ಮಧುಮಾಲತಿ

ಉಜ್ಜಯಿನಿಯಲ್ಲಿ ವರ್ತಕ ಕೇಶವಚಂದ್ರ (ಕೆ.ಎಸ್.ಅಶ್ವತ್ಥ್) ಮತ್ತು ಗಜಲಕ್ಷ್ಮಿ (ಜಯಶ್ರೀ) ಇವರ ಪುತ್ರ ಮಾಧವಚಂದ್ರ (ರಂಗ) ಮತ್ತು ಮಗಳು ಮಧುಮಾಲತಿ (ಬೆಡಗಿನ ನಟಿ ಭಾರತಿ). 

ಒಬ್ಬ ತಾಂತ್ರಿಕ ಹದಿನೈದು ಶೋಡಷಿಯರನ್ನು ಬಂಧಿಸಿಟ್ಟು ಹದಿನಾರನೇ ಶೋಡಷಿಯಾಗಿ ಮಧುಮಾಲತಿಯನ್ನು ಆರಿಸಿಕೊಳ್ಳುತ್ತದೆ. ಅವರನ್ನು ಕೊಂದು ದೊಡ್ಡ ಮಾಂತ್ರಿಕ ಆಗಬಹುದೆಂಬ ನಂಬಿಕೆ ಅವನದು.

ಅದಕ್ಕಾಗಿ ವರ್ತಕನ ಮನೆಗೆ ಕಪಟಿ ಸಾಧುವಿನಂತೆ ಬರುತ್ತಾನೆ ಆ ತಾಂತ್ರಿಕ. (ಎಂ.ಪಿ.ಶಂಕರ್) 

ವರ್ತಕ ಮತ್ತು ಅವನ ಹೆಂಡತಿ ಆ ಸಾಧುವನ್ನು ನಂಬುತ್ತಾರೆ. 

ಇದಕ್ಕೆ ಮುಂಚೆ ತಾಂತ್ರಿಕನ ಶಿಷ್ಯ ಪ್ರಚಂಡ ಎನ್ನುವವನು, ಮಧುಮಾಲತಿಯನ್ನು ಮೂರು ಬಾರಿ ಕದ್ದೊಯ್ಯಲು ಪ್ರಯತ್ನಿಸಿರುತ್ತಾನೆ. ಮೊದಲ ಸಲ ಅವಳ ತಂದೆಯ ಸಮ್ಮುಖದಲ್ಲಿ ಜ್ಯೋತಿಷಿ ಮಧುಸೂದನ (ಹರಿಕಥಾ ಪಟು ಗುರುರಾಜುಲು ನಾಯ್ಡು ಉರ್ಫ್ ಅರುಣ್ ಕುಮಾರ್) ಅವಳನ್ನು ರಕ್ಷಿಸುತ್ತಾನೆ. ಎರಡನೆಯ ಸಲ ಮಾಂತ್ರಿಕ ವಾಮನ (ಉದಯಕುಮಾರ್) ಅವಳ ತಾಯಿಯ ಎದುರಿಗೆ ಕಾಪಾಡುತ್ತಾನೆ. ಮೂರನೆಯ ಸಲ ತ್ರಿವಿಕ್ರಮ (ರಾಜ್‍ಕುಮಾರ್) ಅವಳ ಅಣ್ಣನ ಸಮ್ಮುಖದಲ್ಲಿ ರಕ್ಷಣೆ ನೀಡುತ್ತಾನೆ.

ಈ ಮೂವರೂ ಅವಳಲ್ಲಿ ಅನುರಕ್ತರಾಗುತ್ತಾರೆ. ಈಗ ಅವರಲ್ಲಿ ಪರೀಕ್ಷೆ ಇಡುತ್ತಾನೆ ಕಪಟಿ ಸಾಧು. ಅದರಲ್ಲಿ ಮೂವರೂ ಜಯಿಸುತ್ತಾರೆ.

ಆದರೆ ಅಂದೇ ರಾತ್ರಿ ಸಂಮ್ಮೋಹನ ಶಕ್ತಿಯಿಂದ ಮಧುಮಾಲತಿಯನ್ನು ತನ್ನ ಗುಹೆಗೆ ಒಯ್ಯುತ್ತಾನೆ ಕಪಟಿ ಸಾಧು ಉರ್ಫ್ ತಾಂತ್ರಿಕ.

ಮೂವರೂ ಅವಳನ್ನು ಬಿಡಿಸಿಕೊಂಡು ಬರಲು ಹೋಗಿ ನಾನಾ ತಂಟೆಗಳಿಗೆ ಸಿಲುಕುತ್ತಾರೆ. ತಾಂತ್ರಿಕ ಸಾಯುವಾಗ ತನ್ನ ಶಿಷ್ಯ ಪ್ರಚಂಡನನ್ನು ಹಾವಾಗಿ ಮಾಡಿ ಅವರನ್ನು ಸಾಯಿಸಲು ಕಳಿಸಿದಾಗ, ಮಧುಮಾಲತಿ ಆ ಹಾವು ಕಚ್ಚಿ ಸಾಯುತ್ತಾಳೆ.

ಒಬ್ಬ ಅವಳನ್ನು ಬದುಕಿಸಲು ಪ್ರಯತ್ನ ಮಾಡುತ್ತಾನೆ. ಮತ್ತೊಬ್ಬ ಅವಳ ಬೂದಿಯನ್ನು ನದಿಯಲ್ಲಿ ಕದಡಲು ನೋಡುತ್ತಾನೆ. ಮೂರನೆಯವನು ತಾನೂ ಅವಳ ಬೂದಿಯನ್ನು ಜೊತೆಯಲ್ಲಿಟ್ಟುಕೊಂಡು ಸಾಯಲು ನೋಡುತ್ತಾನೆ.

ಮರಳಿ ಬದುಕಿದ ಮಧುಮಾಲತಿ ಯಾರನ್ನು ವರಿಸಬೇಕೆಂಬುದನ್ನು ರಾಜಾ ವಿಕ್ರಮಾದಿತ್ಯ (ಆರ್. ನಾಗೇಂದ್ರರಾವ್) ನಿರ್ಧರಿಸುತ್ತಾನೆ.

ಚಂದಮಾಮಾ ಶೈಲಿಯ ಈ ಕಥೆಯಲ್ಲಿ ಮಧುಮಾಲತಿಯಾಗಿ ನಟಿಸಿರುವ ನಟಿ ಭಾರತಿಯ ಬೆಡಗು, ಬಿನ್ನಾಣ, ಒನಪು, ವಯ್ಯಾರ… ಆಹಾ… ಅತಿ ಚೆಂದ.

ರಾಜ್‍ಕುಮಾರ್ ಎಂದಿನ ತಮ್ಮ ಪ್ರೇಮ, ತುಂಟತನ, ವಿರಹ, ವೀರ ರಸಗಳ ಪ್ರದರ್ಶನ ಮಾಡಿದ್ದಾರೆ. ಉದಯಕುಮಾರ್ ಮತ್ತು ಅರುಣ್‍ಕುಮಾರ್ ಕೂಡ ಮನಸ್ಸನ್ನು ತಣಿಸುವ ಅಭಿನಯ ನೀಡಿದ್ದಾರೆ. 1966ರ ಈ ಚಿತ್ರವು ಬಲು ಸುಂದರ ಗೀತೆಗಳನ್ನು ಹೊಂದಿದೆ.

ಎಸ್.ಜಾನಕಿ, ಬೆಂಗಳೂರು ಲತಾ ಹಾಡಿರುವ ‘ಅಂಜಿಕೆ ನಾಚಿಕೆ ಯೇತಕೆ ನೀ ನೀಗು ನೀಗು’, ಎಸ್ ಜಾನಕಿ ಅವರ ‘ಯಾರೋ ಏನೋ ಬಲ್ಲವರಾರು, ಅವರೇ ಅವರು ಅವರು…’ಎಸ್‍ಜಾನಕಿ, ಬೆಂಗಳೂರು ಲತಾ ಹಾಡಿರುವ ‘ಈ ಭಾವ ಈ ಭಂಗಿ ನಿನಗಾಗಿ ನಿನ್ನ ಹಿತಕಾಗಿ’, ಪಿಬಿಎಸ್ ಹಾಡಿರುವ ಪ್ಯಾಥೋಸ್  ಗೀತೆ ‘ಪ್ರಿಯತಮೆ ಮಧುಮಯೀ ಮಧುಮಾಲತಿ'(ಇದು ಅಣ್ಣಾವ್ರಿಗೆ).

ಜಿ.ಕೆ. ವೆಂಕಟೇಶ್ ರಾಷ್ಟ್ರಕವಿ ಕುವೆಂಪು ಅವರ ‘ಶೋಡಷೀ ಶೋಡಷೀ ಮೂಡಿಬಾ ಶೋಡಷಿ'(ಪಿಬಿಎಸ್ ಮತ್ತು ಟಿ.ಎ. ಮೋತಿ) ಮತ್ತು ‘ಶೋಡಷ ಚೈತ್ರದ ಸುಂದರಿ ನೀನು’ (ಪಿಬಿಎಸ್ – ಅಣ್ಣಾವ್ರಿಗೆ) ಗೀತೆಗಳನ್ನು ಬಳಸಿಕೊಂಡಿದ್ದಾರೆ.

ಚಂದಮಾಮಾ ಶೈಲಿಯ ಕಥೆಯನ್ನು ಇಷ್ಟು ಪರಿಣಾಮಕಾರಿಯಾಗಿ ಚಿತ್ರಿಸಿರುವುದನ್ನು ಕಂಡು ಮುದವೆನಿಸಿತು. ಎಂ.ಪಿ. ಶಂಕರ್ ವಿಲನ್ ಆಗಿರುವಾಗ ಅವರ ವಿಕಟಾಟ್ಟಹಾಸ ಕೇಳಲು ಬಹಳ ಖುಷಿ ಆಗುತ್ತದೆ. ‘ನಾಗರಹಾವು’ ಪೈಲ್ವಾನರಾಗಿದ್ದಾಗ ‘ಗೌರವ ಅಲ್ಲ ಮೇಷ್ಟ್ರೇ… ಭಯ’ ಎಂದು ನಗುವುದನ್ನೂ ಒಮ್ಮೆ ನೆನೆಯಿರಿ. ಬೂತಯ್ಯನಾಗಿ ಮಗ ಅಯ್ಯುವಿಗೆ ‘ಈ ಜನರನ್ನ ನಂಬೇಡ ನಂಬೇಡ’ ಎಂದು ಹೇಳುವುದನ್ನೂ ಒಮ್ಮೆ ಜ್ಞಾಪಿಸಿಕೊಳ್ಳಿ!

ಲೇಖಕರು: ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply