಲ್ಯಾಣ ಮತ್ತು ಶ್ರೀಕೃಷ್ಣ ರುಕ್ಮಿಣೀಸತ್ಯಭಾಮಾದಲ್ಲಿನ ಶ್ರೀನಾಥ್ ಹಾಗೂ ಭಕ್ತ ಪ್ರಹ್ಲಾದ ಮತ್ತು ನಾರದ ವಿಜಯದ ಅನಂತನಾಗ್ ತಕ್ಷಣಕ್ಕೆ ನೆನಪಾಗುತ್ತಿದ್ದಾರೆ.

ರಾಜ್‍ರವರದು ಅಮೋಘ ಅಭಿನಯ. ಪಾರ್ವತಿಯನ್ನು ಮೋಹಿಸಿ ಕರೆದೊಯ್ಯುವಾಗಿನ ಅಭಿಲಾಷೆ, ಆಕೆ ಪಾರ್ವತಿ ಎಂದು ಅರಿವಾದಾಗ ಆಗುವ ಪಶ್ಚಾತ್ತಾಪ, ಮಂಡೋದರಿಯನ್ನು ಪಾರ್ವತಿ ಎಂದೇ ತಿಳಿದು ಮಾಡುವ ಪ್ರೇಮ, ತಾಯಿಯ ಬೈಗುಳ ಕಂಡು ದುಃಖಿಸುವುದು ಎಲ್ಲದರಲ್ಲೂ ಅಮೋಘ.

ಬಬ್ರುವಾಹನ ಚಿತ್ರದ ಆರಾಧಿಸುವೆ ಮದನಾರಿ ಹಾಡಿನಂತೆ ಇಲ್ಲಿಯೂ ಅಣ್ಣಾವ್ರು ಒಂದು ಹಾಡಿನಲ್ಲಿ ವೀಣೆ, ಕೊಳಲು, ಢೋಲಕ್, ಘಟ ಮತ್ತು ಮೋರ್ಸಿಂಗ್ ನುಡಿಸಿದ್ದಾರೆ.

ಲೇಖಕರು: ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply