ಮಲ್ಲಮ್ಮನ ಪವಾಡ

ಪುಟ್ಟಣ್ಣ ಮತ್ತು ರಾಜ್‍ಕುಮಾರ್ ಕಾಂಬಿನೇಷನ್‍ನ ಈ ಮೊದಲ ಚಿತ್ರ ಬಿ. ಪುಟ್ಟಸ್ವಾಮಯ್ಯನವರ ಕಾದಂಬರಿ ಆಧಾರಿತ. ಇದು 1969ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರ ನೋಡಲು ಥಿಯೇಟರಿಗೆ ಹೋದ ನೆನಪಿದೆ. ನನಗಾಗ 12 ವರ್ಷಗಳು.


ನಾನೂನು ನಿಮ್ಹಾಗೆ ಬೊಂಬೇನೇ ಕಣ್ರೋ’ ಎಂದು ಪಿಬಿಎಸ್ ಧ್ವನಿಯಲ್ಲಿ ಹಾಡುವುದರಿಂದ ಶುರು ಮಾಡಿ, ‘ಹಾಡೋಣ ಒಲವಿನ ರಾಗಮಾಲೆ’ ಎಂದು ಪಿಬಿಎಸ್ ಧ್ವನಿಯಲ್ಲಿ ಮಲ್ಲಮ್ಮನ ಪಾತ್ರಧಾರಿ ಬಿ. ಸರೋಜಾದೇವಿಯವರೊಂದಿಗೆ (ಆಕೆಗೆ ಎಸ್ ಜಾನಕಿ ಧ್ವನಿ) ಹಾಡುವುದರವರೆಗೆ ರಾಜ್ ಅಭಿನಯದ ರೇಂಜ್ ಅದ್ಭುತ.


ಕಣ್ಣುಗಳಲ್ಲಿನ ಪೆಚ್ಚುತನ ಹೋಗಿ ಜ್ಞಾನಿಯಂತೆ ಗಾಂಭೀರ್ಯ ಬರುವವರೆಗೆ ಪ್ರತಿ ಒಂದು ಆಂಗಿಕ ಭಾವವೂ ಅಮೋಘ. (ಕವಿರತ್ನ ಕಾಳಿದಾಸದಲ್ಲಿ ಪೆದ್ದನಿಂದ ಜ್ಞಾನಿಯಾಗುವ ಪಾತ್ರದ ನೆನಪಿದೆಯೇ? ಕಾಳಿ ನಾಲಗೆಯ ಮೇಲೆ ಬರೆದೊಡನೆ ರಾಜ್ ಕಣ್ಣುಗಳ ಭಾವವು ವಿಶಿಷ್ಟವಾಗಿ ಬದಲಾಗುತ್ತದೆ).

ಪಿ.ಸುಶೀಲಾರ ಒಂದು ಹಾಡು ಈಗಲೂ ಶಿವರಾತ್ರಿಯಂದು ಹಾಡಲ್ಪಡುತ್ತದೆ. ‘ಶರಣೆಂಬೆ ನಾ ಶಶಿಭೂಷಣಾ‘ . ಇನ್ನೂ ಒಂದು ಸುಂದರ ಹಾಡು ‘ಹುಚ್ಚರಲ್ಲ ನೀವು ಹುಚ್ಚರಲ್ಲ…’ ಎಲ್ ಆರ್ ಈಶ್ವರಿ ಅವರ ಮಾದಕ ಸ್ವರದಲ್ಲಿ ‘ಆಶಾವಿಲಾಸಿ ಈ ರೂಪರಾಶಿ’ ಇದೆ. ಬಿ.ಕೆ. ಸುಮಿತ್ರಾ ಅವರ ‘ಮರೆಯದ ಮಾತಾಡು‘ ರಾಜೀವಿಯ ನೃತ್ಯಕ್ಕೆ ಇದೆ. ಪಿಬಿಎಸ್ ಅವರ ಶ್ಲೋಕಗಳಿವೆ. ರಾಜ್ ಅವರೇ ರನ್ನನ ಗದಾಯುದ್ಧದ ಒಂದು ತುಣುಕು ಹಾಡುತ್ತಾರೆ.

ರಾಜೀವಿಯನ್ನು (ಉದಯಚಂದ್ರಿಕಾ) ಊರಿನ ಸಾಹುಕಾರ ಸಂಪತ್ ಎರಡನೆಯ ಮಗ ಸೂರಪ್ಪ(ವಜ್ರಮುನಿ)ಗೆ ಕೂಡಾವಳಿ ಮಾಡಿಕೊಡುತ್ತಾರೆ ಅವಳ ಸೋದರ ಮಾವ ಬಾಲಕೃಷ್ಣ ಮತ್ತು ಅವಳ ತಾಯಿ ರಮಾದೇವಿ. ಬಾಲಕೃಷ್ಣ ಅವರ ತಲೆಹಿಡುಕನ ಪಾತ್ರ, ಅವರು ನುಲಿಯುವ ವೈಖರಿ… ಮಾತಿನ ಶೈಲಿ..ನಡೆಯುವ ಸ್ಟೈಲ್.. ಹ್ಯಾಟ್ಸ್ ಆಫ್ ಟು ಹಿಂ.

ಸೂರಪ್ಪನ ತಾಯಿ (ಆದವಾನಿ ಲಕ್ಷ್ಮೀದೇವಿ) ಸಂಪತ್ ಎರಡನೇ ಹೆಂಡತಿ. ಹೊಟ್ಟೆಯುರಿಗೆ ಮೊದಲ ಹೆಂಡತಿಯ (ಪಂಢರೀಬಾಯಿ ಕೇವಲ ಫೋಟೋದಲ್ಲಿ) ಮಗ ಚಂದ್ರಕಾಂತನಿಗೆ (ರಾಜ್‍ಕುಮಾರ್) ಹಾಲಿನಲ್ಲಿ ದಿನವೂ ಅಫೀಮು ಹಾಕಿ ಅವನನ್ನು ಪೆದ್ದನನ್ನಾಗಿ ಮಾಡಿರುತ್ತಾಳೆ. ಈ ವಿಷಯ ತಿಳಿದ ಅವನ ಆಯಾ (ಶಾಂತಮ್ಮ) ಇದನ್ನು ಮಲ್ಲಮ್ಮನಿಗೆ ಹೇಳುತ್ತಾಳೆ. ಮಲ್ಲಮ್ಮ ಪತಿಗೆ ವಿದ್ಯೆ ಕಲಿಸಿ ಅವನನ್ನು ಸಮಾಜಯೋಗ್ಯನನ್ನಾಗಿ ಮಾಡುತ್ತಾಳೆ. ಮನೆಯ ಆಳು ದ್ವಾರಕೀಶ್ ಮೊದಲು ಪೆದ್ದ ಚಂದ್ರನೊಂದಿಗೆ ಕುಣಿದು ಕುಪ್ಪಳಿಸಿದರೂ, ಮಲ್ಲಮ್ಮನ ಬಗ್ಗೆ ಮರ್ಯಾದೆ ಇರುವ ಪಾತ್ರ.


ಹಿಂದೊಮ್ಮೆ ವಜ್ರಮುನಿಯ ಚಾವಟಿ ಕಿತ್ತುಕೊಂಡು ಆತನಿಗೆ ಮುಖದಲ್ಲಿ ನೀರಿಳಿಸಿ ಕಳಿಸಿದ್ದ ಮಲ್ಲಮ್ಮನನ್ನು ಅವನಿಗೇ ತಂದುಕೊಳ್ಳಲು ಸಂಪತ್ ಆಲೋಚಿಸಿದಾಗ, ವಜ್ರಮುನಿಯ ತಾಯಿ ಉಪಾಯದಿಂದ ಮಲ್ಲಮ್ಮನನ್ನು ಚಂದ್ರಕಾಂತನಿಗೆ ಕಟ್ಟಿಬಿಡುತ್ತಾಳೆ.

ಆಸ್ತಿ ತಗಾದೆ ಎಲ್ಲ ಬಂದಾಗ ಸಂಪತ್ ಸತ್ತ ನಂತರ ರಾಜ್, ಸರೋಜಾ ಮನೆ ಬಿಟ್ಟು ಹೋಗುತ್ತಾರೆ. ವಜ್ರಮುನಿ ತನ್ನ ತಾಯಿಯನ್ನು ಮನೆ ಬಿಟ್ಟು ಹೋಗುವಂತೆ ಕುತ್ತಿಗೆ ಹಿಡಿದು ದೂಡುತ್ತಾನೆ. ಆಮೇಲೆ ಒಂದಿಷ್ಟು ಗಲಾಟೆ, ಶುಭಂ.


ಕೌರವೇಶ್ವರ ನಾಟಕದಿಂದ ವಜ್ರಮುನಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಚಿತ್ರ ಮಲ್ಲಮ್ಮನ ಪವಾಡ. ಒಂದು ರೀತಿ ಮತ್ತಿನಲ್ಲಿದ್ದಂತೆ ಕಣ್ಣಿಟ್ಟುಕೊಂಡು ಜೋರು ಜೋರು ಡಯಲಾಗ್ ಹೇಳಿ, ಅಣ್ಣನನ್ನು ಹಂಟರ್‍ನಲ್ಲಿ ಬಾರಿಸುವ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆಂದೇ ಹೇಳಬೇಕು. 

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply