ಲಾ..” ಕನ್ನಡ

ಹೆಸರಾಂತ ಬ್ಯಾನರ್, ಅದ್ಭುತವಾದ ತಾರಾಗಣ, ಹಿಂದೆ ಯಾರೂ ಮಾಡಿರದಂತಹ ನವನವೀನ ಕಥೆ… ಆದರೂ ಸಿನೆಮಾ ರುಚಿಸುವುದಿಲ್ಲ.

ಕಾರಣ…?ಗೊತ್ತಿಲ್ಲ.

ಹಾಲಿವುಡ್ ಚಿತ್ರಗಳನ್ನು‌ ನಾವು ಇಷ್ಟ ಪಡುವುದು ಅದರ ಸಹಜತೆಗೆ… ನಾಯಕ ಅಥವಾ ನಾಯಕಿಗೆ ಅಪಘಾತವಾಗಲೀ, ಬೆಂಕಿಯೇ ಸುಡಲಿ, ಬಟ್ಟೆಯೇ ಹರಿದುಹೋಗಲಿ ಅವರು ಆ ವೇಷದಲ್ಲಿಯೇ ಪಾತ್ರ ನಿಭಾಯಿಸುತ್ತಾರೆ. ಆದರೆ ಇಲ್ಲಿ ಗ್ಯಾಂಗ್ ರೇಪ್ ಆಗಿರುವ ಹುಡುಗಿ ಎಷ್ಟು ಆರಾಮಾಗಿ ಓಡಾಡಿಕೊಂಡಿರ್ತಾಳೆ ಎಂದರೆ ಫ್ಯಾಷನ್ ಶೋ ರೀತಿಯಲ್ಲಿ.

ಅವಳು ಮೇಕಪ್ ಮಾಡಿದಳು, ಒಳ್ಳೇ ಡ್ರೆಸ್ ಹಾಕಿದಳು ಅಂತ ನಮ್ಮ ತಕರಾರೇನಿಲ್ಲ. ಆದರೆ ಅವಳ ಮೇಲಾದ ಅತ್ಯಾಚಾರದ ಕುರಿತು ನಾವೆಂಬ ನಾವೇ ಸಹಾನುಭೂತಿ ತೋರಿಸುತ್ತಿರುವಾಗ ಆಕೆ ಕೂದಲೂ ಸಹ ಕೊಂಕದಂತೆ ಡ್ರೆಸಪ್ ಆಗಿ ಓಡಾಡುತ್ತಿದ್ದರೆ ಹೇಗಾಗಬೇಕು? ಆಕೆಯ ನೋವನ್ನು ನಮ್ಮ ನೋವು ಎಂದುಕೊಳ್ಳುವ ತಾದ್ಯಾತ್ಮತೆ ಹೇಗೆ ಸಿದ್ಧಿಸುತ್ತದೆ?

ಒಂದು ಸಿನೆಮಾವನ್ನು ಕೊನೆವರೆಗೂ ಜನ ನೋಡಬೇಕೆಂದರೆ ಮೊದಲರ್ಧ ಗಂಟೆಯಲ್ಲಿ ಪ್ರೇಕ್ಷಕರನ್ನು ಹಿಡಿದಿಡಬೇಕಾಗುತ್ತದೆ. ಆದರೆ ಆ ಸಮಯದಲ್ಲಿ ಮಂಡ್ಯ ರಮೇಶ್ ತಮ್ಮ ವಿಕ್ಷಿಪ್ತ ನಡವಳಿಕೆಯಿಂದ ಜನರನ್ನು ಸಿನೆಮಾಗೆ ವಿಮುಖರನ್ನಾಗಿಸುವ ಪ್ರಯತ್ನ ಮಾಡುತ್ತಾರೆ. ಈ ಪಾತ್ರವನ್ನು ಕಂಡು ಕೋಪ, ದ್ವೇಷವನ್ನೂ ಮೀರಿ ಜಿಗುಪ್ಸೆ ಉಂಟಾಗುತ್ತದೆ. ಅವರ್ಯಾಕೆ ಹಾಗೆ ನಟಿಸಿದರೋ ಗೊತ್ತಿಲ್ಲ. ಪೊಲೀಸರ ನಿರ್ಲಕ್ಷ್ಯ ನಮಗೂ ಗೊತ್ತಿರುವಂಥದ್ದೇ. ಆದರೆ ಈ ನಡವಳಿಕೆ ಸಿನೆಮಾದ ಮಧ್ಯೆ ರಸಭಂಗ ತರುವಂತಿದ್ದುದು ನಿಜ.

ಭೂತ- ವರ್ತಮಾನಗಳನ್ನು ಬೆರೆಸಿ ಹೇಳುವ ಕಥೆ ನೂರಾರಿವೆ. ನಾವು-ನೀವೆಲ್ಲರೂ ನೋಡಿರುತ್ತೇವೆ. ಆದರೆ ಸತ್ಯವಾಗಿಯೂ ಇದರಲ್ಲಿ ಭೂತ ಯಾವುದು, ವರ್ತಮಾನ ಯಾವುದು ಅಂತ ಅರ್ಥವಾಗದೇ ಕಂಗಾಲಾದೆ. ಯಾವ ಸನ್ನಿವೇಶ ಹಿಂದೆ ನಡೆದದ್ದು, ಯಾವುದು ಈಗ ನಡೆಯುತ್ತಿರುವುದು ಅಂತ ಗೊತ್ತಾಗದೇ ಗೊಂದಲವಾಯ್ತು.

ಅಲ್ಲದೇ ಏನೂ ನಡೆದೇ ಇಲ್ಲ ಎನ್ನುವಂತೆ ನಾಯಕಿ‌ ಓಡಾಡಿಕೊಂಡಿದ್ದೇ ದೊಡ್ಡ ಪಿರಿಪಿರಿಯಾಯ್ತು. ಗಾಢ ವಿಷಾದದಲ್ಲಿ ಮುಳುಗಬೇಕಿದ್ದ ಸಿನೆಮಾದಲ್ಲಿ ಅಲ್ಲಲ್ಲೇ ಹಾಡು, ನಗು ಕೇಳಿ ಬಂದು ನಮ್ಮ ನಮಗೇ ಕೋಪ ಬರುವಂತಾಗುತ್ತಿತ್ತು. ನಾಯಕಿ ಪೊಲೀಸಪ್ಪನಿಗೆ “ಪ್ಲೀಸ್ ಬೀ ಸೀರಿಯಸ್” ಅಂತಾಳೆ. ನಮಗೂ ನಿರ್ದೇಶಕರಿಗೆ ಇದೇ ಮಾತು ಹೇಳುವ ಅಂತನ್ನಿಸುತ್ತಿತ್ತು.

ಏಕೆಂದರೆ… ಒಂದು ಗ್ಯಾಂಗ್ ರೇಪಿನ ನಂತರ ಹೆಣ್ಣಿನ ಮನಸ್ಸು ಬಹಳ ಸೂಕ್ಷ್ಮವಾಗಿರುತ್ತದೆ. ಅದಕ್ಕೆ ತಕ್ಕಂತಹ ನಿರೂಪಣೆಯನ್ನು ನಾವು ಬಯಸಿದ್ದೆವು. ಅವಳ ನೋವಿಗೆ ದನಿಯಾಗುವ ಆಸೆಯಿತ್ತು ನಮಗೆ. ಅವಳಿಗೆ ನ್ಯಾಯ ಸಿಗಲೆಂಬ ಆಶಯವಿತ್ತು. ಈ ಕೆಟ್ಟ ಕಾರ್ಯ ಮಾಡಿದ ದುಷ್ಟರಿಗೆ ಶಿಕ್ಷೆಯಾಗಲಿ ಎಂಬ ಹಂಬಲವಿತ್ತು.

ಆದರೆ ತೆರೆದ ಕೋರ್ಟಿನಲ್ಲಿ ವಾದ ಹೇಗೆ ನಡೆಯಿತು ಎಂದರೆ, ನನಗನ್ನಿಸಿತು… ಆ ಮೂವರೂ ಇವಳ ಕಾರನ್ನು ಕದ್ದಿರಬೇಕೇನೋ ಅಂತ. ಅಷ್ಟು ಸೂಕ್ಷ್ಮ ವಿಚಾರವನ್ನು ಅಷ್ಟು ಜನರ ಮುಂದೆ ಹೇಗೆ ವಾದ ಮಾಡಿದರೋ? ಕೋರ್ಟ್ ಕಲಾಪಗಳ ಬಗ್ಗೆ ಅರಿವಿಲ್ಲದ ನಮಗೆ ಬೇಸರವಾದದ್ದು ನಿಜ. ಇಂತಹಾ ಸಂದರ್ಭಗಳಲ್ಲಿ ಅತ್ಯಾಚಾರಕ್ಕೀಡಾದ ಹೆಣ್ಣುಮಗಳ ವಿವರ ಬಹಿರಂಗಪಡಿಸಬಾರದು ಎಂಬ ನಿಯಮ ಇದೆಯಲ್ಲವೇ??? ಗೊಂದಲ…

ರಾಗಿಣಿ ಅವರ ನಟನೆ ಚೆಂದ ಇದೆ. ಉತ್ತಮ ನಟಿ ಆಗಬಲ್ಲರು ಆಕೆ. ಅದು ನಿರ್ದೇಶಕರ ಕೈಯ್ಯಲ್ಲಿದೆ. ಮೊದಲ ಸಿನೆಮಾ ಆದುದರಿಂದ ಅವರಲ್ಲಿ ಭಾವನಾತ್ಮಕತೆಯ ಕೊರತೆ ಕಾಣಿಸಿತು. ಆದರೆ ಅವರು ಧೈರ್ಯವಾಗಿ ಎದುರಿಸಿದ್ದು ಇಷ್ಟವಾಯ್ತು.

ಎಂತಹಾ ಅದ್ಭುತವಾದ ಕಥೆಯನ್ನು ಈ ಪಾಟಿ ಎಳೆದೆಳೆದು ಯಾಕೆ ತೋರಿಸಿದ್ದಾರೆ ಅಂತ ಮಾತ್ರ ಕಡೆಗೂ ಅರ್ಥವಾಗಲೇ ಇಲ್ಲ. ಒಂದು ಹೆಣ್ಣಿನ ಮೇಲೆ ಅತ್ಯಾಚಾರವಾದಾಗ ಆಕೆಯ ತಂದೆಯ ಸಹಿತ ಎಲ್ಲರೂ ಕೈಬಿಟ್ಟರೂ ತಾನೊಬ್ಬಳೇ ಹೋರಾಡಿ ಆ ರಾಕ್ಷಸರಿಗೆ ಶಿಕ್ಷೆ ಕೊಡಿಸುವ ಕಥೆ. ಒನ್ ಲೈನ್ ಸ್ಟೋರಿ ಎಷ್ಟು ಚಂದ ಇದೆ ಅಲ್ವಾ? ಸಿನೆಮಾ ಕೂಡ ಹೀಗೆಯೇ ಇದ್ದಿದ್ದರೆ????

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply