“ಭೂತನಾಥ್ 2008”

"ಭೂತನಾಥ್ 2008"

ಕೈಲಾಸನಾಥ್ ಎಂಬ ವ್ಯಕ್ತಿ ಸತ್ತು ಭೂತವಾಗಿದ್ದರೂ ಸಹ ತನ್ನ ಬಂಗಲೆಯಲ್ಲಿಯೇ ವಾಸವಿರುತ್ತಾನೆ. ಜೊತೆಗೆ ಬೇರೆ ಯಾರಿಗೂ ಆ ಬಂಗಲೆಯಲ್ಲಿ ವಾಸ ಮಾಡಲು ಬಿಡದೇ, ಯಾರು ಬಂದರೂ ಅವರನ್ನು ಹೆದರಿಸಿ ಓಡಿಸುತ್ತಿರುತ್ತಾನೆ. ಅಂತಹಾ ಭೂತಬಂಗಲೆಗೆ ನಮ್ಮ ಪುಟ್ಟ ರಾಜಕುಮಾರ ಬಂಕುವಿನ ಆಗಮನವಾಗುತ್ತದೆ.

ಎಲ್ಲರನ್ನೂ ಹೆದರಿಸಿ ಓಡಿಸುತ್ತಿದ್ದ ಈ ಕೈಲಾಸನಾಥನೆಂಬ ಭೂತ ಮಹಾರಾಜ ಬಂಕುವಿನ ಮುಗ್ಧತೆಗೆ ಸೋತು ಬಿಡುತ್ತಾನೆ. ಪುಟಾಣಿ ಬಂಕುವಿನ ಸ್ನೇಹಿತನಾಗಿ ಅವನೊಡನೆ ಕಾಲ ಕಳೆಯುತ್ತಾ ಖುಷಿಯಾಗಿರುತ್ತಾನೆ. ಆ ಮಗುವನ್ನು ಭೂತನಾಥ ಎಷ್ಟು ಹಚ್ಚಿಕೊಳ್ಳುತ್ತಾನೆ ಎಂದರೆ, ಇವರನ್ನು ತನ್ನ ಬಂಗಲೆಯಿಂದ ಓಡಿಸಿ ಬಿಡುವುದನ್ನೇ ಮರೆತುಬಿಡುತ್ತಾನೆ ಭೂತನಾಥ.

ಬೇರೆ ಎಲ್ಲರನ್ನೂ ಹೆದರಿಸುತ್ತಿದ್ದ ಭೂತನಾಥ ಈ ಮಗುವಿಗೆ ಮಾತ್ರ ಸೋತದ್ದೇಕೆ…?

ಇದರ ಹಿಂದೆ ಒಂದು ಹೃದಯವಿದ್ರಾವಕ ಕಥೆಯಿದೆ!

ಆ ಕಥೆ ಎಷ್ಟು ಆಪ್ತವಾಗುತ್ತದೆ ಎಂದರೆ ನಮ್ಮೆಲ್ಲರ ಹೃದಯವನ್ನೂ ಹಿಂಡಿ ನಮ್ಮ ಕಣ್ಣನ್ನು ತೋಯಿಸುತ್ತದೆ. ನಮ್ಮನಿಮ್ಮೆಲ್ಲರ ಮನೆಗಳಲ್ಲಿಯೂ ಇಂತಹ ಒಂದು ಕಥೆ ಇರಬಹುದು.

ಫಾರಿನ್ನಿಗೆ ಹೋದ ಮಗನ ಬರುವಿಕೆಗೆ ಕಾಯುತ್ತಲೇ ಭೂತನಾಥನ ಹೆಂಡತಿ ಪ್ರಾಣ ಬಿಡುತ್ತಾಳೆ. ಆಗ ತಾಯಿಯ ಅಂತ್ಯಸಂಸ್ಕಾರಕ್ಕೆಂದು ಬಂದ ಮಗನಿಗೆ ಆಗಲೇ ಒಂದು ಮದುವೆಯಾಗಿ, ಪುಟ್ಟ ಮಗು ಸಹ ಇರುತ್ತದೆ. ಮಗನ ಮೇಲೆ ಕೋಪವಿದ್ದರೂ, ಆ ಮಗುವನ್ನು ಅಂದರೆ ತನ್ನ ಮೊಮ್ಮಗುವನ್ನು ಭೂತನಾಥ ಬಹಳ ಹಚ್ಚಿಕೊಂಡುಬಿಡುತ್ತಾನೆ.

ಸ್ವಲ್ಪ ದಿನ ಕಳೆದ ನಂತರ ಮಗ ಈ ಮನೆಯನ್ನು ಮಾರಿ ತಮ್ಮೊಂದಿ್ಗೆಗೆ ಫಾರಿನ್ನಿಗೆ ಬರುವಂತೆ ತಂದೆಯನ್ನು ಕರೆಯುತ್ತಾನೆ. ಆದರೆ ಭೂತನಾಥ ಮನೆಮಾರಲು ಒಪ್ಪುವುದಿಲ್ಲ. ಆ ಮನೆಯೊಂದಿಗೆ ತನ್ನ ನೆನಪು ಬೆಸೆದುಕೊಂಡಿದೆ, ತಾನು ಮಾರುವುದಿಲ್ಲ ಅಂತಾನೆ. ಮಗ-ಸೊಸೆ ಕೋಪಿಸಿಕೊಂಡು ಮೊಮ್ಮಗನನ್ನು ಕರೆದುಕೊಂಡು ಹೊರಟು ಹೋಗುತ್ತಾರೆ. ಆಗ ಅವರನ್ನು ತಡೆಯಲು ಹೋದ ಭೂತನಾಥ ಮೆಟ್ಟಿಲಿನಿಂದ ಬಿದ್ದು ಸಾವೀಗೀಡಾಗಿ, ಭೂತವಾಗಿ ಆ ಬಂಗಲೆಯಲ್ಲಿ ವಾಸವಾಗಿರುತ್ತಾನೆ. ಅಂದಿನಿಂದ ಯಾರನ್ನೂ ಆ ಬಂಗಲೆಯಲ್ಲಿ ವಾಸ ಮಾಡಲು ಬಿಡದೇ ಓಡಿಸುತ್ತಿರುತ್ತಾನೆ.

ಇದು ಆ ಭೂತಬಂಗಲೆಯ ಕಥೆ.

ಒಬ್ಬ ಅಸಹಾಯಕ ತಂದೆಯಾಗಿ, ಮೊಮ್ಮಗನ ಮತ್ತು ಬಂಕುವಿನ ಸಖ್ಯ ಬಯಸುವ ಅಜ್ಜನಾಗಿ ಅಮಿತಾಬ್ ಬಹಳ‌ ಆಪ್ತರೆನಿಸುತ್ತಾರೆ. ಬಂಕು ಸಹ ತನ್ನ ಮುಗ್ಧತೆಯಿಂದ ನಮ್ಮ ಮನಸ್ಸು ಗೆಲ್ಲುತ್ತಾನೆ.‌ ಕೊನೆಗೇನಾಯ್ತು ಅಂತ ತಿಳಿಯಲು ಮಾತ್ರ ಸಿನೆಮಾ ನೋಡಬೇಕಿಲ್ಲ. ಬಂಕು ಮತ್ತು ಭೂತನಾಥರ ಚೇಷ್ಟೆಗಳನ್ನು ಎಂಜಾಯ್ ಮಾಡಲು ಸಹ ಸಿನೆಮಾ ನೋಡಬೇಕು.

ಸಿನೆಮಾ ಅಮೆಜಾನ್ ಪ್ರೈಮಿನಲ್ಲಿದೆ

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply