ಮಾಯಾಬಜಾರ್

(೨೮/೦೨/೨೦೨೦)
ತಾರಾಗಣ: ವಸಿಷ್ಠ ಸಿಂಹ, ರಾಜ್.ಬಿ.ಶೆಟ್ಟಿ, ಅಚ್ಯುತ್ ಕುಮಾರ್
ನಿರ್ಮಾಪಕರು: ಪುನೀತ್ ರಾಜಕುಮಾರ್
ನಿರ್ದೇಶಕರು: ರಾಧಾಕೃಷ್ಣ ರೆಡ್ಡಿ

ಹಣವೆಂಬ ಮಾಯೆಯ ಹಿಂದೆ ಹೊರಟವರ ಕಥೆ

 ಈ ಚಿತ್ರವು ಮೂರು ಮುಖ್ಯ ಪಾತ್ರಗಳ ಮೇಲೆ ಆಧಾರವಾಗಿದ್ದು ಒಬ್ಬ ಪ್ರಾಮಾಣಿಕ ಪೋಲಿಸ್ ಅಧಿಕಾರಿ, ಒಬ್ಬ ಲವರ್ ಬಾಯ್ ಮತ್ತು ಇನ್ನೊಬ್ಬ ಕಿಲಾಡಿ ಕಳ್ಳ. ಪರಿಸ್ಥಿತಿ ಅನುಗುಣವಾಗಿ ಮೂವರಿಗೂ ಹಣದ ಅವಶ್ಯಕತೆ ಉಂಟಾದಾಗ   ಇವರಿಗೆ ಕಾಣುವ ಕಪ್ಪು ಹಣ ಈ ಮೂರು ಜನರ ಕೈಯಲ್ಲಿ ಏನೆಲ್ಲ ಮಾಡಿಸುತ್ತದೆ. ಆದರೆ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಹಣದ ಗೆಲುವೋ ಅಥವಾ ಪ್ರಾಮಾಣಿಕತೆಯ ಗೆಲುವೋ ಎನ್ನುವುದೇ ಚಿತ್ರದ ಕಥೆಯ ಸಾರಾಂಶ ವಾಗಿದೆ. ಅನ್ಯಾಯದ ಹಣವನ್ನು ಎಂದು ಮುಟ್ಟದ ಪ್ರಾಮಾಣಿಕ ಪೋಲಿಸ್ ಅಧಿಕಾರಿ ( ಅಚ್ಯುತ್ ಕುಮಾರ್) ಮಗನ ಶಾಲೆಯ ಫೀಸ್ ಕಟ್ಟಲಾಗದ ಸ್ಥಿತಿಯಲ್ಲಿ ಪರದಾಡುವ ಇವನಿಗೆ ಜೀವನದಲ್ಲಿ ಸಂಕಷ್ಟ ವೊಂದು ಎದುರಾದಾಗ ಪಡುವ ಸಂಕಟ, ಲವರ್ ಬಾಯ್ ( ವಸಿಷ್ಠ ಸಿಂಹ) ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಬೇಕಾಗುವ ಹಣ ಮತ್ತು ಇನ್ನೊಂದು ಕಡೆ ಕಿಲಾಡಿ ಕಳ್ಳ ( ರಾಜ್.ಬಿ.ಶೆಟ್ಟಿ) ನಿಗೆ ಪೋಲಿಸರಿಂದ ತಪ್ಪಿಸಿಕೊಳ್ಳಲು ಅವರಿಗೆ  ಲಕ್ಷಾಂತರ ರೂಪಾಯಿ ಹಣ ಕೊಡಬೇಕಾದಾಗ ದೊಡ್ಡ ಕಳ್ಳತನದ ಅನಿವಾರ್ಯತೆ ಎದುರಾಗುತ್ತದೆ. 

ಈ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿದ ಮೂವರ ಅಗತ್ಯಗಳು ಪೂರೈಕೆಯಾಗುತ್ತದೆಯಾ? ಅದಕ್ಕಾಗಿ ಇವರು ಮಾಡುವ ಪ್ರಯತ್ನ ಎಂತಹುದು? ಈ ಚಿತ್ರದಲ್ಲಿ ನೋಟ್ ಬ್ಯಾನ್ ವಿಷಯವನ್ನು ತೋರಿಸಿದ್ದು ಈ ಸಂದರ್ಭದಲ್ಲಿ ಭ್ರಷ್ಟರು ಕಮೀಷನ್ ಆಧಾರದ ಮೇಲೆ ಕೆಲವರ ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ಪರಿವರ್ತಿಸುವುದು, ಚುನಾವಣೆಗಾಗಿ ಕೂಡಿಟ್ಟಿರುವ ಹಣವನ್ನು ಆಯ್.ಟಿ.ಅಧಿಕಾರಿಗಳ ಹೆಸರಿನಲ್ಲಿ ನಾಟಕವಾಡಿ ಲೂಟಿ ಮಾಡುವ ಹಲವು ಕುತೂಹಲಕಾರಿ ಅಂಶಗಳಿವೆ. ಆದರೆ ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶದಲ್ಲಿ ಗೆಲುವು ಎಂದೆಂದಿಗೂ ನ್ಯಾಯದ ಪರ ಇರುತ್ತದೆಂಬ ಸ಼ಂದೇಶವನ್ನು ಈ ಚಿತ್ರದಲ್ಲಿ ಹೇಳಿದೆಯಾದರೂ ಒಂದು ಗಂಭೀರ ವಿಷಯವನ್ನು ತಿಳಿ ಹಾಸ್ಯದ ಮೂಲಕ ತೆರೆಯ ಮೇಲೆ ತೋರಿಸುವ ಪ್ರಯತ್ನದಲ್ಲಿ ನಿರೀಕ್ಷಿಸಿದಷ್ಟು ಯಶಸ್ಸು ಕಂಡಿಲ್ಲ. ಉಳಿದಂತೆ ಪ್ರಕಾಶ್ ರೈ, ಸುಧಾರಾಣಿ, ಹೊನ್ನವಳ್ಳಿ ಕೃಷ್ಣ ಮತ್ತು ಕಾಮಿಡಿ ಕಿಂಗ್ ಸಾಧುಕೋಕಿಲ ಅಭಿನಯ ಸಾಧಾರಣವಾಗಿದೆ. ಲೈಟಿಂಗ್,ಸಂಕಲನ ಸೇರಿದಂತೆ ತಾಂತ್ರಿಕತೆ ಕಡೆ ಇನ್ನೂ ಗಮನ ಹರಿಸುವ ಅಗತ್ಯವಿತ್ತಾದರೂ ಚಿತ್ರದಲ್ಲಿ ಅಲ್ಲಲ್ಲಿ ಬರುವ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ಆದರೂ ಈ ಮಾಯಾಬಜಾರ್ ಎನ್ನುವ ಸಾಧಾರಣ ಹಾಸ್ಯ ಚಿತ್ರವನ್ನು ಕುಟುಂಬ ಸಮೇತ ಹೋಗಿ ಒಂದು ಬಾರಿ ನೋಡಲು ಅಡ್ಡಿಯಿಲ್ಲ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply