ರಾಜಶೇಖರ

ಚಂದಮಾಮಾ ಕಥೆಗಳಂತೆ ಒಳ್ಳೆಯವರಿಗೆ ಒಳ್ಳೆಯದು ಎನ್ನುವಂತೆ ಮುಗಿಯದ ವಿಶೇಷ ಚಿತ್ರವಿದು. ಕಥೆಯ ಮೂಲ ಜಗಮೆಚ್ಚಿದ ಮಗ ಚಿತ್ರದಂತೆಯೇ. ಅದರಲ್ಲಿ ರಾಜ ತನ್ನ ಹೆಂಡತಿಗೂ, ಮಂತ್ರಿಗೂ ಸಂಬಂಧವಿದೆಯೆಂದು ನಂಬಿ ಹೆಂಡತಿಯನ್ನು ಓಡಿಸುತ್ತಾನೆ.

ಇದರಲ್ಲಿ ಶೇಖರವರ್ಮ (ರಾಜ್‍ಕುಮಾರ್) ತನ್ನ ಹೆಂಡತಿ ಮಂಗಳಾಗೂ(ಬೆಡಗಿನ ನಟಿ ಭಾರತಿ), ತನ್ನ ಪ್ರಾಣಸ್ನೇಹಿತ ಮಲ್ಲನಿಗೂ (ಉದಯಕುಮಾರ್) ಸಂಬಂಧವಿದೆಯೆಂದು ನಂಬಿ (ಇದು ಮಂತ್ರಿಗಳಿಬ್ಬರ ಕುತಂತ್ರ. ಆದರೆ ಅವರು ಸದುದ್ದೇಶದಿಂದ ಹಾಗೆ ಮಾಡಿರುತ್ತಾರೆ!) ಗರ್ಭಿಣಿ ಹೆಂಡತಿಯನ್ನು ಓಡಿಸಿ, ಮಲ್ಲನಿಗೆ ಕಾರಾಗೃಹವಾಸದ ಶಿಕ್ಷೆ ವಿಧಿಸುತ್ತಾನೆ. ವಿಧಿಯ ಲೀಲೆಯಂತೆ ಮಂಗಳಾ ಮತ್ತು ಮಲ್ಲ ಒಂದೆಡೆ ಸೇರಿ ಶೇಖರವರ್ಮನ ಮಗ ರಾಜನನ್ನು ಬೆಳೆಸುತ್ತಾರೆ.

ಇತ್ತ ಒಂದು ಪ್ರಮೀಳಾ ರಾಜ್ಯವಿರುತ್ತದೆ. ಪಂಕಜವಲ್ಲಿ (ವಂದನಾ) ಅವಳ ರಾಜ್ಯದಲ್ಲಿ ಕೇವಲ ಹೆಣ್ಣುಪಾಳ್ಯ ಇಟ್ಟಿರುವ ರಾಣಿ. ರಮಾದೇವಿ ಅವಳ ಸೇನಾಧಿಪತಿ, ಪಾಪಮ್ಮ ಅವಳ ಮಂತ್ರಿ, ಆರ್.ಟಿ.ರಮಾ ಅವಳ ಸಖಿ. ಈ ಸಖಿ ಕದ್ದು ಮುಚ್ಚಿ ಒಬ್ಬ ಪ್ರಿಯಕರನನ್ನು ಹೊಂದಿರುತ್ತಾಳೆ (ನರಸಿಂಹರಾಜು ಹೆಣ್ಣು ವೇಷದಲ್ಲಿ ಕೆಲವು ಸಮಯ ಕಾಣಿಸಿಕೊಳ್ಳುತ್ತಾರೆ). ವಿಜಯವರ್ಮನೆಂಬ (ಬಾಲಕೃಷ್ಣ) ಮುದಿರಾಜನಿಗೆ ವಂದನಾಳ ಮೇಲೆ ಕಣ್ಣು.

ವಿಧಿಯ ವಿಪರೀತದ ಆಟದಲ್ಲಿ ಶೇಖರವರ್ಮನಿಗೂ, ರಾಜನಿಗೂ ಯುದ್ಧವಾಗಿ… ಶೇಖರವರ್ಮನಿಗೆ ಹೆಂಡತಿಯ ಪಾತಿವ್ರತ್ಯದ ಬಗೆಗೆ ನಂಬಿಕೆ ಬಂದು… ಸಿನಿಮಾ ಮುಗಿಯುತ್ತದೆ.

ಎರಡು ಹಾಡುಗಳು ಸ್ವಲ್ಪ ಪರಿಚಿತ. ‘ಮಣ್ಣು ನೀರು ಗಾಳಿ ಬೆಳಕು’ ಎಂದಾರಂಭವಾಗುವ ಪಿಬಿಎಸ್ ಎಸ್‍ಜಾನಕಿ ಯುಗಳಗೀತೆ ಮತ್ತು ‘ಮುತ್ತಂಥ ಮಗನಾಗಿ ಹೆತ್ತವಳ ಸಿರಿಯಾಗಿ ದೇವರಿತ್ತ ವರವಾಗಿ ನೀ ಬಾಳೆಲೋ ಕಂದ ನೀ ಬಾಳೆಲೋ’ (ಎಸ್ ಜಾನಕಿ).

ರಾಜ್ ಸ್ತ್ರೀದ್ವೇಷದಿಂದ ಆರಂಭಿಸಿ (ಲಗ್ನಪತ್ರಿಕೆ ನೋಡಿದ ನಂತರ ಮತ್ತೆ ಸ್ತ್ರೀದ್ವೇಷಿ ರಾಜ್!) ಹಳ್ಳಿಯ ಹೆಣ್ಣನ್ನು ಪ್ರೇಮಿಸಿ, ಮದುವೆಯಾಗಿ, ಮಂತ್ರಿಗಳ ಕುತಂತ್ರದಿಂದ ಹೆಂಡತಿಯನ್ನೂ, ಪ್ರಾಣಸ್ನೇಹಿತನನ್ನೂ ಓಡಿಸಿ, ಕೋಪದಿಂದ ಇದ್ದು, ನಂತರ ದುಃಖಿಸಿ, ವಿರಹ ಅನುಭವಿಸಿ, ಮಗನನ್ನು ಕಂಡು ಮಮತೆ ಬಂದು…. ಅನೇಕ ರೀತಿಯ ಭಾವೋದ್ವೇಗಗಳ ಪ್ರದರ್ಶನ ಬಲು ಚೆನ್ನಾಗಿ ಮಾಡಿದ್ದಾರೆ.

ಉದಯಕುಮಾರ್ ನಿಜಕ್ಕೂ ಅದ್ಭುತ ನಟ. ವಂದನಾ ಶೇಖರವರ್ಮನನ್ನು ಪ್ರೇಮಿಸುವ, ನಂತರ ಅವನನ್ನು ದ್ವೇಷಿಸುವ ಪಾತ್ರ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಭಾರತಿಯ ವೃದ್ಧತಂದೆಯಾಗಿ ದಿನೇಶ್ ಅಚ್ಚರಿ ಉಂಟುಮಾಡುತ್ತಾರೆ.

1967ರ ಈ ಚಿತ್ರದಲ್ಲೇ ಭಾರತಿ, ಉದಯ್‍ಕುಮಾರ್, ರಾಜ್ ಎಲ್ಲರೂ ತಲೆಗೆ ಬಿಳಿಬಣ್ಣ ಬಳಿದಿದ್ದಾರೆ ಎನ್ನುವುದು ಗಮನಾರ್ಹ. 

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply