ಕನ್ನಡ ನಾಡು ಕಂಡ ಅತೀ ಶ್ರೇಷ್ಠ ರಂಗಭೂಮಿ ಕಲಾವಿದರು ಗುಬ್ಬಿ ವೀರಣ್ಣ ಕೇವಲ ನಟ ಮಾತ್ರವಲ್ಲದೆ ನಿರ್ಮಾಪಕರಾಗಿ ಮತ್ತು ನಿರ್ದೇಶಕರಾಗಿ ರಂಗಭೂಮಿಗೆ ಸಲ್ಲಿಸಿದ ಸೇವೆ ಅಪಾರ. ಇವರ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸಿಕೊಡಬೇಕು ಎನ್ನುವ ಉದ್ದೇಶದಿಂದ ನನಗೆ ದೊರೆತ ಅಲ್ಪ ಮಾಹಿತಿಯ ಆಧಾರದ ಮೇಲೆ ಈ ಲೇಖನವನ್ನು ರಚಿಸಿದ್ದೇನೆ.
ತುಮಕೂರು ಜಿಲ್ಲೆಯ ಗುಬ್ಬಿ ಎಂಬ ಗ್ರಾಮದಲ್ಲಿ ವೀರಣ್ಣನವರು ೧೮೯೦ ರಲ್ಲಿ ಹಂಪಣ್ಣ ಮತ್ತು ರುದ್ರಾಂಬೆ ಎಂಬ ದಂಪತಿಗಳ ಮೂರನೇ ಮಗನಾಗಿ ಜನಿಸಿದರು. ಇವರು ೧೮೯೬ ರಲ್ಲಿ ಕೇವಲ ೬ ವರ್ಷ ವಯಸ್ಸಿನಲ್ಲಿ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ನಾಟಕದಲ್ಲಿ ಬಾಲ ಕಲಾವಿದನ ಪಾತ್ರವನ್ನು ನಿರ್ವಹಿಸುವುದರ ಮೂಲಕ ರಂಗಭೂಮಿಯನ್ನು ಪ್ರವೇಶಿಸಿದರು. ಕೆಲವು ವರ್ಷಗಳ ಕಾಲ ಬಾಲ ಕಲಾವಿದನ ಪಾತ್ರವನ್ನು ನಿರ್ವಹಿಸಿದ್ದ ಇವರು ನಂತರ ಕೆಲವು ನಾಟಕಗಳಲ್ಲಿ ಸ್ತ್ರೀಯ ಪಾತ್ರವನ್ನು ನಿರ್ವಹಿಸಿದ್ದರು. ಪ್ರೌಢಾವಸ್ಥೆಗೆ ಬರುವವರೆಗೂ ಸ್ತ್ರೀ ಪಾತ್ರಗಳಲ್ಲಿ ನಟಿಸಿದ್ದರು.
ಪ್ರೌಢಾವಸ್ಥೆಗೆ ಬಂದ ನಂತರ ಅವರ ಧ್ವನಿಯಲ್ಲಿ ಬದಲಾವಣೆ ಉಂಟಾಗಿತ್ತು. ಈ ಕಾರಣದಿಂದ ಸ್ತ್ರೀ ಪಾತ್ರಗಳನ್ನು ಬಿಟ್ಟು ಕೇವಲ ಗಂಡು ಪಾತ್ರಗಳನ್ನು ಮಾತ್ರ ನಿರ್ವಹಿಸತೊಡಗಿದರು. ಅಂದಿನ ರಂಗಭೂಮಿ ಕಲಾವಿದರಿಗೆ ಅಗತ್ಯವಿದ್ದ ಹಾಡುಗಾರಿಕೆ, ತಬಲಾ, ಪಿಟೀಲು ಇನ್ನಿತರ ಎಲ್ಲ ವಿದ್ಯೆಗಳನ್ನು ಕಲಿತಿದ್ದರು. ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲಿ ಮಿಂಚುತ್ತಿದ್ದ ಇವರನ್ನು ೧೯೧೨ ರಲ್ಲಿ ಮೈಸೂರಿನ ಜನತೆ ಚಿನ್ನದ ಪದಕವನ್ನು ನೀಡಿ ಗೌರವಿಸಿತ್ತು. ಇದಾದ ಒಂಬತ್ತು ವರ್ಷಗಳ ನಂತರ ೧೯೨೧ ರಲ್ಲಿ ಬೆಂಗಳೂರಿನಲ್ಲಿ ಇವರ ನಾಟಕದ ಪ್ರದರ್ಶನವನ್ನು ನೋಡಿ ಮೆಚ್ಚಿದ ಕನ್ನಡ ನಾಟಕಗಳ ಪಿತಾಮಹ ಟಿ.ಪಿ.ಕೈಲಾಸಂ ಕೈ ಗಡಿಯಾರವನ್ನು ನೀಡಿ ಗೌರವಿಸಿದರು.
೧೯೨೩ ರಲ್ಲಿ ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಇವರ ನಾಟಕಗಳನ್ನು ನೋಡಿ ಮೆಚ್ಚಿ ವರ್ಸ್ ಲೈಟ್ ಕಾಮಿಡಿಯನ್ ಎಂಬ ಬಿರುದು ನೀಡಿ ಗೌರವಿಸಿದ್ದರು. ಇವರು ತಮ್ಮ ಕಲೆಯನ್ನು ಎಷ್ಟು ಪ್ರೀತಿಸುತ್ತಿದ್ದರಂದರೆ ಬರುವ ಮುಂದಿನ ಪೀಳಿಗೆಯು ರಂಗಭೂಮಿಯಲ್ಲಿ ಪ್ರವೇಶಿಸಿ ಇನ್ನೂ ಹೆಚ್ಚು ಜನಪ್ರಿಯವಾಗಬೇಕು ಎಂಬ ಉದ್ದೇಶದಿಂದ ೧೯೨೫ ರಲ್ಲಿ ೧೪ ವರ್ಷಗಳಗಿನ ಬಾಲಕರಿಗೆ ನಾಟಕ ತರಬೇತಿ ನೀಡಲು ಬಾಲಕ ವಿವರ್ಧಿನಿ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.
( ಮುಂದುವರೆಯುವುದು )