ಮಾನಾಡು: ತಮಿಳು ಚಿತ್ರ ವಿಮರ್ಶೆ-. ’ಸಮಯೋಚಿತ’ ಅಧ್ಬುತ ಸೈನ್ಸ್ ಫಿಕ್ಷನ್ ಥ್ರಿಲ್ಲರ್..


ಸೋನಿ ಲಿವ್ ಓಟಿಟೀ/ ಚಿತ್ರಮಂದಿರಗಳು

ಜೀವನದಲ್ಲಿ ಮುಂದೇನು ನಡೆಯುತ್ತದೆ ಎಂಬುದಕ್ಕೆ ಉತ್ತರ- ಹಿಂದೇನು ನಡೆಯಿತು ಎಂಬ ಘಟನಾವಳಿಗೆ ಸದಾ ಲಿಂಕ್ ಆಗಿರುತ್ತದೆ.

ಅದುವೇ ಕಾಲಧರ್ಮ ಮತ್ತು ಕಾಲದ ವರ್ತನೆ.
ಆದರೆ ಆ ಭವಿಷ್ಯವನ್ನು ಬದಲಾಯಿಸುವ ಒಂದೇ ಒಂದು ಅವಕಾಶ ….ಈಗ…ಅಂದರೆ ವರ್ತಮಾನದಲ್ಲಿ ಮಾತ್ರ ಸಾಧ್ಯ!
ಅದನ್ನು ಬದಲಾಯಿಸಲು ನಮಗೆ ಹಲವು ಬಾರಿ ಅವಕಾಶ ಸಿಗುವುದಾದರೆ- ನಾವು ಒಮ್ಮೊಮ್ಮೆ ವಿಚಿತ್ರವಾದ ಮುಗಿಯದ ಕಾಲಚಕ್ರದಲ್ಲಿ ಸಿಲುಕಿ ಮತ್ತೆ ಮತ್ತೆ ಅದೇ ಘಟನೆಗಳು ಪುನರಾವರ್ತನೆಯಾಗುತ್ತಲೇ ಇರುತ್ತದೆ…ಅದಕ್ಕೆ ಟೈಮ್ ಲೂಪ್ ಎನ್ನುತ್ತಾರೆ… ಪ್ರತಿಸಲವೂ ಹೊಸ ಹೊಸ ತಿರುವುಗಳು ಬಂದಂತೆ ಭವಿಷ್ಯವೂ ಅದಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ.
ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಇತೀಚೆಗೆ ಬಿಡುಗಡೆಯಾದ ತಮಿಳು ವೈಜ್ಞಾನಿಕ ಥ್ರಿಲ್ಲರ್ ಸಿನೆಮಾ- ಮಾನಾಡು (ರಾಜಕೀಯ ಸಾರ್ವಜನಿಕ ಸಭೆ ಅರ್ಥದ್ದು) ಈ ರೋಚಕವಾದ ಕಾಲ ರಹಸ್ಯವನ್ನು ಬಳಸಿಕೊಂಡು ಒಂದು ಮನರಂಜನೀಯ, ಬಿಗಿಯಾದ ಚಿತ್ರಕಥೆಯುಳ್ಳ ನೂತನ ಬಗೆಯ ಅನುಭವವನ್ನು ಕೊಡುತ್ತದೆ.
ಒಬ್ಬ ನಾಯಕ, ಮತ್ತು ಒಬ್ಬ ಖಳನಾಯಕ ಇಬ್ಬರೂ ಮುಗಿಯದ ಟೈಮ್ ಲೂಪಿನಲ್ಲಿ ಸಿಕ್ಕಿಹಾಕಿಕೊಂಡು ಬೆಕ್ಕು-ಇಲಿ ಆಟವಾಡಬೇಕಾಗುತ್ತದೆ. ನಾಯಕ ಒಬ್ಬ ವಿಮಾನ ಪ್ರಯಾಣಿಕ . ಅವನಿಗೆ ಮುಂದಾಗುವ ರಾಜ್ಯ ಮುಖ್ಯಮಂತ್ರಿಯ ರಾಜಕೀಯ ಹತ್ಯೆಯ ಸುಳಿವು ಕಣ್ಮುಂದೆ ಬಂದು ತಾನು ಆ ಮೂಲಕ ಸತ್ತಂತೆ ಅನುಭವವಾಗಿ ಮತ್ತೆ ಗಾಬರಿಯಾಗಿ ಬೆಚ್ಚಿಬಿದ್ದು ಸ್ವಸ್ಥಾನದಲ್ಲೇ ಕಂಡುಬರುತ್ತಾನೆ.
ಕನಸು ಮುಗಿದಾಗ ಎಚ್ಚರವಾಗುವುದಿಲ್ಲವೆ ಹಾಗೆ!
ಅವನ ಎದುರಾಳಿ ಕುತಂತ್ರಿ ಪೋಲೀಸ್ ಅಧಿಕಾರಿ ಅವನಷ್ಟೇ ಸಮಬಲನಾದ ಎದುರಾಳಿ
ಆ ರಾಜಕೀಯ ಹತ್ಯೆಗೆ ಭವಿಷ್ಯವನ್ನು ಬದಲಾಯಿಸಬಲ್ಲ ಶಕ್ತಿಯುತ ಆಯುಧ ತನ್ನ ಬಳಿ ಇದೆಯೆ? ಎಂಬ ಸವಾಲು ಎದುರಾದಾಗ ಅವರಿಗೆ ಅರಿವಾಗುತ್ತದೆ: ಆ ಆಯುಧವೇ ಕಾಲ..ಟೈಮ್! ಅದು ಇಬ್ಬರಿಗೂ ಒಂದೇ ಆಯುಧ!
ತಾನು ಬೇರೊಂದು ರೀತಿ ವರ್ತಿಸಿದರೆ ಹೊಸ ಹೊಸ ಭವಿಷ್ಯಗಳು ತೆರೆದುಕೊಳ್ಳುತ್ತಾ ಹೋಗುತ್ತದೆ ಎಂದರಿವಾದಾಗ ನಾಯಕ ಉಸಿರು ಬಿಗಿಹಿಡಿಯುವಂತಾ ಚಾಕಚಕ್ಯತೆ, ಸಮಯಸ್ಪೂರ್ತಿ ಮತ್ತು ಸಾಹಸದಿಂದ ನಡೆಯಲಿರುವ ದುರಂತವನ್ನು ತಪ್ಪಿಸಲು ಪುನಃ ಪುನಃ ಹೆಣಗಾಡುತ್ತಾನೆ.
ಪ್ರತಿ ಕ್ಷಣವೂ ನಿಮಗೆ ಹಾಲಿವುಡ್ಡಿನ ಹಲವು ಥ್ರಿಲ್ಲರ್ ಚಿತ್ರಗಳ ನೆನಪಾದರೂ ಆಶ್ಚರ್ಯವಿಲ್ಲ. ಡೆಜಾ ವೂ, ಎಡ್ಜ್ ಆಪ್ ಟುಮಾರೋ, ಸೋರ್ಸ್ ಕೋಡ್ ತರಹದ ಸೈಫೈ ಕಥೆಗಳ ಶೈಲಿಯಲ್ಲಿ ಇದೊಂದು ನೂತನ ಕಥೆ ಚಿತ್ರಕತೆ.
ನಿರ್ದೇಶಕ ವೆಂಕಟ್ ಪ್ರಭು ತಮಿಳಿನಲ್ಲಿ ಉತಮ ಥ್ರಿಲರುಗಳನ್ನು ನೀಡಿದವರು ಈ ಸಲ ಅದ್ಭುತವಾದ ಕಾರ್ಯ ಮಾಡಿದ್ದಾರೆ.
ಇದರ ಜೀವಾಳ -ಹೀರೋ ಮತ್ತು ವಿಲನ್ಸ್ ಇಬ್ಬರೂ… ನಾಯಕನಾಗಿ ಸಿಲಂಬರಸನ್ (ಸಿಂಬು) ತನ್ನೆಲ್ಲಾ ಅನುಭವ, ಕೌಶಲವನ್ನು ಧಾರೆಯೆರೆದು ಜೀವಮಾನದ ಉತ್ಕೃಷ್ಟ ಚಿತ್ರದಲ್ಲಿ ಅಭಿನಯಿಸಿದ್ದರೆ, ಖಳನಾಗಿ ಹಾಸ್ಯಲೇಪಿತ ಸೋಲೊಪ್ಪದ ಎ ಸಿ ಪಿ ಯಾಗಿ ಅನುಭವೀ ನಟ- ಎಸ್ ಜೆ ಸೂರ್ಯ ಮರೆಯಲಾಗದ ಪ್ರಭಾವ ಬೀರುವ ನಟನೆ ನೀಡಿದ್ದಾರೆ.
ಇವರಿಬ್ಬರದೂ ಚದುರಂಗದಾಟದಂತೆ ಕ್ಷಣಕ್ಷಣಕ್ಕೂ ಜಾಣ್ಮೆ ಮತ್ತು ಮುಂದಾಲೋಚನೆಯಿಂದ ಕೂಡಿದ ನಡೆಗಳು… ಗೆಲುವು ಯಾರದು? ಸುಲಭವಲ್ಲ ಕಾಲನನ್ನು ಗೆಲ್ಲುವುದು!

ಚಿತ್ರದುದ್ದಕ್ಕೂ ಒರಿಜಿನಲ್ ತಮಿಳು ಸಂಭಾಷಣೆಯು ಹರಿತವಾಗಿ ಚುರುಕಾಗಿದೆ( ತೆಲುಗು, ಕನ್ನಡ ಮಲೆಯಾಳಮ್ ಡಬ್ ಕೂಡಾ ಇದೆ, ಅದರ ಗುಣಮಟ್ಟದ ಬಗ್ಗೆ ನಾ ಹೇಳಲಾರೆ- ಸೋನಿ ಲಿವ್ ನಲ್ಲಿ ಆಯ್ಕೆಯಿದೆ). ನಾಯಕಿಯಾಗಿ ಕಲ್ಯಾಣಿ ಪ್ರಿಯದರ್ಶನ್ ಚಿಕ್ಕ ಚೊಕ್ಕ ರೋಲ್. ಮಿಕ್ಕಂತೆ ವೈ ಜಿ ಮಹೇಂದ್ರನ್, ಎಸ್ ಎ ಚಂದ್ರಶೇಖರ್ ( ವಿಜಯ್ ಅವರ ನಿಜಜೀವನದ ತಂದೆ) ಇವರದೆಲ್ಲಾ ಕಳೆಗಟ್ಟಿದ ಪಾತ್ರ ನಿರ್ವಹಣೆ. ಹಿನ್ನೆಲೆ ಸಂಗೀತ ಯುವನ್ ಶಂಕರ್ ರಾಜ ಅವರದು ಸಮರ್ಥವಾಗಿದೆ. ತಾಂತ್ರಿಕೆವಾಗಿಯೂ ಒಳ್ಳೆಯ ಗುಣಮಟ್ಟದಲ್ಲಿ ಮೂಡಿ ಬಂದಿದೆ
ಇದೊಂದು ಸೀಟಿನ ತುದಿಯಲ್ಲಿ ಕೂರಿಸುವಂತಾ ಕುತೂಹಲಕಾರಿ ಚಿತ್ರ.
ಚಿತ್ರಾಸಕ್ತರು ಮಿಸ್ ಮಾಡದೇ ನೋಡಿ
ನನ್ನ ರೇಟಿಂಗ್: 4.5/5

Nagesh Kumar C S

Nagesh Kumar C S

ಹವ್ಯಾಸಿ ದ್ವಿಭಾಷಾ ಬರಹಗಾರ ನಾಗೇಶ್ ಕುಮಾರ್ ಸಿ.ಎಸ್‌. ಅವರು ಜನಿಸಿದ್ದು ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚೆನ್ನೈ ನಗರದ ಬಹುರಾಷ್ಟ್ರೀಯ ಸಂಸ್ತೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬರೆದ ಸಣ್ಣ ಕತೆ, ಕಿರು ಕಾದಂಬರಿಗಳು ತರಂಗ, ತುಷಾರ ಉತ್ಥಾನ, ಸುಧಾ, ಕರ್ಮವೀರ ಸೇರಿದಂತೆ ಹಲವಾರು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. ರಕ್ತಚಂದನ, ನಾಳೆಯನ್ನು ಗೆದ್ದವನು, ಕರಾಳ ಗರ್ಭ, ಅಬಲೆಯ ಬಲೆ, ಹಿಮಜಾಲ, ರಹಸ್ಯಾಯನ ಇವರ ಪ್ರಮುಖ ಕೃತಿಗಳು. ‘ಕರಾಳ ಗರ್ಭ’ ಅವರ ಆಡಿಯೋ ಪುಸ್ತಕ ಇತ್ತಿಚೆಗೆ ಬಿಡುಗಡೆಗೊಂಡಿದ್ದು ಕೇಳುಗರಿಂದ ಮೆಚ್ಚುಗೆ ಪಡೆದಿದೆ. ಇವರು ಪ್ರತಿಲಿಪಿ ವೇದಿಕೆಯಲ್ಲಿ 1.5 ಲಕ್ಷ ಓದುಗರನ್ನು ಪಡೆದಿದ್ದಾರೆ. ಚಿತ್ರವಿಮರ್ಶೆಯಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ ಚಿತ್ರರಸಿಕರೂ ಆಗಿ ಹಲವಾರು ಫೇಸ್ ಬುಕ್ ಗ್ರೂಪ್ಸ್ ನಲ್ಲಿ ಸಕ್ರಿಯರಾಗಿದ್ದು.,, ಕನ್ನಡ ಹಿಂದಿ ತಮಿಳು ಇಂಗ್ಲೀಷ್ ಚಿತ್ರವಿಮರ್ಶೆಗಳನ್ನು ಬ್ಲಾಗ್ ನಲ್ಲಿ ನಡೆಸುವುದಲ್ಲದೇ IMDB website ನಲ್ಲಿ ಇಂಗ್ಲೀಶ್ ವಿಮರ್ಶಕರಾಗಿ ಭಾಗಿಯಾಗಿದ್ದಾರೆ

Leave a Reply