ವೈಚಾರಿಕ ನಾಟಕಗಳ ಹರಿಕಾರ ಆರ್.ನಾಗೇಶ್

ರಂಗ ನಟ, ನಿರ್ದೇಶಕ, ಬೆಳಕು ತಜ್ಞ, ರಂಗ ವಿನ್ಯಾಸಕ, ಈ ರೀತಿಯಾಗಿ ಹಲವಾರು ವಿಧಗಳಲ್ಲಿ ಕೆಲಸವನ್ನು ನಿರ್ವಹಿಸಿ ನಮ್ಮ ರಂಗ ಭೂಮಿಯ ಅಭಿವೃದ್ಧಿಗೆ ಹೊಸ ಮಾರ್ಗವನ್ನು ತೋರಿಸಿಕೊಟ್ಟವರು ಕನ್ನಡದ ರಂಗ ಕರ್ಮಿ ಆರ್.ನಾಗೇಶ್. ಮುಖ್ಯವಾಗಿ ಕನ್ನಡ ಸಾಹಿತ್ಯ ಕಲಾ ಸಂಘದ ಸ್ಥಾಪಕರು ಅಲ್ಲದೇ ಇವರಿಗೆ ಕನ್ನಡವೇ ಜೀವವಾಗಿತ್ತು.
    ಆರ್.ನಾಗೇಶ್ 1943 ಮಾರ್ಚ್ 13 ರಂದು ಬೆಂಗಳೂರು ಸಮೀಪದ ರಾಮೋ ಹಳ್ಳಿಯಲ್ಲಿ ರಾಮರಾಜು ಮತ್ತು ಲಕ್ಷ್ಮಿ ದೇವಮ್ಮ ದಂಪತಿಯ ಮಗನಾಗಿ ಜನಿಸಿದರು. ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಪಡೆದ ನಂತರ ತಮ್ಮ ಅಭಿರುಚಿಗೆ ತಕ್ಕಂತೆ ವಾರ್ತಾ ಇಲಾಖೆಯಲ್ಲಿ ಕೆಲಸವನ್ನು ನಿರ್ವಹಿಸುವುದರೊಂದಿಗೆ ವೃತ್ತಿ ಜೀವನವನ್ನು ಆರಂಭಿಸಿದರು. ಆದರೆ ಇವರು ರಂಗಭೂಮಿಯನ್ನು ಪ್ರವೇಶಿಸುವ ಮೊದಲು ಹೆಚ್ಚಾಗಿ ನಗೆ ನಾಟಕಗಳೇ ಪ್ರಚಲಿತದಲ್ಲಿದ್ದವು. ಅದರಲ್ಲೂ 1950-60 ರ ದಶಕದಲ್ಲಿ ಕೆ.ಗುಂಡಣ್ಣ, ಪರ್ವತವಾಣೀ,ಎಂ.ಎಸ್.ಮೂರ್ತಿ,ಕೈವಾರ ರಾಜಾರಾಯರ ನಗೆ ನಾಟಕಗಳು ತುಂಬ ಜನಪ್ರಿಯತೆಯನ್ನು ಪಡೆದಿದ್ದವು. ಇಂತಹ ಸಂದರ್ಭದಲ್ಲಿ 1969 ರಲ್ಲಿ ಪ್ರೋ.ಬಿ.ಚಂದ್ರಶೇಖರ್ ನಿರ್ದೇಶನದಲ್ಲಿ ಗಿರೀಶ್ ಕಾರ್ನಾಡ್ ರವರ ತೊಘಲಕ್ ನಾಟಕ ಪ್ರದರ್ಶನ ವನ್ನು ಸಂಘಟಿಸಿದ್ದರು. ಮತ್ತು ಈ ನಾಟಕದ ಮೂಲಕ ಹಲವಾರು ಕಲಾವಿದರು, ತಂತ್ರಜ್ಞರು ಹವ್ಯಾಸಿ ರಂಗಭೂಮಿಯನ್ನು ಪ್ರವೇಶಿಸಲು ಪ್ರಮುಖ ಕಾರಣಕರ್ತರು ಕೂಡ ಆಗಿದ್ದರು. ಆದರೆ ಈ ಒಂದು ನಾಟಕದ ಪ್ರದರ್ಶನ ರಂಗಭೂಮಿಯ ದಿಕ್ಕನ್ನು ಬದಲಿಸುವಷ್ಟು ಪರಿಣಾಮವನ್ನು ಬೀರಿತ್ತಲ್ಲದೆ ವೈಚಾರಿಕ ನಾಟಕಗಳ ನಾಂದಿಗೆ ಕಾರಣವಾಗಿತ್ತು. ಅನಂತರ ಬಿ.ವಿ.ಕಾರಂತ್ ನಿರ್ದೇಶಿಸಿದ ಸ್ವರ್ಗಕ್ಕೆ ಮೂರೇ ಬಾಗಿಲು ನಾಟಕವು ವಿಶಿಷ್ಟ ಯಶಸ್ವಿ ಪ್ರದರ್ಶನವನ್ನು ಕಂಡಿತ್ತು. 1970 ರ ದಶಕವು ವೈಚಾರಿಕ ನಾಟಕಗಳ ಸುಗ್ಗಿ ಕಾಲವಾಗಿತ್ತಲ್ಲದೆ  ರಂಗ ಸಂಪದ, ಬೆನಕ, ನಟರಂಗ, ಸಮುದಾಯ, ಕಲಾ ಗಂಗೋತ್ರಿ, ಸ್ಪಂದನ ಸೇರಿ ಅನೇಕ ಪ್ರಸಿದ್ಧ ತಂಡಗಳು ಹುಟ್ಟಿದವಲ್ಲದೆ ಅನೇಕ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ದೊರಕುವುದರೊಂದಿಗೆ ಬೆಳಕಿಗೆ ಬರಲು ಸಾಧ್ಯವಾಯಿತು. ಮತ್ತು ಹವ್ಯಾಸಿ ರಂಗಭೂಮಿಯಲ್ಲಿ ಇದೊಂದು ಸ್ವರ್ಣ ಯುಗ ಕೂಡ ಆಗಿದೆ.
      1972 ರಲ್ಲಿ  ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ  ಸಹಯೋಗದಲ್ಲಿ ಬಿ.ವಿ.ಕಾರಂತರ ನಿರ್ದೇಶನದಲ್ಲಿ  ದೊರೆ ಈಡಿಪಸ್, ಸಂಕ್ರಾಂತಿ ಮತ್ತು ಜೋಕುಮಾರ ಸ್ವಾಮಿ ನಾಟಕ ಪ್ರದರ್ಶನ ರಂಗಭೂಮಿಯಲ್ಲಿ ಒಂದು ಹೊಸ ಇತಿಹಾಸವನ್ನು ಸೃಷ್ಟಿಸಿತ್ತು. ಅದೇ ವರ್ಷ 1972 ರಲ್ಲಿ ಜೆ.ಲೋಕೇಶ್,ಆನಂದ್, ಹರಿಕೃಷ್ಣರವರ ಜೊತೆ ರಂಗ ಸಂಪದ, 1984 ರಲ್ಲಿ ಮಾಲತಿ ರಾವ್ ಜೊತೆ ಸೂತ್ರಧಾರ ಮತ್ತು 1989 ರಲ್ಲಿ  ಎಲ್.ಕೃಷ್ಣಪ್ಪ, ಮಾನು, ಹುಲಿವಾನ್ ಗಂಗಾಧರಯ್ಯ ಜೊತೆ ಜನ ನಾಟ್ಯ ಮಂಡಳಿ ಈ ರೀತಿಯಾಗಿ ಹಲವಾರು ನಾಟ್ಯ ಮಂಡಳಿಯೊಂದಿಗೆ ಸಂಪರ್ಕವನ್ನು ಹೊಂದಿದ್ದರು.
      ರಂಗಭೂಮಿಯಲ್ಲಿ  ಶ್ರೀ ರಂಗ, ಲಂಕೇಶ್, ಕಾರ್ನಾಡ್, ಚಂದ್ರಶೇಖರ್ ಪಾಟೀಲ್ ಮತ್ತು ಕಂಬಾರರ ನಾಟಕಗಳನ್ನು ಪ್ರದರ್ಶಿಸಿದ್ದರಲ್ಲದೆ ಪೂರ್ಣ ಚಂದ್ರ ತೇಜಸ್ವಿ, ಅನಂತಮೂರ್ತಿ, ಶ್ರೀಕೃಷ್ಣ ಆಲನಹಳ್ಳಿ ಮತ್ತು ಕಾರಂತರ ಕಾದಂಬರಿಗಳಿಗೆ ರಂಗ ರೂಪವನ್ನು ಕೊಟ್ಟಿದ್ದರು. ಹಾಗೂ ಕಥೆಯಾಧಾರಿತ ನಾಟಕಗಳಿಗೆ ಹೊಸ ಪ್ರೇಕ್ಷಕ ವರ್ಗದ ಉದಯಕ್ಕೆ ಕಾರಣಕರ್ತರು ಕೂಡ ಆಗಿದ್ದರು.


       ಪ್ರಸನ್ನ ನಿರ್ದೇಶನದ ಗೆಲಿಲಿಯೋ, ಕದಡಿದ ನೀರು ವೈಕುಂಠ ರಾಜು ರವರ ಸನ್ನಿವೇಶದ ನಾಟಕಗಳಿಗೆ ಬೆಳಕಿನ ವಿನ್ಯಾಸ, ಅಸಂಗತ ನಾಟಕಗಳಿಗೆ  ರಂಗ ಸಜ್ಜಿಕೆ ಚೋಮ,ತಬರನ ಕಥೆ, ಯಾಯಾತಿ, ಕೃಷ್ಣೇಗೌಡನ ಆನೆ ಸೇರಿ ಅನೇಕ ನಾಟಕಗಳಿಗೆ ನೀಡಿದ ಮಹತ್ವ ಪೂರ್ಣ ನಿರ್ದೇಶನ ಮತ್ತು ಹಲವಾರು ತಂಡಗಳನ್ನು ಸೇರಿಸಿ ಬಿ.ಚಂದ್ರಶೇಖರ್ ನಿರ್ದೇಶನದಲ್ಲಿ ಬಂದ ತುಘಲಕ್ ನಾಟಕ ಪ್ರದರ್ಶನ ಈ ರೀತಿಯಾಗಿ ಇವರು ತಮ್ಮ ಜೀವನದಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದರು. ರಂಗಭೂಮಿಯ ಉಳುವಿಗಾಗಿ ಅರಿವು ಮೂಡಿಸಲು ರಂಗ ವಿಹಂಗಮ ಎಂಬ ಸಾಕ್ಷ್ಯ ಚಿತ್ರವನ್ನು ತಯಾರಿಸಿದ್ದರು. ಮತ್ತು ರಂಗಭೂಮಿ ಮಾಸ ಪತ್ರಿಕೆಯನ್ನು ಹೊರ ತಂದ ಖ್ಯಾತಿಯು ಇವರಿಗೆ ಸಂದಿದೆ.
    ಜೀವನದಲ್ಲಿ ಅನೇಕ ಮಹತ್ವ ಪೂರ್ಣ ಸಾಧನೆಗಳನ್ನು ಹೊಂದಿದ್ದರೂ ಇವರ ಜೀವನದಲ್ಲಿ ವಿಧಿಯು ಆಡಿದ ಆಟ ಎಂತಹವರಿಗೂ ಆದರೂ ದುಃಖವನ್ನುಂಟು ಮಾಡುತ್ತದೆ.
    2010, ಸೆಪ್ಟೆಂಬರ್ 18 ರಂದು  ಇವರ ನಿರ್ದೇಶನದಲ್ಲಿ ಮೂಡಿ ಬಂದ ಕೃಷ್ಣೇಗೌಡನ ಆನೆ ಕಥೆಯ ಪ್ರಸಿದ್ಧ ನಾಟಕದ ನೂರನೇಯ ಪ್ರದರ್ಶನವನ್ನು  ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಇವರ ಅನುಪಸ್ಥಿತಿ ಮಿತ್ರರನ್ನು ಅಚ್ಚರಿಗೆ ತಳ್ಳಿತ್ತು. ಆದರೆ ಆ ಸಮಯದಲ್ಲಿ ಈ ಮಹಾನ್ ರಂಗ ಕರ್ಮಿ ತನ್ನ 67 ನೇ ವಯಸ್ಸಿನಲ್ಲಿ ಮರಣಹೊಂದಿದ ವಿಷಯವನ್ನು ತಿಳಿದಾಗ ಇವರ ಅಭಿಮಾನಿಗಳಿಗೆ, ಮಿತ್ರರಿಗೆ ಆದ ಆಘಾತ ಅಷ್ಟಿಷ್ಟಲ್ಲ. ನಾಡು ಇವರನ್ನು ನಾಯಕ ತಾರೆಯಂತೆ ಮೆರೆಸಲಿಲ್ಲವಾದರೂ ಈ ನಾಡಿನ ಕಲಾರಂಗದಲ್ಲಿ ಈಗಲೂ ನಿತ್ಯ ತಾರೆಯಾಗಿ ನಕ್ಷತ್ರದಂತೆ ಮಿನುಗುತ್ತಿದ್ದಾರೆ. ಈ ನಮ್ಮ ಕರ್ನಾಟಕ ರಾಜ್ಯದಲ್ಲಿ ರಂಗ ಯಾತ್ರಿಯಾಗಿ ಹಾದು ಹೋದ ಈ ಕ್ರಿಯಾಶೀಲ ವ್ಯಕ್ತಿ ಆರ್.ನಾಗೇಶ್ ರಂಗ ರಸಿಕರ ಮನಸ್ಸಿನಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದ್ದಾರೆ.
   

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply