ಲಗ್ನಪತ್ರಿಕೆ

ರಘು(ರಾಜ್‍ಕುಮಾರ್), ಗೋವಿಂದ (ದ್ವಾರಕೀಶ್), ಗೋಪಾಲ (ನರಸಿಂಹರಾಜು), ಕಾಶಿ (ತೂಗುದೀಪ ಶ್ರೀನಿವಾಸ್) ಎಲ್ಲರೂ ಹನುಮಂತನ ಭಕ್ತರು, ಆಜನ್ಮ ಬ್ರಹ್ಮಚಾರಿಗಳ ಸಂಘದ ಸದಸ್ಯರು. ರಘುವೇ ಅದರ ಅಧ್ಯಕ್ಷ.

ಕಾಶಿ ಮದುವೆಗೆ ಹೊರಡುತ್ತಾರೆ ಮೈಸೂರಿಗೆ ಉಳಿದೋರು. ಆಗ ರೈಲಿನಲ್ಲಿ ರಘುವಿನ ಭೇಟಿ ಸೀತಾಳೊಂದಿಗೆ (ಜಯಂತಿ) ಆಗುತ್ತದೆ. ಒಬ್ಬರ ಮುಖ ಒಬ್ಬರು ನೋಡಲು ಇಷ್ಟ ಪಡದೇ ಕೂಡ ಒಂದೇ ಬೋಗಿಯಲ್ಲಿ ಪಯಣಿಸುತ್ತಾರೆ.

ಆ ರೈಲಿಗೆ ಬಂದ ಸೀನು (ಶಿವರಾಂ) ಮತ್ತು ಸುಬ್ಬು (ಚಿ.ಉದಯಶಂಕರ) ಇಬ್ಬರದೂ ಒಂದು ಹಾಡಿದೆ. ‘ಬಲು ಅಪರೂಪ ನಂಜೋಡಿ’ ಎನ್ನುವ ಹಾಡದು (ಸೀನುಸುಬ್ಬು ಸುಬ್ಬು ಸೀನು ಎನ್ನುವವರು ನರಸಿಂಹರಾಜು ಮತ್ತು ದ್ವಾರಕೀಶ್) ಇವರಿಬ್ಬರೂ ಕ್ರಮಶಃ ರಘುವಿನ ತಂಗಿಯನ್ನು(ಜ್ಯೂನಿಯರ್ ರೇವತಿ) ಮತ್ತು ಮೇಷ್ಟರ ಮಗಳನ್ನು (ಬಿ.ವಿ.ರಾಧಾ) ಪ್ರೇಮಿಸಿರುತ್ತಾರೆ. ಆದರೆ ರಘುವಿನ ಭಯಕ್ಕೆ ದೂರವಿರುತ್ತಾರೆ.

ಮದುವೆ ಮನೆಯಲ್ಲಿ ಒಂದು ಪೈಪೋಟಿ. ‘ಥಳುಕು ಮೋರೆ ಹೆಣ್ಣಿಗೆ ಹೆದರಬೇಡಿ ಸೋತು’ ಹಾಡುತ್ತಾರೆ ರಾಜ್ ಮತ್ತು ಜಯಂತಿ. ರಾಜ್‍ಗೆ ಜ್ವರ ಬಂದುಬಿಡುತ್ತದೆ. ಸೀತಾ ಉಪಚಾರ ಮಾಡಿದಾಗ ರಘು ಜಯಂತಿಗೆ ಮನಸೋಲುತ್ತಾನೆ.

ಮನೆಗೆ ಬಂದರೂ ಅವಳದೇ ಧ್ಯಾನ. ‘ನಿನ್ನಿಂದ ನಾನೆಂದೂ ಹಗಲಿರುಳೂ ಹಂಬಲಿಸಿ‘ ಹಾಡು ಕೆಆರ್‍ಎಸ್‍ನಲ್ಲಿ ಚಿತ್ರಿತವಾಗಿದೆ. ಪಿಬಿಎಸ್ ಹಾಡು, ಜಾನಕಿ ಹಮ್ಮಿಂಗ್ (ರವಿವರ್ಮನಾ ಕುಂಚದಾ ಹಾಡಿನಲ್ಲಿ ಮತ್ತೆ ಪಿಬಿಎಸ್ ವಾಯ್ಸ್ ಮತ್ತು ಜಾನಕಿ ಹಮ್ಮಿಂಗ್ ಇದ್ದಿದ್ದು ನೆನಪಾಯಿತು). ರೈಲಿನಲ್ಲಿ ಸೀನು ಸುಬ್ಬು ಕನ್ನಡದ ಎಲ್ಲ ನಾಯಕ ನಾಯಕಿಯರ ಅತ್ಯಂತ ಜನಪ್ರಿಯ ಚಿತ್ರಗಳ (ಆಗಿನ) ಹೆಸರುಗಳ ಒಂದು ಹಾಡಿದೆ.

ಈ 1967ರ ಚಿತ್ರದಲ್ಲಿ ರಾಜ್ ಬಲು ಮುದ್ದಾಗಿ ಕಾಣಿಸುತ್ತಾರೆ. ಹಣೆಯ ಮೇಲೆ ನಿರ್ಲಕ್ಷ್ಯವಾಗಿ ಬಿದ್ದ ಮುಂಗುರುಳು ಅವರ ಶೋಭೆ ಹೆಚ್ಚಿಸಿದೆ. ಬ್ರಹ್ಮಚಾರಿ, ಪ್ರೇಮಿ, ವಿರಹಿ ಎಲ್ಲವನ್ನೂ ಚಂದ ನಟಿಸಿದ್ದಾರೆ. ಜಯಂತಿ ಎಂದಿನಂತೆ ಬೋಲ್ಡ್ ಆ್ಯಂಡ್  ಬ್ಯೂಟಿಫುಲ್. ನರಸಿಂಹರಾಜು ಎಂತಹ ಸನ್ನಿವೇಶದಲ್ಲಿದ್ದರೂ ಯಾರಾದರೂ ಗಾದೆ ಹೇಳಿದ ಒಡನೆ ಪುಟ್ಟ ಪುಸ್ತಕದಲ್ಲಿ ಬರೆದುಕೊಳ್ಳೋದು ನಗೆ ಬರಿಸುತ್ತದೆ.

ನಿರ್ದೇಶಕ ರವಿ ಅವರು ಇದಾದ ನಂತರ ಮತ್ತೆ ಸೀನು ಸುಬ್ಬುವನ್ನು ಭಲೇ ಅದೃಷ್ಟವೋ ಅದೃಷ್ಟ ಚಿತ್ರದಲ್ಲಿ ‘ನಾವು ಹಾಡುವುದೆ ಸಂಗೀತ’ ಹಾಡಿನಲ್ಲಿ ಮತ್ತೊಮ್ಮೆ ಪರದೆಯ ಮೇಲೆ ತಂದ ನೆನಪು.

ಒಟ್ಟಿನಲ್ಲಿ ಮನರಂಜನೆ. ರೈಲುಗಾಡಿ ಮತ್ತು ಅದರ ಸೆಟ್‍ನಲ್ಲಿ ಬಹಳ ಶೂಟಿಂಗ್ ಜರುಗಿದ್ದರೂ, ಮೈಸೂರಿನ ರಸ್ತೆಗಳಲ್ಲಿ ರಾಜ್ ಮತ್ತು ಗೆಳೆಯರು ಟಾಂಗಾದಲ್ಲಿ, ನಡೆದು ಹೋಗುವುದನ್ನು ನೋಡಿ ನನಗೆ ನನ್ನ ಬಾಲ್ಯದ ನೆನಪಾಯಿತು. 

ಒಂದು ವಿಶಿಷ್ಟ ಕ್ಲೈಮ್ಯಾಕ್ಸ್‌ಗೆ ಬಂದ ಚಿತ್ರ ಸುಖಾಂತ್ಯ ಕಾಣುತ್ತದೆ.

ಲಗ್ನಪತ್ರಿಕೆ ಸಾಕಷ್ಟು ಕಡೆ ನಗಿಸುತ್ತದೆ.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply