ಈ ಸಿನೆಮಾದ ಮುಖ್ಯ ಉದ್ದೇಶ ಒಂದು ಕೊಲೆಯ ರಹಸ್ಯ ಕಂಡು ಹಿಡಿಯುವುದು. ಆದರೆ ಅದನ್ನು ಕಂಡುಹಿಡಿಯುತ್ತಾ ಸಾಗಿದಂತೆ ಮತ್ತೇನೋ ಅನಾವರಣಗೊಳ್ಳುತ್ತಾ ಸಾಗುತ್ತದೆ. ಮನುಷ್ಯರ ಸ್ವಾರ್ಥ, ಅತಿಯಾಸೆ, ಲಾಲಸೆಗಳು ಸಿನೆಮಾ ಉದ್ದಕ್ಕೂ ಕಾಡುತ್ತವೆ. ಹೆತ್ತವರ ಸ್ವಾರ್ಥಕೇಂದ್ರಿತ ಯೋಚನೆಗಳಿಂದ ಮಕ್ಕಳು ಹೇಗೆ ಬಲಿಯಾಗುತ್ತಾರೆ ಅಂತ ಇಲ್ಲಿ ತೋರಿಸಲಾಗಿದೆ.
ಭ್ರಷ್ಟಾಚಾರಕ್ಕೆ ಬಲಿಯಾಗದ ಅಧಿಕಾರಿ ಒಂದೆಡೆ ಇದ್ದರೆ, ದುಡ್ಡುಕೊಟ್ಟರೆ ಅಪರಾಧಿಗೂ ಸಹಕರಿಸುವ ಪೊಲೀಸರು ಮತ್ತೊಂದೆಡೆ ಇದ್ದಾರೆ. ಹೆಂಡತಿಯ ಅನಾಚಾರವನ್ನು ತಿಳಿದೂ ಸುಮ್ಮನಿರುವವನು ಒಂದೆಡೆ ಇದ್ದರೆ, ಮನೆಯಲ್ಲಿಯೇ ತನ್ನ ಹಳೆ ಪ್ರೇಮಿಯನ್ನು ತಂದಿಟ್ಟುಕೊಳ್ಳುವವನು ಮತ್ತೊಂದೆಡೆ…… ಒಟ್ಟಿನಲ್ಲಿ ಮನುಷ್ಯನ ದುರಾಸೆಯೇ ಎಲ್ಲದಕ್ಕೂ ಮೂಲ.
ಸಿನೆಮಾ ಕಥೆಯು ನೋಯ್ಡಾದ ಅವಳಿ ಕೊಲೆಯ ಕೇಸಿನಿಂದ ಪ್ರಭಾವಿತವಾಗಿದೆ.
ಹದಿನೆಂಟರ ಯುವತಿಯೊಬ್ಬಳು ತನ್ನ ಮನೆಯಲ್ಲಿಯೇ ಕೊಲೆಯಾಗಿರುತ್ತಾಳೆ. ಆ ಸಮಯದಲ್ಲಿ ಆಕೆಯ ತಂದೆ ಮಾತ್ರ ಮನೆಯಲ್ಲಿರುತ್ತಾನೆ. ತಾಯಿ ಊರಿನಲ್ಲಿಯೇ ಇರುವುದಿಲ್ಲ. ಹಾಗಾಗಿ ಪ್ರಾಥಮಿಕ ತನಿಖೆಯಿಂದ ತಂದೆಯೇ ಈ ಕೊಲೆ ಮಾಡಿರುವುದು ಅಂತ ಪೊಲೀಸರು ಅರೆಸ್ಟ್ ಮಾಡುತ್ತಾರೆ.
ನಂತರ ಕೇಸ್ ಸಿಬಿಐ ನವರಿಗೆ ವಹಿಸಲಾಗುತ್ತದೆ.
ಸಿಬಿಐ ಅಧಿಕಾರಿಗೆ ಇಲ್ಲೇನೋ ಕೊರತೆ ಇದೆ ಅಂತನ್ನಿಸಲು ಶುರುವಾಗಿ ಮತ್ತೊಮ್ಮೆ ಮೊದಲಿನಿಂದ ತನಿಖೆ ಮಾಡಲು ತೊಡಗುತ್ತಾನೆ. ಪೊಲೀಸರು ಗಮನಿಸದ ಅಥವಾ ನಿರ್ಲಕ್ಷ್ಯ ವಹಿಸಿರಬಹುದಾದ ಅತೀ ಸಣ್ಣಸಣ್ಣ ಸುಳಿವುಗಳನ್ನು ಆಧರಿಸಿ ಕೊಲೆಗಾರನ ಬಳಿ ತಲುಪುವ ಪ್ರಯತ್ನ ಮಾಡುತ್ತಾನೆ.
ಈ ನಡುವೆ ಆ ಹುಡುಗಿಯ ಹತ್ಯೆಯಾದ ದಿನದಿಂದ ಕಾಣೆಯಾಗಿದ್ದ ಮನೆಕೆಲಸದ ಹುಡುಗನ ಶವವೂ ಸಿಗುತ್ತದೆ. ಇಷ್ಟು ದಿನ ಅವನೇ ಕೊಲೆಗಾರ ಎಂದುಕೊಂಡಿದ್ದು, ಈ ಶವ ಸಿಕ್ಕಾಗ ಕೇಸಿನ ಸ್ವರೂಪವೇ ಬದಲಾಗುತ್ತದೆ. ಅಲ್ಲದೇ ಪೊಲೀಸರ ತನಿಖೆ ಕೇವಲ ಕಾಟಾಚಾರಕ್ಕಾಗಿ ಅಂತ ಗೊತ್ತಾಗುತ್ತದೆ.
ದುಡ್ಡಿಗೆ ಬಗ್ಗದ ಸಿಬಿಐ ಅಧಿಕಾರಿ ಸ್ಪಷ್ಟವಾಗಿ ಕೊಲೆಗಾರನತ್ತ ಗಮನ ಹರಿಸಿದಾಗ ಅಧಿಕಾರಿಯ ಮೇಲೆಯೂ ಹಲ್ಲೆಯಾಗುತ್ತದೆ. ಎಚ್ಚೆತ್ತುಕೊಂಡಿರದಿದ್ದರೆ ಅಧಿಕಾರಿಯ ಕೊಲೆಯೂ ನಡೆದು ಹೋಗಿರುತ್ತಿತ್ತು. ಆದರೆ ಸಿಬಿಐ ಅಧಿಕಾರಿ ಸಮಯ ಪ್ರಜ್ಞೆಯಿಂದ ಬದುಕುಳಿಯುತ್ತಾನೆ.
ಕಡೆಗೆ ಕೊಲೆಗಾರ ಯಾರು ಮತ್ತು ಈ ಕೊಲೆ ಯಾಕಾಗಿ ಮಾಡಲಾಯಿತು ಅಂತ ಗೊತ್ತಾದಾಗ ನಾವು ಗಾಬರಿಯಾಗುತ್ತೇವೆ. ಹೊರ ಜಗತ್ತಿನ ಸಭ್ಯ ಮತ್ತು ದೊಡ್ಡವರೆನಿಸಿಕೊಂಡ ಮನುಷ್ಯರು ಅಂತರಂಗದಲ್ಲಿ ಅತ್ಯಂತ ಕ್ಷುಲ್ಲಕ ಮನಸ್ಸಿನವರಾಗಿರುತ್ತಾರೆ. ತನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ತನ್ನ ಶತೃವಿನ ಎರಡು ಕಣ್ಣು ಹೋಗಲಿ ಎಂಬ ಮನಸ್ಥಿತಿಯವರಾಗಿರುತ್ತಾರೆ.
ಇದರ ಜೊತೆಗೆ ಬೆಳೆದು ನಿಂತ ಮಕ್ಕಳಿದ್ದರೂ ಅವರ ಬಗ್ಗೆ ಯೋಚಿಸದೇ, ತಮ್ಮ-ತಮ್ಮ ಸ್ವಾರ್ಥಸಾಧನೆ ಮಾಡಿಕೊಳ್ಳುವ ತಂದೆ-ತಾಯಿಯರಿಂದಲೇ ಮಕ್ಕಳ ಭವಿಷ್ಯ ಹಾಳಾಗುತ್ತಿರುವುದು. ಮಕ್ಕಳಿಗಾಗಿ ಚೂರೂ ಸಮಯ ಕೊಡದೇ, ಅವರ ಕಷ್ಟ-ಸುಖ ಕೇಳದೇ ಇದ್ದಾಗಲೇ ಅವರುಗಳು ದಾರಿ ತಪ್ಪುವುದು. ಎಷ್ಟು ದುಡ್ಡಿದ್ದರೇನು ಫಲ? ಸಂಸ್ಕಾರವೇ ಸಿಗದ ಮೇಲೆ? ಕಡೆಗೆ ಅದರ ಫಲವನ್ನು ಇಡೀ ಕುಟುಂಬ ತಿನ್ನಬೇಕು.
Good review of the movie.
ಥ್ಯಾಂಕ್ಯೂ ಸರ್