ಮನ ಮೆಚ್ಚಿದ ಮಡದಿ

ತುಟಿಯ ಮೇಲೇ ತುಂಟ ಕಿರುನಗೆ ಕೆನ್ನೆ ತುಂಬಾ ಕೆಂಡ ಸಂಪಿಗೆ… ಈ ಪದಗುಚ್ಛವನ್ನು ಓದಿದೊಡನೆ ಈ ಮಧುರ ಹಾಡು ನಮ್ಮ ಮನದಲ್ಲಿ ಧುತ್ತೆಂದು ಪ್ರತ್ಯಕ್ಷವಾಗುತ್ತದೆ.

ಆದರೆ ಈ ಚಿತ್ರದಲ್ಲಿ ಟೈಟಲ್ ಕಾರ್ಡಿನಲ್ಲೇ ರಾಷ್ಟ್ರಕವಿ ಕುವೆಂಪು ಅವರ ಜೈ ಭಾರತ ಜನನಿಯ ತನುಜಾತೆಯನ್ನು ಪಿ.ಬಿ.ಎಸ್. ಬಲು ಮಧುರವಾಗಿ ಹಾಡಿದ್ದಾರೆ. ಜಾನಕಿ ಅವರ ಸಿರಿತನ ಬೇಕೆ ಬಡತನ ಸಾಕೆ ಮತ್ತೊಂದು ಜನಪ್ರಿಯ ಹಾಡು.

ಕಥೆ ಬಹಳವೇ ಪ್ರಸಿದ್ಧ ಥೀಮ್ ಹೊಂದಿದೆ. ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕದ ಬಗೆಗೆ ಈ ಕಥೆ.

ಉಮಾಕಾಂತ್(ಕೆ.ಎಸ್.ಅಶ್ವತ್ಥ್) ಒಳ್ಳೆಯ ಬಿಜಿನೆಸ್‍ಮನ್. ಅವನ ಬಾಸ್ ಅವನನ್ನು ಬಹಳ ಮೆಚ್ಚಿಕೊಂಡಿರುತ್ತಾನೆ. ಆದರೆ ಉಮಾಕಾಂತನ ಪತ್ನಿ ಹೆರಿಗೆಯಲ್ಲಿ ತೀರಿಕೊಂಡಾಗ ಕೆಲಸ ಬಿಡುವೆನೆನ್ನುತ್ತಾನೆ ಉಮಾಕಾಂತ. ಆಗ ಅವನ ಬಾಸ್ ಬಂದು ತನ್ನ ಮಗಳನ್ನು ಮದುವೆಯಾಗು, ಮಗುವನ್ನು ಮಾತ್ರ ಅದರ ಅಜ್ಜನ ಬಳಿ ಬಿಡು ಎನ್ನುತ್ತಾನೆ. ಬಾಸ್‍ನ ಮಗಳು (ಆರ್.ಟಿ.ರಮಾ) ಉಮಾಕಾಂತನ ಕೈ ಹಿಡಿಯುತ್ತಾಳೆ. ಅವಳಿಗೆ ತನ್ನ ಪತಿಗೆ ಒಬ್ಬ ಗತಿಸಿದ ಪತ್ನಿ ಇದ್ದಳೆಂಬ ವಿಷಯ ತಿಳಿಯದು.

ಈ ಮಗು ಶ್ರೀನಾಥ (ರಾಜ್‍ಕುಮಾರ್) ಬೆಳೆದು ಬೆಂಗಳೂರಿನ ದೇವರಾಜನ (ಉದಯಕುಮಾರ್) ಮನೆಗೆ ಪೇಯಿಂಗ್ ಗೆಸ್ಟ್ ಆಗಿ ಬರುತ್ತಾನೆ. ಅವನ ಹೆಂಡತಿ (ಜಯಶ್ರೀ) ಮತ್ತು ಮಕ್ಕಳು ಸುಮನಾ (ಲೀಲಾವತಿ) ಮತ್ತು ಲೀಲಾ(ಜ್ಯೂ.ರೇವತಿ) ಇವನನ್ನು ಆದರಿಸುತ್ತಾರೆ. ಸುಮನಾ ಜೀವನದಲ್ಲಿನ ಅತಿ ದೊಡ್ಡ ಸುಳ್ಳು ಹೇಳಿ ಶ್ರೀನಾಥನ ಕೈ ಹಿಡಿಯುತ್ತಾಳೆ. ನಂತರ ಕೇವಲ ಬಡವ ಶ್ರೀಮಂತರ ಜಟಾಪಟಿ, ಕೊನೆಯವರೆಗೂ.

ನರಸಿಂಹರಾಜು ಸಮಾಜಸೇವಕನ ಪಾತ್ರದಲ್ಲಿದ್ದಾರೆ. ಪರಸ್ಪರ ಸಹಕಾರ, ಸ್ವಾವಲಂಬನೆ, ಬೇಸಾಯ ಮುಂತಾದ ವಿಷಯಗಳ ಬಗ್ಗೆ ಸರಳವಾಗಿ ಹೇಳಿದ್ದಾರೆ. ಕಥೆ, ಚಿತ್ರಕಥೆ  ಮತ್ತು ಎರಡು ಹಾಡುಗಳನ್ನು ಬರೆದು ನಿರ್ದೇಶಿಸಿದ ಕು.ರಾ. ಸೀತಾರಾಮಶಾಸ್ತ್ರಿಯವರು.

ಕೆ.ಎಸ್. ಅಶ್ವತ್ಥ್ ಮತ್ತು ಆರ್. ಟಿ. ರಮಾರ ಪುತ್ರನಾಗಿ ಡಾಕ್ಟರಿಕೆ ಓದುವವನಾಗಿ ಚರಿತ್ರನಟ ಬಾಲಕೃಷ್ಣ ಅಭಿನಯಿಸಿದ್ದಾರೆ. ಅಬ್ಬಾ! ಈ ಸಿನಿಮಾ ಬಂದಾಗ ಅವರಿಗೆ ಐವತ್ತು ವರ್ಷವಿರಬಹುದು. ಸುಮಾರು ಮೂವತ್ತು ವರ್ಷದವನ ಪಾತ್ರದಲ್ಲಿ ಲವಲವಿಕೆಯಿಂದ ನಟಿಸಿದ್ದಾರೆ. ಜ್ಯೂ.ರೇವತಿಯೊಂದಿಗೆ ಲವ್ ಲವ್ ಎಂದರೇನು ಒಲವು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅವರೇ ಬರೆದಿರಬೇಕು ಕೂಡ ಈ ಗೀತೆಯನ್ನು.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply