ಸೋಮು (ರಾಜ್‍ಕುಮಾರ್) ಒಬ್ಬ ಪಿಕ್‍ಪಾಕೆಟ್, ಅಂಗಡಿಯಿಂದ ಒಡವೆ ಕದಿಯುವ ಕಳ್ಳ ಇತ್ಯಾದಿ. ದೇವರನ್ನು ನಂಬದವ. ಅವನೊಮ್ಮೆ ಸರವೊಂದನ್ನು ಕದ್ದು ಬರುತ್ತಿದ್ದಾಗ ಜನ ಅಟ್ಟಿಸಿಕೊಂಡು ಬರುತ್ತಾರೆ. ಅವನನ್ನು ಕಾರಿನಲ್ಲಿ ಏರಿಸಿಕೊಳ್ಳುತ್ತಾನೆ ರಾಜಶೇಖರ (ಎಂ.ಪಿ.ಶಂಕರ್). ಅವನೊಬ್ಬ ಫ್ರಾಡ್. ಅವನು ಜಗ್ಗು. ಅವನ ತಲೆಯ ಮೇಲೆ ಹತ್ತು ಸಾವಿರ ರೂಪಾಯಿ ಬಹುಮಾನ ಇರುತ್ತದೆ. ಆ ಜಗ್ಗು ಇವನಿಂದ ಸರ ಕದ್ದು ತನ್ನ ಅಣ್ಣನ (ವೇಷಧಾರಿ ತಮ್ಮ ಇವನು) ಮಗಳು ಶೈಲಶ್ರೀಗೆ ಕೊಡುತ್ತಾನೆ. ಸೋಮು ಒಮ್ಮೆ ಬೆಂಗಳೂರಿಗೆ ಬಂದ ಗೌರಿಯ (ಭಾರತಿ) ಸಂಚಿ ಕದಿಯುತ್ತಾನೆ. ಅವಳು ಮಹಾ ಜೋರಿನ ಹುಡುಗಿ. ಬಹು ಲವಲವಿಕೆಯಿಂದ ನಟಿಸಿದ್ದಾರೆ ಭಾರತಿ.
ಶೈಲಶ್ರೀಗೆ ಒಂದು ಹಾಡು.(ಆ ಹಾಡಿನ ಸಮಯದಲ್ಲಿ ಎಂ. ಪಿ. ಶಂಕರ್ ಬಲವಂತವಾಗಿ ಅಣ್ಣಾವ್ರಿಗೆ ಕುಡಿಸಿ, ಅಣ್ಣಾವ್ರು ತೂರಾಡಿ ಮಂಜುಕಣ್ಣಿನೊಂದಿಗೆ ಒಂದೆರಡು ಸ್ಟೆಪ್ಪು ಹಾಕುತ್ತಾರೆ!) ನರಸಿಂಹರಾಜು ಬಿವಿ ರಾಧಾಗೆ ಒಂದು ಹಾಡು, ರಾಜ್ ಭಾರತಿಗೆ ಒಂದು. ರಾಜ್‍ಗೆ ಮನಸ್ಸಾಕ್ಷಿಯ ಬಗ್ಗೆ ಒಂದು ಶೀರ್ಷಿಕೆ ಗೀತೆ.
ಸೋಮು ಸರ ಕಳೆದುಕೊಂಡು ವಾಪಸ್ಸು ಬರುವಾಗ ಇಡ್ಲಿ ಕದ್ದ ನರಸಿಂಹರಾಜುವನ್ನು ಕಾಪಾಡುತ್ತಾನೆ. ಇವನಿಗೆ ಸಿನಿಮಾ ನಟ ಆಗುವ ಹುಚ್ಚು. ಬಿ.ವಿ.ರಾಧಾಳಿಗೆ ದುಂಬಾಲು ಬೀಳುತ್ತಾನೆ ಹೀರೋಯಿನ್ ಆಗೆಂದು. ನಂತರ ತನ್ನ ತಪ್ಪು ಅರಿತು ಮೇಸ್ತ್ರಿ ಆಗುತ್ತಾನೆ.
ಅವಳಿಂದ ಇವನ ಮನಸ್ಸಾಕ್ಷಿ ಚುಚ್ಚಿ ಒಳ್ಳೆಯವನಾಗಲು ಪ್ರಯತ್ನಿಸುತ್ತಾನೆ. ಆದರೆ ಸಮಾಜ ಅವನನ್ನು ನಂಬುವುದಿಲ್ಲ. ಕೆಟ್ಟಜನ ಅವನನ್ನು ಕೆಟ್ಟ ಕೆಲಸಕ್ಕೆ ಎಳೆಯಲು ನೋಡುತ್ತಾರೆ. ಬ್ಯಾಂಕಿನಿಂದ ಕದ್ದ ಹಣವನ್ನು ಭಾರತಿಯ ಅಣ್ಣ ರಂಗನಿಗೆ ಕೊಟ್ಟು ಅವನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅವನ ಹೆಂಡತಿ ಸಾಹುಕಾರ್ ಜಾನಕಿ ರೈಲಿಗೆ ಸಿಕ್ಕಿಕೊಳ್ಳುವಾಗ ಸೋಮು ಅವಳನ್ನೂ, ಅವಳ ಮಗಳನ್ನೂ ಕಾಪಾಡುತ್ತಾನೆ. 1968ರಲ್ಲಿ ವಿಶೇಷ ಔಷಧಿ ಖರ್ಚು 130 ರೂಪಾಯಿ. ಅದಕ್ಕಾಗಿ ಪರದಾಡುತ್ತಾನೆ ಸೋಮು.
ಬಿ. ಜಯಶ್ರೀ, ಶಾಂತಮ್ಮ, ನಾಗಪ್ಪ ತಾರಾಗಣದಲ್ಲಿದ್ದಾರೆ.
ಕಳ್ಳನ ಹೆಂಡತಿ ಎಂದಿದ್ದರೂ…. ಗಾದೆಯಂತೆ ಸಿನಿಮಾ ಮುಗಿಯುತ್ತದೆ.