ಭೂದಾನ

ಆಚಾರ್ಯ ವಿನೋಬಾ ಭಾವೆಯವರ ಕ್ರಾಂತಿಕಾರೀ ‘ಭೂದಾನ’ವನ್ನು ಕುರಿತು ಈ ಚಿತ್ರ. ಅನೇಕ ವಿಶೇಷಗಳಿವೆ ಈ ಚಿತ್ರದಲ್ಲಿ.

ಕುಮಾರ್ ತ್ರಯರು ಪೂರ್ಣ ಪ್ರಮಾಣದ ಪಾತ್ರಗಳಲ್ಲಿ ಒಟ್ಟಿಗೇ ಅಭಿನಯಿಸಿರುವ ಬಹುಶಃ ಒಂದೇ ಚಿತ್ರ ಇದು. (1962)


ದಾಸಣ್ಣನ (ರಾಜ್‍ಕುಮಾರ್) ಮಕ್ಕಳು ಮೂವರು. ರಾಮ (ಉದಯ್‍ಕುಮಾರ್), ಲಚ್ಚ(ಕಲ್ಯಾಣ್‍ಕುಮಾರ್) ಮತ್ತು ಗೌರಾ(ಲೀಲಾವತಿ). ಹಳ್ಳಿಯ ಜಮೀನುದಾರ (ಜಿ.ವಿ.ಅಯ್ಯರ್) ಮನೆಯಲ್ಲಿ ಜೀವನ ಪೂರ್ತಿ ಜೀತದಾಳಾಗಿರುತ್ತಾನೆ ದಾಸಣ್ಣ. ಭಲೇ ಭಕ್ತಿ ಅವನಿಗೆ ಅವನ ಧಣಿಯ ಮೇಲೆ.


ಭೂದಾನದ ಸ್ಕೀಂ ಆ ಹಳ್ಳಿಯವರೆಗೂ ಬಂದಾಗ ಐದೆಕರೆ ಬಂಜರು ಭೂಮಿ (ಬಂಡೆಗಳಿದ್ದ ಜಾಗವದು) ಕೊಡುತ್ತಾನೆ ಜಮೀನುದಾರ. ಅದನ್ನೂ ಸಾಗುವಳಿ ಮಾಡಿ, ಕಲ್ಲು ಇದ್ದ ಜಾಗದಲ್ಲಿ ನೆಲ್ಲು ಬೆಳೆದಾಗ ಹೊಟ್ಟೆಯುರಿಗೆ ಅದನ್ನು ಕಬಳಿಸುತ್ತಾನೆ ಜಮೀನುದಾರ.


ರಾಮ ಮತ್ತು ಲಚ್ಚ ಇಬ್ಬರೂ ಇದರಿಂದ ಮುನಿಸಿಕೊಂಡು ಕಾಫಿ ತೋಟದಲ್ಲಿ ಕೆಲಸ ಮಾಡಲು ಹೊರಟುಹೋಗುತ್ತಾರೆ. ಲಚ್ಚ ಒಂದು ರೀತಿಯ ರೆಬೆಲ್. ಅವನ ಬಾಲ್ಯಸಖಿ ಇನಿಡ್ ಮತ್ತು ಅವಳಣ್ಣ ಥಾಮಸ್ ಆ ಕಾಫಿ ತೋಟದಲ್ಲಿರುತ್ತಾರೆ. ಅವಳನ್ನು ಮದುವೆ ಆಗಿ ಅಲ್ಲೇ ಹತ್ತೆಕರೆ ಒಡೆಯನಾಗುತ್ತಾನೆ ಲಚ್ಚ. ಆರೋಗ್ಯ ಸರಿಯಿಲ್ಲದ ರಾಮ ಮರಳಿ ಬರುವಾಗ ಅವನ ಸಂಪಾದನೆಯೆಲ್ಲಾ ಹೋಗಿ, ಅವನು ಕಾಯಿಲೆ ಮಲಗುತ್ತಾನೆ. ಆದರೂ ತಂದೆಗೆ ಭೂಮಿ ಕೊಡಿಸಲು ಮುಸಲ್ಮಾನನಾಗಿ ಕನ್ವರ್ಟ್ ಆಗುತ್ತಾನೆ.

ಇತ್ತ ದಾಸಣ್ಣನಿಗೆ ಹುಚ್ಚು ಹಿಡಿದಂತಾಗುತ್ತದೆ. ಅಷ್ಟರಲ್ಲಿ ಊರ ಹಿರಿಯರು ಸೇರಿ ಜಮೀನುದಾರನಿಗೆ ಬುದ್ಧಿ ಕಲಿಸಿದಾಗ ಅವನ ಇಡೀ ಜಮೀನನ್ನು ಜೀತದಾಳುಗಳಿಗೆ ನೀಡಿ ದಾಸಣ್ಣನಿಗೆ ಶರಣಾಗುತ್ತಾನೆ.


ರಾಜ್ ತಮ್ಮನ ಪಾತ್ರದಲ್ಲಿ ಕೆ.ಎಸ್.ಅಶ್ವತ್ಥ್. ಬಹಳ ಒಳ್ಳೆಯ ಕುಳ. ಆದರೆ ಬಲು ದುಷ್ಟ ಹೆಂಡತಿ (ಆದವಾನಿ ಲಕ್ಷ್ಮೀದೇವಿ) ಇರುತ್ತಾಳೆ. ಥಾಮಸ್ ಊರಿಗೆ ಹೋಗುವಾಗ ದಾಸಣ್ಣನಿಗೆ ಕೊಟ್ಟ ಹಸುವನ್ನು ವಿಷ ಹಾಕಿ ಕೊಲ್ಲುತ್ತಾಳೆ. ಗೌರಾಳ ಮೇಲೆ ಇಲ್ಲಸಲ್ಲದ ಆಪಾದನೆ ಹೊರೆಸುತ್ತಾಳೆ. ಅಶ್ವತ್ಥ್ ಹಾವು ಕಡಿದು ಸತ್ತಾಗ ದಾಸಣ್ಣ ಅವಳಿಗೆ ಆಸರೆ ನೀಡುತ್ತಾನೆ. ಆಗ ಅವಳಿಗೆ ಬುದ್ಧಿ ಬರುತ್ತದೆ. ಜಮೀನುದಾರ ಅವಳನ್ನು ಬಯಸುತ್ತಾನೆ. ಅವಳ ಮೇಲೆ ಆಪಾದನೆ ಹೊರೆಸಿದಾಗ ಮತ್ತೆ ದಾಸಣ್ಣ ಮತ್ತು ಗೌರಾ ಅವಳನ್ನು ಕಾಪಾಡುತ್ತಾರೆ. ಕೊನೆಯಲ್ಲಿ ಎಲ್ಲರೂ ಒಂದಾಗಿ ಸೇರುತ್ತಾರೆ. ಶುಭಂ!


ಜನಪ್ರಿಯ ಶಾಸ್ತ್ರೀಯ ಸಂಗೀತ ಗಾಯಕಿಯರಾದ ರಾಧಾ ಜಯಲಕ್ಷ್ಮಿ ಹಾಡಿರುವ ಭಾಗ್ಯಾದ ಲಕ್ಷ್ಮೀ ಬಾರಮ್ಮ ಇದರದ್ದೇ. ನಟಿ ಪಾಪಮ್ಮ ಈ ಹಾಡಿಗೆ ತುಟಿ ಅಲುಗಿಸಿದ್ದಾರೆ. ನರಸಿಂಹ ರಾಜು ಕನ್ನಡ, ಹಿಂದಿ, ಇಂಗ್ಲೀಷ್, ತಮಿಳು ಭಾಷೆಗಳ ಬೆರಕೆಯಲ್ಲಿ   ಮಾತಾಡಿ ಹಾಡುವ ಹರಿಕತೆ ಬಲು  ಮಜಾ. ಇನ್ನೂ ಅನೇಕ ಹಾಡುಗಳಿವೆ. ಆದರೆ ನನಗೆ ನೆನಪಿರಲಿಲ್ಲ. ನರಸಿಂಹರಾಜುವಿಗೆ ಹದಿನಾಲ್ಕು ಮಕ್ಕಳು. ಬಾಲಕೃಷ್ಣನ ಐದನೇ ಹೆಂಡತಿ ಎಳೆಯ ವಯಸ್ಸಿನ ವಂದನಾ. ರಾಮಚಂದ್ರಶಾಸ್ತ್ರಿ ಮತ್ತೊಂದು ಗುರುತು ಸಿಕ್ಕ ನಟ.

ಅಣ್ಣಾವ್ರ ಗುಂಗುರು ಕೂದಲು, ಕೊನೆಗೆ ದಾಡಿ ಬಿಟ್ಟು ಹುಚ್ಚನಂತಾಡುವುದು, ಮೊದಮೊದಲು ಮತ್ತು ಕೊನೆಯಲ್ಲಿ ಕೂಡ ಮಕ್ಕಳನ್ನು ಅಪ್ಪಿ ಮುದ್ದಾಡುವುದು ಎಲ್ಲವೂ ಚೆನ್ನ. ಉದಯ್ ಮತ್ತು ಕಲ್ಯಾಣ್ ಎಳೆಯ ಹುಡುಗರಂತೆ ನಟಿಸಿದ್ದಾರೆ. ಲೀಲಾವತಿ ಎಂದಿನಂತೆ ಒಳ್ಳೆಯ ಅಭಿನಯ ನೀಡಿದ್ದಾರೆ. ಒಂದು ರೀತಿ ಬಲು ಚೆಂದದ ಚಿತ್ರವಿದು.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply