ಮಂಡ್ಯದ ಗಂಡು

( ಮುಂದುವರೆದಭಾಗ )

೧೯೮೧ ರಲ್ಲಿ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಮೂಡಿ ಬಂದ ಎಚ್.ಕೆ.ಅನಂತರಾವ್ ಕಾದಂಬರಿ ಆಧಾರಿತ ಅಂತ ಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದು ಇವರ ವೃತ್ತಿ ಜೀವನದಲ್ಲಿ ಮಹತ್ತರ ತಿರುವು ನೀಡಿದ್ದಲ್ಲದೆ ಈ ಚಿತ್ರದಲ್ಲಿ ಅನ್ಯಾಯದ ವಿರುದ್ಧ ಹೋರಾಡುವ ಇನ್ಸಪೆಕ್ಟರ್ ಸುಶೀಲ್ ಕುಮಾರ್ ಪಾತ್ರದಿಂದ ರೆಬೆಲ್ ಸ್ಟಾರ್ ಎಂಬ ಬಿರುದು ಬಂದಿತು. ನಂತರ ಇವರು ನಟಿಸಿದ ಚಕ್ರವರ್ತಿ, ಚಕ್ರವ್ಯೂಹ,ಕಾಳಿಂಗ ಸರ್ಪ, ಗೂಂಡಾ ಗುರು, ಮೈಸೂರು ಜಾಣ, ಮಂಡ್ಯದ ಗಂಡು ಇತ್ಯಾದಿ ಇಂತಹ ಅನೇಕ ಸಾಹಸ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ದಲ್ಲದೆ ಮೇಘಮಾಲೆ, ಮಣ್ಣಿನ ದೋಣಿ, ಸೋಲಿಲ್ಲದ ಸರದಾರ, ಒಲವಿನ ಉಡುಗೊರೆ,ಮಿಡಿದ ಹೃದಯ, ಹೃದಯ ಹಾಡಿತು, ಸಪ್ತಪದಿಯ ಸೇರಿದಂತೆ ಇನ್ನೂ ಅನೇಕ ಕಾದಂಬರಿ ಮತ್ತು ಕೌಟುಂಬಿಕ ಆಧಾರಿತ ಚಿತ್ರಗಳಲ್ಲಿಯೂ ನಟಿಸಿದ್ದರು.

೧೯೮೯ ರಲ್ಲಿ ನಿರ್ದೇಶಕ ಜೋ ಸೈಮನ್ ನಿರ್ದೇಶನದಲ್ಲಿ ಮೂಡಿ ಬಂದ ಹಾಂಕಾಂಗ್ ನಲ್ಲಿ ಏಜೆಂಟ್ ಅಮರ್ ಇವರ ನಟನೆಯ ನೂರನೇ ಚಿತ್ರವಾಗಿದ್ದು ಇದುವರೆಗೂ ೨೨೦ ಕ್ಕೂ ಹೆಚ್ಚು ಚಿತ್ರಗಳಲ್ಲಿ  ನಟಿಸಿದ್ದಾರೆ. ಅಂಬಿ ನಿಂಗ್ ವಯಸ್ಸಾಯಿತು ಇವರ ವೃತ್ತಿ ಜೀವನದ ಕೊನೆಯ ಚಿತ್ರದಲ್ಲಿ ನಟಿಸಿದ್ದ ಇವರು ಈ ಚಿತ್ರವನ್ನು ಮಾಡಲು ತುಂಬ ಕಷ್ಟವಾಗಿತ್ತು ಎಂದು ಸ್ವತಃ ಹೇಳಿ ಕೊಂಡಿದ್ದರು.

ಚಿತ್ರ  ರಂಗ ಪ್ರವೇಶಿಸಿ ಅಪಾರ ಜನಪ್ರಿಯತೆ ಗಳಿಸಿ ೧೮ ವರ್ಷಗಳ ನಂತರ ಕನ್ನಡ ಚಿತ್ರರಂಗದ ಖ್ಯಾತ ನಟಿ ಸುಮಲತಾ ಅವರನ್ನು ವಿವಾಹವಾದ ಇವರಿಗೆ ಒಬ್ಬ ಮಗನು ಇದ್ದಾರೆ. ಹೆಸರು ಅಭಿಷೇಕ್ ಗೌಡ ಇವರು ಕೂಡ ಕನ್ನಡ ಚಿತ್ರ ನಟರು ಆಗಿದ್ದಾರೆ. ಇವರು ಎಂತಹ ಚೈತನ್ಯದ ಚಿಲುಮೆಯೆಂದರೆ ಎಂತಹ ಸಂದರ್ಭದಲ್ಲೂ ದುಖಿತರಾಗಿದ್ದು ತುಂಬಾ ಕಡಿಮೆ. ಆದರೆ ಇವರ ಆಪ್ತ ಸ್ನೇಹಿತ ಡಾ.ವಿಷ್ಣುವರ್ಧನ್ ಡಿಸೆಂಬರ್ ೩೦,೨೦೦೯ ರಂದು ಮರಣ ಹೊಂದಿದಾಗ ಚಿಕ್ಕ ಮಗು ತರಹ ಅತ್ತಿದ್ದರು. ಇನ್ನೊಂದು ವಿಶೇಷ ದಾಖಲೆಯೆಂದರೆ ಭಾರತ ಚಿತ್ರರಂಗದ ಇತಿಹಾಸದಲ್ಲೇ ಡಾ.ರಾಜಕುಮಾರ್ ಜೊತೆ ಒಡಹುಟ್ಟಿದವರು, ಡಾ. ವಿಷ್ಣುವರ್ಧನ್ ಜೊತೆ ಸ್ನೇಹಿತರ ಸವಾಲ್, ದಿಗ್ಗಜರು, ಹಬ್ಬ, ಪಾಂಡವರು ಇತ್ಯಾದಿ ಈ ರೀತಿಯಾಗಿ ಹಲವಾರು ಚಿತ್ರ ನಟರೊಂದಿಗೆ ಬಹುತಾರಾಗಣದಲ್ಲಿ ನಟಿಸಿದ್ದರು.

ಪ್ರಪ್ರಥಮ ಬಾರಿಗೆ ಜನತಾದಳ ಪಕ್ಷ ಸೇರುವ ಮೂಲಕ ರಾಜಕೀಯ ಪ್ರವೇಶಿಸಿದ ಇವರು ೧೯೯೪ ರಲ್ಲಿ ನಡೆದ ವಿಧಾನಸಭೆ ಚುನಾವಣೆ ಮೊದಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ( ಆಯ್.ಎನ್.ಸಿ) ಗೆ ಸೇರಿದರು. ೧೯೯೬ ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಕಾರಣಕ್ಕೆ ಎರಡು ವರ್ಷಗಳ ನಂತರ ಪಕ್ಷವನ್ನು ತ್ಯಜಿಸಿದರು. ಪುನಃ ಜನತಾದಳ ಸೇರಿ ೧೯೯೮ ರ ಸಾರ್ವತ್ರಿಕ ಚುನಾವಣೆಯಲ್ಲಿ  ಮಂಡ್ಯದಿಂದ  ಸ್ಪರ್ಧಿಸಿ ಗೆದ್ದು ಲೋಕಸಭೆಗೆ ಆಯ್ಕೆಯಾದರು. ೧೪ ನೇ ಲೋಕಸಭೆಯಲ್ಲಿ ಮಾಹಿತಿ ಮತ್ತು ಪ್ರಸಾರ ರಾಜ್ಯ ಸಚಿವರಾಗಿದ್ದರು. ಅನಂತರ ಕಾವೇರಿ ಚಳುವಳಿಯಲ್ಲಿ ಜನತೆಯ ಅಭಿಪ್ರಾಯಕ್ಕೆ ಮನ್ನಣೆ ನೀಡಿ ತಮ್ಮ ಲೋಕಾಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಮೇ ೨೦೦೯ ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರೂ ೨೦೧೩ ರಲ್ಲಿ ನಡೆದ ಮಂಡ್ಯ ವಿಧಾನಸಭಾ ಚುನಾವಣೆಯಲ್ಲಿ  ಸ್ಪರ್ಧಿಸಿ ಗೆದ್ದು ಅಂದಿನ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಸಂಪುಟದಲ್ಲಿ ೨೦೧೩ ರಿಂದ ೨೦೧೮ ವರೆಗೆ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇವರು ಕನ್ನಡ ನಾಡಿನಲ್ಲಿ ಮಂಡ್ಯದ ಗಂಡು ಎಂದೇ ಪ್ರಸಿದ್ಧಿಯಾಗಿದ್ದರು. ಹಾಗಾದರೆ ಈ ಬಿರುದು ಹೇಗೆ ಬಂದಿತು? ಎನ್ನುವುದು ಇನ್ನೂ ಬಹಳಷ್ಟು ಜನರಿಗೆ ಸರಿಯಾಗಿ ತಿಳಿದಿಲ್ಲ. ಗುರು ಸಮಾನರಾಗಿದ್ದ ರೈತ ಹೋರಾಟಗಾರ, ಮಾಜಿ ಸಂಸದ ಜಿ. ಮಾದೇಗೌಡರು ಇವರಿಗೆ ಮಂಡ್ಯದ ಗಂಡು ಎಂದು ಬಿರುದು ನೀಡಿದ್ದರು. ಇದನ್ನು ಸ್ವತಃ ಮಾಜಿ ಸಂಸದ ಮಾದೇಗೌಡರೇ ಹೇಳಿದ್ದಾರೆ. ಇವರು ಕೆಲವು ತಿಂಗಳುಗಳಿಂದ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದರು. ಇದಕ್ಕೆ ಸಿಂಗಾಪುರದಲ್ಲಿ ಚಿಕಿತ್ಸೆಯನ್ನು ಪಡೆದು ಕೊಂಡು ಬಂದಿದ್ದರು.

ನವೆಂಬರ್ ೨೪,೨೦೧೮ ರಂದು ಮಧ್ಯಾಹ್ನ ಸಮಯದಲ್ಲಿ ಬಸ್ಸೊಂದು ಮಂಡ್ಯದ ಹತ್ತಿರ ಇರುವ ಕಾಲುವೆಗೆ ಬಿದ್ದು ೩೦ ಜನರು ಮರಣ ಹೊಂದಿದ್ದ ಸುದ್ದಿ ಕೇಳಿ  ತೀವ್ರ ದುಃಖ ಪಟ್ಟಿದ್ದರು. ನಮ್ಮ ಕನ್ನಡಿಗರ ದುರಾದೃಷ್ಟ ವಿಷಯವೇನೆಂದರೆ ಅದೇ ದಿನ ರಾತ್ರಿ ಸುಮಾರು ೧೦ ಗಂಟೆಗೆ ಆದ ಹೃದಯಾಘಾತದಿಂದ ವಿಕ್ರಂ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯದಲ್ಲಿ ಮರಣಹೊಂದಿದರು. ಕಂಠೀರವ ಸ್ಟುಡಿಯೋದಲ್ಲಿ ಇವರ ಸಮಾಧಿಯನ್ನು  ಮಾಡಿದ ಸರ್ಕಾರ ಇವರ ಸ್ಮಾರಕ ನಿರ್ಮಾಣ ಮಾಡಲು ನಿರ್ಧರಿಸಿದೆ.

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.