ರೌಡಿ ರಂಗಣ್ಣ

ಈ ಸಿನಿಮಾದ ವೈಶಿಷ್ಟ್ಯ ಏನೆಂದರೆ ನಾಯಕ ರಂಗಣ್ಣ (ರಾಜ್‍ಕುಮಾರ್) ಮತ್ತು ನಾಯಕಿ ಶಾರದ(ಜಯಂತಿ) ಭೇಟಿ ಆಗುವುದು ಕೊನೆಯ ಅರ್ಧ ಗಂಟೆಯಲ್ಲಿ! ಅವರಿಬ್ಬರ ಡಯಲಾಗುಗಳು ಬಹಳವೇ ಕಚಗುಳಿ ಇಡುತ್ತವೆ. ನಂತರ ಎಲ್ಲವೂ ಶುಭಂ.

ರಂಗಣ್ಣ ಓದಿಕೊಂಡು ಹಳ್ಳಿಗೆ ಬಂದು ತನ್ನ ತಂಗಿ ಗೌರಿಯೊಂದಿಗೆ (ಚಂದ್ರಕಲಾ) ನೆಲೆಸಿರುತ್ತಾನೆ. ಕಂಬಳದ ಕೆಲವು ದೃಶ್ಯಗಳನ್ನು ಟೈಟಲ್ ಕಾರ್ಡ್‌ಗಳ ಜೊತೆ ತೋರಿಸುವುದು ಒಂದು ವಿಶೇಷ. ಊರ ಸಾಹುಕಾರನ (ಬಾಲಕೃಷ್ಣ) ಹೋರಿಯನ್ನು ಸಂಕ್ರಾಂತಿಯಂದು ರಂಗಣ್ಣ ಕೊಂಬು ಹಿಡಿದು ನಿಲ್ಲಿಸಿದ್ದು ಬಾಲಕೃಷ್ಣನ ಕಣ್ಣನ್ನು ಕೆಂಪಗೆ ಮಾಡುತ್ತದೆ. 

ತನ್ನ ತಂಗಿ ಗೌರಿಯ ಮದುವೆ ಮಾಡುತ್ತಿರುವಾಗ ಬಾಲಕೃಷ್ಣನ ಶಿಷ್ಯ ಮುತ್ತ (ರತ್ನಾಕರ್ ವಿಲನ್ ಪಾತ್ರದಲ್ಲಿ) ಹಿಂದೆ ರಂಗಣ್ಣ ತನ್ನನ್ನು ಹೊಡೆದಿದ್ದನ್ನು ನೆನಪಿಟ್ಟುಕೊಂಡು, ಸಾಲ ಮರಳಿಸಲಿಲ್ಲವೆಂಬ ನೆಪ ಹೂಡಿ ರಂಗಣ್ಣನನ್ನು ಜೈಲಿಗೆ ಕಳಿಸುತ್ತಾನೆ. ರಂಗಣ್ಣನ ಸ್ನೇಹಿತ ದಿನೇಶ್ ಗೌರಿಯನ್ನು ‘ಎತ್ತಿ’ ಹಾಕಿಕೊಂಡು ಹೋಗಲು ಯತ್ನಿಸಿದಾಗ ಡಾ. ಶಂಕರ್ (ರಾಜಾಶಂಕರ್) ಅವಳನ್ನು ಕಾಪಾಡುತ್ತಾನೆ. ತನ್ನ ನರ್ಸಿಂಗ್ ಹೋಂನಲ್ಲಿ ಕೆಲಸ ನೀಡುತ್ತಾನೆ. ಇನ್ನೂ ಕೆಲವು ಕಡೆ ಅಲೆಯುವ ಗೌರಿಯನ್ನು ಕೊನೆಗೆ ಯಾವುದೋ ಒಂದು ವಿಚಿತ್ರ ಸನ್ನಿವೇಶದಲ್ಲಿ ಮದುವೆ ಆಗುತ್ತಾನೆ ಡಾ. ಶಂಕರ್.

ಅವನು ಊರಲ್ಲಿಲ್ಲದಿರುವ ದಿನ ಜೈಲಿನಿಂದ ಹೊರಬಂದ ರಂಗಣ್ಣ ಬಾಲಕೃಷ್ಣನನ್ನು ಕೊಲ್ಲಲು ಬಂದು ತಂಗಿಯನ್ನು ಭೇಟಿ ಆಗುತ್ತಾನೆ. ಆಗ ಅವರಿಬ್ಬರನ್ನೂ ನೋಡಿದ ಗೌರಿಯ ಅತ್ತೆ ರಮಾದೇವಿ (ಆಕೆ ಈ ಮೂತಿ ತಿವಿಯುವ ಪಾತ್ರ ಮಾಡುವುದರಲ್ಲಿ ದಿ ಬೆಸ್ಟ್ – ತೆಲುಗಿನ ಸೂರ್ಯಕಾಂತಂ ತರಹ) ಅವಳನ್ನು ಮನೆಯಿಂದ ಕುಲಟೆ ಎಂದು ಹೊರಗೆ ಅಟ್ಟುತ್ತಾಳೆ. ಗೌರಿ ಮಗುವನ್ನು ಹೆತ್ತು, ಯಾರಿಗೋ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಹೋದಾಗ ಅವಳಿಗೊಂದು ಅಚ್ಚರಿ ಎದುರಾಗುತ್ತದೆ…

ಸುಮಾರು 2 ಗಂಟೆ 52 ನಿಮಿಷಗಳ ಚಿತ್ರ. ಪಿ.ಸುಶೀಲ ಅವರ ಧರಣಿಗೆ ಗಿರಿ ಭಾರವೇ ಅತಿಥಿ ನಟಿ ಪಂಢರೀಬಾಯಿಗೆ. ಓ ಗೆಳೆಯ ರಾಮಯ್ಯ ಎನ್ನುವ ಅಣ್ಣ ತಂಗಿ ರೇಗಿಸೋ ಹಾಡು, ನೀನೊಂದು ದಡದಿ ನಾನೊಂದು ದಡದಿ ಕಣ್ಣೀರ ನದಿ ನಡುವೆ ಎಂದು ಅಣ್ಣ ತಂಗಿ ಹಾಡುವ  ಹಾಡು ಪಿಬಿಎಸ್ ಮತ್ತು ಎಸ್ ಜಾನಕಿ. ಆದದ್ದು ಒಂದು ಅಂದುಕೊಂಡಿದ್ದೊಂದು ಟೇಮಿಂಗ್ ಆಫ್ ದಿ ಶ್ರ್ಯೂ ಜಯಂತಿಯೊಂದಿಗೆ ರಾಜ್. ಮತ್ತು ಬಲು ಸುಂದರವಾದ ಎಳೆಯ ಧ್ವನಿಯ ಎಸ್. ಪಿ. ಬಿ. ಶಾಸ್ತ್ರೀಯ ರಾಗದ ಬಾರೆ ಓ ಚೆಲುವೆ ಹಾಡಿದ್ದಾರೆ, ಬೆಂಗಳೂರು ಲತಾ ಹಮ್ಮಿಂಗ್.

ಒಟ್ಟಿನಲ್ಲಿ ಕಥೆಗೆ ಎಷ್ಟು ಬೇಕೋ ಅಷ್ಟೇ ಪಾತ್ರಗಳ ಉದ್ದವಿದೆ. ನರಸಿಂಹರಾಜು ಒಂದು ಕಾಮಿಡಿ ಅತಿಥಿ ಪಾತ್ರ. ಫೈಟುಗಳು, ಕಥೆ, ಡಯಲಾಗ್ಸ್ ಚೆನ್ನ. ಬಾಲಕೃಷ್ಣ ಸುಮಾರು ಐವತ್ತು ಸಲವಾದರೂ ‘ನನಗ್ಗೊತ್ತಿತ್ತು ನೀನು ಹಿಂಗೇ ಹೇಳ್ತೀಯಾಂತ’ ಅನ್ನುತ್ತಾರೆ ಇಡೀ ಸಿನಿಮಾದಲ್ಲಿ. 

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply