ಮೇಡ್ ಇನ್ ಚೈನಾ” – ಹಿಂದಿ ಸಿನೆಮಾ.
ಒನ್ಸ್ ಅಗೇನ್ ತಮ್ಮ ವಿಭಿನ್ನ ಕಥಾ ಆಯ್ಕೆ ಮೂಲಕ ರಾಜಕುಮಾರ್ ರಾವ್ ಇಷ್ಟವಾಗುತ್ತಾರೆ.
ಗುಜರಾತಿನಲ್ಲಿ ನಡೆಯುವ ಇಂಡೋ-ಚೈನಾ ಸಾಂಸ್ಕೃತಿಕ ಶೃಂಗಸಭೆಗೆ ಭಾಗವಹಿಸಲು ಬಂದ ಚೈನಾದ ಜನರಲ್ ಝೆಂಗ್ ಅನುಮಾನಾಸ್ಪದವಾಗಿ ಸಾವಿಗೀಡಾಗುತ್ತಾನೆ. ಈ ಬಗ್ಗೆ ತನಿಖೆ ಕೈಗೊಂಡ ಸಿ.ಬಿ.ಐ. ಅಧಿಕಾರಿಗಳಿಗೆ ಆತ ಸಾಯುವ ಮುನ್ನ ‘ಟೈಗರ್ ಮ್ಯಾಜಿಕ್ ಸೂಪ್’ ಬ್ರಾಂಡ್-ನ ಸೂಪ್ ಕುಡಿದಿದ್ದು ತಿಳಿಯುತ್ತದೆ ಮತ್ತು ಆತನ ಸಾವಿಗೆ ಆ ಸೂಪ್ ಕಾರಣವೆಂದು ತಿಳಿಯುತ್ತಾರೆ. ಆ ಸೂಪ್ ತಯಾರಕ ರಘುವೀರ್ ಮೆಹ್ತಾ (ರಾಜಕುಮಾರ್ ರಾವ್) ನ ವಿಚಾರಣೆಯ ಮೂಲಕ ಪ್ಲ್ಯಾಶ್ಬಾಕ್ ನಲ್ಲಿ ಸಿನೆಮಾದ ಕಥೆ ಪ್ರಾರಂಭವಾಗುತ್ತದೆ.
ಒಬ್ಬ ಯಶಸ್ವಿ ಆಂಟ್ರಪ್ರೇನಿಯರ್ ಆಗಬೇಕೆಂಬ ಮಹಾತ್ವಾಕಾಂಕ್ಷೆಯುಳ್ಳ ರಘು ಮೆಹ್ತಾ, ಹೆಂಡತಿ ಮತ್ತು ಒಬ್ಬ ಮಗನನ್ನು ಹೊಂದಿರುವ ಮಧ್ಯಮ ವರ್ಗದ ಸಾಧಾರಣ ವ್ಯಕ್ತಿ. ಆತ ಇದುವರೆಗೂ ಹದಿಮೂರು ಬ್ಯುಸಿನೆಸ್ ಐಡಿಯಾಗಳನ್ನು ಟ್ರೈ ಮಾಡಿದ್ದರೂ ಯಾವುದೂ ಯಶಸ್ವಿಯಾಗಿರುವುದಿಲ್ಲ. ಹೀಗಿರುವಾಗ ಆತನಿಗೆ ಅನಿರೀಕ್ಷಿತವಾಗಿ ತನ್ನ ಕಸಿನ್ ಜೊತೆಗೆ ಚೈನಾಗೆ ಹೋಗುವ ಅವಕಾಶ ಒದಗಿಬರುತ್ತದೆ.
ಅಲ್ಲಿ ತನ್ಮಯ್ (ಪರೇಶ್ ರಾವಲ್) ಎಂಬ ಬಿಸಿನೆಸ್ ಟೈಕೂನ್ ನ ಪರಿಚಯವಾಗಿ ನಿಜವಾದ ಬ್ಯುಸಿನೆಸ್ ಅಂದರೆ ಏನೆಂದು ತಿಳಿಯುತ್ತದೆ. ಹಾಗೂ ಚೈನಾದ ಬ್ಯುಸಿನೆಸ್ ಮ್ಯಾನ್ ಹಾವ್ ಲೀ ಯಿಂದ ಹುಲಿಯ ಮರ್ಮಾಂಗವನ್ನು ಉಪಯೋಗಿಸಿ ಮಾಡಿದ ಕಾಮೋತ್ತೇಜಕ ಸೂಪ್ ಅನ್ನು ಭಾರತದಲ್ಲಿ ಮಾರಾಟ ಮಾಡುವ ಆಫರ್ ಸಿಗುತ್ತದೆ. ವಾಪಸ್ ಇಂಡಿಯಾಗೆ ಬಂದ ಮೇಲೆ ರಘುಗೆ ಹೊಳೆಯುವ ಬಿಸಿನೆಸ್ ಲೈಂಕಿಕ ಶಕ್ತಿಯನ್ನು ವರ್ಧಿಸುವ ‘ಟೈಗರ್ ಮ್ಯಾಜಿಕ್ ಸೂಪ್’ ತಯಾರಿಸಿ ಮಾರಾಟ ಮಾಡುವುದು. ಅದನ್ನು ಮಾರ್ಕೆಟಿಂಗ್ ಮಾಡಲು ಅವನು ಹುಡುಕಿಕೊಳ್ಳುವ ಪಾರ್ಟನರ್ ಸೆಕ್ಸಿಯಾಲಜಿಸ್ಟ್ ಡಾ. ವರ್ಧಿ(ಬೋಮನ್ ಇರಾನಿ).
ರಘು, ಡಾ. ವರ್ಧಿ ಹಾಗೂ ಟೀಮ್ ಯಾರಿಗೂ ತಿಳಿಯದಂತೆ ಈ ಕಾಮೋತ್ತೇಜಕ ಸೂಪ್ ಅನ್ನು ತಯಾರಿಸಿ ಮಾರ್ಕೆಟಿಂಗ್ ಮಾಡಲು ಪಡುವ ಪರಿಪಾಟಲುಗಳು ವೀಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತವೆ. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಇಲ್ಲದ ಇಂತಹ ಒಂದು ಪ್ರಾಡಕ್ಟ್ ಅನ್ನು ತಯಾರಿಸಿ ಮಾರಾಟ ಮಾಡುವಲ್ಲಿ ರಘು ಅನುಭವಿಸುವ ತೊಂದರೆಗಳು ಹಾಗೂ ಅವನ ಕೌಟುಂಬಿಕ ಜೀವನದ ಮೇಲೆ ಇರರಿಂದಾಗುವ ಪರಿಣಾಮಗಳನ್ನು ಮನಮುಟ್ಪುವಂತೆ ಚಿತ್ರಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಈ ಸಿನೆಮಾ ಎರಡು ಗಂಭೀರವಾದ ವಿಚಾರಗಳ ಹಿನ್ನೆಲೆಯಲ್ಲಿ ಸಾಗುತ್ತದೆ. ಮೊದಲನೆಯದು ಯಾವ ವ್ಯಾಪಾರವೂ ಕೀಳಲ್ಲ, ಮನಸ್ಸು ಮಾಡಿದರೆ ಏನನ್ನೂ ಬೇಕಾದರೂ ಮಾರಾಟ ಮಾಡಬಹುದು. ಎರಡನೆಯದು ಲೈಂಗಿಕ ಶಿಕ್ಷಣ. ಜನರಲ್ ಝೆಂಗ್ ನ ಸಾವಿಗೆ ಕಾರಣವನ್ನು ಹುಡುಕುತ್ತ ಸಾಗುವ ಸಿನೆಮಾ ಕ್ಲೈಮಾಕ್ಸ್ ನಲ್ಲಿ ಬೇರೆಯೇ ತಿರುವನ್ನು ಪಡೆದುಕೊಳ್ಳುತ್ತದೆ.
ಅಷ್ಟೆಲ್ಲ ಜನಪ್ರಿಯಗೊಂಡ ‘ಟೈಗರ್ ಮ್ಯಾಜಿಕ್ ಸೂಪ್’ನ ರಿಸೀಪಿ ಯಾವುದು? ಚೈನಾದಿಂದ ಆಮದುಗೊಂಡ ಯಾವ ಪದಾರ್ಥವನ್ನು ರಘು ತನ್ನ ಸೂಪಿನಲ್ಲಿ ಬೆರೆಸಿದ್ದನು? ರಘು ಮೆಹ್ತಾ ತಾನು ಅಂದುಕೊಂಡಂತೆ ಒಬ್ಬ ಯಶಸ್ವಿ ಆಂಟ್ರಪ್ರೇನಿಯರ್ ಆದನೇ?
ಸಿನೆಮಾವನ್ನು ಒಮ್ಮೆ ನೋಡಲೇಬೇಕು.
ಯಾವ ವಿಷಯದ ಬಗ್ಗೆ ಜನರು ಮಾತಾಡೋದಕ್ಕೂ ಹಿಂಜರಿಯುತ್ತಾರೋ ಅಂತಹ ವಿಷಯದ ಮೇಲೆ ಸಿನೆಮಾ ಮಾಡಿದ ನಿರ್ದೇಶಕರ ಧೈರ್ಯವನ್ನು ಮೆಚ್ಚಲೇಬೇಕು.
Every crisis is an opportunity in disguise
ಲೇಖಕರು : ಸಂತೋಷ್ ಖಾರ್ವಿ…ವೃತ್ತಿ – ಕಾಲೇಜಿನಲ್ಲಿ ಶಿಕ್ಷಕೇತರ ಸಿಬ್ಬಂದಿ…ಪ್ರವೃತ್ತಿ – ಹವ್ಯಾಸಿ ಬರಹಗಾರ…ಹವ್ಯಾಸಗಳು – ಓದುವುದು, ಸಿನೆಮಾ ವೀಕ್ಷಣೆ