ನಾನು ಯಾವಾಗಲೂ suspense, thriller movies ಅಂತ ಗೂಗಲ್ಲಿನಲ್ಲಿ ಸರ್ಚ್ ಕೊಟ್ಟು ಹುಡುಕುತ್ತಿರುತ್ತೇನೆ. ಆದರೆ ನಾನು ಚಿಕ್ಕಂದಿನಲ್ಲಿ ಕೇವಲ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಇಂಗ್ಲೀಷ್ ಸಿನೆಮಾಗಳೇ ನನಗೆ ಈಗಲೂ ಇಷ್ಟವಾಗುತ್ತವೆ ಹೊರತೂ ಈಗಿನ ಸಿನೆಮಾಗಳು ಅಷ್ಟಾಗಿ ಆಕರ್ಷಿಸೋಲ್ಲ. ಅದೇ ಕಥೆಗಳು, ಜಾಳಾದ ನಿರೂಪಣೆ, ಇನ್ನೂ ಏನೋ ಇರಬೇಕಿತ್ತು ಅನ್ನುವ ಭಾವ ಕಾಡುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮದೇ ನೆಲದ, ನಮ್ಮದೇ ಭಾಷೆಯ ಸಸ್ಪೆನ್ಸ್-ಥ್ರಿಲ್ಲರ್ ಮೂವಿ ಎದುರಾದಾಗ ಏನಾಗಬೇಕು?
ಯೆಸ್…. ನಿಜ!!!
ನಾನು ಹೇಳುತ್ತಿರುವುದು ಕನ್ನಡದ “ಯೂ ಟರ್ನ್” ಸಿನೆಮಾದ ಬಗ್ಗೆ. ಈ ಸಿನೆಮಾ ಮಾಡುವ ಮೊದಲು ನಿರ್ದೇಶಕರು ಅದೆಷ್ಟು ರೀಸರ್ಚ್ ಮಾಡಿರಬೇಕು ಎಂಬ ಅಂಶವೇ ರೋಮಾಂಚನ ಹುಟ್ಟಿಸುತ್ತದೆ. ಒಂದು ಸಣ್ಣ ಕಥಾ ಸುಳಿವು ಹಿಡಿದು ಅದ್ಭುತವಾದ ಹಾರರ್ ಮೂವಿ ಮಾಡಿಕೊಟ್ಟಿದ್ದಾರೆ. ದೆವ್ವದ ಸಿನೆಮಾಗಳು ಅರ್ಥ ಕಳೆದುಕೊಂಡು ನಗೆಪಾಟಲಾಗುತ್ತಿರುವ ಈ ದಿನಗಳಲ್ಲಿ ನಿರಾಕರಿಸಲು ಸಾಧ್ಯವೇ ಆಗದಂತಹಾ ಹಾರರ್ ದೃಶ್ಯಗಳು-ಲಾಜಿಕ್ ಬೆರೆಸಿ, ಪಾಪಪ್ರಜ್ಞೆಯೇ ಭೂತವಾಗಿ ಕಾಡುವುದು ಎಂಬ ಜ್ಞಾನೋದಯ ಎಲ್ಲವನ್ನೂ ಒಟ್ಟೊಟ್ಟಿಗೆ ಮಾಡಿಸುತ್ತಾರೆ ನಿರ್ದೇಶಕರು.
ಪೊಲೀಸರ ಸಾಮಾನ್ಯ ಧೋರಣೆಯಲ್ಲಿಯೇ ಸಿನೆಮಾ ಶುರುವಾಗುತ್ತದೆ. ಅವರಿಗೆ ಕೇಸ್ ಕ್ಲೋಸ್ ಆಗಬೇಕಷ್ಟೆ. ನಾಯಕಿಯ ತಳಮಳ, ಕಾಳಜಿ ಏನೂ ಬೇಕಿಲ್ಲ. ಅವರ ಸಬೂಬು ಒಂದೇ ಮೇಲಿನವರ ಒತ್ತಡ. ಇಂದು ಇಡೀ ದೇಶವನ್ನು ಕಾಡುತ್ತಿರುವ ಅಂಶ ಇದು. ಆದರೂ ಪೊಲೀಸ್ ಅಧಿಕಾರಿಗಳಲ್ಲಿ ಕೆಳಹಂತದಿಂದ ಮೇಲಿನ ಹಂತದವರೆಗೂ ವಿವಿಧ ಅಧಿಕಾರಿಗಳು ಬೇರೆ ಬೇರೆಯಾಗಿ ನಡೆದುಕೊಳ್ಳುತ್ತಾರೆ. ಈ ಸೂಕ್ಷ್ಮತೆ ಈ ಸಿನೆಮಾದಲ್ಲಿದೆ.
ನಂತರ ನಾಯಕಿಯ ದೃಷ್ಟಿಕೋನದೊಂದಿಗೆ ಸಿನೆಮಾದೊಳಗೆ ಪ್ರವೇಶ ಪಡೆಯುತ್ತೇವೆ. ಈ ಮೊದಲೇ ಆ ನಿರ್ದಿಷ್ಟ ಸ್ಥಳದಲ್ಲಿ “ಯೂ ಟರ್ನ್” ಮಾಡಿದವರೆಲ್ಲಾ ಸತ್ತಿರುತ್ತಾರೆ ಅಂತ ನಾಯಕಿಗೂ ಗೊತ್ತಿರೋಲ್ಲ, ನಮಗೂ ಗೊತ್ತಿರೋಲ್ಲ. ಹಾಗಾಗಿ ಇಬ್ಬರೂ ಒಟ್ಟಿಗೆ ಷಾಕ್ ಆಗುತ್ತೇವೆ. ನಾಯಕಿಯ ಮುಂದೆ ಒಂದೊಂದೇ ಸತ್ಯ ಅನಾವರಣ ಆದಂತೆಲ್ಲಾ ನಾವೂ ಸಹ ಪ್ಯಾನಿಕ್ ಗೆ ಒಳಗಾಗುತ್ತಾ ಹೋಗುತ್ತೇವೆ. ಸಿಂಪಲ್ ಹಾರರ್ ಮೂವಿ ಅಂತ ನೋಡಲು ಕುಳಿತವರು ಎಲ್ಲಾ ಮರೆತು ನಾವೇ ಒಂದು ಪಾತ್ರವಾಗಿಬಿಡುತ್ತೇವೆ… ಕಡೆಗೆ ನಾಯಕಿಗೂ ಹಾರರ್ ಅನುಭವವಾದಾಗ ದೆವ್ವ-ಭೂತಗಳೆಲ್ಲಾ ಸುಳ್ಳು ಅಂತ ನಾವು ಬೇರೆಯವರ ಬಳಿ ಹಾಸ್ಯ ಮಾಡುತ್ತಿದ್ದುದು ನೆನಪಾಗುತ್ತದೆ. ಹಾಗಾದರೆ ನಿಜಕ್ಕೂ ದೆವ್ವ ಇದೆಯಾ ಅಂತನಿಸಿ ಸಣ್ಣಗೆ ಭಯವಾಗತೊಡಗುತ್ತದೆ…
ತನ್ನ ಸಾವಿಗೆ ಕಾರಣ ಅಂತ ತಿಳಿದವರನ್ನೆಲ್ಲ ಕೊಲ್ಲುತ್ತಿದ್ದ ಆತ್ಮವು, ನಿಜಕ್ಕೂ ತನ್ನ ಸಾವಿಗೆ ಕಾರಣವಾದ ವ್ಯಕ್ತಿಯನ್ನು ಬದುಕಲು ಬಿಟ್ಟು ತೆರಳುತ್ತದೆ. ವಿಚಿತ್ರ ಎನಿಸುತ್ತದೆ ಅಲ್ವಾ? ಹೌದು…. ಈ ಭೂಮಿಯ ಮೇಲೆ ಕಟ್ಟಕಡೆಯ ಶಿಕ್ಷೆ ಸಾವಲ್ಲ… ಬದಲಿಗೆ ಬದುಕು! ನಮಗೆ ಯಾರ ಮೇಲೆ ಸಿಟ್ಟಿದೆಯೋ ಅವರನ್ನು ನೇಣಿಗೆ ಹಾಕಿ ಎನ್ನುತ್ತೇವೆ ನಾವು. ಆದರೆ ಎಲ್ಲವನ್ನೂ ನೆನಪಿಟ್ಟುಕೊಂಡು ಪ್ರತೀಕ್ಷಣವೂ ಪಶ್ಚಾತ್ತಾಪದಿಂದ ಬೇಯುತ್ತಾ ಬದುಕುವುದಕ್ಕಿಂತಲೂ ದೊಡ್ಡ ಶಿಕ್ಷೆಯಿಲ್ಲ. ನಾವು ಮಾಡಿದ ತಪ್ಪು ಕ್ಷಣ ಕ್ಷಣವೂ ಚುಚ್ಚುತ್ತಾ ಯಾತನೆ ಕೊಡುತ್ತಿರುತ್ತದೆ.
ಆದರೆ…. ತಪ್ಪು ಮಾಡಿದರೆ ತಾನೇ ಚುಚ್ಚುವುದು? ಯಾತನೆಯಾಗುವುದು? ತಪ್ಪೇ ಮಾಡದಿದ್ದರೆ….? ಟ್ರಾಫಿಕ್ ನಿಯಮ ಸರಿಯಾಗಿ ಪಾಲಿಸಿದವರು ನೆಮ್ಮದಿಯಾಗಿ ನಿದ್ರಿಸಬಹುದು… ಯಾವ ದುಷ್ಟ ಶಕ್ತಿಯೂ ಅವರನ್ನು ಏನೂ ಮಾಡಲಾಗದು..
ಇದೇನು ಪುರಾಣ ಹೇಳುತ್ತಿದ್ದಾಳೆ ಎಂದುಕೊಂಡಿರಾ?ಕಾಕತಾಳೀಯವೋ ಅಥವಾ ನಿಜವೋ ಗೊತ್ತಿಲ್ಲ… ಈ ಸಿನೆಮಾ ನೋಡಿ ರಾತ್ರಿ ಮಲಗಿದಾಗ ವಿಚಿತ್ರ ಅನುಭವಗಳಾದವು… ಪಕ್ಕದಲ್ಲಿ ಯಾರೋ ಇರುವ ಹಾಗೆ, ಯಾರೋ ಓಡಾಡಿದ ಹಾಗೆ, ಯಾರದೋ ಉಸಿರು ತಾಕಿದ ಹಾಗೆ… ನನ್ನ ಮನಸ್ಸು ಬಹಳ ಸ್ಟ್ರಾಂಗ್! ಯಾರೂ ಅಲ್ಲಾಡಿಸಲಾಗೋಲ್ಲ… ಆದರೆ ಈ ಸಿನೆಮಾ ನನ್ನನ್ನು ಆಳವಾಗಿ ಆವರಿಸಿಕೊಂಡಿದ್ದರಿಂದ ಒಂದು ದಿನ ಅದೇ ಹ್ಯಾಂಗೋವರ್ ನಿಂದಾಗಿ ಈ ರೀತಿಯ ಭಯಾನಕ ಅನುಭವಗಳಾದವು… Amazing…
ಕಥೆ ಕಟ್ಟಿರುವ ನಿರ್ದೇಶಕರ ರೀತಿಗೆ ಒಂದು ಗೌರವಭರಿತ ಸಲ್ಯೂಟ್…. ❤
ಕೆ.ಎ.ಸೌಮ್ಯ
ಮೈಸೂರು