ಮಿಥುನಂ (ತೆಲುಗು)

ನಿರ್ದೇಶಕರು -ತನಿ ಕೆಳ್ಳ ಭರಣಿ************************
ತಾರಾಗಣ-ಎಸ್.ಪಿ.ಬಾಲಸುಬ್ರಮಣ್ಯಂ, ಲಕ್ಷ್ಮಿ


ಇದು ನನಗೆ ಅತ್ಯಂತ ಪ್ರಿಯವಾದ ಚಿತ್ರಗಳಲ್ಲೊಂದು.ವಾರಕ್ಕೊಮ್ಮೆಯಾದರೂ ಈ ಚಿತ್ರವನ್ನು ನೋಡಿಯೇ ತೀರುತ್ತೇನೆ .ಕೇವಲ ಇಬ್ಬರೇ ಇಬ್ಬರು ಪಾತ್ರಧಾರಿಗಳನ್ನಿರಿಸಿಕೊಂಡು ಚಂದವಾಗಿ ದಾಂಪತ್ಯದ ತಾತ್ಪರ್ಯ ಹೇಳಿದ ಸುಂದರವಾದ ಚಲನಚಿತ್ರ. ದಾಂಪತ್ಯದ ಸವಿ ಏನೆಂದು ತಿಳಿಯಬೇಕಾದರೆ ದಂಪತಿಗಳು ಈ ಚಿತ್ರವನ್ನು ಖಚಿತವಾಗಿ ನೋಡಿಯೇ ತೀರಬೇಕು. ಮದುವೆಯಾದವರು, ಮದುವೆಯಾಗಬೇಕಾಗಿ ಇರುವವರು ಕೂಡಾ ನೋಡಲೇಬೇಕಾದಂತಹ ಅತ್ಯದ್ಭುತ ಚಿತ್ರ.


ನಿವೃತ್ತ ಶಿಕ್ಷಕ ಅಪ್ಪ ದಾಸು, ಅವರ ಪತ್ನಿ ಬುಚ್ಚಿ ಲಕ್ಷ್ಮಿ ದಂಪತಿಗಳಿಗೆ ಐದು ಮಂದಿ ಮಕ್ಕಳಿದ್ದರೂ ಸಹ ಎಲ್ಲರೂ ವಿದೇಶದಲ್ಲಿ ನೆಲೆಸಿರುತ್ತಾರೆ .ಆದರೂ ಸಹ ಅದನ್ನು ಒಂದು ಕೊರತೆಯಾಗಿ ತಿಳಿದುಕೊಳ್ಳದೆ ಗಂಡ-ಹೆಂಡತಿ ಜೊತೆಯಾಗಿ ಹಿತವಾಗಿ ಸುಖವಾಗಿ ಕಾಲ ಕಳೆಯುತ್ತಿರುತ್ತಾರೆ .ಪ್ರಕೃತಿಯೊಡನೆ ಅವರ ಒಡನಾಟ ಅವಿರತ .ತಾವು ಸಾಕಿಕೊಂಡ ಹಸುವನ್ನು ಕುಟುಂಬದ ಅವಿಭಾಜ್ಯ ಅಂಗವಾಗಿ ತಿಳಿದುಕೊಂಡು ಬಹು ಸಂತೋಷವಾಗಿ ಅದರೊಡನೆ ಆಡುತ್ತಾರೆ.
ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಅಪ್ಪ ದಾಸುವಿನ ಪಾತ್ರದಲ್ಲಿ ಅಂತೂ ವಿಜೃಂಭಿಸಿ ಬಿಟ್ಟಿದ್ದಾರೆ. ಅವರಲ್ಲದೆ ಬೇರೆ ಯಾರನ್ನೂ ಈ ಪಾತ್ರದಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಅವರ ಮುಗ್ಧ,ಅಬೋಧ ನಟನೆ ವಾಹ್…ವಾಹ್… ಲಕ್ಷ್ಮಿಯವರ ನಟನೆಯಂತೂ ಅಬ್ಬಾ… ಅತ್ಯದ್ಭುತ..ಅವರ ವೈಯಾರ,ಹಾವ ಭಾವ…ಎಂತಹ ಕಲಾವಿದೆ… ಕಣ್ಣಿನಲ್ಲೇ ಭಾವಗಳ ಮೆರವಣಿಗೆ … ನೋಡಿಯೇ ಸವಿಯಬೇಕು…ಇಬ್ಬರ ನಟನೆಗೆ ಈ ಚಿತ್ರಕ್ಕಾಗಿ ಅತ್ಯುತ್ತಮ ನಟ,ನಟಿ ಪ್ರಶಸ್ತಿ ಸಿಕ್ಕಿದೆ… ಸಾರ್ಥಕ ಪ್ರಶಸ್ತಿ ನಿಜಕ್ಕೂ…


ಅವರ ಕ್ಷಣ ಚಿತ್ತ ಕ್ಷಣ ಕೋಪ ಪ್ರಕೃತಿ ಆಗಲಿ, ಹೆಂಡತಿಯ ಕಡೆಗಿನ ಅಪಾರ ಪ್ರೀತಿಯಾಗಲಿ ಕಾಳಜಿಯಾಗಲಿ, ಹೀಗೊಬ್ಬ ಗಂಡ ಉಂಟೆ ಎನ್ನುವಂತೆ ಮಾಡುತ್ತದೆ ..ಇಂತಹ ಸುಖಸಂಸಾರದ ಕನಸು ಪ್ರತಿ ದಂಪತಿಗೆ ಮೂಡದೆ ಹೋಗುತ್ತದೆಯೇ ??ಮುಗ್ಧ ಅಪ್ಪ ದಾಸು ಮಹಾ ರಸಿಕ .ಮಹಾ ಭೋಜನ ಪ್ರಿಯ. ಎಡವಿ ಬಿದ್ದರೆ ,ಕೂತರೆ ನಿಂತರೆ ತಿಂಡಿ ..ತಿಂಡಿ…ತಿಂಡಿ…ಅದೇ ಮಾತು .ಮಹಾ ನಾಲಿಗೆ ಚಪಲದ ಅವರಿಗೆ ಲಕ್ಷ್ಮಿ ಬಾಯಿ ಬಿಡುವ ಮೊದಲೇ ಬೇಕಾದ ತಿಂಡಿಯನ್ನು ಹೊಂದಿಸಿ ನೀಡುವುದರಲ್ಲಿ ನಿಷ್ಣಾತೆಯಾಗಿರುತ್ತಾರೆ.ಅದಕ್ಕಾಗಿಯೇ ಸಂತುಷ್ಟರಾಗಿ ಬಾಲು ಸರ್ ಪದೇ ಪದೇ ಅದ್ಭುತಹ ಎಂದು ಉದ್ಗರಿಸುತ್ತಿರುತ್ತಾರೆ ಚಿತ್ರದ ಆರಂಭದಲ್ಲಿಯೇ ಸೊಗಸಾದ ಚಿತ್ರಕಥೆ ಮುಂದಿದೆ ಎನ್ನುವ ಹೊಳಹು ಮೂಡುತ್ತದೆ …

ಕಾಯಿ ತುರಿಯುವ ಸಮಯದ ಪ್ರಸಂಗ ವಾಗಲಿ ..ಗಂಡ-ಹೆಂಡತಿ ಪರಸ್ಪರ ತಮ್ಮ ಮದುವೆ ಸಮಯದಲ್ಲಿ ಕೊಟ್ಟು ತೆಗೆದುಕೊಳ್ಳುವ ವಿಷಯದಲ್ಲಿ ಆದ ಗಲಾಟೆಗಳನ್ನು ಮಾಡಿಕೊಳ್ಳುವ ಸಂದರ್ಭ ವಾಗಲಿ ನಕ್ಕು ನಗಿಸುತ್ತದೆ. ಆದರೆ ಈ ಚಿತ್ರ ನೆನೆಸಿದಷ್ಟು ಸರಳವಲ್ಲ..
 50 ವರ್ಷದ ಸುದೀರ್ಘ ದಾಂಪತ್ಯ ಮಾಗಿದ ಮೇಲೂ ಅವರಿಬ್ಬರ ನಡುವಿನ ಹುಸಿ ಜಗಳಗಳು ,ಸರಸ ಸಲ್ಲಾಪಗಳು ಆದರ್ಶ ದಾಂಪತ್ಯ ಹೀಗಿದ್ದರೇ ಚೆನ್ನ ಎನಿಸುತ್ತದೆ …ಗಂಡ ಹೆಂಡತಿ ಇಬ್ಬರೂ ಜೊತೆಜೊತೆಗೆ ಸ್ವಾವಲಂಬಿಗಳಾಗಿ ಸಣ್ಣಪುಟ್ಟ ಕೆಲಸಗಳನ್ನು ಸಹ ಜೊತೆಜೊತೆಯಾಗಿಯೇ ಮಾಡುತ್ತಾ ಹಿತವಾಗಿ ವಿವಾಹದ ಮಧುರ ಬಂಧನ ಎಷ್ಟು ಸೊಗಸು ಎನಿಸಿಬಿಡುತ್ತದೆ.


ತನ್ನ ಮಕ್ಕಳ ಬಗ್ಗೆ ಅಷ್ಟೇನೂ ವ್ಯಾಮೋಹವಿಲ್ಲದಂತೆ ತೋರಿಸಿಕೊಳ್ಳುವ ಅಪ್ಪದಾಸುವಿನ ಬಗ್ಗೆ ಆಗಾಗ ಸಿಡಿಮಿಡಿಗೊಳ್ಳುವ ಲಕ್ಷ್ಮಿ ತನ್ನ ಮಕ್ಕಳ ಬಗ್ಗೆ ಅಪಾರ ಪ್ರೀತಿ, ಕಾಳಜಿ ಹೊಂದಿರುತ್ತಾಳೆ .ಹೊಸ ಅನ್ವೇಷಣೆಗಳ ಬಗ್ಗೆ ಏನೇನು ಸಹ ಸಕಾರಾತ್ಮಕವಾಗಿ ಪ್ರತಿಕ್ರಿಯಿಸದ ಅಪ್ಪ ದಾಸುವಿನ ಪ್ರಕೃತಿಗೆ ವಿರುದ್ಧವಾಗಿ ಲಕ್ಷ್ಮಿ ಹೊಸದರೆಡೆಗೆ ಅಪಾರ ಒಲವನ್ನು ಹೊಂದಿರುತ್ತಾರೆ .


ತನ್ನ ಪತ್ನಿಗೆ ತಿಳಿಯದಂತೆ ಅವಳ ಗೆಳತಿಗೆ ಒದಗಿದ ಸಂಕಷ್ಟಕ್ಕೆ ನೆರವಾಗುವ ಅಪ್ಪ ದಾಸುವಿನ ಮಾನವೀಯತೆ ಸಂದರ್ಭ ವಾಗಲಿ ,ತನ್ನ ಹಸು ಸಾವಿತ್ರಿಯ ಕರು ಮರಣ ಹೊಂದಿದಾಗ ಅದನ್ನು ತೋಟದಲ್ಲಿ ಸಮಾಧಿ ಮಾಡಿ ದುಃಖಿಸುವ ಸಂದರ್ಭ ವಾಗಲಿ ,ಅಪ್ಪ ದಾಸುವಿನ ನಿಜ ಸ್ವಭಾವದ ಪರಿಚಯ ಮಾಡಿಕೊಡುತ್ತದೆ.

ಚಿತ್ರದಲ್ಲಿನ ಹಾಡುಗಳು ಕೂಡ ತುಂಬಾ ಸೊಗಸಾಗಿ ಸಾಂದರ್ಭಿಕವಾಗಿವೆ.” ಆವ ಕಾಯಿ ಮನೆ ಅಂದರಿದಿ, ಗೊಂಗುರ ಪಚ್ಚಡಿ ಮನದೇಲೇ” ಹಾಡಾಗಲಿ ,ಕಾಫಿ ದಂಡಕವಾಗಲಿ …ಆಹಾ ಓಹೋ ಎನಿಸುತ್ತದೆ “ಕಾಫಿ ದಂಡಕ” ವಂತು ನಮ್ಮಂತಹ ಕಾಫಿ ಕುಡುಕರಿಗೆ ಭಾರಿ ಖುಷಿ ಕೊಡುತ್ತದೆ.


ಹೀಗೆಯೇ ಚಿತ್ರ ಸಾಗುತ್ತಲೇ ಇರಬಾರದೆ ಎನಿಸುವಷ್ಟರಲ್ಲಿಯೇ.. ಇದ್ದಕ್ಕಿದ್ದಂತೆ ಅಪ್ಪ ದಾಸು ನಿಧನರಾಗಿ ಬಿಡುತ್ತಾರೆ. ಇದರಿಂದ ಆಘಾತಗೊಂಡು ನೊಂದು ಅಳುವ ಲಕ್ಷ್ಮಿ ತಾನೆಂದೂ ದೇವರಲ್ಲಿ ಮುತ್ತೈದೆಯಾಗಿ ಹೋಗಬಾರದು ಎಂದರೆ ಕೇಳಿಕೊಳ್ಳುತ್ತಿದ್ದೆ.. ಮೊದಲು ಅಪ್ಪ ದಾಸು ಸಾವನ್ನಪ್ಪಲಿ ಎಂದು ದಿನ ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ ಎಂದು ಬಿಕ್ಕುತ್ತಾಳೆ .


ಇದಕ್ಕೆ ಕಾರಣವೇನು ತಿಳಿಯಬೇಕಾದರೆ ಈ ಚಿತ್ರವನ್ನು ನೋಡಿ .
  ನಮ್ಮ ವೃದ್ಧಾಪ್ಯದ ದಾಂಪತ್ಯ ಜೀವನ ಕೂಡ ಹೀಗೆ ಇರಲಿ ಏನ್ನುವ ಹಂಬಲ, ಹಾರೈಕೆ ಕೂಡ.. ಮೂಡಿಬಿಡುತ್ತದೆ.ಒಂದೇ ಮಾತಲ್ಲಿ ಹೇಳುವುದಾದರೆ ಅದ್ಭುತಃ…❤️❤️❤️ ಭಾವುಕರಿಗೆ ಅಂತೂ ಚಿತ್ರವನ್ನು ಒಮ್ಮೆ ನೋಡಿ ನಿಲ್ಲಿಸಲು ಸಾಧ್ಯವೇ ಇಲ್ಲ.ನೋಡದೆ ಇರುವವರು ಖಂಡಿತ ಈ ಚಿತ್ರವನ್ನು ನೋಡಿ …ಒಂಟಿಯಾಗಿ ಆದರೂ ಸರಿ…. ಸಾಧ್ಯವಾದರೆ ನಿಮ್ಮ ಸಂಗಾತಿಯ ಸಮೇತ ನೋಡಿ …ನೀವು ಮನತುಂಬಿ ನಗುವ ಸಂದರ್ಭ ಬಾರದೆ ಹೋದರೆ… ನಿಮ್ಮ ಕಣ್ಣಂಚು ತುಂಬಿ ಬಾರದೆ ಉಳಿದರೆ…. ನಿಜಕ್ಕೂ ನೀವು ಗಟ್ಟಿ ಮನಸ್ಸಿನವರೇ ಸೈ…

Author: Mamathajv Venkatesh

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply