ಈ ಸಿನೆಮಾ ಅನ್ನು ನಾವು ದೂರದರ್ಶನದಲ್ಲಿ ಮೊದಲ ಬಾರಿ ನೋಡಿದ್ದು. ಮೊದಲಿಗೆ ಭೂತದ ಫಿಲಂ ಅಂತ ಹೆದರಿದ್ದೆವು. ನಂತರ ಆ ಭೂತದ ಪಾತ್ರಧಾರಿ ‘ಶ್ರೀನಾಥ್’ ಅವರು ಅಂತ ಗೊತ್ತಾಗಿ, ಕೆಲವು ದಿನಗಳ ಕಾಲ ಬೇರೆ ಸಿನೆಮಾಗಳಲ್ಲಿ ‘ಶ್ರೀನಾಥ್’ ಅವರು ಬಂದರೂ “ಅಮ್ಮ ಭೂತ” ಅಂತ ಹೇಳುತ್ತಿದ್ದೆವು ಅಂತ ನೆನಪು.
ಮೊದಲ ಬಾರಿ ಚಿಕ್ಕ ವಯಸ್ಸಿನಲ್ಲಿ ಈ ಸಿನೆಮಾ ನೋಡಿದ್ದರೂ ಇಂದಿಗೂ ಮರೆಯಲಾರದೇ ಉಳಿದಿರುವ ಅಂಶ ಎಂದರೆ ಇದರಲ್ಲಿ ಅಣ್ಣಾವ್ರು ಸೃಜಿಸುವ ಆಶು ಕವಿತೆಗಳು. ಅವುಗಳು ಅದೆಷ್ಟು ಸುಮಧುರವಾಗಿವೆ ಎಂದರೆ ಎಷ್ಟು ವರ್ಷಗಳಾದರೂ ಮರೆಯಲಾಗುತ್ತಿಲ್ಲ.
ಈಗಂತೂ ಈ ಸಿನೆಮಾ ಅನ್ನು ಬೇಕಾದಷ್ಟು ಬಾರಿ ನೋಡಿ ಆಗಿದೆ. ಚಿಕ್ಕಂದಿನಲ್ಲಿ ಅರ್ಥ ಆಗದ ವಿಷಯಗಳೆಲ್ಲ ಈಗರ್ಥ ಆಗುತ್ತಿವೆ. ಅದರಲ್ಲಿ ಮುಖ್ಯವಾದ ಅಂಶ ಅಂತರ್ಜಾತಿ ವಿವಾಹ. ಜಾತಿ ಯಾವುದಾದರೇನು, ಮಾನವರೆಲ್ಲರೂ ಒಂದೇ ಎಂಬಂತಹ ಉದಾತ್ತ ಧ್ಯೇಯ ಇಲ್ಲಿ ಕಾಣುತ್ತದೆ.
ಹೇಗೆಂದರೆ….
ನಾಯಕನ ಅಪ್ಪ ತನ್ನ ತಂಗಿ ಬೇರೆ ಧರ್ಮದವನನ್ನು ಮದುವೆ ಆದಳೆಂದು ಮನೆಯಿಂದಾಚೆ ಹಾಕುತ್ತಾರೆ. ಆದರೆ ನಾಯಕನೋ ಆ ಅತ್ತೆಯ ಮಗಳನ್ನೇ ಪ್ರೀತಿಸುತ್ತಾನೆ. ನಾಯಕಿ ಬೇರೆ ಧರ್ಮದವಳಾದ್ದರಿಂದ ಈ ಮದುವೆ ಸಾಧ್ಯ ಇರುವುದಿಲ್ಲ. ಆಕೆ ತನ್ನ ತಂಗಿಯ ಮಗಳೇ ಅಂತ ನಾಯಕನ ಅಪ್ಪನಿಗೂ ಗೊತ್ತಿರುವುದಿಲ್ಲ. ಆದರೆ ಈ ವಿಷಯ ಅವರಿಗೆ ಗೊತ್ತಾದಾಗ ನಾಯಕಿಯನ್ನು ಸೊಸೆ ಅಂತ ಒಪ್ಪುತ್ತಾರೆ.
ಇದರರ್ಥ ಜಾತಿ, ಧರ್ಮ, ಹೆಸರು ಬೇರೆಯಾಗಿರಬಹುದು. ಆದರೆ ನಮ್ಮ ರಕ್ತ ಮತ್ತು ಸಂಬಂಧ ಹಾಗೆಯೇ ಇರುತ್ತದೆಯಲ್ಲವೇ? ಹಾಗಾದರೆ ಬದಲಾದದ್ದೇನು? ಕೇವಲ ನಮ್ಮ ಪ್ರತಿಷ್ಠೆ ಅಷ್ಟೇ.
ಈ ಸಿನೆಮಾದಲ್ಲಿ ಮನರಂಜನೆ ಭರಪೂರವಾಗಿ ತುಂಬಿಕೊಂಡಿದೆ. ಕ್ಷಣಕ್ಷಣಕ್ಕೂ ನಗಿಸುತ್ತದೆ. ಹಾಗೆಯೇ ಭಾವನಾತ್ಮಕವಾಗಿಯೂ ಕಣ್ಣೀರು ಹಾಕಿಸುತ್ತದೆ. ಹಳೆಯ ಜನುಮದ ನೆನಪುಗಳೂ ಇವೆ. ಈ ಜನ್ಮದ ಪ್ರೇಮಕಥೆಯೂ ಇದೆ.
ರಾಜ್ ಸಿನೆಮಾಗಳು ಕೇವಲ ಸಿನೆಮಾಗಳಾಗಿರಲಿಲ್ಲ. ಅವು ಜನರನ್ನು ತಿದ್ದುವ ಮಾರ್ಗದರ್ಶಿಕೆಗಳಾಗಿದ್ದವು. ಈಗ ಅಂತಹಾ ಸಿನೆಮಾಗಳನ್ನು ನಿರೀಕ್ಷಿಸುವುದೂ ಸಾಧ್ಯವಿಲ್ಲ.